ವಿಕಲಚೇತನ‌ ಮಹಿಳೆಯರ ಬದುಕಿಗೆ ಬೆಳಕಾದ ಡಾ. ಐಶ್ವರ್ಯ ರಾವ್

ಸರ್ಕಾರದ ರಾಷ್ಟ್ರೀಯ ಆ್ಯಂಟಿ-ರೆಟ್ರೋವೈರಲ್ ಥೆರೆಪಿ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕರ ಆರೋಗ್ಯಕ್ಕಾಗಿ ಹಲವು ವರ್ಷಗಳ ಕಾಲ‌ ಕೆಲಸ ನಿರ್ವಹಿಸಿದ ಮಕ್ಕಳ ತಜ್ಞೆ ಮತ್ತು ಕಾರ್ಯಕರ್ತೆಯಾದ ಐಶ್ವರ್ಯಾರವರು‌ 2016ರಲ್ಲಿ ವಿಕಲಚೇತನ ಮಹಿಳೆಯರಿಗಾಗಿ ಬೆಟರ್ ವರ್ಲ್ಡ್‌ ಶೆಲ್ಟರ್ ಎಂಬ ಪುರ್ನವಸತಿ ಕೇಂದ್ರವನ್ನು ಸ್ಥಾಪಿಸಿದರು.

ವಿಕಲಚೇತನ‌ ಮಹಿಳೆಯರ ಬದುಕಿಗೆ ಬೆಳಕಾದ ಡಾ. ಐಶ್ವರ್ಯ ರಾವ್

Monday April 06, 2020,

4 min Read

ಮಾನವನ ಆತ್ಮ ಸ್ಥೈರ್ಯ, ಕಷ್ಟಸಹಿಷ್ಣುತೆ, ಧೈರ್ಯ, ನಿರ್ಣಯ ಕೈಗೊಳ್ಳುವಿಕೆ ಇಷ್ಟಿದ್ದರೆ ಯಾವುದೇ ಅಂಗವೈಕಲ್ಯವು ಮನುಷ್ಯನ ಬದುಕಿಗೆ ಅಡ್ಡಿಯಾಗುವುದಿಲ್ಲ. ನಲವತ್ತೇಳರ ಹರೆಯದ ಐಶ್ವರ್ಯ ರಾವ್‌ರವರು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ವೃತ್ತಿಯಲ್ಲಿ ಮಕ್ಕಳ ತಜ್ಞೆಯಾದ, ಪ್ರವೃತ್ತಿಯಲ್ಲಿ ಅಂಗವೈಕಲ್ಯ ಹಕ್ಕುಗಳ ಹೋರಾಟಗಾರ್ತಿಯಾದ‌ ಐಶ್ವರ್ಯರವರು ಅನೇಕ ಮಹಿಳೆಯರ ಬದುಕಿನ ಚಾಲನಶಕ್ತಿಯಾಗಿದ್ದಾರೆ.


ಸಂಗೀತ ನಗರಿಯಾದ ಚೆನ್ನೈನಲ್ಲಿ ಬೆಳೆದ ಐಶ್ವರ್ಯ ಮೂರರ ಹರೆಯದಲ್ಲಿ ಪೋಲಿಯೊ ರೋಗಕ್ಕೆ ತುತ್ತಾಗಿದ್ದರು. ಈ ಸಾಂಕ್ರಾಮಿಕ ಕಾಯಿಲೆಯು ಅವರ ಸ್ನಾಯುಗಳ ದುರ್ಬಲತೆಗೆ ಕಾರಣವಾಯಿತು. ಇದು ಅವರ ಚಲನಶಕ್ತಿಯ ಮೇಲೆ ಪರಿಣಾಮ ಬೀರಿ ಅಂಗವೈಕಲ್ಯಕ್ಕೆ ತುತ್ತಾದರು.‌‌ ಅಂದಿನಿಂದ, ಐಶ್ವರ್ಯಾರಿಗೆ ತಮ್ಮ ಕಾಲು ಮತ್ತು ತೋಳುಗಳನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಆದರೆ ಇದ್ಯಾವುದು ಅವರ ಗುರಿಯನ್ನು ತಲುಪಲು, ಅವರ ಉತ್ಸಾಹದ ಹೋರಾಟದ ಬಲಕ್ಕೆ‌ ಅಡ್ಡಿಯಾಗಲಿಲ್ಲ.


