ಆವೃತ್ತಿಗಳು
Kannada

ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ

ಟೀಮ್​ ವೈ.ಎಸ್​ . ಕನ್ನಡ

YourStory Kannada
4th Feb 2016
Add to
Shares
0
Comments
Share This
Add to
Shares
0
Comments
Share

ಕುಣಿಯೋಕೆ ಬರದವಳು ನೆಲ ಡೊಂಕು ಎಂದಳಂತೆ. ಪ್ರತಿಯೊಬ್ಬ ಮನುಷ್ಯ ಮಾಡುವುದು ಇದನ್ನೇ. ಸೋಲುಂಡಾಗ ಬೇರೆಯವರನ್ನು ದೋಷಿ ಮಾಡಿಬಿಡ್ತಾನೆ. ಸುತ್ತಮುತ್ತಲ ಪರಿಸರದ ಮೇಲೆ ಆರೋಪ ಹೊರಿಸ್ತಾನೆ. ಆದ್ರೆ ತನ್ನಲ್ಲಿರುವ ನ್ಯೂನ್ಯತೆಯನ್ನು ಹೆಕ್ಕಿ ತೆಗೆದು, ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಧೈರ್ಯ ಕಳೆದುಕೊಳ್ಳದೆ, ಶ್ರದ್ಧೆಯೊಂದಿಗೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ರೆ ಗುರಿ ಕಷ್ಟವೇನಲ್ಲ. ಇಂದು ನಾವು ಹೇಳುವ ವ್ಯಕ್ತಿಯೊಬ್ಬರ ಕಥೆ ನಿಮಗೆ ಸಾಕಷ್ಟನ್ನು ಕಲಿಸುತ್ತೆ.

image


ಇವರ ಹೆಸರು ಸೋಮನಾಥ್ ಗಿರಮ್. ವಯಸ್ಸು 28 ವರ್ಷ. ಸೋಮನಾಥ್ ರನ್ನು ಜನ ಗುರುತಿಸಿದ್ದು ಒಬ್ಬ ಚಾಯ್ ವಾಲಾನಾಗಿ. ಸೋಮನಾಥ್ ಅಂಗಡಿಗೆ ಬಂದು ಬೇಕಾದ ಟೀ ಕುಡಿದು, ಹಣ ಕೊಟ್ಟು ಜನ ವಾಪಸ್ ಹೊಗ್ತಿದ್ದರು. ಸೋಮನಾಥ್ ಏನು ಮಾಡಬಲ್ಲರು ಎಂಬ ಭಾವ ಜನರ ಕಣ್ಣಲ್ಲಿ ಕಾಣ್ತಾ ಇತ್ತು. ಆದ್ರೆ ಈಗ ಟೀ ಮಾರುವವನ ಗುರುತು ಬದಲಾಗಿದೆ. ಒಬ್ಬ ಟೀ ಮಾರುವವನ ಮನೆ ಮುಂದೆ ಜನ ಕ್ಯೂ ನಿಂತಿದ್ದಾರೆ. ಟೀ ಕುಡಿಯೋಕೆ ಅಲ್ಲ, ಅಭಿನಂದನೆ ಸಲ್ಲಿಸೋಕೆ. ಟೀ ಮಾರುವ ಸೋಮನಾಥ್ ಗಿರಮ್ ಈಗ ಚಾರ್ಟಡ್ ಅಕೌಂಟೆಂಟ್. ಟೀ ಮಾರಿ ಸಾಮಾನ್ಯರಂತೆ ಬದುಕು ಸಾಗಿಸುತ್ತಿದ್ದ ವ್ಯಕ್ತಿ ಕಠಿಣ ಪರೀಕ್ಷೆ ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆಗಿದ್ದಾರೆ. ಅಂತಿಮ ಪರೀಕ್ಷೆಯಲ್ಲಿ ಸೋಮನಾಥ್ ಶೇಕಡಾ 55 ಅಂಕ ಪಡೆದಿದ್ದಾರೆ.

ಸಂತೋಷ ಬರೋದಿಕ್ಕೆ ಶುರುವಾದ್ರೆ ಮನೆಯ ಬಾಗಿಲುಗಳು ಸಾಲೋದಿಲ್ಲವಂತೆ. ಹಾಗೆ ಸೋಮನಾಥ್ ಗೆ ಒಂದೇ ಬಾರಿ ಡಬಲ್ ಸಂತೋಷ ಸಿಕ್ಕಿದೆ. ಒಂದು ಕಡೆ ಸಿಎ ಪಾಸಾದ ಖುಷಿ. ಮತ್ತೊಂದೆಡೆ ಮಹಾರಾಷ್ಟ್ರ ಸರ್ಕಾರ ` Earn and Learn’ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಸೋಮನಾಥ್ ಅವರನ್ನು ನೇಮಕ ಮಾಡಿದೆ. ಸೋಮನಾಥ್ ಕೇವಲ ಮಹಾರಾಷ್ಟ್ರದಲ್ಲೊಂದೆ ಅಲ್ಲ ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡಲು ಮನಸ್ಸಿಲ್ಲದಿದ್ದರೂ ಸಂಪನ್ಮೂಲ ಕೊರತೆಯಿಂದ ಶಿಕ್ಷಣವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳಿಗೆ ಸೋಮನಾಥ ಮಾದರಿಯಾಗಿದ್ದಾರೆ.

