ಭಾರತದ ಮೊದಲ ತೃತೀಯ ಲಿಂಗಿ ಪೈಲೆಟ್ ಆಗಿ ಹೊರ ಹೊಮ್ಮಿದ ಆ್ಯಡಂ ಹ್ಯಾರಿ

ತೃತೀಯ ಲಿಂಗಿ ಎಂಬ ಕಾರಣಕ್ಕೆ ಮನೆಯಿಂದ ಹೊರ ದಬಿದ್ದರೂ ಛಲ ಬಿಡದೇ ತಾವು ಕಂಡ ಕನಸನ್ನು ನೆರವೇರಿಸಿಕೊಂಡ ಆ್ಯಡಂ ಹ್ಯಾರಿ. ಇವರ ಬೆನ್ನಿಗೆ ನಿಂತಿದ್ದು ಕೇರಳ ಸರ್ಕಾರ ಅನ್ನೋದು ಗಮನಾರ್ಯವಾದ ವಿಚಾರ.

ಭಾರತದ ಮೊದಲ ತೃತೀಯ ಲಿಂಗಿ ಪೈಲೆಟ್ ಆಗಿ ಹೊರ ಹೊಮ್ಮಿದ ಆ್ಯಡಂ ಹ್ಯಾರಿ

Thursday October 17, 2019,

3 min Read

ಇಂದಿಗೂ ತೃತೀಯ ಲಿಂಗಿಗಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ ಅನ್ನೋದು ಗೊತ್ತಿರುವ ವಿಚಾರ. ಅವರನ್ನು ಇಂದಿಗೂ ಮುಖ್ಯ ವಾಹಿನಿಗೆ ತರುವಲ್ಲಿ ಸತತ ಪ್ರಯತ್ನಗಳು ನಡೆಯುತ್ತಲೇ ಇವೆ. ಈಗಾಗಲೇ ಸಾಕಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವಲ್ಲಿ ತೃತೀಯ ಲಿಂಗಿಗಳು ಯಶಸ್ವಿಯಾಗಿದ್ದಾರೆ. ನಾವು ಎಲ್ಲರಂತೆ ಮನುಷ್ಯರು, ನಮಗೂ ಬದುಕುವ, ಕೆಲಸ ಮಾಡುವ ಹಕ್ಕಿದೆ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೂ ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿ ಇನ್ನು ಬದಲಾಗಬೇಕಿದೆ. ಸಾಧನೆ ಮಾಡಿದ ತೃತೀಯ ಲಿಂಗಿಗಳ ಸಾಧಕರ ಸಾಲಿಗೆ ಸೇರುವವರಲ್ಲಿ ಆ್ಯಡಂ ಹ್ಯಾರಿ ಕೂಡ ಒಬ್ಬರು. ಆ್ಯಡಂ ಹ್ಯಾರಿ ಭಾರತದ ಮೊದಲ ತೃತೀಯ ಲಿಂಗಿ ಪೈಲೆಟ್ ಯಾಗಿ ಹೊರ ಹೊಮ್ಮಿದ್ದಾರೆ.


ಖಾಸಗಿ ವಿಮಾನದ ಜೊತೆ ಆ್ಯಡಂ ಹ್ಯಾರಿ (ಚಿತ್ರ ಕೃಪೆ: ಫೇಸ್ ಬುಕ್)


ಹೌದು, ಆ್ಯಡಂ ಹ್ಯಾರಿ ಖಾಸಗಿ ಪೈಲಟ್ ಲೈಸೆನ್ಸ್​ ಪಡೆದ ದೇಶದ ಮೊದಲ ತೃತೀಯ ಲಿಂಗಿ. ಕೇರಳದ ತ್ರಿಶೂರ್ ಜಿಲ್ಲೆಯವರಾದ ಹ್ಯಾರಿ ಎಲ್ಲಾ ಮಕ್ಕಳಂತೆ ಚಿಕ್ಕಂದಿನಿಂದಲೇ ದೊಡ್ಡ ಕನಸು ಕಟ್ಟಿಕೊಂಡವರು. ತಾವೊಬ್ಬ ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದ ಹ್ಯಾರಿಗೆ ಎದುರಾಗಿದ್ದು ಲಿಂಗ ಬದಲಾವಣೆ. ಲಿಂಗ ಬದಲಾವಣೆಯಾಗುತ್ತಿದ್ದಂತೆ ಹ್ಯಾರಿ ಮನೆಯವರು, ಹ್ಯಾರಿ ಅವರನ್ನು ಮನೆಯಿಂದ ಹೊರಕ್ಕೆ ತಳ್ಳಿದರು. ಅಷ್ಟೆ ಅಲ್ಲ ಸ್ನೇಹಿತರು ಕೂಡ ಇವರಿಂದ ದೂರ ಸರಿದರು. ಇದರಿಂದ ಮಾನಸಿಕವಾಗಿ ವಿಚಲಿತರಾದ ಹ್ಯಾರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.


ತಾವು ಕಂಡ ಕನಸು ಕಮರಿ ಹೋಯಿತೇನೋ ಎಂಬ ತಳಮಳ ಹ್ಯಾರಿಯಲ್ಲಿತ್ತು. ಆದರೆ ಯಾವುದಕ್ಕೂ ಅಂಜದ ಹ್ಯಾರಿ ಎಲ್ಲವನ್ನು ಸಹಿಸಿಕೊಂಡು ತಮ್ಮ ಗುರಿಯತ್ತ ಚಿತ್ತ ಹರಿಸಿದರು. ತಾವು ಕಂಡ ಪೈಲೆಟ್ ಆಗುವ ಕನಸನ್ನು ನನಸು ಮಾಡಿಕೊಳ್ಳುವುದು ಹೇಗೆ ಎಂಬ ದಾರಿಯನ್ನು ಹುಡುಕುತ್ತಾ ಹೊರಟರು. ಆಗ ಅವರಿಗೆ ಹೊಳೆದದ್ದು ಕೇರಳ ಸರ್ಕಾರ. ಹ್ಯಾರಿಯ ಬೆನ್ನಿಗೆ ನಿಂತು ಬೆಂಬಲ ನೀಡಿದ್ದು ಕೇರಳ ಸರ್ಕಾರ ಅನ್ನೋದು ಗಮನಾರ್ಹ.


ಇಷ್ಟೆಲ್ಲ ಕಷ್ಟಗಳ ನಡುವೆ ಛಲ ಬಿಡದ ಹ್ಯಾರಿ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು‌. ಅರ್ಜಿ ಪರಿಶೀಲಿಸಿದ ಕೇರಳ ಸರ್ಕಾರ ಹ್ಯಾರಿಯ ಪೈಲಟ್​ ತರಬೇತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸಲು ಮುಂದಾಗಿದೆ. ಕಮರ್ಷಿಯಲ್ ಪೈಲಟ್ ಆಗಲು ಕಮರ್ಷಿಯಲ್ ಲೈಸನ್ಸ್ ಬೇಕು. ವಾಯುಯಾನ ನಿಯಂತ್ರಕ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ನಿಯಮಗಳ ಪ್ರಕಾರ, ಅರ್ಜಿದಾರರು ಇನ್ನೂರು ಗಂಟೆಗಳ ವಿಮಾನ ಯಾನ ಮಾಡಿರುವ ದಾಖಲೆ ಬೇಕು. ಅದಕ್ಕಾಗಿಯೇ ಈಗ ಹ್ಯಾರಿ ಮೂರು ವರ್ಷ ಕೋರ್ಸ್ ಮಾಡಲು ಸರ್ಕಾರ ನೆರವು ನೀಡಿದೆ.


ತಿರುವನಂತಪುರಂನ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ​​ಟೆಕ್ನಾಲಜಿಯಲ್ಲಿ 3 ವರ್ಷಗಳ ಕೋರ್ಸ್ ವ್ಯಾಸಂಗ ಮಾಡಲು ಮತ್ತು ವಾಣಿಜ್ಯ ಪೈಲಟ್ ಪರವಾನಗಿ ಪಡೆಯಲು ಹ್ಯಾರಿಗೆ ಸರ್ಕಾರ ಹಣ ಸಹಾಯ ಮಾಡಲು ಮುಂದಾಗಿರುವುದು ಖುಷಿಯ ಸಂಗತಿ. ಸಾಮಾಜಿಕ ನ್ಯಾಯ ಇಲಾಖೆ ಹ್ಯಾರಿ ವಿದ್ಯಾಭ್ಯಾಸಕ್ಕೆ 23.34 ಲಕ್ಷ ರೂ. ಧನ ಸಹಾಯ ಮಾಡಲು ಅನುಮೋದನೆ ನೀಡಿದೆ. ಅಲ್ಲದೆ ಜೋಹಾನ್ಸ್‌ಬರ್ಗ್‌ನಲ್ಲಿ ತರಬೇತಿ ಪಡೆದಿರುವ ಹ್ಯಾರಿ 2017 ರಲ್ಲಿ ಪೈಲೆಟ್ ಆಗುವ ವಾಣಿಜ್ಯ ಪರವಾನಗಿಯನ್ನೂ ​ಪಡೆದಿದ್ದಾರೆ, ಇಂಡಿಯಾ ಟೈಮ್ಸ್ ವರದಿ.


