ಬಡತನದಿಂದಾಗಿ ಶಾಲೆ ಬಿಟ್ಟು ದಿನಗೂಲಿ ಆರಂಭಿಸಿದ ಅರ್ಜುನ್ ಸೊಲಂಕಿ, ಈಗ ಲಕ್ಷಗಳಲ್ಲಿ ವ್ಯವಹರಿಸುವ ದೊಡ್ಡ ಬಿಸಿನೆಸ್ ಮ್ಯಾನ್

ಅರ್ಜುನ್ ಸೊಲಂಕಿ ತನ್ನ 14ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಂದೆ ಇಲ್ಲದ ಕುಟುಂಬದಲ್ಲಿ ತಾಯಿ ಮಾತ್ರ ಆದಾಯದ ಮೂಲವಾಗಿದ್ದಳು. ಆಕೆಗೆ ಬರುತಿದ್ದ ಆದಾಯದಿಂದ ತನ್ನ ಎರಡು ಗಂಡು ಮಕ್ಕಳನ್ನು ಸಾಕುವುದು ಬಹಳ ಕಷ್ಟವಾಗಿತ್ತು. ತಾಯಿಯ ಕಷ್ಟ ಸಹಿಸಲಾಗದ ಅರ್ಜುನ್ ತನ್ನ ಓದನ್ನು ಶಾಲಾ ಹಂತದಲ್ಲೇ ಮೊಟಕುಗೊಳಿಸಿ ತಾಯಿಯೊಂದಿಗೆ ದಿನಗೂಲಿ ಮಾಡಲು ಆರಂಭಿಸಿದನು.

ಬಡತನದಿಂದಾಗಿ ಶಾಲೆ ಬಿಟ್ಟು ದಿನಗೂಲಿ ಆರಂಭಿಸಿದ ಅರ್ಜುನ್ ಸೊಲಂಕಿ, ಈಗ ಲಕ್ಷಗಳಲ್ಲಿ ವ್ಯವಹರಿಸುವ ದೊಡ್ಡ ಬಿಸಿನೆಸ್ ಮ್ಯಾನ್

Sunday September 01, 2019,

2 min Read

ತಾಯಿಯೊಂದಿಗೆ ದುಡಿಯಲು ಆರಂಭಿಸಿದ ಮಕ್ಕಳು ಸಂಪಾದಿಸಿದ ಹಣ ಕೇವಲ ದಿನದ ಮೂರು ಹೊತ್ತು ಕೂಳಿಗೆ ಮಾತ್ರ ಸಾಕಾಗುತಿತ್ತು. ಅದನ್ನು ಹೊರತುಪಡಿಸಿ ಇತರೆ ಬಯಕೆಗಳನ್ನು ಪೂರೈಸಿಕೊಳ್ಳುವುದು ಕೇವಲ ಕನಸಾಗಿ ಮಾತ್ರ ಉಳಿಯುತ್ತಿತ್ತು. ಆದರೆ, ಇದೇ ಸಮಯದಲ್ಲಿ ಐಸಿಐಸಿಐ ನೀಡುತ್ತಿದ್ದ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಬಗ್ಗೆ ತಿಳಿದ ಅರ್ಜುನ್ ನ ಭವಿಷ್ಯ ಕೆಲವೇ ತಿಂಗಳುಗಳಲ್ಲಿ ಬದಲಾಗಿಹೋಯ್ತು.


ಚಿತ್ರಕೃಪೆ: ಸ್ಟೋರಿ‌ ಪಿಕ್


ವರದಿಯ ಪ್ರಕಾರ ಮಧ್ಯಪ್ರದೇಶ ರಾಜ್ಯದ ಇಂದೋರ್ ನ ಬರೋದ ಸಿಂದಿ ಎಂಬ ಗ್ರಾಮದಲ್ಲಿ ಅರ್ಜುನ್ ರವರ ಕುಟುಂಬ ವಾಸವಾಗಿತ್ತು. ಆತನ ತಂದೆ-ತಾಯಿ ಇಬ್ಬರೂ ಕೂಡ ದಿನಗೂಲಿ ಕಾರ್ಮಿಕರಾಗಿದ್ದರು. ಅವರ ಅಸ್ಥಿರ ಆದಾಯದಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದು ಕನಸಾಗಿತ್ತು. ಇಂತಹ ಕಡುಬಡತನದ ನಡುವೆಯೂ ಅರ್ಜುನ್ ನ ತಂದೆ ಮದ್ಯಪಾನ ವ್ಯಸನಿಯಾಗಿದ್ದರು. ಇದು ಕುಟುಂಬವನ್ನು ಚಿಂತೆಗೀಡುಮಾಡಿತ್ತು. ಬರುಬರುತ್ತಾ ಹೆಚ್ಚಾದ ಕುಡಿತದಿಂದ ಅರ್ಜುನ್ ನ‌ ತಂದೆ ಮರಣಹೊಂದಿದರು.


