ಸರಗಳ್ಳನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಂದ ಭೇಷ್ ಅನಿಸಿಕೊಂಡ ಆಟೋ ಚಾಲಕ ಹನುಮಂತ

ಸರಗಳ್ಳನನ್ನು ಬೆನ್ನಟ್ಟಿದ ಆಟೋ ಚಾಲಕ ಹನುಮಂತ 12 ಗ್ರಾಂ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂದುರುಗಿಸಿ, ಪೊಲೀಸ್ ಆಯುಕ್ತರಿಂದ 10,000 ರೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಸರಗಳ್ಳನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಂದ ಭೇಷ್ ಅನಿಸಿಕೊಂಡ ಆಟೋ ಚಾಲಕ ಹನುಮಂತ

Friday December 13, 2019,

2 min Read

ಭಾರತದ ಪ್ರಮುಖ ಸಾರಿಗೆ ಸಾಧನ ಆಟೋ ರಿಕ್ಷಾ ಜನಸಾಮಾನ್ಯರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆಟೋ ಹಿಂದೆ ಬರೆದಿರುವ ಭಾಷೆ, ಸಂಸ್ಕೃತಿ, ನಾಡು ನುಡಿ, ಸಿನೆಮಾ, ಸಾಹಿತ್ಯ, ಸಂಬಂಧ ಮೊದಲಾದವುಗಳ ಕುರಿತು ಬರೆದಿರುವ ಸಾಲುಗಳು, ಆಟೋ ಡ್ರೈವರ್ ಗೆ ಇರುವ ವಿಶೇಷವಾದ ಉಡುಗೆ ಹಾವ ಭಾವ, ಇಡೀ ನಗರದ ನಕ್ಷೆಯನ್ನ ತಮ್ಮ ಮನದಲ್ಲಿ ಅಚ್ಚಾಗಿಸಿಕೊಂಡು, ಬನ್ನಿ ಸರ್ ಎಲ್ಲಿಗೆ…? ಎಂದು ಗ್ರಾಹಕರನ್ನು ಕರೆಯುತ್ತಲ್ಲೇ ಮೀಟರ್ ತಿರುಗಿಸುವ ಆಟೋ ಡ್ರೈವರ್ ಗಳು ನಮಗೆಲ್ಲರಿಗೂ ಚಿರಪರಿಚಿತ.


ನಾವು ಈಗ ಹೇಳಹೊರಟಿರುವುದು ಸರಗಳ್ಳನನ್ನು ಹಿಡಿದಿದ್ದಕ್ಕಾಗಿ ಬೆಂಗಳೂರು ನಗರದ ಪೊಲೀಸ್ ರಿಂದ ಸನ್ಮಾನಿಸಲ್ಪಟ್ಟ ಆಟೋ ಚಾಲಕ ಹನುಮಂತ ಅವರ ಬಗ್ಗೆ.


ಬೆಂಗಳೂರು ಸೇರಿದಂತೆ ನಾಡಿನ ಹಲವೆಡೆ ಹಗಲು ಇರುಳು ಎನ್ನದೆ ನಡೆಯುತ್ತಿರುವ ಸರಗಳ್ಳತನದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಮಧ್ಯ ವಯಸ್ಸಿನ ಹೆಂಗಸರನ್ನೇ ಗುರಿಯಾಗಿಸಿಕೊಂಡು ಅವರ ಮೈಮೇಲಿನ ಆಭರಣಗಳನ್ನು ಲೀಲಾಜಾಲವಾಗಿ ಕಿತ್ತುಕೊಂಡು ಹೋಗುವ ಸರಗಳ್ಳರ ಸಂಖ್ಯೆ ಇಂದು ಹೆಚ್ಚುತ್ತಿದ್ದೆ.


ಇತ್ತೀಚೆಗೆ ಅಂದ್ರೆ ಡಿಸೆಂಬರ್ 10 ರಂದು ಆಟೋ ಚಾಲಕ ಹನುಮಂತ ಅವರು ಪ್ರಯಾಣಿಕರೊಬ್ಬರನ್ನು ಹೆಚ್ ಎ ಎಲ್ ಕಡೆಗೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ, ಮಾರತ್ ಹಳ್ಳಿಯ ಜಂಕ್ಷನ್ ಬಳಿ ವಿಘ್ನೇಶ ಎನ್ನುವ ಆರೋಪಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಎಳೆದುಕೊಂಡು ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ.


