ಕೊರೊನಾವೈರಸ್: ಭಾರತೀಯ ಸೇನೆಯಲ್ಲಿರುವ ಬಿಹಾರದ ಈ ವ್ಯಕ್ತಿ ಮಾಸ್ಕ್‌ಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದಾರೆ

ಭಾರತೀಯ ಸೇನೆಯ ಜೆಸಿಒ ಸುಧೀರ್ ಕುಮಾರ್ ಅವರು ಮಾಸ್ಕ್‌ಗಳನ್ನು ತಯಾರಿಸುವುದಲ್ಲದೆ, ಬಿಹಾರದ ತಮ್ಮ ಹಳ್ಳಿಯಲ್ಲಿರುವ ಜನರಿಗೆ ಇತರ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಕೊರೊನಾವೈರಸ್: ಭಾರತೀಯ ಸೇನೆಯಲ್ಲಿರುವ ಬಿಹಾರದ ಈ ವ್ಯಕ್ತಿ ಮಾಸ್ಕ್‌ಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದಾರೆ

Saturday April 04, 2020,

4 min Read

ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿರುವ ಈ ಸಮಯದಲ್ಲಿ, ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿರುವ ಸುಧೀರ್ ಕುಮಾರ್ ಕರ್ತವ್ಯದ ಕರೆ ಮೀರಿ ಜನಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿದ್ದಾರೆ.


ಪ್ರಸ್ತುತ ಪಂಜಾಬ್‌ನ ಅಮೃತಸರದಲ್ಲಿ ನೇಮಕಗೊಂಡಿರುವ ಸುಧೀರ್ ಕುಮಾರ್ (43), ಬಿಹಾರದ ಮೋತಿಹಾರಿ ಜಿಲ್ಲೆಯ ಜಟ್ವಾಲಿಯಾ ಗ್ರಾಮದಲ್ಲಿರುವ ಅವರ ಕುಟುಂಬವನ್ನು ಭೇಟಿ ಮಾಡಿ ಮಗಳ ಮದುವೆ ಮಾಡಲು ಒಂದು ತಿಂಗಳ ಕಾಲ ರಜೆ ಪಡೆದು ಬಂದಿದ್ದರು. ಮದುವೆಗೆ ಸುಧೀರ್ 4 ಲಕ್ಷ ರೂ.ಗಳ ಸಾಲವನ್ನು ಸಹ ತೆಗೆದುಕೊಂಡಿದ್ದರು, ಆದರೆ ಲಾಕ್ ಡೌನ್ ಆಗಿದ್ದರಿಂದ ಮದುವೆಯಾಗಲಿಲ್ಲ.




ಈ ಮಧ್ಯೆ, ದೇಶಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಅವರ ರಜೆ ವಿಸ್ತರಿಸಲಾಗಿದೆ ಎಂದು ಸುಧೀರ್ ಅವರ ಘಟಕದಿಂದ ಸಂದೇಶ ಬಂದಿತು. ಇದೇ ಸಮಯದಲ್ಲಿ ಸುಧೀರ್ ಮತ್ತು ಅವರ ಕುಟುಂಬವು ತಮ್ಮ ಹಳ್ಳಿಯಲ್ಲಿ ಕೊರೊನಾ ವೈರಸ್ ಹರಡುವ ಬಗ್ಗೆ ತಿಳಿದಿದ್ದರು.


ತನ್ನ ಹಳ್ಳಿಯ ಜನರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಇದ್ದರೂ, ಅದು ನಿಖರವಾಗಿ ಏನು ಮತ್ತು ಅದು ಹೇಗೆ ಪರಿಣಾಮ ಬೀರುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಆದರೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅವರಿಗೆ ತಿಳಿದಿತ್ತು. ಇದು ಗ್ರಾಮದಲ್ಲಿ ಫೇಸ್‌ಮಾಸ್ಕ್ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಯಿತು.


“ನಾವು ನಮ್ಮ ಮಗನನ್ನು ಫೇಸ್‌ಮಾಸ್ಕ್‌ಗಳನ್ನು ಖರೀದಿಸಲು ಕಳುಹಿಸಿದಾಗ ಹೆಚ್ಚಿನ ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಫೇಸ್‌ಮಾಸ್ಕ್‌ಗಳ ಕೊರತೆ ಇದೆ ಎಂದು ಗೊತ್ತಾಯಿತು. ಲಭ್ಯವಿರುವವುಗಳು ತುಂಬಾ "ದುಬಾರಿ"ಯಾಗಿವೆ, ಮತ್ತು 200 ರೂ.ಯಷ್ಟು ಬೆಲೆಬಾಳುತ್ತವೆ," ಎಂದು ಸುಧೀರ್ ಹೇಳುತ್ತಾರೆ. ಆದರೆ ವೈರಸ್‌ನ ಭಯದಿಂದ ಅವರು ದುಬಾರಿ ಮುಖವಾಡವನ್ನು ಖರೀದಿಸಲು ನಿರ್ಧರಿಸಿದರು.


"ಫೇಸ್‌ಮಾಸ್ಕ್‌ಗಳನ್ನು ನೋಡಿದ ನಂತರ ಅವುಗಳನ್ನು ಮನೆಯಲ್ಲಿ ನಾವೇ ಏಕೆ ಮಾಡಬಾರದು ಎಂದು ನಾವು ಯೋಚಿಸಿದೆವು," ಎನ್ನುತ್ತಾರೆ ಸುಧೀರ್.


ರಾಷ್ಟ್ರ ಸೇವೆ

ಸುಧೀರ್ ಅವರ ಪ್ರಕಾರ, ಭಾರತೀಯ ಸೇನೆಯು ಅವರಿಗೆ ಸೈನ್ಯದಲ್ಲಿ ಕೆಲಸ ಮಾಡಲು ತರಬೇತಿ ನೀಡಿದ್ದಲ್ಲದೆ, ಕೆಲವು ವರ್ಷಗಳ ಹಿಂದೆ ಕುಟುಂಬ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಅವರ ಪತ್ನಿಗೆ ಹೊಲಿಗೆ ತರಬೇತಿಯನ್ನು ನೀಡಿತ್ತು. ಇದು ಅವರ ಹೆಂಡತಿಗೆ ಜೀವನ ನಡೆಸಲು ಚೀಲಗಳನ್ನು ತಯಾರಿಸಲು ಸಹಾಯ ಮಾಡಿತು.


ಅವರು ತಮ್ಮ ಹಳ್ಳಿಯ ಜನರಿಗೆ ಫೇಸ್‌ಮಾಸ್ಕ್‌ಗಳನ್ನು ತಯಾರಿಸಲು ಮತ್ತು ವಿತರಿಸಲು ಸಿದ್ಧರಾದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇದೆ. ಫೇಸ್‌ಮಾಸ್ಕ್‌ಗಳನ್ನು ತಯಾರಿಸಲು ಕಚ್ಚಾ ವಸ್ತುಗಳು ಇವೆ, ಮತ್ತು ಇಂತಹ ಕಠಿಣ ಸಮಯದಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಬಯಕೆ ಎಲ್ಲವೂ ಇತ್ತು ಎಂದು ಸುಧೀರ್ ಹೇಳುತ್ತಾರೆ.

ಸುಧೀರ್ ತನ್ನ ಹೆಂಡತಿಯೊಂದಿಗೆ ಫೇಸ್‌ಮಾಸ್ಕ್‌ಗಳನ್ನು ಹೊಲಿಯುತ್ತಿರುವುದು.


ಫೇಸ್‌ಮಾಸ್ಕ್‌ಗಳನ್ನು ತಯಾರಿಸಲು ನಿರ್ಧರಿಸಿದ ನಂತರ, ಅವರು ಕಚ್ಚಾ ವಸ್ತುಗಳನ್ನು ಒದಗಿಸುವವರನ್ನು ಕಂಡುಕೊಂಡರು. ಮೊದಲಿಗೆ ಸುಧೀರ್ 20,000 ರೂ ಮೌಲ್ಯದ ವಸ್ತುಗಳನ್ನು ಖರೀದಿಸಿದರು. ಅವರ ಪತ್ನಿಯೊಂದಿಗೆ ಮಾಸ್ಕ್‌ಗಳನ್ನು ಹೊಲಿಯಲು ಪ್ರಾರಂಭಿಸಿದರು.


"ಎರಡು-ಮೂರು ದಿನಗಳವರೆಗೆ ಇದನ್ನು ಮಾಡುವುದು ನಮ್ಮ ಹಿಂದಿನ ಯೋಜನೆಯಾಗಿತ್ತು, ಆದರೆ ಲಾಕ್‌ಡೌನ್ ಕಾರಣದಿಂದಾಗಿ ನನ್ನ ರಜೆಯನ್ನು ವಿಸ್ತರಿಸಲಾಗಿದೆ ಎಂದು ನನ್ನ ಘಟಕದಿಂದ ಸಂದೇಶ ಬಂದಾಗ ಇದನ್ನು ಮುಂದುವರಿಸಲು ನಾನು ನಿರ್ಧರಿಸಿದೆ," ಎಂದು ಅವರು ಹೇಳುತ್ತಾರೆ.

ಭಾರತೀಯ ಸೇನೆಯೊಂದಿಗೆ ಕೆಲಸ ಮಾಡಿದ 25 ವರ್ಷಗಳಲ್ಲಿ ಅವರು ಕಲಿತದ್ದೆಲ್ಲ ದೇಶ ಸೇವೆ ಮಾಡುವುದು. ಸೇವೆ ಮಾಡುವುದು ಅವರ ಜೀವನದ ತತ್ವ. ಇದು ಜನರಿಗೆ ಸೇವೆ ಸಲ್ಲಿಸುವ ವಿಷಯವಾಗಿದೆ. ಅದು ಘಟಕದಲ್ಲಿರಲಿ ಅಥವಾ ನನ್ನ ಹಳ್ಳಿಯಲ್ಲಿರಲಿ ಎಂದು ಸುಧೀರ್ ಹೇಳುತ್ತಾರೆ.


ಅಗತ್ಯವಿರುವವರಿಗೆ ಸಹಾಯ ಮಾಡುವುದು

ಲಾಕ್ ಡೌನ್ ಆದಾಗಿನಿಂದ ಪತಿ-ಪತ್ನಿ ಜೋಡಿ ತಮ್ಮ ಹಳ್ಳಿಯಲ್ಲಿ ಮತ್ತು ನೆರೆಯ ಹಳ್ಳಿಗಳಲ್ಲಿ 4,000 ಕ್ಕೂ ಹೆಚ್ಚು ಫೇಸ್‌ಮಾಸ್ಕ್‌ಗಳನ್ನು ತಯಾರಿಸಿ ಉಚಿತವಾಗಿ ವಿತರಿಸಿದ್ದಾರೆ.

ಮೋತಿಹರಿ ಜಿಲ್ಲೆಯಲ್ಲಿ ಲಭ್ಯವಿರುವ ಫೇಸ್‌ಮಾಸ್ಕ್‌ಗಳು ಉತ್ತಮವಾಗಿವೆ ಎಂದು ಜಿಲ್ಲೆಯ ವೈದ್ಯರೊಂದಿಗೆ ಫೇಸ್‌ಮಾಸ್ಕ್‌ಗಳನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡಿದ್ದಾರೆ ಎಂದು ಸುಧೀರ್ ಹೇಳುತ್ತಾರೆ. ಫೇಸ್‌ಮಾಸ್ಕ್‌ಗಳನ್ನು ಬಿಹಾರದ ಸ್ಥಳೀಯ ‘ಅಸ್ತರ್‌ʼ ಬಟ್ಟೆಯಿಂದ ಹಾಗೂ "ಸ್ಪಾಂಜ್ ಜಾಲಿ"ಯಿಂದ ಎರಡು ಪದರಗಳಿರುವಂತೆ ತಯಾರಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೇಸ್‌ಮಾಸ್ಕ್‌ಗಳನ್ನು ಒಂದೇ ಪದರವಾದ ‘ಸ್ಪಾಂಜ್ ಜಾಲಿ'ಯಿಂದ ತಯಾರಿಸಲಾಗುತ್ತಿದೆ. ಆದರೆ ಸುಧೀರ್ ಎರಡು ಪದರಗಳ ಫೇಸ್‌ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.


