ಒಬ್ಬಂಟಿಯಾಗಿ 30 ವರ್ಷ ಕಾಲುವೆ ತೋಡಿದ್ದ ರೈತನಿಗೆ ಭರ್ಜರಿ ಉಡುಗೊರೆ ನೀಡಿದ ಆನಂದ್‌ ಮಹೀಂದ್ರಾ

30 ವರ್ಷ ವ್ಯಯಿಸಿ 3 ಕಿ.ಮೀ. ಉದ್ದದ ಕಾಲುವೆ ತೋಡಿದ್ದ ಬಿಹಾರದ ಲೌಂಗಿ ಭೂಯಾನ್‌ ಎಂಬುವವರ ಪರಿಶ್ರಮವನ್ನು ಗುರುತಿಸಿ ಆನಂದ್‌ ಮಹೀಂದ್ರಾ ಅವರಿಗೆ ಟ್ರಾಕ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಒಬ್ಬಂಟಿಯಾಗಿ 30 ವರ್ಷ ಕಾಲುವೆ ತೋಡಿದ್ದ ರೈತನಿಗೆ ಭರ್ಜರಿ ಉಡುಗೊರೆ ನೀಡಿದ ಆನಂದ್‌ ಮಹೀಂದ್ರಾ

Tuesday September 22, 2020,

1 min Read

ಗಯಾದ ಕೊಠಿಲಾವಾ ಎಂಬ ಪ್ರದೇಶದಲ್ಲಿ ಲೌಂಗಿ ಭೂಯಾನ್‌ ತಾವೋಬ್ಬರೆ ತೋಡುತ್ತಿದ್ದ ಕಾಲುವೆಯ ಕೆಲಸ ಕೆಲ ದಿನಗಳ ಹಿಂದೆ ಸಂಪೂರ್ಣವಾಯಿತು.


ಬೆಟ್ಟದಿಂದ ಬರುವ ಮಳೆನೀರನ್ನು ಕೃಷಿ ಭೂಮಿಗೆ ಹರಿಸುವ ಈ ಕಾಲುವೆ ತೋಡಲು ಅವರಿಗೆ ತಗುಲಿದ ಸಮಯ ಬರೋಬ್ಬರಿ 30 ವರ್ಷ. ಭೂಯಾನ್‌ ಅವರ ಪರಿಶ್ರಮವನ್ನು ಗುರುತಿಸಿದ ಆನಂದ್‌ ಮಹೀಂದ್ರಾ ಅವರಿಗೆ ಟ್ರಾಕ್ಟರ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಲೌಂಗಿ ಭೂಯಾನ್‌ ಅವರಿಗೆ ಟ್ರಾಕ್ಟರ್‌ ನೀಡುತ್ತಿರುವುದು. (ಚಿತ್ರಕೃಪೆ: ಟ್ವಿಟ್ಟರ್‌)


ಸೆಪ್ಟೆಂಬರ್‌ 19 2020 ರಂದು ಉದ್ಯಮಿ ಆನಂದ್‌ ಮಹೀಂದ್ರಾ ಅವರು ಪತ್ರಕರ್ತರೊಬ್ಬರು ಭೂಯಾನ್‌ ಅವರ ಬಗ್ಗೆ ಮಾಡಿದ ಟ್ವೀಟ್‌ಗೆ ಸ್ಪಂದಿಸಿ ಟ್ರಾಕ್ಟರ್‌ ಕೊಡುವುದಾಗಿ ಹೇಳಿದ್ದರು.


“ಭೂಯಾನ್‌ ಅವರಿಗೆ ಟ್ರಾಕ್ಟರ್‌ ನೀಡುವುದು ಗೌರವವೆಂದು ತಿಳಿಯುತ್ತೇವೆ.”

ಮಹೀಂದ್ರಾ ವಿತರಕರಾದ ಸಿದ್ಧಿನಾಥ್‌ ವಿಶ್ವಕರ್ಮ ಎಎನ್‌ಐ ಜತೆ ಮಾತನಾಡುತ್ತಾ,


“ಲೌಂಗಿ ಭೂಯಾನ್‌ ಅವರ ಬಗೆಗಿನ ಟ್ವೀಟ್‌ ನೋಡಿ ಆನಂದ್‌ ಮಹೀಂದ್ರ ಅವರಿಗೆ ಟ್ರಾಕ್ಟರ್‌ ನೀಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೆ ಆ ಪ್ರದೇಶದ ಅಧಿಕಾರಿಗೆ ಟ್ರಾಕ್ಟರ್‌ ನೀಡುವಂತೆ ಇಮೇಲ್‌ ಬಂದಿದೆ,” ಎಂದರು.


ಭೂಯಾನ್‌ ಅವರು ಟ್ರಾಕ್ಟರ್‌ ಸ್ವೀಕರಿದ್ದರ ಬಗ್ಗೆ ಆನಂದ್‌ ಅವರು ಮತ್ತೆ ಟ್ವೀಟ್‌ ಮಾಡಿ,


“ನೀವು ಮತ್ತು ನಿಮ್ಮ ತಂಡ ಅದ್ಭುತ. ಬಿಹಾರದ ಕೆನಾಲ್‌ಮ್ಯಾನ್‌ ಲೌಂಗಿ ಭೂಯಾನ್‌ ಅವರಿಗೆ ಟ್ರಾಕ್ಟರ್‌ ಉಡುಗೊರೆಯಾಗಿ ನೀಡುತ್ತೇನೆಂದು ನಿನ್ನೆಯೆ ಹೇಳಿದ್ದೆ, ನಿನ್ನೆ ಸಂಜೆಯ ಹೊತ್ತಿಗೆಂದರೆ ಅವರಿಗೆ ಉಡುಗೊರೆ ತಲುಪಿಸಿರುವುದನ್ನು ನಂಬಲಾಗುತ್ತಿಲ್ಲ! ಒಳ್ಳೆಯ ಕೆಲಸ, ನಮ್ಮ ವ್ಯಾಪಾರಿ ಪಾಲುದಾರರಿಗೆ ನನ್ನ ಕೃತಜ್ಞತೆಗಳು,” ಎಂದಿದ್ದಾರೆ.

ಟ್ರಾಕ್ಟರ್‌ ಸ್ವೀಕರಿಸಿದ ಭೂಯಾನ್‌, ನಾನೆಂದು ಇಷ್ಟು ದೊಡ್ಡ ಉಡುಗೊರೆ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ಇಂದು ತುಂಬಾ ಖುಷಿಯಾಗುತ್ತಿದೆ ಎಂದರು.


ಕೊಠಿಲಾವಾ ಕಾಡು ಮತ್ತು ಬೆಟ್ಟಗಳಿಂದ ಸುತ್ತವರೆದಿರುವ ಹಳ್ಳಿ, ಅಲ್ಲಿ ಆಗಾಗ ಮಾವೋವಾದಿ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ವಾಸಿಸುವ ಬಹುತೇಕರು ಜೀವನಕ್ಕೆ ಕೃಷಿಯನ್ನೆ ನೆಚ್ಚಿಕೊಂಡಿರುವುದರಿಂದ ಭೂಯಾನ್‌ ಅಲ್ಲಿನ ಕೃಷಿ ಚಟುವಟಿಕೆ ಸರಾಗವಾಗಿ ನಡೆಯಬೇಕೆಂದು ಆಸೆ ಪಟ್ಟವರು.


ಹಾಗಾಗಿ ಅವರೇ ಸ್ವತಃ ಕಾಲುವೆ ತೋಡಲು ಮುಂದಾದರು. ಅವರ ದೃಢನಿಶ್ಚಯ, ಛಲ ಹಲವರಿಗೆ ಮಾದರಿಯಾಗಿದೆ.