ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕೆಲಸ ಮಾಡುತ್ತ ಜನರ ಮನಸ್ಸನ್ನು ಗೆಲ್ಲುತ್ತಿರುವ ಟ್ರಾಫಿಕ್ ಪೋಲೀಸ್

ತಮ್ಮ ಮಗಳ ಒಡವೆಗಳನ್ನು ಅಡವಿಟ್ಟು ವಿಕಲಾಂಗರೊಬ್ಬರಿಗೆ ಮನೆ ಕಟ್ಟಿಸಿಕೊಡುವುದರಿಂದ ಶುರುವಾಗಿ ಜಲಾವೃತಗೊಂಡ ರಸ್ತೆಯನ್ನು ಒಬ್ಬರೇ ಸ್ವಚ್ಛಗೊಳಿಸುವವರೆಗೆ, ಅಂಜಪಲ್ಲಿ ನಾಗಮಲ್ಲು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕೆಲಸ ಮಾಡುತ್ತ ಜನರ ಮನಸ್ಸನ್ನು ಗೆಲ್ಲುತ್ತಿರುವ ಟ್ರಾಫಿಕ್ ಪೋಲೀಸ್

Tuesday November 12, 2019,

2 min Read

ಭಾರತದಲ್ಲಿ ಪೋಲೀಸರೆಂದರೆ ‌ಜನರು ಕೇವಲ ನಕಾರಾತ್ಮಕ ಪ್ರತಿಕ್ರಿಯೆಗಳನ್ನೇ ನೀಡುತ್ತಾರೆ. ಅವರ ಕೆಲಸ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಆಗಿದ್ದರೂ ಅವರ ಕಡೆಯಿಂದ ಹಲವು ಬಾರಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಅವರ ವಿರುದ್ಧ ಲಂಚದ, ಭ್ರಷ್ಟಾಚಾರದ ಪ್ರಕರಣಗಳು ದಿನೇ ದಿನೇ ಕೇಳಿಬರುತ್ತಲೇ ಇವೆ.


ಹಾಗಾಗಿ, ಅವರ ಕಷ್ಟದ ಕೆಲಸದ ನಡುವೆ ಅವರಿಗೆ ಒಂದು ಧನಾತ್ಮಕ ಚಿತ್ರಣವನ್ನು ಬೆಳೆಸಿಕೊಳ್ಳುವುದು ಅಸಾಧ್ಯವಾಗಿದೆ. ಆದರೆ ಕೆಲವು ಪೋಲೀಸರು ಸಮಾಜಕ್ಕೆ ಮಾದರಿಯಾಗಿಯೂ ಇದ್ದಾರೆ - ರಸ್ತೆಯ ಗುಂಡಿಗಳನ್ನು ಸ್ವತಃ ಮುಚ್ಚಿದ ಹಾಗೂ ಉಚಿತ ಶಾಲೆಯನ್ನು ನಡೆಸುತ್ತಿರುವ ಪೋಲೀಸರೂ ಇದ್ದಾರೆ‌.


ಅಂಜಪಲ್ಲಿ ನಾಗಮಲ್ಲು (ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)


ಹೈದರಾಬಾದ್‌ನ ಎಲ್.ಬಿ. ನಗರ ವಿಭಾಗದ ರಾಚಕೊಂಡ ಸಂಚಾರಿ ಪೊಲೀಸ್ ಆಯುಕ್ತರ ಕಚೇರಿಯ ಇನ್ಸ್ಪೆಕ್ಟರ್ ಅಂಜಪಲ್ಲಿ ನಾಗಮಲ್ಲು, ಹಲವಾರು ಬದಲಾವಣೆಗಳನ್ನು ತರುತ್ತ ಅನೇಕರ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದಾರೆ.


36 ರ ಹರೆಯದ ಅವರು 80 ಕ್ಕೂ ಹೆಚ್ಚು ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ, ಹಾಗೂ 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ ಮತ್ತು 100 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.


‘ಪೊಲೀಸ್ ಅಣ್ಣಾ’ ಎಂದು ಜನಪ್ರಿಯವಾಗಿರುವ ಅಂಜಪಲ್ಲಿ ಅದರ ಕುರಿತಾಗಿಯೇ 40 ಹಾಡುಗಳನ್ನು ಬರೆದಿದ್ದಾರೆ, ಅವೆಲ್ಲವೂ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು, ಅವರು ಸುಮಾರು 8,000 ಕ್ಕೂ ಹೆಚ್ಚು ಚಂದಾದಾರರನ್ನು ತಮ್ಮ ಚಾನೆಲ್ ನಲ್ಲಿ ಹೊಂದಿದ್ದಾರೆ.


ಹೈದರಾಬಾದ್‌ನ ಈ ಟ್ರಾಫಿಕ್ ಪೋಲೀಸ್ ತಮ್ಮ ಕರ್ತವ್ಯದ ವ್ಯಾಪ್ತಿಯನ್ನು ಮೀರಿ ಅಂಗವಿಕಲರಿಗಾಗಿ 1.20 ಲಕ್ಷದ ವೆಚ್ಚದಲ್ಲಿ ಎರಡು ಮನೆಗಳನ್ನು ನಿರ್ಮಿಸಿದ್ದಾರೆ. ಎರಡರಲ್ಲಿ ಒಂದು ಮನೆಯನ್ನು ಅವರು ತಮ್ಮ ಮಗಳ ಆಭರಣವನ್ನು ಅಡಮಾನ ಇಟ್ಟು ಸಾಲವನ್ನು ಪಡೆದು ಮನೆ ನಿರ್ಮಿಸಿದ್ದಾರೆ.


