ಸಾಧನೆ ಅನ್ನೋದು ವಯಸ್ಸನ್ನ ಮೀರಿದ್ದು. ಏನನ್ನಾದ್ರೂ ಸಾಧಿಸೋ ಛಲವೊಂದಿದ್ರೆ ವಯಸ್ಸು ಅನ್ನೋದು ಮ್ಯಾಟರೇ ಅಗೋದಿಲ್ಲ. ಇದಕ್ಕೆ ಪಕ್ಕಾ ಉದಾಹರಣೆ ಮಾನವಲ್ಲಿ ನಾಗರಾಜ್. ದಶಕಗಳ ಸಂಶೋಧನೆ ಫಲವಾಗಿ ಹೊಸ ಆಟವೊಂದಕ್ಕೆ ನಾಂದಿ ಹಾಡಿದ್ದಾರೆ.
ಮಾತಿನಲ್ಲಿ ಹರೆಯದವರನ್ನೂ ನಾಚಿಸೋ ಉತ್ಸಾಹ. ಕಣ್ಣಿನಲ್ಲಿ ಸಂಶೋಧನೆಯೊಂದನ್ನು ಯಶಸ್ವಿಯಾಗಿ ಪೂರೈಸಿದ ತೃಪ್ತಿ. 87ರ ಇಳಿವಯಸ್ಸಿನಲ್ಲೂ ಮತ್ತಷ್ಟು ಸಾಧಿಸಬೇಕೆಂಬ ತವಕ. ಮುಪ್ಪಿನಲ್ಲೂ ಏಕಾಂಗಿಯಾಗಿ ಜೀವನ ನಡೆಸ್ತಿರೋ ಸಾಧಕ. ಹೆಸರು ಮಾನವಲ್ಲಿ ನಾಗರಾಜ್, ವಯಸ್ಸು 87, 34 ವರ್ಷಗಳ ಕಾಲ ಇಂಡಿಯನ್ ಟೆಲಿಫೋನ್ ಕಾರ್ಖಾನೆಯಲ್ಲಿ (ಐಟಿಐ) ಧೀರ್ಘಕಾಲದ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಏಕಾಂಗಿಯಾಗೇ ಜೀವನ ನಡೆಸುತ್ತಿದ್ದಾರೆ. ಇಷ್ಟಿದ್ರೂ ಸಾಧಿಸಬೇಕೆಂಬ ಹಂಬಲ ಮಾತ್ರ ಸ್ವಲ್ಪವೂ ತಗ್ಗಿಲ್ಲ್ಲ. ಪಂಚ ಭಾಷೆ ಬಲ್ಲವರಾದ ನಾಗರಾಜು ಗೀತ ರಚನೆಕಾರರು. ಇಂಗ್ಲೀಷ್‍ನಲ್ಲಿ ಸಾವಿರಾರು ಕವನಗಳ ರಚನೆ ಮಾಡಿದ್ದಾರೆ. ಅಲ್ಲದೆ ಇಂಗ್ಲೀಷ್ ಕವನ ಸಂಕಲನಗಳನ್ನ ಕನ್ನಡಕ್ಕೆ ಭಾಷಾಂತರಗೊಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಇವ್ರು ಬರೋಬ್ಬರಿ ನಾಲ್ಕು ದಶಕಗಳಿಂದ ನಡೆಸುತ್ತಾ ಬಂದ ಸಂಶೋಧನೆಯ ಫಲವೇ `ಅಂತಾವಿ’ ಅನ್ನೋ ಬೌದ್ಧಿಕ ಕಸರತ್ತಿನ ಮನೆ ಆಟ
ಅಂಚೆ-ತಾರು-ವಿತರಣೆಯ ವಿಸ್ತೃತ ರೂಪವೇ ಅಂತಾವಿ. ಇಂಗ್ಲೀಷ್‍ನಲ್ಲಿ ಮೆಸ್ಟೆಲೆಕ್ಸ್ ಗೇಮ್ ಎಂದು ಹೆಸರಿಡಲಾಗಿದೆ. ಅಳಗುಳಿ ಮನೆ, ಚೌಕಾಬಾರ, ಹುಲಿ-ಕುರಿ ಆಟ, ಪಗಡೆ, ಚದುರಂಗ ಈ ಎಲ್ಲಾ ಆಟಗಳ ಸಮ್ಮಿಶ್ರಣವೇ ಅಂತಾವಿ. ಚದುರಂಗ ಮಾದರಿಯಲ್ಲೇ ಕಂಡುಬರೋ ಮೆಸ್ಟೆಲೆಕ್ಸ್ ಚೆಸ್‍ಗಿಂತಲೂ ವಿಭಿನ್ನ ವಾಗಿದೆ.