image


ಸೋಮನಾಥ್ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಒಂದು ಸಣ್ಣ ಊರು ಸಾಂಗ್ವಿಯವರು. ಉತ್ತಮ ಶಿಕ್ಷಣ ಪಡೆದು ಏನಾದರೂ ಸಾಧಿಸಬೇಕೆಂದುಕೊಂಡಿದ್ದರು ಸೋಮನಾಥ್. ಆದ್ರೆ ಬಡತನ ಅವರ ಓದನ್ನು ನಿಲ್ಲಿಸಿತ್ತು. ಮನೆಯವರ ಹೊಟ್ಟೆ ತುಂಬಿಸಲು ಸೋಮನಾಥ್ ತಮ್ಮ ಊರು ಬಿಟ್ಟು ಬೇರೆ ಊರಿಗೆ ಹೋಗಬೇಕಾಯ್ತು. ಹಸಿದಿದ್ದ ಸೋಮನಾಥ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಪುಣೆಯ ಸದಾಶಿವ ಪೇಟ್ ನಲ್ಲಿ ಟೀ ಅಂಗಡಿ ತೆರೆದರು.ಕಷ್ಟದ ಪರಿಸ್ಥಿತಿಯಲ್ಲಿಯೂ ಸೋಮನಾಥ್ ಗೆ ಓದುವ ಹಸಿವು ಮಾತ್ರ ಇಂಗಿರಲಿಲ್ಲ. ಟೀ ಅಂಗಡಿಯಿಂದ ಸ್ವಲ್ಪ ಲಾಭ ಬರ್ತಾ ಇದ್ದಂತೆ ಓದುವ ಹುಚ್ಚು ಹೆಚ್ಚಾಯ್ತು. ಸೋಮನಾಥ್ ಸಿಎ ಮಾಡುವ ತೀರ್ಮಾನಕ್ಕೆ ಬಂದರು. ಗುರಿ ತಲುಪಲು ಕಠಿಣ ಪರಿಶ್ರಮಕ್ಕಿಳಿದರು. ಬೆಳಿಗ್ಗೆ ಓದಲು ಸಮಯ ಸಿಗದ ಕಾರಣ ರಾತ್ರಿ ನಿದ್ದೆ ಬಿಟ್ಟು ಓದಲು ಶುರುಮಾಡಿದರು ಸೋಮನಾಥ್.

ಒಂದು ಬಡ ಕುಟುಂಬದಲ್ಲಿ ಜನಿಸಿರುವ ಸೋಮನಾಥ್ ತಂದೆ ಬಲಿರಾಮ್ ಗಿರಾಮ್ ಒಬ್ಬ ಸಾಧಾರಣ ಕೃಷಿಕ. ಮಹಾರಾಷ್ಟ್ರದ ಕೃಷಿಕರ ದುಸ್ಥಿತಿ ತಿಳಿದಿದ್ದ ಸೋಮನಾಥ್, ಆರ್ಥಿಕ ಪರಿಸ್ಥಿತಿ ಸುಧಾರಿಸಲು ದೊಡ್ಡದೇನಾದ್ರೂ ಮಾಡಬೇಕೆಂದು ಆಲೋಚಿಸಿದ್ದರಂತೆ. ಆಗಲೇ ಸಿಎ ಮಾಡುವ ಕನಸು ಹುಟ್ಟಿಕೊಂಡಿತ್ತಂತೆ. 2006ರಲ್ಲಿ ತನ್ನೂರಿನಿಂದ ಪುಣೆಗೆ ಬಂದ ಸೋಮನಾಥ್ ಸಾಹು ಕಾಲೇಜಿನಲ್ಲಿ ಬಿಎ ಮುಗಿಸಿದರು. ಬಿಎ ಪಾಸ್ ಆದನಂತರ ಸಿಎ ಮಾಡಲು ಆರ್ಟಿಕಲ್ ಶಿಪ್ ಮಾಡಿದ್ರು.

`` ಸಿಎ ಮಾಡುವುದು ಕಷ್ಟಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಹಣಕಾಸಿನ ಸಮಸ್ಯೆ ಉಲ್ಬಣಿಸಿತ್ತು. ಇದರಿಂದಾಗಿ ಮನೆಯವರೂ ತೊಂದರೆ ಎದುರಿಸಿದರು.ಆದ್ರೆ ನಾನು ಧೈರ್ಯಗೆಡಲಿಲ್ಲ. ಟೀ ಅಂಗಡಿ ಶುರುಮಾಡಿದೆ. ಪುಣೆಯಲ್ಲಿ ವಾಸಿಸಲು ಬೇಕಾಗುವ ಖರ್ಚು ಟೀ ಅಂಗಡಿಯಿಂದ ಬರ್ತಾ ಇತ್ತು. ಇದೇ ನನ್ನ ಸಿಎ ಮಾಡುವ ಕನಸನ್ನೂ ಪೂರ್ಣಗೊಳಿಸ್ತು.’’ ಎನ್ನುತ್ತಾರೆ ಸೋಮನಾಥ್.

