ವಲಸಿಗರ ಮಕ್ಕಳಿಗೆ ಪಾಠ ಮಾಡುವ ಬೆಂಗಳೂರಿನ ಪೊಲೀಸ್‌ ಅಧಿಕಾರಿ

ತಮ್ಮ ಪೊಲೀಸ್‌ ಕೆಲಸ ಆರಂಭವಾಗುವುದಕ್ಕಿಂತ ಮುಂಚೆ ಸಬ್‌-ಇನ್ಸ್ಪೆಕ್ಟರ್‌ ಶಾಂತಪ್ಪಾ ಜದಮ್ಮನವರ ವಲಸಿಗರ ಮಕ್ಕಳಿಗೆ ಪ್ರತಿದಿನ ವೈದಿಕ ಗಣಿತ, ಸಾಮಾನ್ಯ ಜ್ಞಾನ ಮತ್ತು ಶಿಕ್ಷಣ ಮೌಲ್ಯದ ಪಾಠ ಮಾಡುತ್ತಿದ್ದಾರೆ.

ವಲಸಿಗರ ಮಕ್ಕಳಿಗೆ ಪಾಠ ಮಾಡುವ ಬೆಂಗಳೂರಿನ ಪೊಲೀಸ್‌ ಅಧಿಕಾರಿ

Wednesday September 09, 2020,

2 min Read

ಸಬ್‌-ಇನ್ಸ್ಪೆಕ್ಟರ್‌ ಶಾಂತಪ್ಪಾ ಜದಮ್ಮನವರ ತಮ್ಮ ಪೊಲೀಸ್‌ ಕರ್ತವ್ಯಗಳನ್ನು ನಿಭಾಯಿಸುವುದರ ಜತೆಜತೆಗೆ ಮೇಷ್ಟ್ರಾಗಿದ್ದಾರೆ. ಪ್ರತಿದಿನ ಶಾಂತಪ್ಪಾ, ಬೆಂಗಳೂರಿನ ನಾಗರಭಾವಿಯಲ್ಲಿರುವ ಸುಮಾರು 30 ವಲಸೆ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.


ಬೆಳಿಗ್ಗೆ 8.30 ಕ್ಕೆ ತಮ್ಮ ಕೆಲಸಕ್ಕೆ ಹೋಗುವ ಮುನ್ನ ಅವರು ಮಕ್ಕಳಿಗೆ ವೈದಿಕ ಗಣಿತ, ಸಾಮಾನ್ಯ ಜ್ಞಾನ ಮತ್ತು ಮೌಲ್ಯ ಶಿಕ್ಷಣದ ಬಗ್ಗೆ 1 ಗಂಟೆ ಬೊಧಿಸುತ್ತಾರೆ.


ಬಳ್ಳಾರಿ ಜಿಲ್ಲೆಯವರಾದ ಇವರು, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್‌ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್


“ಇಲ್ಲಿರುವ ಮಕ್ಕಳ ಹತ್ತಿರ ಆನ್‌ಲೈನ್‌ ಶಿಕ್ಷಣ ಪಡೆಯಲು ಮೊಬೈಲ್‌ ಫೋನ್‌ಗಳಿಲ್ಲ. ಹಾಗಾಗಿ ನನ್ನ ಕೆಲಸ ಶುರುವಾಗುವ ಮುನ್ನ ಇಲ್ಲಿ ಬಂದು ಒಂದು ಗಂಟೆ ಪಾಠ ಮಾಡಬೇಕು ಎಂದು ನಿರ್ಧರಿಸಿದೆ,” ಎಂದು ಶಾಂತಪ್ಪಾ ದಿ ನ್ಯೂಸ್‌ ಮಿನಿಟ್‌ಗೆ ಹೇಳಿದರು.


ಪಾಠ ಮಾಡಲು ಶಾಂತಪ್ಪಾ ಅವರು ಪೋಷಕರನ್ನು ಒಪ್ಪಿಸಬೇಕಾಗಿತ್ತು. ಉತ್ತಮ ಜೀವನ ನಿರ್ವಹಣೆಗೆ ಶಿಕ್ಷಣ ಪಡೆಯುವುದು ತುಂಬಾ ಮುಖ್ಯವೆಂದು ನಾನವರಿಗೆ ಹೇಳಿದೆ ಎನ್ನುತ್ತಾ ಅವರು ತಮ್ಮ ತಂದೆಯನ್ನು ಕಳೆದುಕೊಂಡಾಗ ಅವರು ವಲಸಿಗರಾಗೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.


ವಿದ್ಯುತ್‌ ಸಂಪರ್ಕವು ಸರಿಯಾಗಿಲ್ಲದ್ದರಿಂದ ಪೋಷಕರು ತಮ್ಮ ಸ್ಮಾರ್ಟ್‌ ಫೊನ್‌ ಚಾರ್ಜ್‌ ಮಾಡಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ, ಇದು ಆನ್‌ಲೈನ್‌ ಶಿಕ್ಷಣಕ್ಕೆ ತೊಡಕಾಗಿದೆ.


ಈ ಕಾರಣದಿಂದ ಕರ್ನಾಟಕ ಸರ್ಕಾರದ ವಿದ್ಯಾಂಗಮ ಕಾರ್ಯಕ್ರಮವು ಇಲ್ಲಿ ನಡೆಯುತ್ತಿಲ್ಲ.


“ಸರ್ಕಾರಿ ಶಾಲೆಯ ಮಕ್ಕಳಿಗೂ ಶಿಕ್ಷಕರಿಗೂ ಸರಿಯಾದ ಸಮನ್ವಯತೆ ಇಲ್ಲವಾಗಿದೆ. ಶಿಕ್ಷಕರು ಮಕ್ಕಳಿಗೆ ಉದ್ಯಾನ ವನಕ್ಕೆ ಬನ್ನಿ ಎನ್ನುತ್ತಾರೆ ಆದರೆ ಯಾವ ಉದ್ಯಾನ ಅದು ಎಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯೆ ಇರುವುದಿಲ್ಲ,” ಎಂದು ಅವರು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಗೆ ಹೇಳಿದರು.


ವಿದ್ಯಾರ್ಥಿಗಳಿಗೆ ಪಾಠಮಾಡಲು ಶುರುಮಾಡಿದ ಕೇವಲ ಒಂದು ತಿಂಗಳಲ್ಲೆ ಶಾಂತಪ್ಪಾ ಅವರ ಈ ಕೆಲಸವನ್ನು ಹಲವರು ಗುರುತಿಸಿದ್ದಾರೆ, ರಾಜ್ಯದ ಶಿಕ್ಷಣ ಮಂತ್ರಿಗಳಾದ ಎಸ್‌ ಸುರೇಶ್‌ ಕುಮಾರ್‌ ಅವರು ತರಗತಿಗೆ ಭೇಟಿ ನೀಡಿ,


“ಈ ಪೊಲೀಸ್‌ ಅಧಿಕಾರಿಯ ಬಗ್ಗೆ ನನಗೆ ಹೆಮ್ಮೆಯಿದೆ. ಇಂತವರಿಂದ ಪೊಲೀಸ್‌ ಇಲಾಖೆಯ ಮೇಲಿನ ಗೌರವ ದುಪ್ಪಟ್ಟಾಗುತ್ತದೆ,” ಎಂದಿದ್ದಾರೆ.


ಮಂತ್ರಿಗಳ ಭೇಟಿಯ ನಂತರ ಹಲವರು ಮಕ್ಕಳಿಗೆ ಪುಸ್ತಕ, ಬ್ಯಾಗ್‌ ಮತ್ತು ಇತರ ಪರಿಕರಗಳನ್ನು ನೀಡಲು ಮುಂದಾಗಿದ್ದಾರೆ. ಮಕ್ಕಳು ತಮ್ಮ ಮನೆಗೆಲಸವನ್ನು (ಹೋಂ ವರ್ಕ್‌) ಮುಗಿಸಬೇಕೆಂದು ಶಾಂತಪ್ಪಾ ಅವರಿಗೆ ಜಿಯೊಮೆಟ್ರಿ ಬಾಕ್ಸ್‌ ಅಥವಾ ಚಾಕಲೆಟ್‌ ನೀಡುತ್ತಾರೆ.