ಆಸಿಡ್ ದಾಳಿಗೆ ಒಳಗಾದ ಅನ್ಮೋಲ್, ತಮ್ಮಂತೆಯೇ ಜೀವಿಸುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ

ತಮ್ಮ ಕೆಟ್ಟ ನೆನಪುಗಳ ಹೊರತಾಗಿಯೂ, ಅನ್ಮೋಲ್ ರೊಡ್ರಿಗಸ್ ತಮಗಾಗಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ. ಅವರು ಈಗ ತಮ್ಮಂತವರಿಗೆ ಸಹಾಯ ಮಾಡುವ ಗುರಿಯೆಡೆಗೆ ಸಾಗುತ್ತಿದ್ದಾರೆ.

ಆಸಿಡ್ ದಾಳಿಗೆ ಒಳಗಾದ ಅನ್ಮೋಲ್, ತಮ್ಮಂತೆಯೇ ಜೀವಿಸುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ

Saturday August 24, 2019,

2 min Read

ಅನ್ಮೋಲ್ ರೊಡ್ರಿಗಸ್‌ ಅವರನ್ನು ಕೊಲ್ಲಲು ಅವರ ತಂದೆ ಆಸಿಡ್ ಸುರಿದಾಗ ಅವರಿಗೆ ಕೇವಲ ಎರಡು ತಿಂಗಳ ವಯಸ್ಸಾಗಿತ್ತು. ಅನ್ಮೋಲ್ ಹಲವಾರು ಶಸ್ತ್ರ ಚಿಕಿತ್ಸೆಗೆ ಒಳಗಾದರು. ಈ ಘಟನೆಯಲ್ಲಿ ಅವರು ತಮ್ಮ ಒಂದು ಕಣ್ಣನ್ನು ಸಹ ಕಳೆದುಕೊಂಡರು ಹಾಗೂ ಅವರ ಮುಖ ವಿರೂಪಗೊಂಡಿತು.


ಹಿರಿಯ ನಟಿ ಶಬಾನಾ ಅಜ್ಮಿ ಅವರೊಂದಿಗೆ ಅನ್ಮೋಲ್. ಮೂಲ: ಅರ್ಬನ್ ಏಷ್ಯನ್


ಭೀಕರ ನೆನಪುಗಳ ಹೊರತಾಗಿಯೂ, ಒಬ್ಬರಿಗೆ ಎಲ್ಲ ವಿಲಕ್ಷಣಗಳನ್ನು ಮೀರಿ ಬೆಳೆಯುವ ಹಂಬಲವಿದ್ದರೆ ಎಲ್ಲವೂ ಸಾಧ್ಯ ಎಂಬ ಉದಾಹರಣೆಯಾಗಿದ್ದಾರೆ 23 ರ ಈ ಯುವತಿ. ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಮಾದರಿಯಾಗಲು ಇವರು, ಸಾಹಸ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.


ಅವರ ಈ ಎನ್‌ಜಿಒ ಆಸಿಡ್ ದಾಳಿಗೆ ಒಳಗಾದವರಿಗೆ ಸಮಾಲೋಚನೆ ನಡೆಸಿ ಹಾಗೂ ಉದ್ಯೋಗ ಅವಕಾಶ ನೀಡಿ, ಅವರ ಬೇಕು ಬೇಡಗಳಿಗೆ ಸ್ವಾವಲಂಬಿಗಳಾಗಿ ಮಾಡಲು ಪ್ರಯತ್ನಿಸುತ್ತದೆ. ಅವರಿಗೆ ಶಿಕ್ಷಣ ನೀಡಿ, ಅವರನ್ನು ಭಾವನಾತ್ಮಕವಾಗಿ ಸಶಕ್ತರನ್ನಾಗಿಸುವ ಕೆಲಸವನ್ನು ಸಹ ಮಾಡುತ್ತಿದೆ ʼಸಾಹಸ್'.


ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಅನ್ಮೋಲ್, ಈಗ ಫ್ಯಾಷನ್ ಐಕಾನ್ ಆಗಿದ್ದಾರೆ. ಆದರೆ ಈ ಗೆಲುವು ರಾತ್ರೋರಾತ್ರಿ ಬಂದದ್ದಲ್ಲ.


ಅನ್ಮೋಲ್ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಅವರ ಅಭಿಮಾನಿ ವಲಯದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಮೂಲ: ಮೀಡಿಯಂ.


ಅನಾಥ ಆಶ್ರಮದಲ್ಲಿ ಬೆಳೆದ ಅನ್ಮೋಲ್, ಗೆಳೆಯರನ್ನು ಮಾಡಿಕೊಳ್ಳುವುದಕ್ಕೆ ಹಾಗೂ ತಮ್ಮದೇ ವಯಸ್ಸಿನವರೊಂದಿಗೆ ಬೆರೆಯುವುದಕ್ಕೆ ಬಹಳವೇ ಕಷ್ಟಪಟ್ಟರು. ತಮ್ಮ ಉದ್ಯೋಗದ ಸ್ಥಳದಲ್ಲಿ ತಾರತಮ್ಯವನ್ನು ತೀವ್ರವಾಗಿ ಎದುರಿಸಿದ ಅನ್ಮೋಲ್, ತಮ್ಮ ಕೆಲಸವನ್ನೂ ತೊರೆದರು.


ಡೈಲಿ ಮೇಲ್ ಜೊತೆಗಿನ ಸಂಭಾಷಣೆಯಲ್ಲಿ ಅವರು,


"ನಾನು ತುಂಬಾ ಚಿಕ್ಕವಳಾಗಿದ್ದಾಗ ಆಸ್ಪತ್ರೆಯಲ್ಲಿ ನಾನು ಇತರರಿಗಿಂತ ಏಕೆ ಭಿನ್ನವಾಗಿ ಕಾಣುತ್ತಿದ್ದೇನೆ ಎಂದು ಎಂದಿಗೂ ಅರ್ಥವಾಗಲಿಲ್ಲ‌. ಆದರೆ ನಾನು ಅನಾಥಾಶ್ರಮಕ್ಕೆ ಬಂದ ನಂತರ ಆ ಮಕ್ಕಳು ನನಗಿಂತ ಭಿನ್ನರು ಎಂದು ನಾನು ಅರಿತುಕೊಂಡೆ. ಯಾರೂ ನನ್ನನ್ನು ದ್ವೇಷಿಸದಿದ್ದರೂ, ಆರಂಭದಲ್ಲಿ ಅವರು ನನ್ನ ಮುಖವನ್ನು ಕಂಡು ಭಯಪಟ್ಟರು. ಕ್ರಮೇಣ, ನಾವು ದೊಡ್ಡವರಾಗುತ್ತಿದ್ದಂತೆ, ನಾನು ಅನೇಕ ಸ್ನೇಹಿತರನ್ನು ಮಾಡಿಕೊಂಡೆ. ಆದರೆ ಅನಾಥಾಲಯದಿಂದ ಹೊರಗೆ, ಅದು ಬಲು ಕಷ್ಟದ ಕೆಲಸ" ಎಂದು ಹೇಳಿದರು.


ತಮ್ಮ ಕಾಲೇಜು ದಿನಗಳಲ್ಲಿ, ಅನ್ಮೋಲ್ ತಮ್ಮ ತೀಕ್ಷ್ಣವಾದ ಫ್ಯಾಷನ್ ಪ್ರಜ್ಞೆಯಿಂದಾಗಿ, ಮಾಡೆಲಿಂಗ್ ಕಡೆಗೆ ಒಲವು ತೋರಿದರು. ಕಾಲೇಜಿನಲ್ಲಿದ್ದಾಗಲೇ ಹಲವು ಇಂಸ್ಟಗ್ರಾಮ್ ಪೇಜ್‌ಗಳಲ್ಲಿ ಹಾಗೂ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾಣಿಸಿಕೊಂಡರು. ಇತ್ತೀಚಿಗೆ ಅವರು ಒಂದು ಕಿರು ಚಿತ್ರದಲ್ಲಿಯೂ ಸಹ ನಟಿಸಿದರು.


ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗಿನ ಸಂವಾದದಲ್ಲಿ, ಅನ್ಮೋಲ್,


"ಆಸಿಡ್ ದಾಳಿಗೆ ಒಳಗಾದವರ ಪೈಕಿ, ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಸಾಧನೆ ಮಾಡುವುದರಲ್ಲಿ ಮೊದಲಿಗಳಾಗಬೇಕು ಎಂಬ‌ ಆಸೆ ಇತ್ತು. ಹೊಸ ವಿನ್ಯಾಸಗಳನ್ನು ಪರಿಚಯಿಸುವುದರ ಜೊತೆಗೆ ಆಸಿಡ್ ದಾಳಿ ಜೀವನವನ್ನು ಕೊನೆಗೊಳಿಸಲ್ಲ ಎಂಬುದನ್ನು ಸಹ ಜನರಿಗೆ ತಿಳಿಸುವ ಗುರಿಯೂ ಇತ್ತು‌. ಆಸಿಡ್ ನಮ್ಮ ಮುಖವನ್ನು ವಿರೂಪಗೊಳಿಸಬಹುದಷ್ಟೇ, ಆತ್ಮವನ್ನಲ್ಲ. ನಾವೆಲ್ಲ ಒಳಗೂ ಹೊರಗೂ ಒಂದೇ, ನಾವು ಯಾರು ಎಂಬುದನ್ನ ಸ್ವೀಕರಿಸಿ, ನಮ್ಮ ಜೀವನವನ್ನು ಖುಷಿಯಿಂದ ಜೀವಿಸಬೇಕು. "


ತಮ್ಮನ್ನು ಮೂರು ಪದಗಳಲ್ಲಿ ವ್ಯಾಖ್ಯಾನಿಸಲು ಕೇಳಿದಾಗ, ಅವರು ಮೀಡಿಯಂ ಬ್ಲಾಗ್‌ಗೆ,

ಹರ್ಷಚಿತ್ತದಿಂದ - ನೀವು ನನ್ನನ್ನು ಯಾವಾಗಲೂ, ಕಷ್ಟದ ಸಮಯದಲ್ಲೂ ಖುಷಿಯಿಂದ ಇರುವುದನ್ನು ಕಾಣುತ್ತೀರಿ. ಪರಿಸ್ಥಿತಿ ಬದಲಾಗುತ್ತದೆ, ನಾನೂ ಅಥವ ನನ್ನ ಗುರಿ ಬದಲಾಗಬಾರದು.
ಆಶಾವಾದಿ - ನನಗೆ ಜೀವನದ ಬಗ್ಗೆ ಸದಾ ಧನಾತ್ಮಕ ಚಿಂತನೆಯೇ ಇದೆ.
ಆತ್ಮವಿಶ್ವಾಸ- ಜಗತ್ತನೇ ಜಯಿಸಬಲ್ಲ ದಿಟ್ಟ ಆತ್ಮವಿಶ್ವಾಸ ನನಗಿದೆ.