105 ನೆ ವಯಸ್ಸಿನಲ್ಲಿ 4 ನೇ ತರಗತಿಯ ಪರೀಕ್ಷೆ ಬರೆದ ಕೇರಳದ ಭಾಗೀರಥಿ ಅಮ್ಮ

ವಯಸ್ಸಿನ ಎಲ್ಲೆಗಳೆಲ್ಲವನ್ನು ಮೀರಿ ಕೇರಳದ 105 ವರ್ಷದ ಮಹಿಳೆ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ನಾಲ್ಕನೇ ತರಗತಿಯ ಸಮಾನತೆ ಪರೀಕ್ಷೆಗೆ ಹಾಜರಾದರು.

105 ನೆ ವಯಸ್ಸಿನಲ್ಲಿ 4 ನೇ ತರಗತಿಯ ಪರೀಕ್ಷೆ ಬರೆದ ಕೇರಳದ ಭಾಗೀರಥಿ ಅಮ್ಮ

Thursday November 21, 2019,

2 min Read

ಸದಾ ಅಧ್ಯಯನ ಮಾಡಲು ಮತ್ತು ಹೊಸ ತಂತ್ರಜ್ಞಾನವನ್ನು ಪಡೆಯಲು ಹಂಬಲಿಸುತ್ತಿದ್ದ ಭಾಗೀರಥಿ ಅಮ್ಮ, ದುರಾದೃಷ್ಟವಶಾತ್ ಎಳೆಯದರಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡ ನಂತರ ತಮ್ಮ ವಿದ್ಯಾಭ್ಯಾಸದ ಕನಸನ್ನು ಬದಿಗಿರಿಸಿ ಉಳಿದ ಕಿರಿಯ ಸಹೋದರರನ್ನು ನೋಡಿಕೊಳ್ಳುವುದರಲ್ಲಿ ವ್ಯಸ್ತರಾದರು.


ತಮ್ಮ 30 ನೆ ವಯಸ್ಸಿಗೆ ಪತಿಯನ್ನು ಕಳೆದುಕೊಂಡ ನಂತರ ಭಾಗೀರಥಮ್ಮ ಸಂಪೂರ್ಣ ಮನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು. ತಮ್ಮ 6 ಮಕ್ಕಳ ಪಾಲನೆ ಪೋಷಣೆಯು ಇವರ ಹೆಗಲೇರಿತು.


ತಿರುವನಂತಪುರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಕೊಲ್ಲಂನಲ್ಲಿರುವ ತನ್ನ ಮನೆಯಲ್ಲಿ ನಾಲ್ಕನೇ ತರಗತಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾಗ, ಭಾಗೀರಥಿ ಅಮ್ಮ ಇಲ್ಲಿಯವರೆಗಿನ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಕಾರ್ಯಕ್ರಮದಲ್ಲಿ ಅತ್ಯಂತ ಹಳೆಯ ‘ಸಮಾನತೆ ಕಲಿಯುವವರು' ಎನಿಸಿಕೊಂಡಿದ್ದಾರೆ ಎಂದು ಮಿಷನ್ ನಿರ್ದೇಶಕ ಪಿ ಎಸ್ ಶ್ರೀಲಾ ಹೇಳಿದರು.


ಭಾಗೀರಥಿ ಅಮ್ಮನಿಗೆ ಬರವಣಿಗೆಯಲ್ಲಿ ತೊಂದರೆ ಇದ್ದುದರಿಂದ, ಪರಿಸರ, ಗಣಿತ ಮತ್ತು ಮಲಯಾಳಂ ಕುರಿತ 3 ಪ್ರಶ್ನೆಪತ್ರಿಕೆಗಳನ್ನು ಪೂರ್ತಿಗೊಳಿಸಲು ಮೂರು ದಿನಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಅವರ ಕಿರಿಯ ಮಗಳು ಕೂಡ ಅಮ್ಮನಿಗೆ ಸಹಾಯ ಸಹಕರಿಸಿದ್ದಾರೆ ಎಂದು ಮಿಷನ್‌ನ ಸಂಪನ್ಮೂಲ ವ್ಯಕ್ತಿ ವಸಂತ್ ಕುಮಾರ್ ತಿಳಿಸಿದರು.


