ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

ಟೀಮ್​ ವೈ.ಎಸ್​. ಕನ್ನಡ

ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

Thursday May 12, 2016,

2 min Read

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಜನ್​​ಧನ್​ ಯೋಜನಾ. ಇದರ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಹೊಂದಿರಬೇಕು. ಯಾಕಂದ್ರೆ ಅನೇಕ ಗ್ರಾಮಸ್ಥರಿಗೆ ಬ್ಯಾಂಕ್ ಬಗ್ಗೆ ಯಾವುದೇ ಮಾಹಿತಿ ಅವರಿಗಿರುವುದಿಲ್ಲ. ಹಾಗಾಗಿ ಸರ್ಕಾರದಿಂದ ಬರುವ ಹಣ ಅವರಿಗೆ ನೇರವಾಗಿ ತಲುಪಿಸಲು ಮೋದಿಯವರು ಕೋಟ್ಯಾಂತರ ಜನರ ಬ್ಯಾಂಕ್ ಖಾತೆ ತೆರೆಯಿಸಿ ಸರ್ಕಾರ ಅವರ ಖಾತೆಗೆ ದುಡ್ಡು ಕೂಡ ಹಾಕ್ತು. ಆದರೆ ಪ್ರಧಾನಮಂತ್ರಿಯವರ ಈ ಯೋಜನೆ ಜಾರಿಯಾಗುವುದಕ್ಕಿಂತ ಮುಂಚೆ ಇಲ್ಲಿ ಇಂತಹ ಒಂದು ಯೋಜನೆ ಜಾರಿಯಾಗಿದ್ದು, ನಿಜಕ್ಕೂ ಅತ್ಯಂತ ಅಚ್ಚರಿಯ ಸಂಗತಿ.

image


ನಾವು ನಿಮಗೆ ಉತ್ತರಪ್ರದೇಶದ ಒಂದು ಅದ್ಭುತ ಗ್ರಾಮದ ಪರಿಚಯ ಮಾಡಿಸಿಕೊಡುತ್ತೇವೆ. ಈ ಊರಿನ ಮಹಿಳೆಯರು ಯಾರು ಯೋಚಿಸದಂತಹ ಒಂದು ಯೋಜನೆಗೆ ಚಾಲನೆ ನೀಡಿದ್ದಾರೆ. ಗೋಧಿ ಬ್ಯಾಂಕ್ ನಿರ್ಮಾಣ ಮಾಡುವ ಮೂಲಕ ಮಹಿಳೆಯರು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವಂತೆ ಕಾನ್ಪುರದ ಭಿಕಂಪುರ ಗ್ರಾಮದ ಮಹಿಳೆಯರು ಮಾಡಿದ್ದಾರೆ. ಇಲ್ಲಿ ಎಲ್ಲ ಮಹಿಳೆಯರು ತಾವು ಬೆಳೆದ ಗೋಧಿಯನ್ನು ಶೇಖರಿಸುತ್ತಾರೆ. ಗೋಧಿಯನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಬ್ಯಾಂಕಿನದ್ದಾಗಿರುತ್ತದೆ. ಯಾರಾದ್ರು ಮಹಿಳೆಯರು ಕಷ್ಟದಲ್ಲಿದ್ರೆ, ಅವರಿಗೆ ಸಾಲದ ರೂಪದಲ್ಲಿ ಗೋಧಿಯನ್ನು ನೀಡಲಾಗುತ್ತದೆ. ಆದರೆ ಅವರಿಂದ ಯಾವುದೇ ರೀತಿಯ ಬಡ್ಡಿಯನ್ನು ಪಡೆದುಕೊಳ್ಳದಿರುವುದು ಬ್ಯಾಂಕಿನ ವಿಶೇಷತೆಯಾಗಿದೆ. ಮಹಿಳೆಯರು ತಮ್ಮ ಕಷ್ಟ ಪರಿಹಾರವಾದ ನಂತರ ಗೋಧಿಯನ್ನು ಮರಳಿಸುವಂತಹ ಅವಕಾಶ ಈ ಬ್ಯಾಂಕ್ ಕಲ್ಪಸಿದೆ.