ಇದಲ್ಲದೆ ಸುಧೀರ್ ಮತ್ತು ಅವರ ಕುಟುಂಬವು ತಮ್ಮ ಗ್ರಾಮದಲ್ಲಿ ‘ಸಾಮಾಜಿಕ ಅಂತರ'ದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸುಧೀರ್‌ ಅವರ ಸಣ್ಣ ಪ್ರಾಂಗಣವು ಗ್ರಾಮಸ್ಥರ ಆರೈಕೆ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.


ಫೇಸ್‌ಮಾಸ್ಕ್‌ಗಳನ್ನು ಮರುಬಳಕೆ ಮಾಡದಿರುವಂತೆ ಸುಧೀರ್ ಜನರನ್ನು ಕೇಳಿಕೊಂಡಿದ್ದಾರೆ. "ನೀವು ಅದನ್ನು ಬಹಳ ಗಂಟೆಗಳ ಕಾಲ ಬಳಸಿದ್ದರೆ, ಅದನ್ನು ಎಸೆದು ಹೊಸದನ್ನು ನನ್ನಿಂದ ತೆಗೆದುಕೊಳ್ಳಬಹುದು," ಎನ್ನುತ್ತಾರವರು. ಮಾಸ್ಕ್‌ಗಳನ್ನು ತೊಳೆಯಲು ಅವರು ಸಲಹೆ ನೀಡುವುದಿಲ್ಲ.


“ನಾವು ಸಮಾಜದ ಜನರಿಗೆ ಸಹಾಯ ಮಾಡಲು ಬಯಸುತ್ತೇವೆ. ನಾವು ಎಷ್ಟು ಸಾಧ್ಯವೋ ಅಷ್ಟು ಮುಖವಾಡಗಳನ್ನು ತಯಾರಿಸುತ್ತಿದ್ದೇವೆ ಮತ್ತು ನಮಗೆ ಆಗುವಷ್ಟು ದಿನ ಅವುಗಳನ್ನು ನೀಡುತ್ತೇವೆ,” ಎಂದು ಸುಧೀರ್ ಹೇಳುತ್ತಾರೆ.

ಕರೋನವೈರಸ್ ಒಂದು ಮಾರಕ ಕಾಯಿಲೆ ಎಂದು ಅವರ ಹಳ್ಳಿಯ ಜನರಿಗೆ ತಿಳಿದಿದೆ ಸರ್ಕಾರದ ಸೂಚನೆಯಂತೆ ಕಾಳಜಿ ವಹಿಸಬೇಕಿದೆ. ಆದರೆ ಅವರ ಹಳ್ಳಿಯಲ್ಲಿ ಅನೇಕ ಸಂಪನ್ಮೂಲಗಳ ಕೊರತೆಯಿದೆ.


ಆದ್ದರಿಂದ ಸುಧೀರ್ ಇಲ್ಲಿಯೂ ಸಹ ಸಹಾಯ ಮಾಡಲು ಮುಂದಾಗಿದ್ದಾರೆ. ಫೇಸ್‌ಮಾಸ್ಕ್‌ಗಳನ್ನು ಹೊರತುಪಡಿಸಿ ಇತರ ಅಗತ್ಯ ಸಾಮಗ್ರಿಗಳಾದ ಉಪ್ಪು, ಸಾಬೂನು, ಸೋಯಾಬೀನ್, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಅವರು ಗ್ರಾಮದ ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ.


ಭಾರತೀಯ ಸೇನೆಯಲ್ಲಿ ಜೂನಿಯರ್ ಶ್ರೇಣಿಯ (ಎನ್‌ಬಿ ಸಬ್) ಅಧಿಕಾರಿ ಆಗಿರುವ ಸುಧೀರ್‌, ಅವರ ಆದಾಯ ಹೆಚ್ಚಿಲ್ಲ ಮತ್ತು ಕೆಲವೊಮ್ಮೆ ಅವರ ಕುಟುಂಬದ ಆಸೆಗಳನ್ನು ಪೂರೈಸಲು ಸಹ ಸಾಕಾಗುವುದಿಲ್ಲ. ಆದರೆ ಬಿಕ್ಕಟ್ಟಿನ ಈ ಸಮಯದಲ್ಲಿ ಅವರು ತಮ್ಮ ಮಗಳ ಮದುವೆಗೆ ತೆಗೆದುಕೊಂಡ ವೈಯಕ್ತಿಕ ಸಾಲವನ್ನು ಜನರ ಸೇವೆಗಾಗಿ ಬಳಸುತ್ತಿದ್ದಾರೆ ಎನ್ನುತ್ತಾರೆ.




ಸುಧೀರ್ ಪಂಜಾಬ್‌ನ ತನ್ನ ಬೆಟಾಲಿಯನ್‌ (515) ಸೇರಿದ ನಂತರ ತಂತ್ರಜ್ಞಾನವನ್ನು ಬಳಸಲು ಕಲಿತಿದ್ದಾರೆ. ಇದು ಅವರಿಗೆ ಬರೀ ಫೋನ್ ಮಾಡುವುದರಿಂದಲೇ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತರೆಸಿಕೊಳ್ಳಲು ಸಹಾಯ ಮಾಡಿದೆ ಎನ್ನುತ್ತಾರವರು. ಸಗಟು ವ್ಯಾಪಾರಿ ತನ್ನ ಮನೆ ಬಾಗಿಲಿಗೆ ಸರಬರಾಜುಗಳನ್ನು ತರುತ್ತಾರೆ. ಸುಧೀರ್ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುತ್ತಾರೆ. “ಮೂಲಭೂತ ಆಹಾರವನ್ನು ಪಡೆಯಲು ಸಾಧ್ಯವಾಗದ ಅಥವಾ ಮಾರುಕಟ್ಟೆಯಲ್ಲಿ ಅದನ್ನು ಹುಡುಕಲು ಸಾಧ್ಯವಾಗದ ಜನರು ಅದನ್ನು ಎಲ್ಲಿಯೂ ಹುಡುಕುವ ಅಗತ್ಯವಿಲ್ಲ. ಅವರು ಬಂದು ಅದನ್ನು ನನ್ನಿಂದ ಉಚಿತವಾಗಿ ತೆಗೆದುಕೊಳ್ಳಬಹುದು,” ಎಂದು ಸುಧೀರ್ ಹೇಳುತ್ತಾರೆ.

“ನನ್ನದೊಂದು ತತ್ವವಿದೆ. ನಾನು ಸಂಪಾದಿಸಿದ ಮತ್ತು ಗಳಿಸುವ ಯಾವುದೇ ಹಣವನ್ನು ನನ್ನ ಕುಟುಂಬ ಮತ್ತು ನನ್ನ ದೇಶಕ್ಕಾಗಿ ಖರ್ಚು ಮಾಡುತ್ತೇನೆ. ಇತರರಿಗೆ ಸಹಾಯ ಮಾಡುವ ಮೂಲಕ, ನನಗೆ ಹಣದ ಕೊರತೆ ಎದುರಾಗುವುದಿಲ್ಲ, ಆದರೆ ಶುಭ ಹಾರೈಕೆಗಳು ಮಾತ್ರ ಸಿಗುತ್ತವೆ," ಎಂದು ಸುಧೀರ್ ಹೇಳುತ್ತಾರೆ.