ಆವೃತ್ತಿಗಳು
Kannada

ಪಾವಗಡದಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್​​ ಪಾರ್ಕ್..!

ಉಷಾ ಹರೀಶ್​​

27th Oct 2015
Add to
Shares
0
Comments
Share This
Add to
Shares
0
Comments
Share

ಪಾವಗಡ ಅಂದ್ರೆ ಮೊದಲು ನೆಪಿಗೆ ಬರ್ತಾ ಇದ್ದಿದ್ದೇ ತೋಳ, ರೇಬೀಸ್ ಹಾಗೂ ನಕ್ಸಲ್ ಚಟುವಟಿಕೆಗಳು. ಆದ್ರೆ ಇವತ್ತು ಕರ್ನಾಟಕದ ಮಡಕಶಿರ ಬದಲಾಗುತ್ತಿದೆ. ಎಲ್ಲಾ ಸೌಕರ್ಯಗಳು ಪಾವಗಡಕ್ಕೆ ಸಿಗುತ್ತಿದೆ. ಪಾವಗಡದಲ್ಲಿ ಏಷ್ಯಾದ ಅತಿ ದೊಡ್ಡ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ.

image


ಪಾವಗಡದ ನಗರ ಮಡಿಕೆ, ವಳ್ಳೂರು, ಕ್ಯಾತಗಾನಚೆರ್ಲು, ಬಳ್ಳಸಮುದ್ರ ತಿರುಮಣಿ, ರಾಯಚೆರ್ಲು, ಅಚ್ಚಮ್ಮನಹಳ್ಳಿ ಗ್ರಾಮಗಳ 11,467 ಎಕರೆ 14 ಗುಂಟೆ ಜಮೀನಿನಲ್ಲಿ ಮೆಗಾ ಸೋಲಾರ ಪಾರ್ಕ್ ನಿರ್ಮಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿ ಸಹಭಾಗಿತ್ವದಲ್ಲಿ ಮುಂದಾಗಿದೆ. ಇದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದವರ ತಾಲೂಕಿನ ಅಭಿವೃದ್ಧಿಗೆ ವರದಾಯಕವೆನಿಸಿದೆ.

ಲಾಭವಾಯಿತು ಗರಿಷ್ಠ ಉಷ್ಣಾಂಶ..!

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪಾವಗಡ ತಾಲೂಕಿನಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಹೀಗಾಗಿ ಫ್ಲೋರೈಡ್ ಸಮಸ್ಯೆಯಿಂದ ಜನರು ಬಳಲುತ್ತಿರುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿರುವಂತೆ ಪಾವಗಡದಲ್ಲೂ ಗರಿಷ್ಠ ಉಷ್ಣಾಂಶ ಇರುತ್ತದೆ. ಹಳೇ ಮೈಸೂರು ಭಾಗದಲ್ಲಿ ಈ ರೀತಿ ಉಷ್ಣಾಂಶ ಇರುವ ಏಕೈಕ ಪ್ರದೇಶ ಇದಾಗಿದೆ. ಸಾಮಾನ್ಯ ದಿನಗಳಲ್ಲಿ ತಾಲೂಕಿನಲ್ಲಿ ಸರಿ ಸುಮಾರು ಉಷ್ಣಾಂಶ 29.5 ಡಿಗ್ರಿ ಸೆಲ್ಸಿಯಸ್​​​ನಷ್ಟಿದ್ದರೆ, ಬೇಸಿಗೆಯಲ್ಲಿ 36.9 ಡಿಗ್ರಿ ಸೆಲ್ಸಿಯಸ್​ಗೂ ಮಿಗಿಲಾದ ಗರಿಷ್ಠ ತಾಪಮಾನ ತಾಲೂಕಿನಲ್ಲಿರುತ್ತದೆ.