144 ಚೌಕಗಳಿಂದ ಕೂಡಿರೋ ಅಂತಾವಿ ಗೇಮ್ ಒಂದೇ ಬಾರಿಗೆ ನಾಲ್ವರು ಆಡುವಂತದ್ದಾಗಿದೆ. ಕ್ಲಾಕ್ ವೈಸ್‍ನಲ್ಲಿ ಆಟ ಆರಂಭಗೊಳ್ಳುತ್ತೆ. 12 ಟ್ರ್ಯಾಕ್‍ಗಳಲ್ಲಿ ಪ್ರತಿ ಸೈಡ್ 12 ಪಾನ್‍ಗಳಿವೆ. ಎಬಿಸಿಡಿ ಆರ್ಡರ್‍ನಲ್ಲಿ 12 ಟ್ರ್ಯಾಕ್‍ಗಳಿಗೆ ಹೆಸರಿಡಲಾಗಿದೆ. ಈ ಆಟವನ್ನ ಆಡಲು ಇಂತದ್ದೇ ಅಂತಾ ಒಂದೇ ನಿರ್ಧಿಷ್ಟ ಸಾಧನವಿಲ್ಲ್ಲ. ಬೇರೆ ಆಟಗಳಿಗಿಂತ ವಿಭಿನ್ನವಾಗಿ ಸಾಧನಗಳನ್ನ ಬಳಸಬಹುದು. ಡೈಸ್, ಪಗಡೆ ಹಾಗೂ ಇಸ್ಪೀಟ್‍ನಲ್ಲಿ ಈ ಆಟವನ್ನ ಆಡೋ ವಿಶೇಷತೆ ಇದೆ.
ಅಂತಾವಿ ಆಟದ ಚೌಕಗಳಲ್ಲಿ 2 ಚಿಹ್ನೆಗಳು ಕಂಡು ಬರುತ್ತವೆ. ಪ್ಲಸ್ ಹಾಗೂ ಡಾಟ್. ಪ್ಲಸ್‍ನಲ್ಲಿ ಎದುರಾಳಿ ಪಾನ್ ಇದ್ದರೆ ಆ ಪಾನನ್ನು ಹೊಡೆದುರುಳಿಸಬಹುದು. ಆದ್ರೆ ಡಾಟ್‍ನಲ್ಲಿದ್ದರೆ ಎದುರಾಳಿ ಪಾನ್ ಮೇಲೆ ಅಟ್ಯಾಕ್ ಮಾಡುವಂತಿಲ್ಲ. ಚೆಸ್‍ನಲ್ಲಿ ಒಂದು ಬಾರಿ ಪಾನ್ ಉರುಳಿಸಿದ್ರೆ ಬೋರ್ಡ್‍ನಿಂದ ಎತ್ತಿಡಬೇಕಾಗುತ್ತೆ. ಆದ್ರೆ ಅಂತಾವಿಯಲ್ಲಿ ಹಾಗೆ ಇರುವುದಿಲ್ಲ. ವಾಪಸ್ ತನ್ನ ಮೂಲ ನೆಲೆಯಲ್ಲಿ ಪಾನ್ ಇಡಬೇಕಾಗುತ್ತೆ. ಇನ್ನು ಮಧ್ಯದ 4 ಪಾನ್‍ಗಳು ವಿಶೇಷತೆ ಹೊಂದಿವೆ. ಈ ಪಾನ್‍ಗಳು ಬೋರ್ಡ್‍ನ ಮಧ್ಯ ಬಂದ ತಕ್ಷಣ ವಿಶೇಷ ಶಕ್ತಿ ಪಡೆಯುತ್ತವೆ. ಯಾವುದೇ ದಿಕ್ಕಿನಿಂದಲೂ ಎದುರಾಳಿ ಮೇಲೆ ಅಟ್ಯಾಕ್ ಮಾಡುವ ಶಕ್ತಿ ಹೊಂದುತ್ತವೆ. ಆದ್ರೆ ಆ ಚೌಕ ದಾಟಿದ ಮೇಲೆ ಸಾಮಾನ್ಯ ಪಾನ್‍ಗಳಾಗಿ ಬಿಡುತ್ತವೆ. ಈ ಆಟದಲ್ಲಿ ಮೊದಲು ಯಾವ ಆಟಗಾರನು 156 ಪಾಯಿಂಟ್ಸ್ಗಳಿಸುತ್ತಾನೋ ಅವನೇ ಜಯಶಾಲಿ.
