ಪುಸ್ತಕ ವಿತರಣೆ, ರಕ್ತದಾನ ಶಿಬಿರ ಏರ್ಪಡಿಸಿ ಮದುವೆ ಮಾಡಿಕೊಂಡ ಬಂಗಾಳದ ಶಾಲಾ ಶಿಕ್ಷಕಿ

ಮದುವೆಯಲ್ಲಿ ನೆರೆಹೊರೆಯವರು ಮತ್ತು ಸಂಬಂಧಿಕರು ಸೇರಿದಂತೆ ಕನಿಷ್ಠ 32 ಜನರು ರಕ್ತದಾನ ಮಾಡಿದ್ದಾರೆ.

ಪುಸ್ತಕ ವಿತರಣೆ, ರಕ್ತದಾನ ಶಿಬಿರ ಏರ್ಪಡಿಸಿ ಮದುವೆ ಮಾಡಿಕೊಂಡ ಬಂಗಾಳದ ಶಾಲಾ ಶಿಕ್ಷಕಿ

Wednesday September 23, 2020,

1 min Read

ಮದುವೆಯಲ್ಲಿ ಅದ್ಧೂರಿ ಕಾರ್ಯಕ್ರಮವಿಲ್ಲ, ಒಣ ಆಡಂಬರವಿಲ್ಲ- ನೂರ್‌ಜಹಾನ್‌ ಖಾಟುನ್‌ ಎಂಬ ಶಾಲಾ ಶಿಕ್ಷಕಿಯೊಬ್ಬರು ಮದುವೆ ದಿನದ ಸಂಜೆ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ, ವಿದಾರ್ಥಿಗಳಿಗೆ ಪುಸ್ತಕ ಹಂಚಿ ಮದುವೆ ಸಮಾರಂಭವನ್ನು ಆಚರಿಸಿದರು.


ಪೂರ್ವ ಮೆದಿನಿಪುರ್‌ನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತತ್ವಶಾಸ್ತ್ರ ಶಿಕ್ಷಕಿಯಾದ 28 ವರ್ಷದ ನೂರ್‌ ಮಂಗಳವಾರ ಮದುವೆಯ ನಂತರ ಅತಿಥಿಗಳಿಗೆ ಸಸಿಗಳನ್ನು ನೀಡಿದರು.


ನಾಡಿಯಾ ಜಿಲ್ಲೆಯ ಧುಬುಲಿಯಾ ಪ್ರದೇಶದಲ್ಲಿ ತಮ್ಮ ತಂದೆ ತಮ್ಮ ನಿವಾಸದ ಹೊರಗೆ ಸ್ಥಾಪಿಸಿದ್ದ ಶಿಬಿರದಲ್ಲಿ ನೆರೆಹೊರೆಯವರು ಮತ್ತು ಸಂಬಂಧಿಕರು ಸೇರಿದಂತೆ ಕನಿಷ್ಠ 32 ಜನರು ರಕ್ತದಾನ ಮಾಡಿದರು.


“ಕೋವಿಡ್‌-19 ಬಿಕ್ಕಟ್ಟಿನ ನಡುವೆ ರಕ್ತದಾನಿಗಳಿಲ್ಲದೆ ಬ್ಲಡ್‌ ಬ್ಯಾಂಕ್‌ಗಳು ಖಾಲಿ ಹೊಡೆಯುತ್ತಿವೆ. ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ನೆರವಾಗಲು ಇದು ನನ್ನ ಚಿಕ್ಕ ಪ್ರಯತ್ನ,” ಎಂದರು ನೂರ್‌.


“ಬೋರ್ಡ್‌ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದವರಿಗೆ ಪ್ರಶಂಸಿವುದಕ್ಕಾಗಿ ಪುಸ್ತಕ ವಿತರಣೆಯನ್ನು ಏರ್ಪಡಿಸಿದ್ದೆ,” ಎಂದು ಅವರು ತಿಳಿಸಿದರು. ಮುರ್ಶಿದಾಬಾದ್‌ನ ನಿವಾಸಿಯಾದ ಓಬಿದೂರ್‌ ರೇಹಮಾನ್‌ ಎಂಬ ಶಿಕ್ಷಕರೊಂದಿಗೆ ಇವರ ವಿವಾಹವಾಗುತ್ತಿದೆ.

ಇವರ ಈ ಪ್ರಯತ್ನಕ್ಕೆ ನೆರೆಹೊರೆಯವರು, ಸಂಬಂಧಿಕರು ಖುಷಿಯಿಂದಲೆ ಒಪ್ಪಿಕೊಂಡರು ಎನ್ನುತ್ತಾರೆ ನೂರ್‌ ಅವರ ತಂದೆ ರುಸ್ತುಮ್‌ ಅಲಿ ಶೇಖ್‌.


“ಮದುವೆಯಲ್ಲಿ ನನ್ನ ಮಗಳು ರಕ್ತ ಶಿಬಿರ ಏರ್ಪಡಿಸುತ್ತೇನೆ ಎಂದಾಗ ನಾನು ಯಾವ ಸಹಾಯಕ್ಕೂ ಸಿದ್ಧವಾಗಿದ್ದೆ. ಮದುವೆಯ ನಂತರ ನೀಡಲು ಸಸಿಗಳನ್ನು ನಾನು ತಂದಿದ್ದೇನೆ,” ಎಂದರು ಶೇಖ್‌.


ಕೃಷ್ಣನಗರ ಬ್ಲಾಕ್ -2 ರ ಬಿಡಿಒ ಅರಬಿಂದ ಬಿಸ್ವಾಸ್ ನೂರ್‌ ಅವರ ಈ ಕಾರ್ಯವನ್ನು ಶ್ಲಾಘಿಸಿದರು.


ಹಿಂದೊಮ್ಮೆ ಇದೇ ರೀತಿ ಮಹಾರಾಷ್ಟ್ರರಾದ ನವ ದಂಪತಿಗಳು ಆಕ್ಸಿಜನ್‌ ಸಿಲಿಂಡರ್‌ಗಳನ್ನು ನೀಡಿದ್ದರು. ಮುಂಬೈನ ಸತ್ಪಾಲಾ ಹಳ್ಳಿಯ ಕೋವಿಡ್‌-19 ಆರೈಕೆ ಕೇಂದ್ರಕ್ಕೆ 50 ಬೆಡ್‌ ಮತ್ತು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಎರಿಕ್‌ ಅಂಟೊನ್‌ ಲೊಬೊ ಮತ್ತು ಮರ್ಲಿನ್‌ ದಂಪತಿಗಳು ನೀಡಿದ್ದರು.