ಆ್ಯಡಂ ಹ್ಯಾರಿ ಹಾಗೂ ಅವರ ಶಿಕ್ಷಕಿ ಶೈಲಜಾ (ಚಿತ್ರ ಕೃಪೆ: ಫೇಸ್ ಬುಕ್)


ನ್ಯೂಸ್ 18 ನೊಂದಿಗೆ ಮಾತನಾಡುತ್ತಾ ಆ್ಯಡಂ ಹ್ಯಾರಿ,


“ನಾನು ಕೇರಳ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇಂದು ನಾನು ಪೈಲೆಟ್ ಆಗುವುದಕ್ಕೆ ಕೇರಳ ಸರ್ಕಾರವೇ ಕಾರಣ. ನನ್ನ ಕನಸು ಈಡೇರುತ್ತದೆಯೋ ಇಲ್ಲವೋ ಎಂಬ ತಳಮಳದಲ್ಲಿದ್ದಾಗ ನನಗೆ ದಾರಿ ತೋರಿಸಿದ್ದು ಕೇರಳ ಸರ್ಕಾರ. ನನ್ನ ಕನಸಿಗೆ ದಾರಿ ಮಾಡಿ ಕೊಟ್ಟು ನನಸು ಮಾಡಿದ ಕೇರಳ ಸರ್ಕಾರಕ್ಕೆ ನಾನು ಎಂದಿಗೂ ಆಭಾರಿಯಾಗಿರುತ್ತೇನೆ” ಎಂದರು


ವಿಮಾನದಲ್ಲಿ ಆ್ಯಡಂ ಹ್ಯಾರಿ (ಚಿತ್ರ ಕೃಪೆ: ಫೇಸ್ ಬುಕ್)


“ನನ್ನ ಈ ಕೆಲಸಕ್ಕಾಗಿ ಕಳೆದ ನಾಲ್ಕು ತಿಂಗಳುಗಳಿಂದ ನಾನು ನಿಯಮಿತವಾಗಿ ಕಾರ್ಯದರ್ಶಿಗೆ ಭೇಟಿ ನೀಡುತ್ತಿದ್ದೇನೆ. ಸಾಮಾಜಿಕ ನ್ಯಾಯ ವಿಭಾಗದ ಕಾರ್ಯದರ್ಶಿ ಬಿಜು ಪ್ರಭಾಕರ್ ಇಲ್ಲದಿದ್ದರೆ, ನನ್ನ ಕನಸು ಕೇವಲ ಕನಸಾಗಿಯೇ ಉಳಿಯುತ್ತಿತ್ತು. ನನ್ನಂತಹ ಅನೇಕರು ಇದ್ದಾರೆ. ಅವರ ಸಮುದಾಯಕ್ಕೆ ನಾನು ಸೇರುತ್ತೇನೆ. ನೀವೇನಾದರೂ ಕನಸು ಕಂಡಿದ್ದರೆ ಅದಕ್ಕೆ ಸರ್ಕಾರದ ಬೆಂಬಲವಿರುತ್ತದೆ ಛಲ ಬಿಡದೆ ಹೋರಾಡಿ ಎಂದರು ಆ್ಯಡಂ, ಮಾತೃಭೂಮಿ ವರದಿ.

ಇತ್ತೀಚೆಗಷ್ಟೆ ಕೇರಳ ಸರ್ಕಾರ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ‌. ಈ ಬಗ್ಗೆ ಸರ್ಕಾರವೇ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ತೃತೀಯ ಲಿಂಗಿ ಆ್ಯಡಂ ಹ್ಯಾರಿ ಸಹಾಯಕ್ಕೆ ಮುಂದಾಗಿರುವುದು ಸರ್ಕಾರದ ಹೇಳಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಈ ಬಗ್ಗೆ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಕಡ್ಡಾಯ 2 ಸ್ಥಾನಗಳನ್ನು ಮೀಸರಲಿರಿಸಬೇಕು ಎಂದು ಕಾನೂನು ರೂಪಿಸಿ ಅವರ ಶಿಕ್ಷಣಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನೂ ಸರ್ಕಾರವೇ ಭರಿಸುವುದಾಗಿ ಘೋಷಿಸಿದೆ. ತೃತೀಯ ಲಿಂಗಿಗಳಿಗೂ ಸಮಾಜದಲ್ಲಿ ಸ್ಥಾನ ಮಾನವಿದೆ ಎಂಬುದನ್ನು ಕೇವಲ ಕಾಗದಕ್ಕೆ ಸೀಮಿತ ಮಾಡದೇ ಆ ಕೆಲಸವನ್ನು ಮಾಡಿ ತೋರಿಸಿದ ಕೇರಳ ಸರ್ಕಾರ ಕ್ಕೆ ನಮನ. ಸದ್ಯ ಆ್ಯಡಂ ನಂತಹ ಎಷ್ಟೋ ಮಂದಿ ತಮ್ಮ ಕನಸನ್ನು ನನಸು ಮಾಡಿಕೊಳ್ಳದೆ ಹಿಂದೆಯೆಲ್ಲೋ ಇದ್ದಾರೆ. ಅಂಥವರನ್ನು ಸರ್ಕಾರ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಿ ಅನ್ನೋದು ಎಲ್ಲರ ಆಶಯ.