ಬೌದ್ಧಿಕ ಜಾಣವನ್ನು ಒರೆಹಚ್ಚುವ ಆಟವಾಗಿರೋ ಅಂತಾವಿ, ನಿಜಕ್ಕೂ ಅದ್ಭುತ ಸಂಶೋಧನೆಯ ಫಲ. ಮುಂದಿನ ಪೀಳಿಗೆಯ ಮಕ್ಕಳು ಹಾಗೂ ಯುವಕರು ಸೇರಿದಂತೆ ಎಲ್ಲರೂ ಈ ಆಟ ಆಡಬಹುದು. ಆದ್ರೆ ಈ ಆಟವನ್ನ ಕಂಪ್ಯೂಟರ್‍ನಲ್ಲಿ ಫೀಡ್ ಮಾಡಲು ಸಾಕಷ್ಟು ಕಷ್ಟಸಾಧ್ಯವಾಗಿದೆ. ಕಾರಣ ಲಕ್ಷಾಂತರ ಹಣದ ಅವಶ್ಯಕತೆ ಇದೆ. ಅಷ್ಟಲ್ಲದೆ ಈ ಗೇಮ್ ಕುರಿತು ತಂತ್ರಜ್ಞರು ಸಂಶೋಧನೆ ನಡೆಸಿದ ಬಳಿಕವಷ್ಟೇ ಕಂಪ್ಯೂಟರ್ ಗೇಮ್ ಆಗಿ ಮಾಡಲು ಸಾಧ್ಯ. ಇದಕ್ಕೆಲ್ಲಾ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ಇಷ್ಟು ದೊಡ್ಡ ಮಟ್ಟದ ಮೊತ್ತವನ್ನ ಬರಿಸಲು ನಾಗರಾಜ್ ಅವ್ರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಧನೆಯ ಮೆಟ್ಟಿಲೇರಿದ್ರೂ ನಾಗರಾಜು ಅವರ ಸಂಶೋಧನೆ ಎಲೆಮರೆಕಾಯಿಯಂತಾಗಿದೆ. ಈ ಆಟವನ್ನ ಗುರುತಿಸಿ ಪ್ರೋತ್ಸಾಹಿಸಿದ್ದೇ ಆದಲ್ಲಿ ಬೌದ್ಧಿಕ ಕಸರತ್ತಿನ ನೆಚ್ಚಿನ ಆಟವಾಗೋದ್ರಲ್ಲಿ ಅನುಮಾನವೇ ಇಲ್ಲ. ಹಿರಿಯ ವಯಸ್ಸಿನಲ್ಲೂ ನಾಗರಾಜು ಅವರ ಸಂಶೋಧನೆಗೆ ನಿಜಕ್ಕೂ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ.