“ಸ್ವಚ್ಛ ಮೀರತ್” ಆಂದೋಲನ ಪ್ರಾರಂಭಿಸಿ ನಗರವನ್ನು ಕಸಮುಕ್ತ ಮಾಡಲು ಪಣ ತೊಟ್ಟಿರುವ 25 ವರ್ಷದ ಯುವಕ ಆಯೂಷ್ ಮಿತ್ತಲ್

ಉತ್ತರ ಪ್ರದೇಶದ ಮೀರತ್ ನಗರದ ಆಯೂಷ್ ಮಿತ್ತಲ್ ತಮ್ಮ ನಗರವನ್ನು ಕಸಮುಕ್ತ ಮಾಡಲು ಪಣ ತೊಟ್ಟು ಅಪಾರ ಸಂಬಳ ತರುತಿದ್ದ ಹುದ್ದೆಯನ್ನು ತ್ಯಜಿಸಿದ್ದಾರೆ. ನಗರದಲ್ಲಿ ಸೃಜಿಸಲ್ಪಡುವ ಕಸವನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಎಲ್ಲಾ ಪ್ರಯತ್ನ ಮಾಡುತ್ತಿರುವ ಮಿತ್ತಲ್ ಇಡೀ ದೇಶವನ್ನು ಕಸಮುಕ್ತ ಮಾಡುವ ಆಂದೋಲನ ಆರಂಭಿಸಲು ಸಿದ್ಧರಾಗಿದ್ದಾರೆ.

“ಸ್ವಚ್ಛ ಮೀರತ್” ಆಂದೋಲನ ಪ್ರಾರಂಭಿಸಿ ನಗರವನ್ನು ಕಸಮುಕ್ತ ಮಾಡಲು ಪಣ ತೊಟ್ಟಿರುವ 25 ವರ್ಷದ ಯುವಕ ಆಯೂಷ್ ಮಿತ್ತಲ್

Sunday October 06, 2019,

3 min Read

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನೈರ್ಮಲ್ಯವು ಸ್ವಾತಂತ್ರ್ಯಕ್ಕಿಂತ ಮುಖ್ಯವಾದುದು ಎಂದು ಹೇಳಿದ್ದಾರೆ. ಅವರು ನೈರ್ಮಲ್ಯ ಮತ್ತು ಶುಚಿತ್ವಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಶಗಳನ್ನಾಗಿ ಮಾಡಿಕೊಂಡಿದ್ದರು. ದೇಶದ ಎಲ್ಲಾ ನಾಗರೀಕರು ತಾವು ಮತ್ತು ತಮ್ಮ ವಾಸಿಸುವ ಸ್ಥಳದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂಬುದು ಅವರ ಕನಸಾಗಿತ್ತು.


ಆದರೆ ಇಂದು ದೇಶದ ಉದ್ದಗಲಕ್ಕೂ ನಾವು ಕಸದ ಗುಡ್ಡೆಗಳು ಬಿದ್ದಿರುವುದನ್ನು ಕಾಣಬಹುದು. ನಮ್ಮ ದೇಶದಲ್ಲಿ ಪ್ರತಿವರ್ಷ 62 ದಶಲಕ್ಷ ಟನ್ನುಗಳಷ್ಟು ಘನತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಕೇವಲ ಪ್ರತಿಶತಃ 60 ರಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಬರೀ ಪ್ರತಿಶತಃ 15 ರಷ್ಟು ತ್ಯಾಜ್ಯವು ಪರಿಷ್ಕರಿಸಲ್ಪಡುತ್ತಿದೆ. ಹಾಗೆಯೇ ಉಳಿಯುವ ತ್ಯಾಜ್ಯವು ಕಾಲೆರಾ, ಡೆಂಗ್ಯೂ, ಹೆಪಾಟೈಟಿಸ್ ಮುಂತಾದ ರೋಗಗಳು ಹರಡಲು ಕಾರಣವಾಗಿದೆ.


ಮೀರತ್ ನಗರ ಒಂದರಲ್ಲಿಯೇ ಕಸವನ್ನು ತುಂಬಲು ಸುಮಾರು 1000 ಪ್ರದೇಶಗಳಿವೆ.


ತ್ಯಾಜ್ಯ ವಿಲೇವಾರಿಯನ್ನು ನಿರ್ವಹಿಸಲೆಂದೇ ಹಲವಾರು ವರ್ಷಗಳಿಂದ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ಚಾಲ್ತಿಗೆ ತರುವ ನಿರಂತರ ಪ್ರಯತ್ನಗಳನ್ನು ಮಾಡುತಿದ್ದರೂ ಸಹ ಮಹತ್ವದ ಬದಲಾವಣೆಗಳೇನೂ ಆಗಿಲ್ಲ.


ಆದರೆ ಮೀರತ್ ನಗರದ 25 ವರ್ಷದ ಹೋರಾಟಗಾರ ಯುವಕ ಆಯೂಷ್ ಮಿತ್ತಲ್ ಗಾಂಧೀಜಿಯವರ ತತ್ವಾದರ್ಶಗಳನ್ನು ಜೀವಂತವಾಗಿಡಲು ಪ್ರಯತ್ನಿಸುತಿದ್ದಾರೆ. 2018 ರಲ್ಲಿ ತಮ್ಮ ಸಹೋದರ ಅಕ್ಷಿತ್ ಮಿತ್ತಲರೊಂದಿಗೆ ಸೇರಿ ಘನತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಒಂದು ಮಾದರಿಯನ್ನು ರೂಪಿಸಿದ್ದಾರೆ. ಇದರಿಂದಾಗಿ ಅವರು ತಮ್ಮ ಪ್ರದೇಶದಲ್ಲಿನ ಕಸವನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತಿದ್ದಾರೆ.


ಅವರು 118 ಚಿಂದಿ ಆಯುವವರನ್ನು ಬಳಸಿಕೊಂಡು 17 ವಾಸದ ಕಾಲೋನಿಗಳಿಂದ ಸುಮಾರು 8000 ಕೆ.ಜಿ. ಕಸವನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ನಿರ್ವಹಿಸುತಿದ್ದಾರೆ.


25 ವರ್ಷದ ಯುವಕ ಆಯೂಷ್ ಮಿತ್ತಲ್


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದಂತೆ ತಮ್ಮ ಈ ಆಂದೋಲನವನ್ನು ಆಯೂಷ್ ಸ್ವಚ್ಛ ಮೀರತ್ ಎಂದು ನಾಮಕರಣ ಮಾಡಿದ್ದಾರೆ.

ಕಾರ್ಯವಿಧಾನದ ವಿವರಗಳು

ಡೆಹ್ರಾಡೂನಿನ ಐಎಮ್ಎಸ್ ಯೂನಿಸನ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಮುಗಿಸಿದ ನಂತರ ಆಯೂಷ್ ದೆಹಲಿಯ ಬಹುರಾಷ್ಟ್ರೀಯ ಕಂಪೆನಿ ಆಕ್ಸೆಂಚರ್ ನಲ್ಲಿ ಲಾಭದಾಯಕವಾದ ಹುದ್ದೆಗೆ ಆಯ್ಕೆಯಾದರು. ಆದರೆ ಅವರು ಅಲ್ಲಿ ಹೆಚ್ಚು ಕಾಲ ಕಾರ್ಯ ನಿರ್ವಹಿಸದೆ 2108 ರಲ್ಲಿ ತಮ್ಮ ತವರು ನಗರವಾದ ಮೀರತ್ಗೆ ವಾಪಸ್ಸಾದರು. ಅಲ್ಲಿಂದ ಅವರ ಕಾರ್ಯಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾದವು.


Q

ಮೀರತ್ ನಗರದ ವಾಸದ ಕಾಲೋನಿಯೊಂದರಲ್ಲಿ ಅನುಷ್ಠಾನಗೊಂಡಿರುವ ಸ್ವಚ್ಛ ಮೀರತ್ ಆಂದೋಲನ.


ನಗರಕ್ಕೆ ವಾಪಸಾದ ನಂತರ ಅವರು ಅಲ್ಲಲ್ಲಿ ಬಿದ್ದಿರುತಿದ್ದ ಬೃಹತ್ ಪ್ರಮಾಣದ ಕಸವನ್ನು ಗಮನಿಸಿದರು.


“ಪ್ರತಿದಿನ ಬೆಳಿಗ್ಗೆ ನಾನು ಅಲ್ಲಲ್ಲಿ ಬಿದ್ದಿರುತಿದ್ದ ಕಸವನ್ನು ಗಮನಿಸತೊಡಗಿದೆ. ಇದು ವಾಯುಮಾಲಿನ್ಯ ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆಯೆಂದು ನನಗೆ ಅನಿಸಿತು. ನಾನು ಈ ಬಗ್ಗೆ ವಿವರಗಳನ್ನು ಸಂಗ್ರಹಿಸಿದಾಗ ಮೀರತ್ ನಗರದಲ್ಲಿ ಸುಮಾರು 1,000 ಕಸ ತುಂಬುವ ಜಾಗಗಳಿವೆ ಎಂದು ತಿಳಿಯಿತು. ಸ್ವಚ್ಚ ಭಾರತ್ ಅಭಿಯಾನವು ಅಳವಡಿಕೆಯಾದ ಐದು ವರ್ಷಗಳ ನಂತರವೂ ಈ ಸ್ಥಿತಿಯಿದೆ ಎಂಬುದನ್ನು ತಿಳಿದು ಬಹಳ ಬೇಸರವಾಯಿತು. ಇದರಿಂದಾಗಿ ನಾನು ಈ ಕಾರ್ಯಕ್ಕೆ ಇಳಿಯಬೇಕಾಯಿತು” ಎಂದು ಆಯೂಷ್ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.

ಸ್ವಚ್ಛ ಮೀರತ್ ಆಂದೋಲನ

ಆರ್ಕಿಟೆಕ್ಟ್ ಆಗಿರುವ ಅವರ ಸಹೋದರನೊಂದಿಗೆ ಆಯೂಷ್ ಸ್ವಚ್ಛ ಮೀರತ್ ಆಂದೋಲನವನ್ನು ಪ್ರಾರಂಭಿಸಿದರು. ಘನತ್ಯಾಜ್ಯ ನಿರ್ವಣೆಯ ನಿಯಮ 2016 ರ ಪ್ರಕಾರ ಅವರಿಬ್ಬರೂ ಸೇರಿ ಒಂದು ಯೋಜನೆಯನ್ನು ರೂಪಿಸಿದರು.


ಮನೆಯ ಬಾಗಿಲಿಗೆ ಹೋಗಿ ಘನತ್ಯಾಜ್ಯವನ್ನು ಸಂಗ್ರಹಿಸುತ್ತಿರುವುದು


ವಾಸದ ಕಾಲೋನಿಗಳಿಗೆ ಹೋಗಿ ಅಲ್ಲಿನ ನಿವಾಸಿಗಳೊಂದಿಗೆ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬಗ್ಗೆ ಆಯೂಷ್ ಚರ್ಚಿಸಿದರು. ಸಾಕಷ್ಟು ಸಂಶೋಧನೆಗಳ ನಂತರ ಅವರು ಎಲ್ಲಾ ಚಿಂದಿ ಆಯುವವರನ್ನು ಭೇಟಿ ಮಾಡಿ ಅವರಿಗೆ ಉತ್ತಮ ಸಂಬಳ ಮತ್ತು ಉತ್ತಮ ಕೆಲಸದ ವಾತಾವರಣದ ನಿರ್ಮಿಸುವಿಕೆಯ ಭರವಸೆಯೊಂದಿಗೆ ಅವರನ್ನು ಘನತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಲು ನಿರ್ಧರಿಸಿದರು.


ಕಾಂಪೋಸ್ಟ್ ಗೊಬ್ಬರ ತಯಾರಿಸುವಲ್ಲಿ ನಿರತರಾಗಿರುವ ಚಿಂದಿ ಆಯುವವರು

ಈ ಒಂದು ಯೋಜನೆಯು ಬಹಳಷ್ಟು ಪರಿಣಾಮಕಾರಿಯಾಯಿತಲ್ಲದೆ ಬಳಕೆದಾರರು ಸಣ್ಣ ಮೊತ್ತದ ಸೇವಾಶುಲ್ಕವನ್ನು ನೀಡುತಿದ್ದುದರಿಂದ ಸಂಪೂರ್ಣ ಯೋಜನೆಯು ಯಾವುದೇ ಹಣಕಾಸಿನ ಬೇಡಿಕೆಯಿಲ್ಲದೆ ಸ್ವತಂತ್ರವಾಗಿ ನಡೆಯತೊಡಗಿತು. ಮೆಲಫೋರ್ಢ ಸಿಟಿ ಮತ್ತು ಎಟುಜಡ್ ಅಪಾರ್ಟಮೆಂಟುಗಳು ಅವರ ಸ್ಥಳದಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಜಾಗ ನೀಡಲು ಒಪ್ಪಿಕೊಂಡರು. ಮೊದಲ ಹಂತದ ವೆಚ್ಚಕ್ಕಾಗಿ ಆಯೂಷ್ 55,000 ರೂಪಾಯಿಗಳನ್ನು ತಾವೇ ತೊಡಗಿಸಿದರು.

ಶೂನ್ಯ-ತ್ಯಾಜ್ಯ ಸೃಷ್ಟಿಯ ಮಾದರಿ

ಆಯೂಷರ ಸ್ವಚ್ಛ ಮೀರತ್ ಮಾದರಿಯು ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸುವ ಸರಳ ವಿಧಾನವನ್ನು ಒಳಗೊಂಡಿದೆ. ಮೂಲದಲ್ಲಿ ತ್ಯಾಜ್ಯವು ಬೇರ್ಪಡೆಯಾಗುವುದರಿಂದ ಹಸಿಕಸವು ನೇರವಾಗಿ ಕಾಂಪೋಸ್ಟ್ ತಯಾರಿಸಲು ಬಳಕೆಯಾಗುತ್ತದೆ ಮತ್ತು ಒಣಕಸವನ್ನು ಮರುಬಳಕೆ ಘಟಕಗಳಿಗೆ ಮುಂದಿನ ಪರಿಷ್ಕರಣೆಗಾಗಿ ಕಳುಹಿಸಲಾಗುತ್ತದೆ.


ಚಿಂದಿ ಆಯುವವರು ಸ್ವಚ್ಛ ಮೀರತ್ ಆಂದೋಲನದ ಭಾಗವಾಗಿ ಕೆಲಸ ಮಾಡುತ್ತಿರುವುದು


“ಪ್ರತಿ ತಿಂಗಳು ಮನೆಯೊಂದರಿಂದ 85 ರೂಪಾಯಿಗಳ ಸೇವಾಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದು ನಿರ್ವಹಣಾ ವೆಚ್ಚ ಮತ್ತು ಸಂಬಳ ನೀಡಲು ಸಾಕಾಗುವುದರಿಂದ ಈ ಯೋಜನೆಯು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಪದ್ಧತಿಯು ಸಂಪೂರ್ಣವಾಗಿ ನಾಗರೀಕರಿಂದ ನಡೆಸಲ್ಪಡುತ್ತಿದೆ. ಸರ್ಕಾರ ಅಥವಾ ಇನ್ನಿತರ ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಬಿತವಾಗಿಲ್ಲ” ಎಂಬುದನ್ನು ಆಯೂಷ್ ದೃಢಪಡಿಸುತ್ತಾರೆ.

ಬದಲಾವಣೆಗೆ ಬೇಕಾಗಿರುವ ಅವಶ್ಯಕ ಪದ್ದತಿ

ಈ ಯೋಜನೆ ಜಾರಿಗೆ ಬಂದ ಮೇಲೆ 12,000 ಕೆ. ಜಿ. ಹಸಿಕಸ ಮತ್ತು 41,000 ಕೆ. ಜಿ. ಒಣಕಸವನ್ನು ಸ್ವಚ್ಛ ಮೀರತ್ ಆಂದೋಲನದ ಅಡಿಯಲ್ಲಿ ಸಂಗ್ರಹಿಸಲಾಗಿದೆ. ಈ ಯೋಜನೆಯಿಂದ ತಯಾರಿಸಲ್ಪಡುವ ಕಾಂಪೋಸ್ಟ್ ಗೊಬ್ಬರವನ್ನು ವಾಸದ ಕಾಲೋನಿಗಳಲ್ಲಿ ಗಿಡ ಬೆಳೆಸಲು ಉಪಯೋಗಿಸಲಾಗುತ್ತಿದೆ.


“ಇಲ್ಲಿಯವರೆಗೆ 2800 ಗಿಡಗಳನ್ನು ನೆಟ್ಟು ಕಾಂಪೋಸ್ಟ್ ಗೊಬ್ಬರವನ್ನು ಅವುಗಳಿಗೆ ಹಾಕಲಾಗಿದೆ. ಇದು ಹಸಿರುಮನೆ ಪರಿಣಾಮವನ್ನು ಕಡಿಮೆಗೊಳಿಸುವುದಲ್ಲದೇ ಹವಾಮಾನ ಬದಲಾವಣೆಯ ಅಡ್ಡ ಪರಿಣಾಮವನ್ನು ತಡೆಯುತ್ತದೆ.


ಇದಲ್ಲದೇ ನಾಗರಿಕರಿಗೆ ಉತ್ತಮ ಆರೋಗ್ಯ ಮತ್ತು ಹಸಿರಾದ ಸ್ವಚ್ಛ ವಾತಾವರಣವನ್ನು ಈ ಯೋಜನೆಯಿಂದ ಪಡೆಯಬಹುದಾಗಿದೆ.” ಎಂದು ಆಯೂಷ್ ಹೇಳುತ್ತಾರೆ.


ಸ್ವಚ್ಚ ಮೀರತ್ ಆಂದೋಲನದ ಭಾಗವಾಗಿರುವ ಚಿಂದಿ ಆಯುವವರೊಂದಿಗೆ ಆಯೂಷ್


ಎಟುಜಡ್ ಡೆವೆಲಪರ್ಸ್ ನ ನಿರ್ದೇಶಕರಾದ ಅರ್ಜುನ್ ಸಿಂಗ್ ಹೀಗೆ ಹೇಳುತ್ತಾರೆ,


ಸ್ವಚ್ಛ ಮೀರತ್ ಆಂದೋಲನವು ಬಹಳಷ್ಟು ಪರಿಣಾಮಕಾರಿಯಾಗಿದೆ. ನಾವು ಮಾಡಿದ್ದೇನಂದರೆ ಅವರಿಗೆ ಕಾಂಪೋಸ್ಟ್ ತಯಾರಿಸಲು ಸ್ಥಳ ಮತ್ತು ಒಣಕಸವನ್ನು ಸಂಗ್ರಹಿಸುವ ಸ್ಥಳವನ್ನು ನೀಡಿದೆವು. ಇವತ್ತು ನಾವು ತುಂಬಾ ಪ್ರಯೋಜನಗಳನ್ನು ಪಡೆದಿದ್ದೇವೆ. ನೀರನ್ನು ಉಳಿತಾಯ ಮಾಡುವುದು, ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಗಿಡಗಳನ್ನು ಬೆಳೆಸುವುದು ಈ ಯೋಜನೆಯಿಂದ ಸಾಧ್ಯವಾಗಿದೆ. ಈ ಯೋಜನೆಗಳು ಇನ್ನಿತರ ವಾಸದ ಕಾಲೋನಿಗಳಲ್ಲಿ ಅನುಷ್ಠಾನಗೊಂಡರೆ ಇಡೀ ದೇಶವು ಕಸಮುಕ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.”


ಆಯೂಷ್, ಸ್ವಚ್ಛ ಮೀರತ್ ಆಂದೋಲನದಂತೆ ಇಡೀ ದೇಶವನ್ನು ಕಸಮುಕ್ತ ಮಾಡುವ ಆಂದೋಲನವನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.