400 ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿರುವ ನೀಲಂಜನಾ

ಪ್ರಾಣಿಗಳ ಮೇಲೆ ಹಲ್ಲೆಯಾದ ಅನೇಕ ಪ್ರಕರಣಗಳು ವರದಿಯಾಗುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ಮಹಿಳೆ ಯಾವುದೇ ಬೆಂಬಲವಿಲ್ಲದೆ 400 ಬೀದಿ ನಾಯಿಗಳನ್ನು ಸಾಕಲು ತಿಂಗಳಿಗೆ 40,000 ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ.

400 ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿರುವ ನೀಲಂಜನಾ

Sunday November 17, 2019,

1 min Read

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ 45 ವರ್ಷದ ಮಹಿಳೆ ನೀಲಂಜನಾ ಬಿಸ್ವಾಸ್ ಅವರು ತಮ್ಮ 2 ಲಕ್ಷ ಮೌಲ್ಯದ ಆಭರಣಗಳನ್ನು ಮಾರಿ ಮತ್ತು ಬಾಂಕ್ ನಿಂದ 3 ಲಕ್ಷ ರೂಪಾಯಿ ಸಾಲ ಪಡೆದು ತಮ್ಮ ಪ್ರದೇಶದ 400 ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿದ್ದಾರೆ.


ಈ ಶ್ವಾನಗಳ ಆರೈಕೆಗಾಗಿ, ಆರೋಗ್ಯಕ್ಕಾಗಿ, ಆಹಾರಕ್ಕಾಗಿ ತಿಂಗಳಿಗೆ ಬರೋಬ್ಬರಿ 40,000 ರೂ. ಗಳನ್ನು ಖರ್ಚು ಮಾಡುತ್ತಿದ್ದಾರೆ.


ಇವರ ಈ ಕಾರ್ಯಕ್ಕೆ ಯಾರದೇ ಯಾವುದೇ ಸಹಾಯ ಕೇಳದೆ ತಾವೊಬ್ಬರೇ ಈ 400 ಶ್ವಾನಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕುತ್ತಿದ್ದಾರೆ. ನೆರೆಹೊರೆಯವರ ತಿರಸ್ಕಾರಕ್ಕೊಳಗಾಗಿ, ಸ್ವತಃ ಪತಿಯಾದ ಭಬೊತೋಷ ಬಿಸ್ವಾಸ್ ಸಹ ಪತ್ನಿಯ ಈ ಕಾರ್ಯಕ್ಕೆ ಕೈ ಜೋಡಿಸುವುದಿಲ್ಲ. ತನ್ನ ಮಗ ಮತ್ತು ಮಗಳ ಯಾರ ಬೆಂಬಲವೂ ಇಲ್ಲದೆ ಈ ಮೂಕ ಶ್ವಾನಗಳಿಗೆ ಆಶ್ರಯ ನೀಡುತ್ತಿದ್ದಾರೆ.


ನೀಲಂಜನಾ ಬಿಸ್ವಾಸ್ ( ಚಿತ್ರಕೃಪೆ: ಫೇಸ್‌ಬುಕ್‌ )


2014 ರಲ್ಲಿ ನೀಲಂಜನಾ ಕೆಲವು ಬೀದಿ ನಾಯಿಗಳನ್ನು ಸಾಕಲು ಆರಂಭಿಸಿದರು. ತದನಂತರ ಶ್ವಾನಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇಂದು ನೀಲಂಜನ ಅವರು ದಿಕ್ಕು ದೆಸೆಯಿಲ್ಲದ 400 ಬೀದಿ ಶ್ವಾನಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಶ್ವಾನಗಳ ಪೋಷಣೆಗೆ ಸಹಾಯಕವಾಗಿ ಮೂರು ಜನ ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ. ಕೆಲಸಗಾರರು ಆಹಾರವನ್ನಾಗಿ ಚಿಕನ್ ಹಾಗೂ ಅನ್ನವನ್ನು ತಯಾರಿಸಿ ಶ್ವಾನಗಳಿಗೆ ನೀಡುತ್ತಾರೆ. ಕೆಲಸಗಾರರಿಗೆ ಸಂಬಳವಾಗಿ ತಿಂಗಳಿಗೆ 10,000 ನೀಡಲಾಗುತ್ತದೆ, ವರದಿ ನ್ಯೂಸ್ 18.


"ಆರಂಭದಲ್ಲಿ ನಾನು ಒಂದೇ ನಾಯಿಯನ್ನು ಖರೀದಿಸಿದ್ದೆ ಅದರ ಹೆಸರು ಜುಯಿ. ಉಳಿದವುಗಳು ಬೀದಿನಾಯಿಗಳ ಹಾಗೂ ಪರಿಚಯದ ವ್ಯಕ್ತಿಗಳಿಂದ ನೀಡಲಾದವುಗಳು. ಆದರೆ ಎಲ್ಲ ಶ್ವಾನಗಳೂ ನನಗೆ ಇಷ್ಟ" ಎನ್ನುತ್ತಾರೆ ನೀಲಂಜನಾ.


ನೀಲಂಜನಾರವರ ಮನೆಯಲ್ಲಿ ಶ್ವಾನಗಳಿಗಾಗಿ ಆಹಾರ ಸಂಗ್ರಹಿಸಿಡಲು ರೆಫ್ರಿಜರೇಟರ್ ಇದ್ದು, ಆಹಾರವನ್ನು ಶ್ವಾನಗಳಿಗೆ ಬಡಿಸಲು ಇ-ರಿಕ್ಷಾವನ್ನು ಬಳಸಲಾಗುತ್ತದೆ. ತಯಾರಿಸಿದ ಆಹಾರವನ್ನು ದೊಡ್ಡ ಮಡಿಕೆಯಲ್ಲಿ ಹಾಕಿ ಇ-ರಿಕ್ಷಾದ ಮೂಲಕ ಶ್ವಾನಗಳಿಗೆ ಆಹಾರ ಬಡಿಸುತ್ತಾರೆ, ವರದಿ ದಿ ಲಾಜಿಕಲ್ ಇಂಡಿಯಾ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.