ಚಿತ್ರ ಕೃಪೆ : ದಿ ಲಾಜಿಕಲ್ ಇಂಡಿಯನ್


ತಮ್ಮ ಈ ಸಮಾಜ ಸೇವೆಯ ಕುರಿತು ದಿ ನ್ಯೂಸ್ ಮಿನಿಟ್‌ನೊಂದಿಗೆ ಮಾತನಾಡಿದ ಅವರು,


"2009 ರಲ್ಲಿ ಪೋಲೀಸ್ ಇಲಾಖೆಗೆ ಸೇರುವ ಮುನ್ನ, ನಾನು ಜ್ಞಾನ ವಿಜ್ಞಾನ ಎಂಬ ವಿಚಾರವಾದಿ ವೇದಿಕೆಯ ಮೂಲಕ ನಕಲಿ ಬಾಬಾಗಳ ನಕಲಿತನವನ್ನು ಬಯಲಿಗೆಳೆಯುವಲ್ಲಿ ಸಕ್ರಿಯವಾಗಿದ್ದೆ. ಉದಾಹರಣೆಗೆ ಒಬ್ಬ ಬಾಬ ಹಳ್ಳಿಗರನ್ನು ತಾನು ಬೆಂಕಿಯಲ್ಲಿ ನಡೆಯುವೆನೆಂದು ಮೋಸಗೊಳಿಸುತ್ತಿದ್ದ. ಇದನ್ನು ಬಯಲಿಗೆಳೆಯಲು, ನಾನು ಒಂದು ಜಾಗದಲ್ಲಿ ಮೂರು ಸೆಕೆಂಡಿಗಿಂತ ಜಾಸ್ತಿ ನಿಂತಿರೆ ಮಾತ್ರ ಬೆಂಕಿ ಸುಡುತ್ತದೇ ವಿನಾ ಹಾಗೇ ನಡೆದುಹೋದರೆ ಏನೂ ಆಗುವುದಿಲ್ಲ ಎಂದು ಜನರಿಗೆ ತಿಳಿಸಿ ಹೇಳಿದ್ದೆ," ಎಂದರು


ಇದನ್ನು ಅನುಸರಿಸಿ, ನಗರ ಪೊಲೀಸ್ ಇಲಾಖೆ ಸಾಂಸ್ಕೃತಿಕ ತಂಡವೊಂದನ್ನು ರಚಿಸಿತು. ಅದರಲ್ಲಿ ಅಂಜಪಲ್ಲಿ ಮತ್ತು ಅವರ ತಂಡವು ಮೂಢನಂಬಿಕೆಗಳ ವಿರುದ್ಧ ಹೋರಾಡಲು ಬೀದಿ ನಾಟಕಗಳು ಮತ್ತು ಸ್ಕಿಟ್‌ಗಳನ್ನು ಪ್ರದರ್ಶಿಸುತ್ತದೆ.


ಅಂಜಪಲ್ಲಿ, ತಮಗೆ ಈ ಸಾಮಾಜಿಕ ಚಟುವಟಿಕೆಗಳಿಂದ ಯಾವುದೇ ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ, ಮತ್ತು ಬದಲಾಗಿ, ಅವರು ಜನರ ಮೇಲಿನ ಪ್ರೀತಿಯಿಂದ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ‌.


ಈಗ, ಈ ಟ್ರಾಫಿಕ್ ಪೋಲಿಸ್ ತಮ್ಮ ಸಾಮಾಜಿಕ ಸೇವೆಗಳನ್ನು ರಸ್ತೆ ಅಪಘಾತಗಳಿಗೆ ತ್ವರಿತ ಪ್ರಥಮ ಚಿಕಿತ್ಸಾ ಸೇವೆಗಳು, ತುರ್ತು ಸಮಯದಲ್ಲಿ ರಕ್ತದಾನ, ದೂರದ ಹಳ್ಳಿಗಳಲ್ಲಿ ಮೂಢನಂಬಿಕೆ ಜಾಗೃತಿ, ಸಾಮಾಜಿಕ ಮಾಧ್ಯಮಗಳ ಮೂಲಕ ಸಾಮಾಜಿಕ ಜಾಗೃತಿ ಪ್ರಚಾರ, ಮತ್ತು ಬಡವರಿಗೆ ವಸತಿ ಮತ್ತು ಧನ ಸಹಾಯ ಮುಂತಾದ ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದಾರೆ, ವರದಿ ದಿ ಲಾಜಿಕಲ್ ಇಂಡಿಯನ್.


ಅವರ ಮುಂದಿನ ಯೋಜನೆಗಳ ಕುರಿತು ಹೇಳುತ್ತ ಅವರು,


"ನನ್ನ ಮುಂದಿನ ಗುರಿ, ನನ್ನ ಹಾಡುಗಳನ್ನು ತೆಲುಗಿನಿಂದ ಹಿಂದಿಗೆ ಭಾಷಾಂತರ ಮಾಡಿ, ಅವನ್ನು ಭಾರತದಾದ್ಯಂತ ಹಂಚಬೇಕು ಎನ್ನುವುದಾಗಿದೆ. ಕಾರಣ, ಅಪಘಾತ ಎಲ್ಲಿ ಸಂಭವಿಸಿದರೂ ಅಪಘಾತವೇ. ಅದಕ್ಕೆ ಸ್ಥಳಬೇಧವಿಲ್ಲ. ನನಗೆ ನನ್ನ ಹಾಡುಗಳು ಭಾರತದಾದ್ಯಂತ ಸಂಚರಿಸಬೇಕು," ವರದಿ ದಿ ನ್ಯೂಸ್ ಮಿನಿಟ್.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.