image


ಯುವರ್ ಸ್ಟೋರಿ ಜೊತೆ ಮಾತನಾಡಿದ ಸೋಮನಾಥ್,

``ನನಗೆ ಸಿಎ ಪರೀಕ್ಷೆ ಪಾಸ್ ಮಾಡುತ್ತೇನೆಂಬ ವಿಶ್ವಾಸವಿತ್ತು. ಇದು ತುಂಬ ಕಷ್ಟ, ನಿನಗೆ ಆಗಲ್ಲ ಅಂತಾ ಕೆಲವರು ಹೇಳ್ತಾ ಇದ್ದರು. ಮತ್ತೆ ಕೆಲವರು ಚಾರ್ಟೆಡ್ ಅಕೌಂಟೆಂಟ್ ಆಗಲು ಉತ್ತಮ ಇಂಗ್ಲೀಷ್ ಬರಬೇಕೆಂದು ಹೇಳಿದ್ದರು. ಯಾಕೆಂದ್ರೆ ನನಗೆ ಮರಾಠಿ ಬಿಟ್ಟರೆ ಹಿಂದಿ ಕೂಡ ಸರಿಯಾಗಿ ಬರ್ತಾ ಇರಲಿಲ್ಲ. ಆದ್ರೆ ನಾನು ಸೋಲೊಪ್ಪಿಕೊಳ್ಳಲಿಲ್ಲ. ಪ್ರಯತ್ನ ಮಾಡುತ್ತ ಬಂದೆ. ಮೊದಲು ನಾನು ಬ್ಯಾಂಕಿಂಗ್ ಅಂಡ್ ಫೈನಾನ್ಸ್ ಬಿಎಯನ್ನು ಮರಾಠಿ ಭಾಷೆಯಲ್ಲಿ ಮುಗಿಸಿದೆ.ಇಂದು ನನ್ನ ಕನಸು ನನಸಾಗಿದೆ.’’ ಎನ್ನುತ್ತಾರೆ.

ರಾಜ್ಯ ಶಿಕ್ಷಣ ಸಚಿವ ವಿನೋದ್ ತಾವ್ಡೆ ಸೋಮನಾಥ್ ಸಾಧನೆಗೆ ಬೆನ್ನು ತಟ್ಟಿದ್ದಾರೆ. ``ಒಬ್ಬ ಟೀ ಮಾರುವ ಯುವಕ ಸಿಎಯಂತ ಕಠಿಣ ಪರೀಕ್ಷೆ ಪಾಸ್ ಮಾಡಿದ್ದು ಖುಷಿಪಡುವಂತಹ ವಿಷಯ. ನಾವು ಅಭಿನಂದನೆ ಸಲ್ಲಿಸುತ್ತೇವೆ. ಈಗ ದೇಶದಲ್ಲಿ ಟೀ ಮಾರುವವರಿಗೆ ಒಳ್ಳೆಯ ದಿನ ಬಂದಿದೆ. ನರೇಂದ್ರ ಮೋದಿ ಟೀ ಮಾರಿ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಸೋಮನಾಥ್ ಟೀ ಮಾರಿ ಸಿಎ ಪರೀಕ್ಷೆ ಪಾಸ್ ಮಾಡಿದ್ದಾರೆ. ಸಿಎ ಪರೀಕ್ಷೆ ಪಾಸ್ ಮಾಡಿದ ನಂತರ ` Earn and Learn’ ಯೋಜನೆಗೆ ಸೋಮನಾಥ್ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸೋಮನಾಥ್ ಮೂಲಕ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲಿ ಎಂಬುದು ಸರ್ಕಾರದ ಉದ್ದೇಶವಾಗಿದೆ’’ ಎನ್ನುತ್ತಾರೆ ತಾವ್ಡೆ.

ಸರ್ಕಾರ ನೀಡಿರುವ ರಾಯಭಾರಿ ಜವಾಬ್ದಾರಿಗೆ ಖುಷಿಯಾಗಿರುವ ಸೋಮನಾಥ್ ತಮ್ಮ ಸಾಧನೆಯ ಹಿಂದೆ ಕುಟುಂಬಸ್ಥರಿದ್ದಾರೆಂಬುದನ್ನು ಹೇಳಲು ಮರೆಯಲಿಲ್ಲ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ನೆರವಾಗುವುದು ಅವರ ಮುಂದಿನ ಗುರಿಯಂತೆ. ಕಷ್ಟದ ಜೊತೆ ಗುದ್ದಾಡಿ ಜಯಗಳಿಸಿದ ಸೋಮನಾಥ್ ಭವಿಷ್ಯ ಉಜ್ವಲವಾಗಿರಲೆಂಬುದು ಯುವರ್ ಸ್ಟೋರಿ ಆಶಯ.

ಲೇಖಕರು: ನೀರಜ್ ಸಿಂಗ್

ಅನುವಾದಕರು: ರೂಪಾ ಹೆಗಡೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags