ಆವೃತ್ತಿಗಳು
Kannada

ಮೊಹಮ್ಮದ್​ ಆಲಿ... ಮತ್ತೆ ಹುಟ್ಟಿ ಬಾ..!

ಟೀಮ್​ ವೈ.ಎಸ್​. ಕನ್ನಡ

19th Jun 2016
Add to
Shares
1
Comments
Share This
Add to
Shares
1
Comments
Share

ಸಿಂಹ ಯಾವತ್ತಿದ್ರೂ, ಎಲ್ಲಿದ್ರೂ ಸಿಂಹವೇ..ಎದೆಯುಬ್ಬಿಸಿ ಮುನ್ನಡೆದ್ರೆ ಎದುರಾಳಿ ಒಂದು ಕ್ಷಣ ಯೋಚನೆ ಮಾಡ್ಲೇ ಬೇಕು.. ಹಿಂದೆ ತಿರುಗಿ ನೋಡಿದ್ರೆ ಸಿಂಹವಾಲೋಕನ. ಬದುಕು ಎಂತಹ ಸ್ಥಿತಿಗೆ ಬೇಕಾದ್ರೂ ತಲುಪಬಹುದು.. ಆದ್ರೆ ಹಿಂದಿನ ಹಜ್ಜೆ ಗುರುತು ಶಾಶ್ವತ. ಸೋಲು ಅನ್ನೋದೇ ಭಯ ಬಿದ್ದು ಓಡ್ತಾ ಇತ್ತು. ಬಾಕ್ಸಿಂಗ್ ರಿಂಗ್ಗೆ ಇಳಿದ್ರೆ ಸಾಕು. ಗೆಲುವು ಈತನದ್ದೇ ಆಗಿತ್ತು. ಎದುರಾಳಿ ಯಾರು ಅನ್ನೋದು ಯಾವತ್ತೂ ಇಂಪಾರ್ಟೆಂಟ್ ಆಗಿರ್ಲಿಲ್ಲ.. ಹೇಗೆ ಗೆದ್ರು ಅನ್ನೋದು ಮಾತ್ರ ಸುದ್ದಿಯಾಗ್ತಿತ್ತು. ಅಂತರ ಎಷ್ಟು ಅನ್ನೋದು ಚರ್ಚೆ ಆಗ್ತಿತ್ತು. ಹಾಗಿತ್ತು ಆತನ ತಾಕತ್ತು..

ಕ್ರಿಕೆಟ್​ಗೆ ಒಬ್ಬನೇ ಡಾನ್ ಬ್ರಾಡ್ಮನ್. ಭಾರತಕ್ಕೆ ಒಬ್ಬನೇ ಸಚಿನ್ ತೆಂಡುಲ್ಕರ್. ಹಾಕಿಯಲ್ಲಿ ಧ್ಯಾನ್​ಚಂದ್​ಗಿಂತ ಶ್ರೇಷ್ಠ ಯಾರೂ ಇಲ್ಲ. ಮುರಳೀಧರನ್ ಸ್ಪಿನ್ ಮುಂದೆ ಯಾರ ಹೆಸರೂ ಕೂಡ ನಿಲ್ಲೋದಿಲ್ಲ. ಹಾಗೇ ಬಾಕ್ಸಿಂಗ್ ಎಂದಾಗ ಒಂದೇ ಒಂದು ಹೆಸರು ನೆನಪಿಗೆ ಬರೋದು. ಅದೇ ಮೊಹಮ್ಮದ್ ಆಲಿ..