image


ಕೇವಲ ಮಳೆಯನ್ನಷ್ಟೇ ನಂಬಿ ಇಲ್ಲಿನ ಜನ ಶೇಂಗಾ ಬೆಳೆಯುತ್ತಾರೆ. ಮುಂಗಾರು ಕೈಕೊಟ್ಟರೆ ಕನಿಷ್ಠ ಮೇವು ಸಹ ಇವರ ಜಮೀನಿನಲ್ಲಿ ಬೆಳೆಯುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯ ಸರಕಾರ ತನ್ನ ಸೌರ ವಿದ್ಯುತ್ ನೀತಿ 2014-2021ರ ಅನ್ವಯ ಬಂಜರು ಮತ್ತು ಅನುಪಯುಕ್ತ ಭೂಮಿಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ಸೋಲಾರ್​​​ಪಾರ್ಕ್ ಸ್ಥಾಪಿಸಲು ಮುಂದಾಗಿದೆ. ಪಾವಗಡ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿಕೊಂಡು ಮೆಗಾ ಸೋಲಾರ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಿದೆ. ಗಡಿ ತಾಲೂಕಿಗೆ ಸೋಲಾರ್​​ ಪಾರ್ಕ್​ ಮಂಜೂರು ಮಾಡಿಸುವುದಕ್ಕೆ ತಾಲೂಕಿನ ಮೂಲದವರೇ ಆದ ಆಡಳಿತ ಪಕ್ಷದ ಎಂಎಲ್​ಸಿ ಉಗ್ರಪ್ಪ ಶ್ರಮಿಸಿದ್ದು, ಶಾಸಕ ತಿಮ್ಮರಾಯಪ್ಪ, ಮಾಜಿ ಸಚಿವ ವೆಂಕಟರಮಣಪ್ಪ ಸೇರಿ ಪಕ್ಷಾತೀತವಾಗಿ ಮುಖಂಡರು ಸಾಥ್ ನೀಡಿರುವುದು ಅಭಿವೃದ್ಧಿಗೆ ಸಹಕಾರಿ ಎನಿಸಿದೆ.

ಸರಕಾರಿ ಸ್ವಾಮ್ಯದ ಕಂಪನಿಯಡಿ ಸೌರವಿದ್ಯುತ್ ಉತ್ಪಾದನೆ

ಸುಮಾರು 11 ಸಾವಿರ ಎಕರೆಯ ಬೃಹತ್ ಪ್ರದೇಶದಲ್ಲಿ 2000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಿ ಪಾವಗಡದಲ್ಲಿ ಸ್ಥಾಪಿಸುತ್ತಿರುವ ಸೋಲಾರ್​​ಪಾರ್ಕ್ ಅನುಷ್ಠಾನಕ್ಕಾಗಿ ಕರ್ನಾಟಕ ಸೋಲಾರ್ ಪವರ್ ಡೆವಲಪ್​​ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಕಂಪನಿ ಕೇಂದ್ರ ಸರಕಾರದ ಮೆಸರ್ಸ್ ಸೋಲರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಜಂಟಿ ಪಾಲುದಾರಿಕೆಯನ್ನು ಹೊಂದಿ ಅವುಗಳ ಅಧೀನಕ್ಕೊಳಪಟ್ಟಿದೆ. ಈ ಕಂಪನಿ ಸೋಲಾರ್ ಪಾರ್ಕ್​ನಲ್ಲಿ ಸುಮಾರು 20 ಸಾವಿರ ಕೋಟಿ ಬಂಡವಾಳ ಹೂಡಿಕೆ ಹೂಡಲಿದ್ದು, 12 ಸಾವಿರ ಕೋಟಿ ಪ್ಯಾನಲ್​​ಗಳಿಗೆ, 8 ಸಾವಿರ ಕೋಟಿ ರೂಪಾಯಿಗಳನ್ನು ಮೂಲ ಸೌಕರ್ಯಗಳಿಗೆ ವಿನಿಯೋಗಿಸಲಿದೆ. 36 ತಿಂಗಳಲ್ಲಿ ಸೌರ ಪಾರ್ಕ್ ಸ್ಥಾಪಿಸುವ ಗುರಿ ಹಾಕಿಕೊಂಡಿದೆ.

