ಭಾರತದ ಅತಿ ಕಿರಿಯ ವಯಸ್ಸಿನ ಮೇಯರ್‌ ಆಗಲಿರುವ ಕೇರಳದ 21ರ ಆರ್ಯ ರಾಜೇಂದ್ರನ್

ತ್ರಿವಂದ್ರಮ್‌ನ ಅತಿ ಕಿರಿಯ ಮೇಯರ್‌ ಆಗಲಿರುವ ಆರ್ಯ ರಾಜೇಂದ್ರನ್ ನಾಯಕತ್ವ ಗುಣವನ್ನು ವಯಸ್ಸಿನಿಂದ ಅಳೆಯಬಾರದು ಎನ್ನುತ್ತಾರೆ.

ಭಾರತದ ಅತಿ ಕಿರಿಯ ವಯಸ್ಸಿನ ಮೇಯರ್‌ ಆಗಲಿರುವ ಕೇರಳದ 21ರ ಆರ್ಯ ರಾಜೇಂದ್ರನ್

Monday December 28, 2020,

1 min Read

ಎಲ್ಲವೂ ಅಂದುಕೊಂಡಂತೆ ನಡೆದರೆ ನಗರದ ಕಾಲೇಜೊಂದರಲ್ಲಿ ದ್ವಿತೀಯ ವರ್ಷ ಓದುತ್ತಿರುವ ಆರ್ಯ ರಾಜೇಂದ್ರನ್‌ ಕೇರಳ ರಾಜಧಾನಿಯ ಹೊಸ ಮೇಯರ್‌ ಆಗಿ ಸ್ಥಾನಗಳಿಸಲಿದ್ದಾರೆ.


ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್‌ 27ನೇ ವಯಸ್ಸಿನಲ್ಲಿ ನಾಗ್ಪುರ್‌ ಮಹಾನಗರ ಪಾಲಿಕೆಯ ಮೇಯರ್‌ ಆಗಿದ್ದರು.


ಕೇರಳದ ಮಧುವನಮುಕಲ್‌ನ ತಮ್ಮ ಬಾಡಿಗೆ ಮನೆಯಿಂದ ಶುಭಾಷಯಗಳಿಗೆ ಸ್ಪಂದಿಸುತ್ತಿರುವ ಆರ್ಯ ಹೊಸ ಜವಾಬ್ದಾರಿಗಳ ಬಗ್ಗೆ ಪಾರ್ಟಿಯಿಂದ ಅಧಿಕೃತ ದೃಢೀಕರಣ ಬರಬೇಕಿದೆ ಎಂದರು.


ಪಾರ್ಟಿಯಲ್ಲಿ ಸಕ್ರಿಯ ಸದಸ್ಯರಾಗಿರುವ ಮಾರ್ಕ್ಸ್‌ವಾದಿ ಆರ್ಯ, ಪಕ್ವತೆ ಮತ್ತು ನಾಯಕತ್ವವನ್ನು ವಯಸ್ಸಿನಿಂದ ಅಳೆಯಲಾಗದು ಎನ್ನುತ್ತಾರೆ.


“ಚುನಾವಣೆಯಲ್ಲಿ ಧೈರ್ಯದಿಂದ ಸ್ಪರ್ಧಿಸಿದ್ದೇನೆ, ನನ್ನ ಪಾರ್ಟಿ ನೀಡುವ ಜವಾಬ್ದಾರಿ ಹೊರಲು ನಾನು ಸಿದ್ಧಳಾಗಿದ್ದೇನೆ. ನನ್ನ ವಿದ್ಯಾಭ್ಯಾಸ ಮತ್ತು ರಾಜಕೀಯ ಜೀವನವನ್ನು ಒಟ್ಟೊಟ್ಟಿಗೆ ನಡೆಸಿಕೊಂಡು ಹೋಗಬೇಕೆನ್ನುವುದು ನನ್ನಾಸೆ,” ಎನ್ನುತ್ತಾರೆ ಆರ್ಯ.


ಎಲೆಕ್ಟ್ರಿಷನ್‌ ಆಗಿರುವ ಸಿಪಿಐ(ಎಮ್‌)ನ ಕಾರ್ಯಕರ್ತ ಕೆ ರಾಜೇಂದ್ರನ್‌ ಮತ್ತು ಎಲ್‌ಐಸಿ ಏಜೆಂಟ್‌ ಶ್ರೀಲತಾ ಅವರ ಮಗಳಾದ ಆರ್ಯ ಅಲ್‌ ಸೈಂಟ್ಸ್‌ ಕಾಲೇಜಿನಲ್ಲಿ ಗಣಿತ ವಿಷಯದಲ್ಲಿ ದ್ವಿತೀಯ ವರ್ಷದ ಬಿ ಎಸ್‌ ಸಿ ಓದುತ್ತಿದ್ದಾಳೆ.


ತ್ರಿವಂದ್ರಮ್‌ ಮಹಾನಗರ ಪಾಲಿಕೆಯ ಮುದವನಮುಘಲ್‌ ವಾರ್ಡ್‌ನಿಂದ ಸ್ಪರ್ಧಿಸಿ 2872 ಮತಗಳೊಂದಿಗೆ ಆರ್ಯ ವಿಜಯಗಳಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಿಂತ 549 ಹೆಚ್ಚು ಮತಗಳು ಅವರಿಗೆ ಸಿಕ್ಕಿವೆ.


ಕೇರಳದ ರಾಜಧಾನಿಯ ಮೇಯರ್‌ ಆಗಿ ಆರ್ಯ ಅವರ ಮೊದಲ ಆದ್ಯತೆ ತ್ಯಾಜ್ಯ ನಿರ್ವಹಣೆ. ಇದು ಹಿಂದಿನ ಅಭ್ಯರ್ಥಿಗಳಿಗೂ ಸವಾಲಿನ ಕೆಲಸವಾಗಿತ್ತು.


“ನಮ್ಮದು ಸುಂದರ ನಗರ. ಅದು ಹಾಗೆಯೆ ಉಳಿಯಬೇಕೆಂದರೆ ಕಸ ತೆಗೆಯಬೇಕು. ವೈಜ್ಯಾನಿಕ ತ್ಯಾಜ್ಯ ವಿಲೇವಾರಿಯ ಹೊರತಾಗಿಯೂ ಜನ ರಸ್ತೆಯಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸಬೇಕು,” ಎನ್ನುತ್ತಾರೆ ಆರ್ಯ.


ತಮ್ಮ ರಾಜಕೀಯ ಜೀವನದೆಡೆಗೆ ಕಾಲೇಜಿನ ಶಿಕ್ಷಕರು ಮತ್ತು ಗೆಳೆಯರಿಂದ ಉತ್ತಮ ಬೆಂಬಲವಿದೆ ಎನ್ನುವ ಆರ್ಯ ಚುನಾವಣಾ ಪ್ರಚಾರದಿಂದ ತಪ್ಪಿಸಿಕೊಂಡ ಸೆಮಿಸ್ಟರ್‌ ಪರೀಕ್ಷೆಗಳಿಗಾಗಿ ತಯಾರಿ ನಡೆಸಬೇಕೆನ್ನುತ್ತಾರೆ.


ನಟ ಮೋಹನಲಾಲ್‌ ಆರ್ಯ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿರುವುದು ಪಾರ್ಟಿ ಸುದ್ದಿ ವಾಹಿನಿ ಪೀಪಲ್‌ನಲ್ಲಿ ಶನಿವಾರ ಪ್ರಸಾರವಾಗಿದೆ.


ಅವರ ನಿರೀಕ್ಷೆಯಂತೆ ನಾನು ಕೆಲಸಮಾಡುತ್ತೇನೆ ಎಂದಿದ್ದಾರೆ ಆರ್ಯ.