ಸಾರ್ವಜಿನಿಕ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿ ಕೈಗೊಂಡ ಕ್ರಮಕ್ಕೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ

ಇತ್ತೀಚಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಗಟ್ಟುವುದಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ‌ ಕನ್ನಡಿಗಳನ್ನು ಅಳವಡಿಸುವ ಮೂಲಕ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿತ್ತು‌.

ಸಾರ್ವಜಿನಿಕ ಮೂತ್ರ ವಿಸರ್ಜನೆ ತಡೆಯಲು ಬಿಬಿಎಂಪಿ ಕೈಗೊಂಡ ಕ್ರಮಕ್ಕೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ

Wednesday January 22, 2020,

2 min Read

ಸ್ವಚ್ಛ ಸರ್ವೇಕ್ಷಣ 2020ರ ಅಂಗವಾಗಿ ಎಲ್ಲ ಪ್ರಮುಖ ನಗರಗಳಲ್ಲಿ, ಎಲ್ಲ ಬೀದಿಗಳು, ಸ್ವಚ್ಛವಾಗಿ ಗೋಚರಿಸುತ್ತಿವೆ. ಹಾಗೆಯೇ ಬೆಂಗಳೂರು ನಗರದಲ್ಲಿಯೂ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವುದಕ್ಕಾಗಿ ಅನೇಕ ಯೋಜನೆಗಳನ್ನು ತಂದಿದೆ.


ಚರ್ಚ್ ಸ್ಟ್ರೀಟ್ ಬಳಿಯಲ್ಲಿ ಸ್ಥಾಪಿಸಲಾದ ಕನ್ನಡಿ (ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)


ಅದರಲ್ಲಿಯೂ ಮುಕ್ತ ಮಲವಿಸರ್ಜನೆಯನ್ನು ತಡೆಯುವುದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆಯನ್ನು ನಿಲ್ಲಿಸುವುದಕ್ಕಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡಿಗಳನ್ನು‌ ಅಳವಡಿಸಿತ್ತು. ಈ ಮೂಲಕ ಸಾರ್ವಜನಿಕರಿಗೆ "ಕನ್ನಡಿ" ಹಿಡಿಯುವ ಪ್ರಯತ್ನವನ್ನು ಮಾಡಿತ್ತು.


ನಗರದ ಪ್ರಮುಖ ಸ್ಥಳಗಳಾದ ಕೆ. ಆರ್. ಮಾರುಕಟ್ಟೆ, ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್, ಚರ್ಚ್ ಸ್ಟ್ರೀಟ್, ಕ್ವೀನ್ಸ್ ರೋಡ್‌ನಲ್ಲಿರುವ ಇಂಡಿಯನ್ ಎಕ್ಸ್‌ಪ್ರೆಸ್‌ ಸರ್ಕಲ್ ಮತ್ತು ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಬಳಿ 8*4 ಅಡಿಯ ಕನ್ನಡಿಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಇದರಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಹತ್ತಿರದಲ್ಲಿರುವ ಶೌಚಾಲಯಗಳನ್ನು ಹುಡುಕಬಹುದು.


ಈ ಪ್ರಕ್ರಿಯೆಯ ಹಿಂದಿನ ಕೆಲಸವನ್ನು ತೋರಿಸುವಂತಹ ವಿಡಿಯೋ ಒಂದನ್ನು ಐಎಎಸ್‌ ಬಿ. ಎಚ್.‌ ಅನಿಲ ಕುಮಾರ್ ಅವರು ಟ್ವಿಟ್‌ ಮಾಡಿದ್ದರು.

ಈ ಯೋಜನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೊಂದಿಷ್ಟು ಜನರು ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಬೇಕಿತ್ತಾ ಎಂಬಂತೆಯೂ ಪ್ರತಿಕ್ರಿಯಿಸಿದ್ದಾರೆ.


ಇದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿ ಜನತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ಕೆಲವರು ಈ ಮೂಲಕವಾದರೂ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವವರು ಕಡಿಮೆಯಾಗಬಹುದು ಎಂದರೆ, ಇನ್ನೊಂದಿಷ್ಟು ಜನ ಇದರ ಬದಲು ಇನ್ನಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಬಹುದಾಗಿತ್ತೆಂದು ಎಂದಿದ್ದಾರೆ.


"ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು, ಒಳ್ಳೆಯ ಉಪಕ್ರಮವಾಗಿದೆ. ಆದರೆ ಸಾಕಷ್ಟು ಶೌಚಾಲಯಗಳು ಲಭ್ಯವಿದೆಯೇ ಎಂಬುದನ್ನು ಗಮನಿಸಿ. ಬೆಂಗಳೂರು ನಗರದ ಜನಸಂಖ್ಯೆಗೆ ಹೋಲಿಸಿದರೆ ಸಾಕಷ್ಟು ಶೌಚಾಲಯಗಳು ಲಭ್ಯವಿಲ್ಲ. ಸಮಸ್ಯೆಯ ಮೂಲ ಕಾರಣವನ್ನು ಗಮನಿಸಿ, ಸರಿಪಡಿಸಬೇಕಾಗಿದೆ" ಎಂದು ಸಂತೋಷ ಕುಮಾರ್ ಎಂಬುವವರು ಟ್ವಿಟ್ ಮಾಡಿದ್ದಾರೆ.

ಹಾಗೇ ಸತಿ ದಾಸ್ ಎಂಬುವವರು, ಸಾರ್ವಜನಿಕ ಶೌಚಾಲಯಗಳಲ್ಲಿ‌ ಹಣ ಸುಲಿಗೆ ಮಾಡುವುದರ ಕುರಿತು ಬಿಬಿಎಂಪಿಯ ಗಮನ ಸೆಳೆದಿದ್ದಾರೆ.

ಇನ್ನೂ ಕೆಲವೊಂದಿಷ್ಟು ಜನರು ಈ ಯೋಜನೆಯ ಕುರಿತಾಗಿ ಅಪಹಾಸ್ಯ ಮಾಡಿದ್ದು, ಇದರ ಬದಲು ಇನ್ನೊಂದಿಷ್ಟು ಶೌಚಾಲಯ ಕಟ್ಟಿಸಬೇಕಿತ್ತು. ಕ್ಯೂಆರ್ ಸ್ಕ್ಯಾನ್ ಮಾಡುವುದು, ಹುಡುಕುವುದು ಇನ್ನೊಂದು ರಗಳೆ ಎಂದಿದ್ದಾರೆ‌.

ಒಟ್ಟಾರೆ, ಬಿಬಿಎಂಪಿಯ ಈ ಉಪಕ್ರಮವು ಎಲ್ಲರ ಗಮನ ಸೆಳೆಯುವುತ್ತಿರುವದಂತೂ ಸುಳ್ಳಲ್ಲ.