47 ವಯಸ್ಸಿನ ಐಶ್ವರ್ಯ ರಾವ್‌ರವರು ವಿಕಲಚೇತನ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ

ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಆ್ಯಂಟಿ- ರೆಟ್ರೋವೈರಲ್ ಥೆರೆಪಿ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕ ಸ್ಥಳದಲ್ಲಿ‌ ಕೆಲಸ ಮಾಡಿದ ನಂತರ,‌ ಐಶ್ವರ್ಯ 2016ರಲ್ಲಿ ವಿಕಲಚೇತನ ಮಹಿಳೆಯರಿಗಾಗಿ ಬೆಟರ್ ವರ್ಲ್ಡ್‌ ಶೆಲ್ಟರ್ ಎಂಬ ಪುರ್ನವಸತಿ ಕೇಂದ್ರವನ್ನು ಸ್ಥಾಪಿಸಿದರು.


"ವಿಭಿನ್ನ ಸಾಮರ್ಥ್ಯದ‌ ಮಹಿಳೆಯರು ತಮ್ಮದೇ ಆದ ಗುರುತನ್ನು ಸೃಷ್ಟಿಸಲು ತಾರತಮ್ಯ, ಹಿಂಸೆ ಮತ್ತು ಕಳಂಕವನ್ನು ಎದುರಿಸಲು‌ ಒತ್ತಾಯಿಸಲ್ಪಡುತ್ತಾರೆ. ಅವರು ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಉದಾಹರಣೆಗೆ, ಯುನೆಸ್ಕೋ ಮತ್ತು ವರ್ಲ್ಡ್ ಬ್ಲೈಂಡ್ ಯೂನಿಯನ್ ಪ್ರಕಾರ, ಒಟ್ಟಾರೆ ವಿಕಲಚೇತನರ ಸಾಕ್ಷರತಾ ಪ್ರಮಾಣ 3 ಪ್ರತಿಶತದಷ್ಟಿದ್ದರೆ ವಿಕಲಚೇತನ ಮಹಿಳೆಯರ ಸಾಕ್ಷರತೆಯ ಪ್ರಮಾಣ ಕೇವಲ‌ 1 ಪ್ರತಿಶತ ಮಾತ್ರ ಇದೆ. ಆದ್ದರಿಂದ ನಾನು, ಆಶ್ರಯದ ರೂಪದಲ್ಲಿ ಅವರು ಅಡೆತಡೆಗಳನ್ನು ಎದುರಿಸಲು ನಾನು ನಿರ್ಧರಿಸಿದೆ,” ಎಂದು ಬೆಟರ್ ವರ್ಲ್ಡ್ ಶೆಲ್ಟರ್‌ನ ಸಂಸ್ಥಾಪಕರಾದ ಡಾ. ಐಶ್ವರ್ಯ ರಾವ್ ಯುವರ್‌ ಸ್ಟೋರಿಗೆ ತಿಳಿಸಿದ್ದಾರೆ.


ಐಶ್ವರ್ಯರವರ ಸ್ಪೂರ್ತಿದಾಯಕ ಪಯಣ

ಐಶ್ವರ್ಯರವರ ತಂದೆ ಹಿರಿಯ ಐಎಎಸ್ ಅಧಿಕಾರಿಯಾಗಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಹುದ್ದೆಗಳನ್ನು ಸಹ ಅಲಂಕರಿಸಿದ್ದರು.


ಐಶ್ವರ್ಯರವರು ಒಂಭತ್ತು ವರ್ಷದ ತನಕ ಔಪಚಾರಿಕ ಶಿಕ್ಷಣವನ್ನು ಹೊಂದಲಿಲ್ಲ ಎಂದು ಅವರು ಹೇಳುತ್ತಾರೆ.


ಬೆಟರ್ ವರ್ಲ್ಡ್ ಸೆಂಟರ್‌ನಲ್ಲಿ‌ರುವ ಮಹಿಳೆಯರೊಂದಿಗೆ ಐಶ್ವರ್ಯ ರಾವ್‌


"ನನ್ನ ಪೋಷಕರು, ನನ್ನನ್ನು ಮೊದಲಿಗೆ ಶಾಲೆಗೆ ಕಳುಹಿಸಲು ಆತಂಕ ಪಡುತ್ತಿದ್ದರು. ಅವರು ನನ್ನ ರಕ್ಷಣಾ ಕವಚವಾಗಿದ್ದರು. ನನ್ನ ತಾಯಿ ನನಗೆ ಓದಲು ಮತ್ತು ಬರೆಯಲು ಕಲಿಸಿದರು. ಅದಾಗ್ಯೂ ಅವರು ನನ್ನನ್ನು ಮೂರನೇ ತರಗತಿಗೆ ಚೆನ್ನೈನ ಅಣ್ಣಾ ನಗರದಲ್ಲಿರುವ ಸಿಎಸ್‌ಐ ಬೇನ್ ಶಾಲೆಗೆ ಸೇರಿಸಿದರು. ಅಲ್ಲಿನ‌ ಪ್ರಾಂಶುಪಾಲರು ನನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದರು‌. ಕಲ್ಲಿನ ಮೇಲ್ಛಾವಣಿಯಲ್ಲಿ ಪಾಠ ಓದುವುದು, ಸಹಪಾಠಿಗಳೊಂದಿಗಿನ ತರ್ಲೆ, ವಟಗುಡುವಿಕೆ, ಮನೆಪಾಠ ಹೀಗೆ ಅಲ್ಲಿ ಕಳೆದ ದಿನಗಳನ್ನು ಇನ್ನೂ ನಾನು ನೆನಪಿಸಿಕೊಳ್ಳುತ್ತೇನೆ‌. ಇದು ನನ್ನ ಜೀವನದ ಅತ್ಯುತ್ತಮ ಹಂತಗಳಲ್ಲಿ ಒಂದಾಗಿದೆ," ಎಂದು ಐಶ್ವರ್ಯ ನೆನಪಿಸಿಕೊಳ್ಳುತ್ತಾರೆ.


ಪ್ರೌಢ ಶಿಕ್ಷಣದ ನಂತರ,‌ ಐಶ್ವರ್ಯರವರಿಗೆ ಒಂಭತ್ತು ಇಂಜನಿಯರಿಂಗ್ ಕಾಲೇಜು ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರಕಿತ್ತು, ಇವರಿಗೆ ಲಲಿತಕಲೆಯತ್ತ ಒಲವಿದ್ದರೂ, ಅವರ ಪೋಷಕರು ವೈದ್ಯಕೀಯ ಓದುವಂತೆ ಒತ್ತಾಯಿಸಿದಾಗ, ಕಿಲ್ಬಾಕ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು. 1996ರಲ್ಲಿ ಪದವಿ ಮುಗಿಸಿದ ನಂತರ ಐಶ್ವರ್ಯ ರಾಮಚಂದ್ರ ವೈದ್ಯಕೀಯ ಕಾಲೇಜಿನಿಂದ ಚೈಲ್ಡ್ ಹೆಲ್ತ್ ವಿಷಯದಲ್ಲಿ ಡಿಪ್ಲೊಮಾ ಮಾಡಿದರು.


ಚೆನ್ನೈನಲ್ಲಿನ ಬೆಟರ್ ವರ್ಲ್ಡ್ ಶೆಲ್ಟರ್‌ನ ಮುಂಭಾಗ


"ಆಸಕ್ತಿ ಹೊಂದದ ವಿಷಯಗಳನ್ನು ಅಧ್ಯಯನ ಮಾಡಲು ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ‌. ಒಂದು ಘಟ್ಟದಲ್ಲಿ, ನಾನದನ್ನು ಇನ್ನೂ ಮುಂದೆ ಮಾಡಲು ಸಾಧ್ಯಾವಾಗದ ಹಂತವನ್ನು ತಲುಪಿದಾಗ, ವಿಭಾಗದ ಮುಖ್ಯಸ್ಥರು ಒಂದು ತಿಂಗಳ ನಂತರ ಪತ್ರ ಬರೆಯುವವರೆಗೂ ನಾನು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದೆ‌. ಆ ಪತ್ರ ಕಾಲೇಜಿಗೆ ಮರಳಿ ಸೇರಲು ನನ್ನ ಪ್ರೋತ್ಸಾಹಿಸಿತು. ಅಲ್ಲಿಂದ ನಾನು ಔಷಧದತ್ತ ಒಲವು ಬೆಳೆಸಿಕೊಳ್ಳಲು ಪ್ರಾರಂಭಿಸಿ, ಅದರ ಮೌಲ್ಯ ಅರಿತುಕೊಂಡೆ," ಎಂದು ಐಶ್ವರ್ಯ ಹೇಳುತ್ತಾರೆ.


1999ರಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ವರ್ಲ್ಡ್ ವಿಷನ್ ಎಂಬ ಲೋಕೋಪಕಾರಿ ಸಂಘಟನೆಯೊಂದಿಗೆ ಕೆಲಸ ಮಾಡಲು ಅವರು ಪ್ರಾರಂಭಿಸಿದರು. ಈ ಸಂಘಟನೆಯು ತುರ್ತು ಪರಿಹಾರ, ಶಿಕ್ಷಣ, ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ವಿಶೇಷತೆಯನ್ನು ಹೊಂದಿತ್ತು.


ಕೆಲವು ವರ್ಷಗಳ ನಂತರ, ಐಶ್ವರ್ಯ ಆ್ಯಂಟಿ ರೆಟ್ರೋ ವೈರಲ್ ಚಿಕಿತ್ಸೆಯ ಮೂಲಕ ಎಚ್‌ಐವಿ ಸೋಂಕಿತ ಜನರಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತಿ ಹೊಂದಿದರು. ನಂತರ ಅವರು ಸರ್ಕಾರದ ಉಚಿತ ಆ್ಯಂಟಿ- ರೆಟ್ರೊ ವೈರಲ್ ಕಾರ್ಯಕ್ರಮದ ಭಾಗವಾಗಿ ತಾಂತ್ರಿಕ ತಂಡದ‌ ಮುಖ್ಯಸ್ಥರಾಗಿರುವಂತಹ‌ ತಮ್ಮ ಕ್ಷೇತ್ರದಲ್ಲಿ ಕೆಲವು ಅವಿಭಾಜ್ಯ ಪಾತ್ರಗಳನ್ನು ವಹಿಸಿಕೊಂಡಿದ್ದರು‌. ಅಲ್ಲದೇ ಇವರು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನಲ್ಲಿ ಸಂಶೋಧಕರಾಗಿದ್ದರು.


ವ್ಹೀಲ್‌ಚೇರ್ ಬ್ಯಾಸ್ಕೆಟ್‌ಬಾಲ್‌ ಆಟಗಾರರು ಹಾಗೂ ಅವರ ಟ್ರೋಫಿಗಳೊಂದಿಗೆ ಐಶ್ವರ್ಯ


ಈ ವಿಷಯಗಳು ಸ್ಪಷ್ಟವಾಗಿ ಕಾಣುತ್ತಿದ್ದಾಗ, ಐಶ್ವರ್ಯ ಮತ್ತೊಂದು ದುರದೃಷ್ಟಕರ ಘಟನೆಗೆ ಎದುರಾದರು. ನಡೆಯಲು ಪ್ರಯತ್ನಿಸುತ್ತಿದ್ದಾಗ ಕಳಪೆ ಗುಣಮಟ್ಟದ ಕ್ಯಾಲಿಪರ್‌ಗಳನ್ನು ಬಳಸಿದ್ದರಿಂದ, ಅವರ ಸೊಂಟದ ಭಾಗವು ಜರುಗಿತು, ಈ ಕಾರಣದಿಂದ ಐಶ್ವರ್ಯರವರು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.


"ಇದು ‌ನನಗೆ ನಿಜವಾಗಿಯೂ ಕಠಿಣ ಹಂತವಾಗಿತ್ತು. ನನ್ನ ಕೆಲಸದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದೆ," ಎಂದು ಅವರು ಹೇಳುತ್ತಾರೆ.