ಅರ್ಜುನ್ ತಂದೆಯ ಮರಣದ ನಂತರ, ತಾಯಿ ಎಷ್ಟೇ ಕಷ್ಟ ಪಟ್ಟು ದುಡಿದರೂ‌ ಅದರಿಂದ ಬರುತ್ತಿದ್ದ ಬಿಡಿಗಾಸಿನಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸುವುದಿರಲಿ, ಮೂರು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಹಾಗಾಗಿ ಅರ್ಜುನ್ ಮತ್ತು ಆತನ‌ ಅಣ್ಣ ತಮ್ಮ ಓದನ್ನು ಮೊಟಕುಗೊಳಿಸಿ, ಚಿಕ್ಕಪುಟ್ಟ ಕೆಲಸ ಮಾಡಿ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದರು. ಈ ನಡುವೆ ಅರ್ಜುನ್ ಗೆ ಐಸಿಐಸಿಐ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯ ಭಾಗವಾಗಿ ನೀಡುವ ಪೇಂಟ್ ಅಪ್ಲಿಕೇಶನ್ ಟೆಕ್ನಿಕ್ ಎಂಬ ಉಚಿತ ತರಬೇತಿ ಬಗ್ಗೆ ತಿಳಿಯಿತು.


ತರಬೇತಿ ಆರಂಭದ ಎರಡು ತಿಂಗಳವರೆಗೂ ಅರ್ಜುನ್ ನ ಆದಾಯವಿಲ್ಲದೆ ಕುಟುಂಬ ಬಹಳ‌ಷ್ಟು ಕಷ್ಟ ಅನುಭವಿಸಿತು. ಆದರೂ ಸಹಾ ತಾಯಿ ಹಾಗೂ ಆತನ ಅಣ್ಣ ಅರ್ಜುನ್ ಐಸಿಐಸಿಐ ನ ತರಬೇತಿ ಪೂರ್ಣಗೊಳಿಸಲು ಪ್ರೋತ್ಸಾಹಿಸಿದರು.


ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅರ್ಜುನ್,


"ತರಬೇತಿಯಲ್ಲಿ ನಾನು ವಿವಿಧಬಗೆಯ ಬಣ್ಣಗಳ ಬಗ್ಗೆ ಹಾಗೂ ಅದರ ಬಳಕೆಯ ಬಗ್ಗೆ ಅಲ್ಲದೇ ಅದರ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸುವ ಬಗೆಯನ್ನು ಕಲಿತುಕೊಂಡೆ. ನಾನು ಮೂಲಭೂತ ಹಣಕಾಸು ನಿರ್ವಹಣೆ ಜೊತೆಗೆ ಸಂವಹನ ಕೌಶಲ್ಯದ ಮೂಲಭೂತ ಅಂಶಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರೊಂದಿಗೆ ನನ್ನನ್ನು ನಾನೆ ಮತ್ತಷ್ಟು ಸಧೃಡಗೊಳಿಸಿಕೊಂಡೆ. ಪ್ರಾಯೋಗಿಕ ಬಳಕೆಯ ಕಲಿಕೆಯು ನಿಜ‌ ಜೀವನಕ್ಕೆ ಅನ್ವಯಿಸಲು ಸಹಾಯ ಮಾಡಿತು. ನನಗೆ ಉದ್ಯೋಗ ಇಲ್ಲದೇ ಇದ್ದಾಗ ನನಗೆ ಅವಕಾಶಗಳೇ ಇಲ್ಲವೆಂದು ಭಾವಿಸಿದ್ದೆ. ಆದರೆ ಇದೀಗ ನಾನು ಕೌಶಲ್ಯಗಳನ್ನು ಕಲಿತಿದ್ದೇನೆ ಅಲ್ಲದೇ ನಾನು ಕನಸು ಕಾಣುವುದನ್ನು ಸಹಾ ಆರಂಭಿಸಿದ್ದೇನೆ" ಎಂದು ಖುಷಿಪಟ್ಟರು.


ಕೋರ್ಸ್ ಆರಂಭದಲ್ಲಿ ಅರ್ಜುನ್ ನಿರಂತರವಾಗಿ ತರಗತಿಗಳಿಗೆ ಹಾಜರಿಯಾಗುವುದರ ಬಗ್ಗೆ ಅಧ್ಯಾಪಕರುಗಳಿಗೆ ಸಂಶಯವಿತ್ತು. ಆದರೆ ಅರ್ಜುನ್ ಯಶಸ್ವಿಯಾಗಿ ತನ್ನ ಕೋರ್ಸ್ ಮುಗಿಸಿದ್ದು ಅಲ್ಲದೇ ಕೆಲಸದ ವಿಚಾರದಲ್ಲಿಯೂ ಆತ ಬಹು ಎತ್ತರಕ್ಕೆ ತಲುಪಿದ್ದು ಅಧ್ಯಾಪಕರುಗಳಿಗೆ ಆಶ್ಚರ್ಯವನ್ನು ಉಂಟುಮಾಡಿತು.


ಇದೀಗ, ಅರ್ಜುನ್ ಲಕ್ಷಾಂತರ ರೂಪಾಯಿ‌ ಮೌಲ್ಯದ ಯೋಜನೆಗಳಿಗೆ ಪೇಂಟ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರುವ ಆದಾಯದಿಂದ ತನ್ನ‌ ಕುಟುಂಬವನ್ನು ಸುಖವಾಗಿ ಇಟ್ಟುಕೊಂಡಿರುವುದಲ್ಲದೇ, ತನ್ನ‌ ಹಳ್ಳಿಯ ಬಡ‌ಮಕ್ಕಳಿಗೂ ಸಹಾ ಸಹಾಯಮಾಡುತ್ತಿರುವುದು ಪ್ರಶಂಸನೀಯ ಸಂಗತಿ.