“ಈ ಇಳಿ ವಯಸ್ಸಿನಲ್ಲಿಯೂ ಸಹ, ಅವರು ತೀಕ್ಷ್ಣವಾದ ಸ್ಮರಣೆಯನ್ನು ಹೊಂದಿದ್ದಾರೆ, ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ ಮತ್ತು ಚೆನ್ನಾಗಿ ಹಾಡುತ್ತಾರೆ ಕೂಡ, ತಮ್ಮ 9 ನೇ ವಯಸ್ಸಿನಲ್ಲಿಯೇ ಔಪಚಾರಿಕ ಶಿಕ್ಷಣವನ್ನು ತೊರೆದ ಅಮ್ಮ, ಈಗಲೂ ಪರೀಕ್ಷೆಗೆ ಹಾಜರಾಗಲು ತುಂಬಾ ಸಂತೋಷ ಪಡುತ್ತಾರೆ,” ಎಂದು ಕುಮಾರ ಹೇಳಿದರು.


ಅಮ್ಮ ಈಗಾಗಲೇ ತಮ್ಮ 6 ಮಂದಿ ಮಕ್ಕಳಲ್ಲಿ ಒಬ್ಬರನ್ನು ಹಾಗೂ 15 ಮಂದಿ ಮೊಮ್ಮಕ್ಕಳಲ್ಲಿ 3 ಜನರನ್ನು ಕಳೆದುಕೊಂಡಿದ್ದಾರೆ.


ಭಾಗೀರಥಿ ಅಮ್ಮಾ ಅವರಿಗೆ ಆಧಾರ್ ಕಾರ್ಡ್ ಇಲ್ಲದಿರುವುದರಿಂದ ವಿಧವೆ ಅಥವಾ ವೃದ್ಧಾಪ್ಯ ಪಿಂಚಣಿ ಇನ್ನೂ ಬಂದಿಲ್ಲ ಮತ್ತು ಆಕೆಗೆ ಪಿಂಚಣಿ ಸಿಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆಯನ್ನು ನೀಡಿದ್ದಾರೆ.


ಕಳೆದ ವರ್ಷ 96 ವರ್ಷದ ಕಾರ್ತಿಯಾಯನಿ ಅಮ್ಮ ರಾಜ್ಯದಲ್ಲಿ ನಡೆದ ಸಾಕ್ಷರತಾ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದರು. ಇವರು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಮಹೋನ್ನತ ಕಾರ್ಯಕ್ರಮವಾದ "ಅಕ್ಷರಲಕ್ಷಂ" ಗೆ ಹಾಜರಾದ ಮತ್ತು 100 ರಲ್ಲಿ 98 ಅಂಕಗಳನ್ನು ಗಳಿಸಿದ ಅತ್ಯಂತ ಹಳೆಯ ಅಭ್ಯರ್ಥಿಯಾಗಿದ್ದಾರೆ.


ಆಲಪ್ಪುಳ ಜಿಲ್ಲೆಯ ಹರಿಪಾಡ್‌ನ ಚೆಪ್ಪಾಡ್ ಗ್ರಾಮದ ಮೂಲದ, ನವತಿವರ್ಷೀಯ ಅವರು ತಮ್ಮ ಸಾಧನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಕೊಡಮಾಡುವ "ಅಕ್ಷರಲಕ್ಷಂ ಪ್ರಮಾಣಪತ್ರ" ವನ್ನು ಪಡೆದಿದ್ದರು.


ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಭಾಗವಾಗಲು ಬಯಸುವ ಸಾವಿರಾರು ಜನರಿಗೆ ಇವರು ಆದರ್ಶಪ್ರಾಯರಾಗಿದ್ದರೆ.


ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡುವುದು ಸಾಕ್ಷರತಾ ಮಿಷನ್‌ನ ಉದ್ದೇಶವಾಗಿದೆ.


2011 ರ ಜನಗಣತಿಯ ಪ್ರಕಾರ ಕೇರಳ ರಾಜ್ಯದಲ್ಲಿ ಸುಮಾರು 18.5 ಲಕ್ಷ ಅನಕ್ಷರಸ್ಥರು ಇದ್ದರು.


ಅನಕ್ಷರತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು, ಮಿಷನ್ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ, ವಿಶೇಷವಾಗಿ ಬುಡಕಟ್ಟು ಜನಾಂಗದವರು, ಮೀನುಗಾರರು ಮತ್ತು ಕೊಳೆಗೇರಿ ನಿವಾಸಿಗಳಂತಹ ಅಂಚಿನಲ್ಲಿರುವ ಗುಂಪುಗಳಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.