ಐಶ್ವರ್ಯ ಚೇತರಿಸಿಕೊಳ್ಳುತ್ತಿದ್ದಂತೆ, ಅವರು ಅನೇಕ ವಿಭಿನ್ನ ಸಾಮರ್ಥ್ಯದ ಮಹಿಳೆಯರೊಂದಿಗೆ ಸಂವಹನ ನಡೆಸಿದರು. ಐಶ್ವರ್ಯರವರು ತಮ್ಮ ಜೀವನದುದ್ದಕ್ಕೂ ಅವರ ಕಷ್ಟಗಳನ್ನು ಕಾಣದಂತಿದ್ದರು ಎಂದು ಕಂಡುಕೊಂಡರು. ಅವರು ಎದುರಿಸಿದ ಸೂಕ್ಷ್ಮ ತಾರತಮ್ಯ, ಟೀಕೆಗಳು ಮತ್ತು ಮಿತಿಗಳನ್ನು ಅರ್ಥೈಸಿಕೊಂಡರು ಮತ್ತು ಅವರಿಗಾಗಿ ಏನನ್ನಾನದರೂ ಮಾಡಬೇಕೆಂದು ಅಂದುಕೊಂಡರು.


ಮಹಿಳೆಯರ ಜೀವನದಲ್ಲಿ ಬದಲಾವಣೆಯ ಗಾಳಿ

ಒಂದು ವರ್ಷದ ನಂತರ, ಐಶ್ವರ್ಯ ಪಿಡಿಯಾಟ್ರಿಕ್ಸ್‌ಗೆ ಹಿಂತಿರುಗದೆ ಚೆನ್ನೈನ ನುಂಗಂಬಕ್ಕಂನಲ್ಲಿ ವಿಕಲಚೇತನ ಮಹಿಳೆಯರಿಗಾಗಿ ಬೆಟರ್ ವರ್ಲ್ಡ್ ಶೆಲ್ಟರ್ ಎಂಬ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದರು. ಬೌದ್ಧಿಕ ಅಥವಾ ದೈಹಿಕ ವೈಕಲ್ಯ ಹೊಂದಿದ ಯುವ ಮಹಿಳೆಯರಿಗೆ ಏಳಿಗೆ ಹೊಂದಲು ಸುರಕ್ಷತೆ ಸ್ಥಳ ಒದಗಿಸುವುದು ಇದರ ಹಿಂದಿನ ಆಶಯವಾಗಿತ್ತು. ಬೆಟರ್ ವರ್ಲ್ಡ್ ಶೆಲ್ಟರ್ ಸ್ಥಳವು ಖಂಡಿತವಾಗಿಯೂ ಉತ್ತಮ ಆಶ್ರಯ ಸ್ಥಳವಾಗಿ ಮತ್ತು ಕೌಶಲ್ಯ ತರಬೇತಿ ಕೇಂದ್ರವಾಗಿ ಬೆಳೆಯುತ್ತದೆ.


ವಿಕಲಚೇತನ ಮಹಿಳೆಯರು ಕಲೆ ಮತ್ತು ಕರಕುಶಲ ಕೆಲಸದಲ್ಲಿ ತೊಡಗಿರುವುದು


"ಸರ್ಕಾರ ಮತ್ತು ಕಾರ್ಪೋರೇಷನ್ ಸಂಸ್ಥೆಯು ಇದಕ್ಕೆ ಬಹಳ ಬೆಂಬಲವನ್ನು‌‌‌ ನೀಡಿದೆ. ಕಾರ್ಯಾಚರಣೆಯ ವೆಚ್ಚವನ್ನು ಪೂರೈಸಲು ನಿಯಮಿತವಾಗಿ ಅನುದಾನವನ್ನು ನೀಡುವುದರ ಹೊರತಾಗಿ, ಅವರು ನಿರ್ಗತಿಕ ಮತ್ತು ವಿಕಲಚೇತನ ಮಹಿಳೆಯರ ಕುರಿತಾಗಿ ಉಲ್ಲೇಖಿಸುತ್ತಾರೆ. ಆದರೆ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದಿಂದಾಗಿ ಹಣದ ಕೊರತೆಯುಂಟಾಗುತ್ತಿದೆ. ಖರ್ಚುಗಳನ್ನು ಪೂರೈಸಲು ನನ್ನ ವೈಯಕ್ತಿಕ ಉಳಿತಾಯ ಬಳಸಿದ್ದೇನೆ ಮತ್ತು ಆಭರಣಗಳನ್ನು ಅಡವಿಟ್ಟಿದ್ದೇನೆ," ಎಂದು ಐಶ್ವರ್ಯ ಹೇಳುತ್ತಾರೆ.