ಅಂದಹಾಗೇ, ಮೊಹಮ್ಮದ್ ಆಲಿ ಅಂದ ತಕ್ಷಣನೆನಪಿಗೆ ಬರೋದು ಅಜಾನುಬಾಹು ದೇಹ. ಸುಮಾರು ಆರಡಿ ಮೂರಿಂಚು ಎತ್ತರದ ದೈತ್ಯ ದೇಹಿ. ಕತ್ತೆತ್ತಿ ಒಂದ್ಸಾರಿ ನೋಡಿದ್ರೆ ಸಾಕು. ಎದುರಾಳಿಯ ಎದೆ ಝಲ್ ಎನ್ತಾ ಇತ್ತು. ಬಾಕ್ಸಿಂಗ್ ರಿಂಗ್​ನಲ್ಲಿ ಮೊಹಮ್ಮದ್ ಆಲಿ ಇದ್ರಂತೂ ಮುಗಿದೇ ಹೋಯಿತು. ಆಟಕ್ಕೆ ಮುಂಚೆಯೇ ಎದುರಾಳಿ ಸೋಲೊಪ್ಪಿಕೊಳ್ಳುವ ಸ್ಥಿತಿ ಎದುರಾಗಿತ್ತು.

ಮೊಹಮ್ಮದ್ ಆಲಿ, ಅನ್ನೋದು ಬಾಕ್ಸಿಂಗ್ ದೇವರ ಹುಟ್ಟು ಹೆಸರಲ್ಲ. 1942, ಜನವರಿ 17ರಂದು ಈ ಬಾಕ್ಸಿಂಗ್ ದಂತಕಥೆ ಕ್ರೈಸ್ತ ಧರ್ಮವನ್ನು ಬೋಧಿಸ್ತಾ ಇದ್ದ ಕುಟುಂಬದಲ್ಲಿ ಹುಟ್ಟಿದ್ರು. ಹೀಗಾಗಿ ಆಲಿಯ ಮೊದಲ ಹೆಸರು ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ. ಆದ್ರೆ ಅದೇನಾಯಿತೋ ಗೊತ್ತಿಲ್ಲ. ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ ನಿಧಾನವಾಗಿ ಇಸ್ಲಾಂ ಧರ್ಮದ ತತ್ವಗಳ ಕಡೆಗೆ ವಾಲಿದ್ದರು. ಅಷ್ಟೇ ಅಲ್ಲ 1975ರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ರು. ಕೆಸಿಯಸ್ ಮಾರ್ಸೆಲಸ್ ಕ್ಲೇ ಮೊಹಮ್ಮದ್ ಆಲಿಯಾಗಿ ಬದಲಾದ್ರು. ಬಾಕ್ಸಿಂಗ್ ರಿಂಗ್​ನಲ್ಲಿ ಮೊಹಮ್ಮದ್ ಆಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ತನ್ನ 22ನೇ ವಯಸ್ಸಿನಲ್ಲಿ. ಅದೂ ಕೂಡ 1964ರ ವಿಶ್ವಚಾಂಪಿಯನ್​ಶಿಪ್​​ ಕದನದಲ್ಲಿ. ಅಲ್ಲಿ ತನಕ ಬಾಕ್ಸಿಂಗ್ ರಿಂಗ್​ನ್ನು ಟ್ಯಾನಿ ಹಸ್ಸೆಕರ್, ಹೆನ್ರಿ ಕೂಪರ್ ಮತ್ತು ಜಿಮ್ಮಿ ರಾಬಿನ್ಸನ್ ಆಳ್ತಾ ಇದ್ರು. ಆದ್ರೆ ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ ಅಲಿಯಾಸ್ ಮೊಹಮ್ಮದ್ ಆಲಿಯ ಎಂಟ್ರಿ ಬಾಕ್ಸಿಂಗ್ ಇತಿಹಾಸವನ್ನೇ ಬದಲಿಸಿ ಬಿಟ್ಟಿತು. ಮೊದಲ ಯತ್ನದಲ್ಲೇ ಹೆವ್ಹಿವೇಯ್ಟ್ ವಿಭಾಗದ ಹೊಸ ವಿಶ್ವ ಚಾಂಪಿಯನ್ನ ಉದಯವಾಗಿತ್ತು.

61 ಪಂದ್ಯಗಳ ಪೈಕಿ ಸೋತಿದ್ದು ಕೇವಲ 5 ಮ್ಯಾಚ್

ಅಷ್ಟಕ್ಕೂ ಮೊಹಮ್ಮದ್ ಆಲಿ ತಾಕತ್ತಿನ ಬಗ್ಗೆ ಏನು ಹೇಳಿದ್ರೂ ಕಡಿಮೆನೇ. ಆದ್ರೆ ಆಲಿ ಗೆದ್ದ ಪಂದ್ಯಗಳನ್ನು ಲೆಕ್ಕ ಹಾಕಿದ್ರೆ ಯಾರೂ ಕೂಡ ಒಂದ್ಸಾರಿ ಎದ್ದು ನಿಂತು ಸಲಾಂ ಹೊಡ್ದೇ ಹೊಡಿತಾರೆ. ಯಾಕಂದ್ರೆ ಆವತ್ತಿನ ಕಾಲಕ್ಕೆ ಆಲಿ ಆಡಿದ್ದು ಬರೋಬ್ಬರಿ 61 ಪಂದ್ಯಗಳನ್ನು. ಆದ್ರೆ ಸೋತಿದ್ದು ಐದೇ ಐದು ಮ್ಯಾಚ್. ಗೆದ್ದ 56 ಪಂದ್ಯಗಳ ಪೈಕಿ ಎದುರಾಳಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದ್ದರು. ಅಚ್ಚರಿ ಅಂದ್ರೆ ಇಂತಹ ಚಾಂಪಿಯನ್ ಆಟಗಾರ ಕೂಡ ವಿವಾದ ಮುಕ್ತನಾಗಿರಲಿಲ್ಲ. ತನಗೆ ಏನು ಬೇಕೋ ಅದನ್ನು ಕ್ಷಣಮಾತ್ರದಲ್ಲಿ ಪಡೆಯುವ ತಾಕತ್ತಿದ್ರೂ ಆಲಿ ಅದನ್ನು ಬಳಸಿಕೊಳ್ತಾ ಇರಲಿಲ್ಲ. ಅಮೆರಿಕಾ ಸೇನೆಗೆ ಸೇವೆ ಸಲ್ಲಿಸುವಂತೆ ಅಪ್ಪಣೆ ಬಂದಿದ್ರೂ ಆಲಿ ಇಸ್ಲಾಂ ಧರ್ಮಕ್ಕೂ ಸೇನೆಯ ಸೇವೆಗೂ ಹೊಂದಾಣಿಕೆ ಆಗುವುದಿಲ್ಲ ಅನ್ನೋ ಕಾರಣಕ್ಕೆ ಅದನ್ನು ತಿರಸ್ಕರಿದ್ದರು. 4 ಬಾರಿ ಮದ್ವೆಯಾಗಿ ಹೊಸ ವಿವಾದವನ್ನು ಸೃಷ್ಟಿಸಿದ್ರು. ಇಷ್ಟಾದ್ರೂ ಮಹಮ್ಮದ್ ಆಲಿ ತನ್ನ 9 ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ. ಆಟಕ್ಕೂ ಮುಂಚೆ ತನ್ನ ಮಕ್ಕಳ ಆಡಿಯೋ ಕೇಳಿಯೇ ಮುಂದಡಿ ಇಡ್ತಾ ಇದ್ರು.

ವಿಶ್ವ ಕಂಡ ಅತಿ ವಿರಳ ಕ್ರೀಡಾಪಟುಗಳಲ್ಲಿ ಆಲಿ ಕೂಡ ಒಬ್ರು . ಆತನಲ್ಲಿದ್ದ ಶಕ್ತಿಗೆ ಎದುರಾಳಿಗಳು ಅದುರಿ ಬೀಳುತ್ತಿದ್ದರು. ಆತ ಬೇಡಿದ್ದು ಆತನ ಕಾಲಿಗೆ ಬಂದು ಎಗರುತ್ತಿತ್ತು. ತನ್ನ ಕ್ರೀಡಾ ಜೀವನದಲ್ಲಿ ಉತ್ತುಂಗದ ಶಿಖರಕ್ಕೇರಿದ ಆಟಗಾರ. ಪ್ರಸಿದ್ಧಿ ಎನ್ನುವುದು ಆತನನ್ನು ಸಹಜವಾಗಿ ಹುಡುಕಿಕೊಂಡು ಬಂದಿತ್ತು. ಹಲವಾರು ಪತ್ನಿಯರು, ಹಲವಾರು ಅಕ್ರಮ ಸಂಬಂಧಗಳು ಆತನನ್ನು ಸುತ್ತುವರಿದುಕೊಂಡಿದ್ದವು. ಇವೆಲ್ಲದರ ನಡುವೆ, ಜಗತ್ತನ್ನು ಇನ್ನೂ ಅನುಭವಿಸಬೇಕು ಎನ್ನೋವಷ್ಟರಲ್ಲೇ ಬಾಕ್ಸರ್ ಅಲಿಗೆ ಅಂಟಿಬಿಟ್ಟಿತ್ತು ಪಾರ್ಕಿನ್ಸನ್ ಅನ್ನೋ ಭಯಾನಕ ಕಾಯಿಲೆ.

ಇದನ್ನು ಓದಿ: "ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!

ಬಾಕ್ಸಿಂಗ್ ದಂತಕಥೆ ಅಲಿಯ ಕಥೆಯನ್ನಾಧರಿಸಿ ಬೇಕಾದಷ್ಟು ಚಿತ್ರಗಳು ಬಂದಿದೆ. ಆದರೆ ಕಳೆದ ಅಕ್ಟೋಬರ್​ನಲ್ಲಿ ಬಿಡುಗಡೆಯಾದ I am ali ಅನ್ನೋ ಡಾಕ್ಯುಮೆಂಟರಿ ವಿಶೇಷವಾದದ್ದು. ಕ್ಲಾರ್ ಲೂಹಿನ್ ನಿರ್ದೇಶನದ ಈ ಚಿತ್ರದಲ್ಲಿ ಅಲಿಯ ಬಗ್ಗೆ ಪ್ರಪಂಚಕ್ಕೆ ಗೊತ್ತಿರದ ವಿಷಯಗಳೇನೂ ಇಲ್ಲ. ಆದ್ರೆ ಅದರಲ್ಲಿ ಅಲಿಯ ಒರಿಜಿನಲ್ ಧ್ವನಿಮುದ್ರಿಕೆಯನ್ನು ಉಪಯೋಗಿಸಿ ಡಾಕ್ಯುಮೆಂಟರಿ ಮಾಡಲಾಗಿದೆ. ಅಲಿಯ ಮಕ್ಕಳಾದ ಮರಿಯಮ್ ಅಲಿ, ಹಾನಾ ಅಲಿ, ಯಂಗ್ ಅಲಿ ಖುದ್ದಾಗಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಅಲಿಯ ಬಹಳ ಕಾಲದ ಮ್ಯಾನೇಜರ್ ಜೇನ್ ಕೆಲ್ರೋಯ್ ಅಲಿಯ ಅಪರೂಪದ ಚಿತ್ರಣ ಬಿಚ್ಚಿಟ್ಟಾರೆ. ಈ ಚಿತ್ರದ ಬಿಡುಗಡೆಗೆ ಮೊಹಮ್ಮದ್ ಅಲಿ ಬಂದಿರಲಿಲ್ಲ. ಆಗಲೇ ಅವರ ಚಿಂತಾಜನಕ ಆರೋಗ್ಯದ ಸ್ಥಿತಿ ಬಗ್ಗೆ ಹೊರ ಜಗತ್ತಿನ ಗಮನಕ್ಕೆ ಬಂದಿದ್ದು. 73 ವರ್ಷದ ಅಲಿ ಕಳೆದ 25 ವರ್ಷಗಳಿಂದ ಪಾರ್ಕಿನ್ಸನ್ ರೋಗದಿಂದ ಬಳಲುದ್ದರು. ಮೊನ್ನೆ ಮೊನ್ನೆ ಇಹಲೋಕ ತ್ಯಜಿಸಿ, ಅಭಿಮಾನಿಗಳ ಕಣ್ಣಲ್ಲಿ ನೀರು ಹರಿಸಿದ್ದರು ಈ ಗ್ರೇಟ್ ಬಾಕ್ಸರ್.

ಆಲಿಯ ಕಥೆಗೆ ಮರುಗಿದ ಪ್ರಪಂಚ

ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಲಿ ಮನೆಯಿಂದ ಹೊರಗೆ ತೆರಳಿದಾಗ ಸದಾ ತಮ್ಮ ಹೋಟೆಲ್‌ನಿಂದ ಒಂಬತ್ತು ಮಕ್ಕಳಲ್ಲಿ ಒಬ್ಬರಿಗೆ ಫೋನ್ ಕರೆ ಮಾಡುತ್ತಿದ್ದರು. ಕರೆ ಮಾಡಿದಾಗ ಮಾತನಾಡಿದ್ದನ್ನು ಸ್ಪೂಲ್‌ರೀಲ್ ಟೇಪ್-ಮಷಿನ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದರು. Ali’s ಆಡಿಯೋ ಡೈರಿ ಎಂದೇ ಹೆಸರಾಗಿರುವ ಇದನ್ನು ಅಲಿ ಕುರಿತ ಚಲನಚಿತ್ರ ನಿರ್ಮಿಸಲು ಪ್ರಮುಖ ಮೂಲವನ್ನಾಗಿ ಬಳಸಿಕೊಳ್ಳಲಾಗಿದೆ. ಅಲಿ ಜೀವನದ ಹಲವಾರು ಮಗ್ಗಲುಗಳ ಬಗ್ಗೆ ಕತೆ ಹೇಳಲು ಆಡಿಯೋ ಡೈರಿ ಸಾಕ್ಷಿಯಾಗಿದೆ. ಪಾರ್ಕಿನ್ಸನ್ ನಿಂದ ಬಳಲತೊಡಗಿದ ನಂತರ ಮೊಹಮದ್ ಅಲಿ 38 ವರ್ಷದ ತಮ್ಮ ಪುತ್ರಿಗೆ ಹಾನಾಗೆ ಮನೆಯ ಎಲ್ಲ ಜವಾಬ್ದಾರಿಯನ್ನು ಒಪ್ಪಿಸಿದ್ದರು. ಆಕೆಯೇ ಮೊಹಮ್ಮದ್ ಆಲಿಯ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು.

ತಂದೆಯ ದಾಖಲೆಯನ್ನೇ ಮುರಿದ ಲೇಡಿ ಟೈಗರ್

ಐ ಆ್ಯಮ್ ಅಲಿ ಚಿತ್ರದ ಟ್ಯಾಗ್ಲೈನ್ ‘ಫೈಟರ್, ಬ್ರದರ್, ಲವರ್, ಫಾದರ್’. ಅದಕ್ಕೆ ತಕ್ಕನಾಗಿಯೇ ಅಲಿ ಬದುಕಿಬಿಟ್ಟಿದ್ದರು. ತನ್ನ ಸ್ಥಾನ ಮಾನ, ಅಂತಸ್ತು, ಹೆಸರು ಯಾವುದಕ್ಕೂ ಕೇರ್ ಮಾಡಲೇ ಇಲ್ಲ. ಜೀವನದಲ್ಲಿ ಮೂರು ಕಹಿಯಾದ ವಿಚ್ಛೇದನಗಳು, ಸರಣಿ ಅಕ್ರಮ ಸಂಬಂಧಗಳು, ಇಬ್ಬರು ಅನೈತಿಕ ಪುತ್ರಿಯರು ಸೇರಿದಂತೆ, ಅಲಿ ಅವರೇ ನಮ್ಮ ತಂದೆ ಎಂದು ರುಜುವಾತುಪಡಿಸಿದ ಇತರ ಮಕ್ಕಳ ಪೋಷಣೆ.. ಹೀಗೆ ಅನೇಕ ಗಾಸಿಪ್ ಮತ್ತು ಬಾಕ್ಸಿಂಗ್ ದಂತಕಥೆಗಳಿಂದ ಅಲಿ ಸದಾ ಸುದ್ದಿಯಲ್ಲಿರುತ್ತಿದ್ದರು. ಹಾಗೆಯೇ ಅಪ್ಪನ ಹೆಸರು ಉಳಿಸಿದ್ದು ಲೈಲಾ ಅಲಿ. ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಲೈಲಾಗೆ ಅಪ್ಪನೇ ಸ್ಫೂರ್ತಿ. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಬೆರೆತ ಬಾಕ್ಸರ್ ಕಮ್ ಆ್ಯಂಕರ್. 1999ರಲ್ಲಿ ಬಾಕ್ಸಿಂಗ್ ಅಖಾಡಕ್ಕಿಳಿದ ಲೈಲಾ ವುಮನ್ಸ್ ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಣಿಯಂತೆ ಮೆರೆದರು. ಆಡಿದ 24 ಮ್ಯಾಚುಗಳಲ್ಲಿ ಒಂದೇ ಒಂದರಲ್ಲೂ ಸೋಲದೆ 2007ರಲ್ಲಿ ನಿವೃತ್ತಿ ಪಡೆದರು.

ತನ್ನವರನ್ನು ಜೀವದಂತೆ ಪ್ರೀತಿಸುವ ಈ ಲೆಜೆಂಡರಿ ಪ್ಲೇಯರ್ ಮಕ್ಕಳ, ಗೆಳೆಯರ ಆಪ್ತರ ಜೊತೆಗಿನ ಮಾತನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಹವ್ಯಾಸವಿಟ್ಟುಕೊಂಡಿದ್ರು...ಅದಕ್ಕೆ ಅಲಿ ಕೊಟ್ಟ ಕಾರಣ, ಕಣ್ಣಲ್ಲಿ ನೀರಾಡಿಸದೇ ಇರದು.

“ಇತಿಹಾಸ ಬಹಳ ಸುಂದರವಾಗಿದೆ. ಆದರೆ ಜೀವಿಸುವ ಸಮಯದಲ್ಲಿ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.”
- ಮೊಹಮ್ಮದ್ ಆಲಿ, ಆಲಿಯ ಸಂಗ್ರಹದಿಂದ ಆಯ್ದ ಭಾಗ

ಎದುರಾಳಿಗಳ ಮುಷ್ಠಿಗೂ ಸಿಗದೇ ಇದ್ದ ಮೊಹಮ್ಮದ್ ಆಲಿ ಕಂಗೆಟ್ಟಿದ್ದು ಖಾಯಿಲೆಗಳಿಂದ. ತನ್ನ ಆಪ್ತ ವಲಯಕ್ಕೆ ಮಾತ್ರ ಬಾಕ್ಸಿಂಗ್ ದಂತಕಥೆ ನೋವಿನಿಂದ ನರಳ್ತಿದ್ದರು ಅಂತ ಗೊತ್ತಿತ್ತು. ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿಯನ್ನು ಮಕಾಡೆ ಮಲಗಿಸಿದ್ದನ್ನು ನೋಡಿದ್ದರೆ ಮೊಹಮ್ಮದ್ ಆಲಿಯ ಮುಂದೆ ಎಲ್ಲವೂ ಮಂಡಿಯೂರುತ್ತೆ ಅಂತ ಅಂದ್ಕೊಂಡಿದ್ದವ್ರೇ ಹೆಚ್ಚು. ಆದ್ರೆ ವಯಸ್ಸು ಮಾಗಿದಂತೆ ಆಲಿಯ ದೇಹ ಕೂಡ ಸಹಜವಾಗೇ ಮಾಗಿತ್ತು. ಆಗಲೇ ಪರ್ಕಿನ್ಸನ್ ಡಿಸೀಸ್ ಅನ್ನೋ ಮಾರಕ ಖಾಯಿಲೆ ಬೇಡ ಎಂದ್ರೂ ಆಲಿಯ ದೇಹವನ್ನ ಅಪ್ಪಿಕೊಂಡಿತ್ತು. ತನ್ನ ಪಂಚ್​ನಿಂದಲೇ ಎದುರಾಳಿಗೆ ನೋವು ನೀಡ್ತಾ ಇದ್ದ ಬಾಕ್ಸಿಂಗ್ ದಂತಕಥೆ ನೋವಿನ ಮೇಲೆ ನೋವು ನುಂಗಿದ್ದರು. ಪರ್ಕಿನ್ಸನ್ ಡಿಸೀಸ್ ಅದೆಷ್ಟೂ ಕ್ರೂರವಾಗಿತ್ತು ಅಂದ್ರೆ ಮೊಹಮ್ಮದ್ ಆಲಿಯಂತಹ ವಜ್ರದೇಹಿ ಕೂಡ ನಲುಗಿ ಹೋಗಿದ್ದರು. ಮೊಹಮ್ಮದ್ ಆಲಿ ಅನ್ನೋ ಫೈಟರ್​ಗೆ ಹೋರಾಟ ಅನ್ನೋದು ಹೊಸದೇನಲ್ಲ. ಬಾಕ್ಸಿಂಗ್ ರಿಂಗ್​ಗೆ ಇಳಿಯ ಬೇಕಾದ್ರೆ ಅದೆಷ್ಟು ಕಷ್ಟ ಪಟ್ಟಿದ್ರೋ ಅದ್ರ ದುಪ್ಪಟ್ಟು ಕಷ್ಟವನ್ನು ಪರ್ಕಿನ್ಸನ್ ಖಾಯಿಲೆ ಅಂಟಿಕೊಂಡ ಮೇಲೆ ಕಳೆದ 25 ವರ್ಷಗಳಿಂದ ಅನುಭವಿಸಿದ್ದರು.

ಹಾಸಿಗೆಯಲ್ಲಿ ಮಲಗಿದ್ದರೂ ಮೊಹಮ್ಮದ್ ಆಲಿ ಯಾರ ಬಳಿಯೂ ತನ್ನ ನೋವನ್ನು ಹೇಳಿಕೊಂಡಿರಲಿಲ್ಲ, ಮನುಷ್ಯ ಎಷ್ಟೇ ದೊಡ್ಡವನಾದ್ರೂ, ಎಂತಹುದೇ ಸಾಧನೆ ಮಾಡಿದ್ರೂ ಪ್ರಕೃತಿ ಆಡುವ ಆಟದ ಮುಂದೆ ಮಂಕಾಗಲೇಬೇಕು. ಅದಕ್ಕೆ ಸಾಕ್ಷಿ ಬಾಕ್ಸಿಂಗ್ ರಿಂಗ್​ನ ಸೋಲಿಲ್ಲದ ಸರದಾರ ಮೊಹಮ್ಮದ್ ಆಲಿಯೇ. ಆಲಿ ಈಗ ಇಹಲೋಕವನ್ನು ಬಿಟ್ಟಿರಬಹುದು, ಅಲಿ ಆಲಿಯ ನೆನಪುಗಳು ಎಲ್ಲರಿಗೂ ಸ್ಪೂರ್ತಿದಾಯಕ.

ಇದನ್ನು ಓದಿ:

1. ಸೋನು ಹಠಕ್ಕೆ ಸೋಲದವರೇ ಇಲ್ಲ... 

2. ಪ್ರಯೋಗಕ್ಕೆ ಮುನ್ನುಡಿ ಬರೆದ "ಬೊಂಬೆಯಾಟ"

3. ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?

Add to
Shares
1
Comments
Share This
Add to
Shares
1
Comments
Share
Report an issue
Authors

Related Tags