image


ಮೊದಲ ಪ್ರಕ್ರಿಯೆಯಾಗಿ ವಾರ್ಷಿಕ ಬಾಡಿಗೆ ನಿಗದಿ

ಸೋಲಾರ್​​ ಪಾರ್ಕ್​ ಸ್ಥಾಪನೆಗಾಗಿ ರೈತರ ಸಾವಿರಾರ ಎಕರೆ ಜಮೀನನ್ನು ಪೂರ್ಣ ಭೂಸ್ವಾಧೀನ ಮಾಡಿಕೊಳ್ಳದೆ ವಾರ್ಷಿಕ ಬಾಡಿಗೆ ಆಧಾರದಲ್ಲಿ 30 ವರ್ಷ ಸೌರ್ ವಿದ್ಯುತ್ ತಯಾರಿಕಾ ಕಂಪನಿ ಹೆಸರಿಗೆ ಗುತ್ತಿಗೆ ಕರಾರನ್ನು ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ. ಪಾರ್ಕ್ ಸ್ಥಾಪನೆಗೆ ಅಗತ್ಯವಾದ 11,467 ಎಕರೆ 14 ಗುಂಟೆ ಭೂಮಿಯನ್ನು ತಾಲೂಕಿನ ನಾಗಲಮಡಿಕೆ ಹೋಬಳಿಯ ವಳ್ಳೂರು, ಕ್ಯಾತಗಾನಚೆರ್ಲು, ಬಳಸಮುದ್ರ, ತಿರುಮಣಿ, ರಾಯಚೆರ್ಲು, ಅಚ್ಚಮ್ಮನಹಳ್ಳಿ ಗ್ರಾಮಗಳಲ್ಲಿ ಈಗಾಗಲೇ ಗುರುತಿಸಿದ್ದು, 1996 ರೈತರು ಭೂಮಿಯನ್ನು ವಾರ್ಷಿಕ 21 ಸಾವಿರ ರೂ. ಬಾಡಿಗೆ ಆಧಾರದಲ್ಲಿ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಈ ಬಾಡಿಗೆ ದರ ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.5ರಂತೆ ಹೆಚ್ಚಳವಾಗಲಿದೆ.

ಒಟ್ಟಾರೆ ಮಳೆ ಕೊರತೆಯಿಂದ ಜಲವಿದ್ಯುತ್ ಘಟಕಗಳು ಸ್ಥಗಿತಗೊಂಡು ವಿದ್ಯುತ್ ಅಭಾವ ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿ ಆಧಾರಿತ ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಹೆಚ್ಚು ಪ್ರಸ್ತುತವೆನಿಸಿದ್ದು, ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸಹ ಸೌರಶಕ್ತಿ ಬಳಕೆಗೆ ಹೆಚ್ಚು ಒತ್ತು ನೀಡಿ ಪಾವಗಡದಲ್ಲಿ ಏಷ್ಯಾದ ದೊಡ್ಡ ಸೋಲಾರ್​​ ಪಾರ್ಕ್ ಸ್ಥಾಪನೆಗೆ ಮುಂದಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೃಷಿ ಬಳಕೆಗೆ ಅವಕಾಶ

ಸುಮಾರು 1,202 ಸಂಖ್ಯೆಯ ಸರ್ವೆ ನಂಬರ್​​ಗಳ ಜಮೀನನ್ನು ರೈತರು ಸೋಲಾರ್​​ ಪಾರ್ಕ್​ಗೆ ಗುತ್ತಿಗೆಯಾಗಿ ನೀಡುತ್ತಿದ್ದು, ಇದಕ್ಕೆ ಪ್ರತಿಯಾಗಿ ವಾರ್ಷಿಕ ಬಾಡಿಗೆಯೊಂದಿಗೆ ತಮ್ಮ ಜಮೀನಿನಲ್ಲಿ ಅಳವಡಿಸುವ ಸೌರ ವಿದ್ಯುತ್ ಘಟಕದಿಂದ ಸೌರ ವಿದ್ಯುತ್ ಅನ್ನು ಜಮೀನಿನ ಕೃಷಿ ಪಂಪ್​​ಸೆಟ್ ಕಾರ್ಯಗಳಿಗೆ ಉಚಿತವಾಗಿ ಬಳಸಿಕೊಳ್ಳುವ ಅವಕಾಶವನ್ನು ಕಂಪನಿ ಮಾಡಿಕೊಡುತ್ತಿದೆ.

image


600 ಎಕರೆಯಲ್ಲಿ ಖಾಸಗಿ ಸೋಲಾರ್ ಪಾರ್ಕ್​ಗೆ ಅಣಿ..!

ಸರಕಾರಿ ಸ್ವಾಮ್ಯದ ಸೋಲಾರ್​​ ಪಾರ್ಕ್ ಸುಮಾರು 11 ಸಾವಿರ ಎಕರೆ ಪ್ರದೇಶದಲ್ಲಿ ನಾಗಲಮಡಿಕೆಯಲ್ಲಿ ಸ್ಥಾಪನೆ ಮಾಡಬೇಕೆಂದಿರುವುದು ಒಂದೆಡೆಯಾದರೆ, ಸನ್ ಎಡಿಷನ್ ಎಂಬ ಖಾಸಗಿ ಕಂಪನಿಯವರು ಸಹ ತಾಲೂಕಿನ ಪಳವಳ್ಳಿ, ತಪ್​​ಗಾನ್​​ದೊಡ್ಡು ಹಾಗೂ ನಾಗಲಮಡಿಕೆಯಲ್ಲಿ ತಲಾ 200 ಎಕರೆಯಲ್ಲಿ ಆದಿತ್ಯ, ಬೀಮ್, ಸೂರ್ಯಶಕ್ತಿ ಎಂಬ ಪ್ರತ್ಯೇಕ ಬ್ರಾಂಡ್ ಗ್ರೂಪ್​​ನಡಿ ಸೌರ ಶಕ್ತಿ ಘಟಕವನ್ನು ತೆರೆಯಲು ಅಗತ್ಯ ಸಿದ್ಧತೆ ನಡೆಸಿದ್ದಾರೆ. ಖಾಸಗಿ ಕಂಪನಿಯವರು ರೈತರಿಂದ ನೇರವಾಗಿ ಜಮೀನು ಖರೀದಿಸಿದ್ದು, ಈ ಜಮೀನು ಖರೀದಿ ವೇಳೆ ಒಂದೇ ಸರ್ವೆ ನಂಬರ್, ಒಂದೇ ಕುಟುಂಬದವರಿಗೆ ಸೇರಿದ ಜಮೀನಿಗೆ ದರ ನಿಗದಿಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ರೈತರದ್ದಾಗಿದೆ. ಈ ಗೊಂದಲದ ನಡುವೆಯೂ ತಲಾ 30 ಮೆಗಾವ್ಯಾಟ್ ಉತ್ಪಾದನೆಯ ಖಾಸಗಿ ಸೋಲಾರ್ ಘಟಕ ನಿರ್ಮಾಣ, ಪ್ಯಾನಲ್ ಅಳವಡಿಕೆಗೆ ಅಗತ್ಯ ಸಿವಿಲ್ ಕಾಮಗಾರಿಗಳು ಶುರುವಾಗಿವೆ. ಸ್ಥಳೀಯರನ್ನೇ ಘಟಕ ನಿರ್ಮಾಣಕ್ಕಾಗಿ ಉದ್ಯೋಗಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags