ಎಲ್ಲ ಕಷ್ಟಗಳನ್ನು ಜಯಿಸಿ ಈರೋಡ್‌ ನ ಏಕೈಕ ಮಹಿಳಾ ಆಟೋ ಚಾಲಕಿಯಾದ ಆನಂದಿ

ಎಳೆ ವಯಸ್ಸಿನಲ್ಲಿ ಪೋಲಿಯೊದಿಂದ ತನ್ನ ಬಲಗಾಲು ಶಕ್ತಿ ಕಳೆದು ಕೊಂಡಾಗ, ತನ್ನ ಬೆನ್ನೆಲುಬಾಗಬೇಕ್ಕಿದ್ದ ಅವಳ ಕುಟುಂಬವು ಅವಳನ್ನು ನಿರಾಕರಿಸಿದಾಗ, ಅವಳು ಎದೆಗುಂದದೆ ವಿಧಿಯನ್ನು ಮೆಟ್ಟಿನಿಂತು 33 ನೇ ವಯಸ್ಸಿನಲ್ಲಿ ಈರೋಡ್‌ನಲ್ಲಿರುವ ಏಕೈಕ ಮಹಿಳಾ ಆಟೋರಿಕ್ಷಾ ಚಾಲಕಿಯಾಗಿ ಆನಂದಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.

ಎಲ್ಲ ಕಷ್ಟಗಳನ್ನು ಜಯಿಸಿ ಈರೋಡ್‌ ನ ಏಕೈಕ ಮಹಿಳಾ ಆಟೋ ಚಾಲಕಿಯಾದ ಆನಂದಿ

Monday December 02, 2019,

2 min Read

ಈಜಬೇಕು ಈಜಿ ಜಯಿಸಬೇಕು ಎಂದು ಹೇಳಲಾಗುತ್ತದೆ, ಮನುಷ್ಯನಿಗೆ ಜೀನದಲ್ಲಿ ಕಷ್ಟಗಳು ಎದುರಾಗುತ್ತವೆ ಆದರೆ ನಾವು ಎದೆಗುಂದದೆ ಹೇಗೆ ಎದುರಿಸಬೇಕೆಂಬುದಕ್ಕೆ ತಮಿಳುನಾಡಿನ ಈರೋಡ್‌ ನ ಆಟೋ ಚಾಲಕಿ ಆನಂದಿ ಅವರೆ ಮಾದರಿ.


ರಾಣಿ ಥಿಯೇಟರ್ ಬಳಿಯ ಪೆರುಂಡುರೈ ರಸ್ತೆಯಲ್ಲಿ ತಮ್ಮ ಆಟೋ ನಡೆಸುತ್ತಿರುವ ಆನಂದಿ ತಮ್ಮ ಕೆಲಸದಿಂದ ಹಣೆಬರಹವನ್ನು ಬದಲಿಸಬಹುದು ಎಂದು ನಂಬಿದ್ದಾರೆ. ನಿಮಗೆ ಬೇಕಾಗಿರುವುದು ಧೈರ್ಯ ಮತ್ತು ನಿಮ್ಮ ಪ್ರೀತಿಪಾತ್ರರ ನಂಬಿಕೆ ಎನ್ನುತ್ತಾರೆ ಆನಂದಿ.


ಆಂಬುಲೆನ್ಸ್ ಡ್ರೈವರ್ ಅಮಿತ್ ರಾಘವ್ ಅವರ ಹೆಂಡತಿ ಮತ್ತು ಹೆಣ್ಣುಮಕ್ಕಳ ತಾಯಿಯಾಗಿರುವ ಆನಂದಿ ತಮ್ಮಂತೆ ಸ್ವಾವಲಂಬಿಯಾಗಲು ಬಯಸುವವರಿಗೆ ಸಹಾಯ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ.


ತಮ್ಮ ಆಟೋದೊಂದಿಗೆ ಆನಂದಿ (ಚಿತ್ರಕೃಪೆ: ಎಡೆಕ್ಸ್‌ ಲೈವ್)




ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ದಿಟ್ಟ ನಿರ್ಧಾರದಿಂದ ಪರಿಸ್ಥಿತಿಯನ್ನು ನಿರ್ವಹಿಸಿದ್ದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‌ ಜೊತೆ ಮಾತನಾಡುತ್ತಾ ಆನಂದಿ,


"ಕಳೆದ ವರ್ಷ ಹಣಕಾಸಿನ ಸಮಸ್ಯೆಗಳಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ನನ್ನ ಪತಿ ನನ್ನನ್ನು ಖಿನ್ನತೆಯಿಂದ ಹೊರತಂದು, ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ನನ್ನನ್ನು ಪ್ರೋತ್ಸಾಹಿಸಿದರು. ಈರೋಡ್‌ನಲ್ಲಿ ಯಾವುದೇ ಮಹಿಳಾ ಆಟೋ ಚಾಲಕರು ಇಲ್ಲದಿದ್ದರೂ, ಅವರು ನನಗೆ ಆಟೋ ಚಲಾಯಿಸಲು ಕಲಿಸಿದರು ಮತ್ತು ನಾನು ಆಟೋ ಚಲಾಯಿಸಲು ಶುರು ಮಾಡಿ ಈಗ ಒಂದು ವರ್ಷವಾಗಿದೆ. ಆದಾಗ್ಯೂ, ಘನತೆಯ ಜೀವನವನ್ನು ಸಂಪಾದಿಸಲು ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿಯುವುದು ಸುಲಭದ ಸಂಗತಿಯಲ್ಲ," ಎಂದು ಹೇಳುತ್ತಾರೆ.


ಅವರಂದು ಕೊಂಡಷ್ಟು ಮುಂದಿನ ದಾರಿ ಆನಂದಿ ಅವರಿಗೆ ಸುಲಭವಾಗಿರಲಿಲ್ಲ. ಅವರಿಗೆ ಅಸೋಸಿಯೇಷನ್ ​​ಮುಖಂಡರಿಂದ ಎಲ್ಲಾ ಪ್ರಮುಖ ಆಟೋ ಸ್ಟ್ಯಾಂಡ್‌ಗಳಲ್ಲಿ ತನ್ನ ಆಟೋವನ್ನು ನಿಲ್ಲಿಸಲು ಆನಂದಿ ಅವರಿಗೆ ಅನುಮತಿ ನಿರಾಕರಿಸಲಾಗಿದೆ. ಆಟೋ ಸ್ಟ್ಯಾಂಡಿನವರು ಇದು ಮಹಿಳೆಯರ ಕೆಲಸವಲ್ಲ ಮತ್ತು ಇದು ಸುರಕ್ಷಿತವಲ್ಲ ಎನ್ನುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ, ವರದಿ ಎಡೆಕ್ಸ್‌ ಲೈವ್.


ಅಷ್ಟೇ ಅಲ್ಲದೆ ಆಟೋ ಸಂಘದವರು ಸದಸ್ಯತ್ವ ಪಡೆಯಲು ಆನಂದಿ ಅವರಿಗೆ 1 ಲಕ್ಷ ರೂ ಕೇಳಿದರು, ಅಷ್ಟು ಹಣವನ್ನು ಹೊಂದಿಸಲಾಗದೆ ಬರೀ ದಾರಿಹೋಕರನ್ನು ಅಥವಾ ಯಾರಾದರೂ ಬುಕಿಂಗ್ ಮಾಡಿದಾಗ ಮಾತ್ರ ಅವರಿಗೆ ಆಟೋ ಓಡಿಸುವ ಕೆಲಸ ದೊರೆಯಲಾರಂಭಿಸಿತು. ಇದು ಅವರಿಗೆ ದಿನಕ್ಕೆ 200-ರೂ. ರಿಂದ 300 ರೂ. ಸಂಪಾದನೆ ಮಾಡಲು ಸಾಕಾಗುತ್ತಿದೆ, ಅದೇ ಅವರ ಬಳಿ ಸದಸ್ಯತ್ವ ಇದ್ದಿದ್ದರೆ ದಿನಕ್ಕೆ 2,000 ರೂ ಗಳಿಸಬಹುದಿತ್ತು ಎಂದು ಅವರು ವಿವರಿಸಿದರು.


ಇದೆಲ್ಲದರ ನಡುವೆ ಹೆಜ್ಜೆ ಹೆಜ್ಜೆಗೆ ಆಗುವ ಅವಮಾನವನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯ ಅವರಿಗೊದಗಿಬಂದಿದೆ.


"ಆಟೋ ಚಾಲನೆ ಮಾಡುವಾಗ, ಪುರುಷ ಸಹವರ್ತಿಗಳಿಂದ ನಾನು ಅಪಹಾಸ್ಯಕ್ಕೊಳಗಾಗಿದ್ದೇನೆ ಮತ್ತು ಅವಮಾನಿಸಲ್ಪಟ್ಟಿದ್ದೇನೆ. ಆದಾಗ್ಯೂ, ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ನನ್ನ ಏಕೈಕ ಗುರಿಯಾಗಿದೆ ಆದ್ದರಿಂದ ಈಗ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.


ವರದಿಗಳ ಪ್ರಕಾರ ಈರೋಡ್ ನಗರ ವ್ಯಾಪ್ತಿಯಲ್ಲಿ ಇತರ ಮಹಿಳಾ ಆಟೋ ಚಾಲಕರು ಇದ್ದಿರುವುದು ಕಂಡುಬಂದಿದೆ, ಆದರೆ ಅವರಿಗೆ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ.


"ಅನೇಕ ಮಹಿಳೆಯರು ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿದ್ದರೂ ಗೌರವಯುತ ಜೀವನವನ್ನು ಸಂಪಾದಿಸಲು ಪರದಾಡುತ್ತಿದ್ದಾರೆ. ಮಹಿಳಾ ಆಟೋ ಚಾಲಕರಿಗೆ ಜಿಲ್ಲಾಡಳಿತವು ವಿಶೇಷ ಆಟೋ ಸ್ಟ್ಯಾಂಡ್ ಘೋಷಿಸಿದರೆ, ಉದ್ಯೋಗವಿಲ್ಲದ ಅನೇಕ ಮಹಿಳೆಯರು ಈ ವೃತ್ತಿಯನ್ನು ಆರಿಸಿಕೊಳ್ಳಬಹುದು. ಅಲ್ಲದೆ, ಇದು ಒಂದು ಜಿಲ್ಲೆಯ ಮಹಿಳೆಯರಿಗೆ ಸ್ವಾವಲಂಬನೆಯ ಧೈರ್ಯಯುತ ಜೀವನ ನಡೆಸಲು ಸಹಾಯಮಾಡುತ್ತದೆ," ಎಂದು ಆನಂದಿ ಅವರು ಹೇಳಿದರು, ವರದಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‌.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.