ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ ಅಭಿವೃದ್ಧಿಪಡಿಸಿದ 14ರ ಭಾರತೀಯ-ಅಮೇರಿಕನ್‌ ಹುಡುಗಿ

ಭಾರತೀಯ-ಅಮೀರಿಕನ್‌ ಹುಡುಗಿ ಅನಿಕಾ ಚೆಬ್ರೊಲು ಕೋವಿಡ್‌-19ನ ವೈರಸ್‌ಗೆ ಅಂಟಿಕೊಂಡು ಅದರ ಕಾರ್ಯವನ್ನು ತಡೆಯುವ ಅಣುವನ್ನು ಅಭಿವೃದ್ಧಿಪಡಿಸಿದ್ದಾಳೆ.

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ ಅಭಿವೃದ್ಧಿಪಡಿಸಿದ 14ರ ಭಾರತೀಯ-ಅಮೇರಿಕನ್‌ ಹುಡುಗಿ

Wednesday October 21, 2020,

2 min Read

ಕೊರೊನಾವೈರಸ್‌ಗೆ ಔಷಧಿ ಕಂಡುಹಿಡಿಯುವ ಪ್ರಯತ್ನದಲ್ಲಿ ಭಾರತ ಮೂಲದ ಟೆಕ್ಸಾಸ್‌ನ ಪ್ರಿಸ್ಕೊನ 14 ವರ್ಷದ ಯುವತಿ ಹೊಸ ಅಣುವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾಳೆ.


ಕೋವಿಡ್‌-19 ಗೆ ಸಂಭಾವ್ಯ ಚಿಕಿತ್ಸೆಯಾಗಬಹುದಾದ ಅನ್ವೇಷಣೆಗೆ ಭಾರತೀಯ ಅಮೇರಿಕನ್‌ ಹುಡುಗಿ ಅನಿಕಾ ಚೆಬ್ರೊಲು 2020 ‘3ಎಮ್‌ ಯಂಗ್‌ ಸೈಂಟಿಸ್ಟ್‌ ಚಾಲೆಂಜ್‌ʼನ್ನು ಗೆದ್ದಿದ್ದಾಳೆ, ಜತೆಗೆ $25,000 ನಗದು ಬಹುಮಾನವನ್ನು ಪಡೆದಿದ್ದಾಳೆ. ಸಾರ್ಸ್‌-ಕೋವ್‌-2 ವೈರಸ್‌ನ ಸ್ಪೈಕ್‌ ಪ್ರೋಟಿನ್‌ಗೆ ಅಂಟಿಕೊಂಡು ಅದರ ಕಾರ್ಯವನ್ನು ತಡೆಯುವ ಅಣುವನ್ನು ಅನಿಕಾ ಅಭಿವೃದ್ಧಿಪಡಿಸಿದ್ದಾಳೆ.


“ಸಾರ್ಸ್‌-ಕೋವ್‌-2 ವೈರಸ್‌ಗೆ ಅಂಟುವ ಅಣುವನ್ನು ನಾನು ಅಭಿವೃದ್ಧಿಸಪಡಿಸಿದ್ದೇನೆ. ಈ ಪ್ರೋಟಿನ್‌ ವೈರಸ್‌ ಗೆ ಅಂಟಿಕೊಂಡು ಅದರ ಕಾರ್ಯವನ್ನು ತಡೆಯುತ್ತದೆ,” ಎಂದು ಅನಿಕಾ ಎಬಿಸಿ ನ್ಯೂಸ್‌ಗೆ ಹೇಳಿದಳು.


ಜಾಗತಿಕವಾಗಿ 1.1 ಮಿಲಿಯನ್‌ ಜನರನ್ನು ಬಲಿತೆಗೆದುಕೊಂಡಿರುವ ಕೊರೊನಾ ಸೋಂಕು ಅಮೇರಿಕ ಮತ್ತು ಭಾರತದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿದ್ದು, ಹಾಗಾಗಿ ಸಾಂಕ್ರಾಮಿಕಕ್ಕೆ ಔಷಧಿ ಕಂಡುಹಿಡಿಯುವುದು ಈಗ ತುಂಬಾ ಅವಷ್ಯಕವಾಗಿದೆ.


ಕೊರೊನಾ ಬರುವುದಕ್ಕೂ ಮುಂಚೆಯೆ ಅನಿಕಾ ಇದರೆಡೆ ಸಂಶೋಧನೆ ಶುರು ಮಾಡಿದ್ದಳು. ಮೊದಲು ಸಿಸನಲ್‌ ಫ್ಲು (ಶೀತಜ್ವರ) ಅನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತ ಅಧ್ಯಯನ ನಡೆಸಿದ್ದಳು, ಮುಂದೆ ಇದೆ ಯೋಜನೆ ಕೊರೊನಾ ಸಾಂಕ್ರಾಮಿಕಕ್ಕೆ ಔಷಧಿ ಕಂಡುಹಿಡಿಯುವ ದಾರಿಯಲ್ಲಿ ಸಾಗಿದೆ.

ಅನಿಕಾ ಚೆಬ್ರೊಲು (ಚಿತ್ರಕೃಪೆ: ಟ್ವಿಟ್ಟರ್‌)


ಈ ಸೋಂಕಿಗೆ ಅನಿಕಾ ಚಿಕಿತ್ಸೆ ಅಭಿವೃದ್ಧಿಪಡಿಸಲು ಹಲವು ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಬಳಸಿಕೊಂಡು ವೈರಸ್‌ನ ಯಾವ ಭಾಗಕ್ಕೆ, ಹೇಗೆ ಅಣುವನ್ನು ಬಂಧಿಸಬಹುದು ಎಂದು ತಿಳಿದುಕೊಂಡಿದ್ದಾಳೆ. ಆದರೆ ಈ ಪರೀಕ್ಷೆಗಳನ್ನು ಜೀವಂತ ಸೆಲ್‌ಗಳು ಅಥವಾ ಲೈವ್‌ ಮಾಡೆಲ್‌ ಮೇಲೆ ಪ್ರಯೋಗಿಸಲಾಗಿದೆಯೆ ಎಂಬುದು ಸ್ಪಷ್ಟವಾಗಿಲ್ಲ.


“ಸಾರ್ಸ್‌-ಕೋವ್‌-2 ವೈರಸ್‌ ನ ಸ್ಪೈಕ್‌ ಪ್ರೋಟಿನ್‌ಗೆ ಅಂಟುವ ಪ್ರಮುಖ ಸಂಯುಕ್ತವನ್ನು ಅಭಿವೃದ್ಧಿಪಡಿಸಿರುವ ನನ್ನ ಪ್ರಯತ್ನ ಸಾಗರದಲ್ಲಿ ಒಂದು ಹನಿಯಂತೆ ಅನಿಸಿದರು ಅದು ಮುಂದೆ ಉಪಯೋಗಕ್ಕೆ ಬರಬಹುದು. ನಾನು ಹೇಗೆ ಈ ಅಣುವನ್ನು ಅಭಿವೃದ್ಧಿಪಡಿಸಿದೆ ಎಂಬುದು ವೈರಾಲಾಜಿಸ್ಟ್‌ ಮತ್ತು ಔಷಧ ಅಭಿವೃದ್ಧಿ ತಜ್ಞರ ಜತೆ ಸೇರಿದಾಗ ಈ ವೈರಸ್‌ಗೆ ಚಿಕಿತ್ಸೆ ಕಂಡುಹಿಡಿಯುವಲ್ಲಿ ಸಹಾಯಮಾಡಬಹುದು,” ಎಂದು ಅನಿಕಾ ಸಿಎನ್‌ಎನ್‌ಗೆ ಹೇಳಿದಳು.


ಮುಂದೊಂದು ದಿನ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಳಾಗಬೇಕೆಂದು ಅನಿಕಾ ಬಯಸುತ್ತಾಳೆ. ವಿಜ್ಞಾನದ ಮೇಲಿನ ಅವಳ ಪ್ರೀತಿ ಮತ್ತು ಉತ್ಸಾಹಕ್ಕೆ ಅವರ ತಾತ ಕಾರಣವೆನ್ನುತ್ತಾರೆ ಅನಿಕಾ.


“ನಾನು ಚಿಕ್ಕವಳಿದ್ದಾಗ ನಮ್ಮ ತಾತ ನನ್ನನ್ನು ವಿಜ್ಞಾನದೆಡೆಗೆ ಸೆಳೆದರು. ಅವರು ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು, ಅವರು ನನಗೆ ಆವರ್ತಕ ಕೋಷ್ಟಕ ಮತ್ತು ಇತರ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳುವಂತೆ ಮಾಡಿದರು, ನಾನು ಬೆಳೆಯುತ್ತ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಂಡೆ,” ಎಂದು ತಿಳಿಸಿದಳು ಅನಿಕಾ.