image


ಬ್ಯಾಂಕ್ ಸಂಸ್ಥಾಪಕಿ ರಶ್ಮಿ ಯುವರ್​ಸ್ಟೋರಿಯೊಂದಿಗೆ ಮನದಾಳದ ಮಾತು

"ಮೂರು ವರ್ಷದ ಹಿಂದೆ ನಮ್ಮೂರಲ್ಲಿ ಬರ ಬಂದಿತ್ತು. ಆಗ ಅನೇಕ ಕುಟುಂಬಗಳು ಒಂದು ತುತ್ತು ಅನ್ನಕ್ಕಾಗಿ ಪರದಾಡಿದ್ರು. ಆಗ ಮಹಿಳೆಯರೆಲ್ಲ ಸೇರಿ ನಾವು ಧಾನ್ಯಗಳ (ಬೆಳೆಯ) ಬ್ಯಾಂಕ್ ನಿರ್ಮಿಸಲು ಮುಂದಾದ್ವಿ. ಆಗ ಎಲ್ಲರೂ ಗೋಧಿಯನ್ನು ಸಂಗ್ರಹಿಸಿದ್ವಿ. ಅದಕ್ಕೆ ‘ಪೂಜಾ ಗ್ರೇನ್ ಬ್ಯಾಂಕ್’ ಎಂದು ಹೆಸರಿಟ್ವಿ. ಯಾರು ಸಾಲ ತೆಗೆದುಕೊಂಡಿದ್ರೋ ಆ ಮಹಿಳೆಯರಲ್ಲ ತಾವು ಪಡೆದ ಸಾಲಕ್ಕಿಂತ ಹೆಚ್ಚು ಹೆಚ್ಚು ಗೋಧಿಯನ್ನು ಬ್ಯಾಂಕ್​ಗೆ ಮರು ಪಾವತಿಸಿದ್ರು. ಅನಂತರ ಬ್ಯಾಂಕ್ ಎಷ್ಟರ ಮಟ್ಟಿಗೆ ಯಶಸ್ವಿಯಾಯ್ತು ಎಂದರೆ ಅಕ್ಬರ್​ಪುರ್ ಕ್ಷೇತ್ರದ 20ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈ ‘ಗೋಧಿ ಬ್ಯಾಂಕ್’ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ"

ಈ ಬ್ಯಾಂಕ್​ನ ವಿಶೇಷತೆಯಂದರೆ ಗೋಧಿಯನ್ನು ಸಾಲ ಪಡೆದ ಮಹಿಳೆಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಬೀಡುತ್ತಾರೆ. ಗೋಧಿ ಬ್ಯಾಂಕ್ ನಿರ್ಮಾಣಕ್ಕಾಗಿ ಇಲ್ಲಿನ ಮಹಿಳೆಯರಿಗೆ ಯಾವ ವ್ಯಾಪಾರಿಯಾಗಲಿ ಅಥವಾ ಸರ್ಕಾರದ ಅವಶ್ಯಕತೆ ಬೀಳಲಿಲ್ಲ. ಎಲ್ಲವನ್ನು ಈ ಮಹಿಳೆಯರೇ ಅಚ್ಚುಕಟ್ಟಾಗಿ ಮಾಡಿದ್ದಾರೆ..

ಗ್ರಾಮದ ಮಹಿಳೆ ವಿಮಲ ಹೀಗೆ ಹೇಳ್ತಾರೆ...

"ನನ್ನ ಮಗನ ಹುಟ್ಟುಹಬ್ಬದ ದಿನವೇ ಮನೆಯಲ್ಲಿ ಗೋಧಿ ಇರಲಿಲ್ಲ. ನಾನು ಆಗ ಬ್ಯಾಂಕಿನಿಂದ ಗೋಧಿಯನ್ನು ಸಾಲ ಪಡೆದೆ. ಅನಂತರ ಹುಟ್ಟು ಹಬ್ಬ ಆಚರಿಸಿ, ಪಡೆದ ಸಾಲಕ್ಕಿಂತ ಹೆಚ್ಚು ಗೋಧಿಯನ್ನು ಮರು ಪಾವತಿಸಿದೆ"..

ಇಲ್ಲಿ ಮೆಚ್ಚುವಂತಹ ಸಂಗತಿಯೆಂದರೆ. ಮಹಿಳೆಯರಲ್ಲಿ ಹೊಂದಾಣಿಕೆಯ ಗುಣವಿದೆ. ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ಒಬ್ಬರಿಗೊಬ್ಬರು ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಇವರೆಲ್ಲರ ಪ್ರಯತ್ನದ ಹಿಂದಿನ ಉದ್ದೇಶವೊಂದೆ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಸಿಗಲಿ. ಯಾರು ಉಪವಾಸ ಇರಬಾರದು ಎಂಬುದು. ಈ ಮಹಿಳೆಯರು ಗೊತ್ತು-ಗೊತ್ತಿಲ್ಲದೆ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ. ಮಹಿಳೆ ಎನಾದ್ರು ಒಂದು ಸಾಧಿಸಬೇಕು ಎಂದು ಪಣತೊಟ್ಟರೆ ಅದು ಖಂಡಿತ ಯಶಸ್ವಿಯಾಗಿ ಆಗುತ್ತೆ ಎನ್ನುವುದಕ್ಕೆ, ಇದೊಂದು ಉದಾಹರಣೆ. ಇಂದು ಜಗತ್ತಿಗೆ ಮಾದರಿಯಾಗಿದೆ ಈ `‘ಗೋಧಿ ಬ್ಯಾಂಕ್’.

ಲೇಖಕರು: ವಿಜಯ್ ಪ್ರತಾಪ್ ಸಿಂಗ್

ಅನುವಾದಕರು: ಎನ್.ಎಸ್.ರವಿ