ಪ್ರಸ್ತುತ, ಈ ತಾಣದಲ್ಲಿ‌ ಚಲನ, ಮಾತು, ಕಲಿಕೆ, ಶ್ರವಣ ಮತ್ತು ದೃಷ್ಟಿಹೀನತೆಯನ್ನು ಹೊಂದಿದ 55 ವಿಕಲಚೇತನ ಮಹಿಳೆಯರು ಇಲ್ಲಿದ್ದಾರೆ. ಆಭರಣ ತಯಾರಿಕೆ, ಹೊಲಿಗೆ, ಕ್ವಿಲ್ಲಿಂಗ್, ಕಲೆ ಮತ್ತು ಕಸೂತಿ ಸೇರಿದಂತೆ ಆವರ್ತಕ ಆಧಾರದ ಮೇಲೆ ವೃತ್ತಿಪರ ತರಬೇತಿ ತರಗತಿಗಳನ್ನು ಹಂತವಾಗಿ ಆಯೋಜಿಸುತ್ತೇವೆ ಎಂದು ಐಶ್ವರ್ಯ ಹೇಳುತ್ತಾರೆ.


ಬೆಟರ್ ವರ್ಲ್ಡ್ ಶೆಲ್ಟರ್‌ನಲ್ಲಿ ವಿಭಿನ್ನ ಸಾಮರ್ಥ್ಯದ ಮಹಿಳೆಯರು ಬ್ಯಾಸ್ಕೆಟ್‌ಬಾಲ್ ಆಟವನ್ನು ಆಡುತ್ತಿರುವುದು


ಈಗ, ಕೊರೊನ ವೈರಸ್ ಬಿಕ್ಕಟ್ಟಿನ ಮಧ್ಯೆ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಿರುವದರಿಂದ‌ ಅದನ್ನು ತಯಾರಿಸುವುದನ್ನು ಕೂಡ ಈ ಆವರಣದೊಳಗೆ ಕಲಿಸಲಾಗುತ್ತಿದೆ. ಅಲ್ಲದೇ,‌ ಮಹಿಳೆಯರಲ್ಲಿ ಯಾರಾದರೂ ಉನ್ನತ ಶಿಕ್ಷಣ ಪಡೆಯುವ ಬಯಕೆಯನ್ನು ಹೊಂದಿದ್ದರೆ, ಐಶ್ವರ್ಯ ಅವರಿಗೆ ಹಣದ ವಿಷಯದಲ್ಲಿ ಸಹಾಯ ಮಾಡಿ, ಮುನ್ನಡೆಸುತ್ತಾರೆ.

"ನಾನು ಬಾಹ್ಯ ತರಬೇತುದಾರರರು ಹಾಗೂ ತಜ್ಞರೊಂದಿಗೆ ಸಭೆಯನ್ನು ಆಯೋಜಿಸುತ್ತೇನೆ. ಇದು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ, ಅವರಲ್ಲಿ ಅಡಗಿರುವ ಸುಪ್ತ ಕೌಶಲ್ಯಗಳನ್ನು ಗುರುತಿಸಲು ಅನುವು ಮಾಡಿ ಕೊಡುತ್ತದೆ‌ ಮತ್ತು ಸ್ವತಂತ್ರ ಹಾಗೂ ಘನತೆಯ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ನಮ್ಮ ಆಶ್ರಯ ಮನೆಯ ಇಬ್ಬರೂ ಮಹಿಳೆಯರು ರಾಷ್ಟ್ರ ಮಟ್ಟದ ವ್ಹೀಲ್‌ಚೇರ್ ಬ್ಯಾಸ್ಕೆಟ್‌ಬಾಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಪದಕಗಳನ್ನು ಪಡೆದಿದ್ದಾರೆ. ಈ ಮಹಿಳೆಯರ ಯಶಸ್ಸಿಗೆ ನಾನು ಸಾಕ್ಷಿಯಾದಾಗ ನಾನು ಮಾಡುತ್ತಿರುವ ಈ ಕಾರ್ಯವು ಯೋಗ್ಯವಾಗಿದೆ ಎಂದು ಭಾವಿಸುತ್ತೇನೆ," ಎಂದು ಐಶ್ವರ್ಯ ಹೇಳುತ್ತಾರೆ.