ನಗರದ ಪೊಲೀಸ್ ಉಪ ಆಯುಕ್ತ (ವೈಟ್‌ಫೀಲ್ಡ್ ವಿಭಾಗ) ಅನುಚೇತ್ ಎಂ. ಎನ್. ಅವರಿಂದ ಸನ್ಮಾನಿಸಲ್ಪಟ್ಟ ಆಟೋ ಚಾಲಕ ಹನುಮಂತ (ಚಿತ್ರ ಕೃಪೆ: ದ ಹಿಂದೂ)




ಗಾಬರಿಗೊಂಡ ಮಹಿಳೆ ಕಳ್ಳ ಕಳ್ಳ ಎಂದು ಜೋರಾಗಿ ಕೂಗಿಕೊಂಡಾಗ ಅಲ್ಲೇ ಆಟೋದಲ್ಲಿದ್ದ ಹನುಮಂತ ಕೂಡಲೇ ಕಳ್ಳನ ಬೆನ್ನು ಹತ್ತಿದ್ದಾರೆ. ಸ್ವಲ್ಪ ದೂರದಲ್ಲಿ ಆರೋಪಿಯನ್ನು ತಡೆದು ಕೆಳಗೆ ಬೀಳಿಸಿ ಅವರಿಂದ ಚಿನ್ನದ ಸರವನ್ನು ವಶಪಡಿಸಿಕೊಂಡರು, ವರದಿ ಡೆಕ್ಕನ್ ಕ್ರೋನಿಕಲ್.


ಹನುಮಂತ ಅವರು ಇನ್ನೋರ್ವ ವಾಹನ ಚಾಲಕ ನಿತಿನ್ ಕುಮಾರ್ ಅವರ ಸಹಾಯದಿಂದ ಆರೋಪಿಯನ್ನು ತಡೆಹಿಡಿದರು, ಆದರೆ ಈ ಘಟನೆಯಲ್ಲಿ ಹನುಮಂತ್ ಅವರ ಆಟೋ ಭಾಗಶಃ ಹಾನಿಗೊಳಗಾಗಿದೆ. ಆದರೆ ಇದಾವುದನ್ನು ಲೆಕ್ಕಿಸದೆ ಹನುಮಂತ ಮಹಿಳೆಯೊಬ್ಬರ ಸುಮಾರು 12 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.


ಆರೋಪಿಯನ್ನು ಹಿಡಿದು ಹೊಯ್ಸಳ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದರು, ಇನ್ನೊಂದು ವಿಶೇಷ ಎಂದರೆ ಈ ಪೂರ್ತಿ ಘಟನೆ ವಿವಿಧ ಸಿ ಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ, ಹನುಮಂತ ಅವರ ಈ ಕೆಲಸಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ, ಬೆಂಗಳೂರು ನಗರದ ಪೊಲೀಸ್ ಉಪ ಆಯುಕ್ತ (ವೈಟ್‌ಫೀಲ್ಡ್ ವಿಭಾಗ) ಅನುಚೇತ್ ಎಂ.ಎನ್ ಅವರು 10,000 ನಗದು ಪುರಸ್ಕಾರ ವನ್ನು ನೀಡಿ ಅಭಿನಂದಿಸಿದ್ದಾರೆ, ವರದಿ ಏಷಿಯನ್ ನೆಟ್ ನ್ಯೂಸ್.


ತಮ್ಮ ನೋವು ನಲಿವುಗಳನ್ನು ಮಾತ್ರ ಬದುಕು ಎಂದು ಭಾವಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಾನವೀಯತೆಯನ್ನು ಮೆರೆದು, ಮತ್ತು ಇಂದು ಹೆಚ್ಚುತ್ತಿರುವ ಸರಗಳ್ಳರಿಗೆ ತಕ್ಕ ಪಾಠ ಕಲಿಸಿದ, ಹನುಮಂತನಿಗೆ ನಾವು ಭೇಷ ಎನ್ನೋಣ….ಏನಂತೀರಾ…?


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.