ಈ ಬಿಹಾರದ ಪೋಲಿಸ್ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸದೆ, ವಿಭಿನ್ನ ಮಾರ್ಗದಿಂದ ಈ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದಾರೆ

ಬಿಹಾರದ ಮೋತಿಹಾರಿ ಪಟ್ಟಣದ ಮುಖೇಶ್ ಚಂದ್ರ ಕುನ್ವಾರ್ ಅವರು ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಇಲ್ಲದೆ ಸವಾರಿ‌‌ ಮಾಡಿದರೆ ದಂಡ ವಿಧಿಸುವುದಿಲ್ಲ, ಬದಲಿಗೆ ಹೆಲ್ಮೆಟ್‌ ಮಾರುವವರ ಹತ್ತಿರ ಕಳಿಸುತ್ತಾರೆ.

ಈ ಬಿಹಾರದ ಪೋಲಿಸ್ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸದೆ,  ವಿಭಿನ್ನ ಮಾರ್ಗದಿಂದ ಈ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದಾರೆ

Wednesday September 18, 2019,

2 min Read

ನೂತನವಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯು ಈಗ ನಗರದಲ್ಲಿ ಬಿಸಿ-ಬಿಸಿ ಚರ್ಚೆಯ ವಸ್ತುವಾಗಿದೆ‌. ಅಲ್ಪ ಪ್ರಮಾಣದ ಸಂಚಾರ ನಿಯಮ ಉಲ್ಲಂಘನೆಗೂ ಸಹ ಭಾರಿ ದಂಡ ವಿಧಿಸಲಾಗುತ್ತಿದೆ.


ಟ್ರಕ್ ಚಾಲಕರಿಂದ 1.4 ಲಕ್ಷ ರೂ.ಗಳನ್ನು ದಂಡ ವಸೂಲಿಯಿಂದ ಹಿಡಿದು 15,000 ರೂ.ಗಳ ಸ್ಕೂಟರ್ ಅನ್ನು 23,000 ರೂ.ಗಳ ದಂಡಕ್ಕೆ ಬಿಟ್ಟು ಬಂದ ಪ್ರಯಾಣಿಕರವರೆಗೂ ಇಂತಹ ಅನೇಕ ಪ್ರಕರಣಗಳು ದೇಶದ ಎಲ್ಲೆಡೆ ಕಾಣುತ್ತಿವೆ.


ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ನ್ಯೂಸ್ 18)




ಗುಜರಾತ್, ಉತ್ತರಾಖಂಡ ಮುಂತಾದ ರಾಜ್ಯಗಳು ಪ್ರಯಾಣಿಕರ ಮೇಲಿನ ದಂಡವನ್ನು ಕಡಿಮೆ ಮಾಡಿದ್ದರೆ, ಈ ಅವ್ಯವಸ್ಥೆಯ ಮಧ್ಯೆ ಬಿಹಾರದ ಮೋತಿಹಾರಿ ಪಟ್ಟಣದ ಪೋಲಿಸ್ ಒಬ್ಬರು ತಮ್ಮ ವಿಭಿನ್ನ ಯೋಚನಾ ಲಹರಿಯಿಂದ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ.


ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ಸಹಾಯ ಮಾಡಲು ಚಟ್ಟೌನಿ ಪೋಲಿಸ್ ಠಾಣೆಯ ಎಸ್ಎಚ್ಓ ಮುಖೇಶ್ ಚಂದ್ರ ಕುನ್ವಾರ್ ಅವರು ಒಂದು ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ.


ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಅಥವಾ ವಿಮಾ ಪತ್ರಗಳಿಲ್ಲದೆ ಸವಾರಿ ಮಾಡುತ್ತಿದ್ದರೆ, ಅವರಿಗೆ ದಂಡ ವಿಧಿಸಲಾಗುವುದಿಲ್ಲ. ಬದಲಾಗಿ, ನಿಯಮ ಉಲ್ಲಂಘಿಸುವವರನ್ನು ಹೆಲ್ಮೆಟ್ ಮಾರಾಟಗಾರರಿಗೆ ಅಥವಾ ಪೋಲಿಸ್ ಚೆಕ್‌ಪೋಸ್ಟ್‌ಗಳ ಬಳಿಯ ವಿಮಾ ಏಜೆನ್ಸಿಗೆ ಕಳಿಸಲಾಗುತ್ತದೆ.


ಪಿಟಿಐ ಜೊತೆ ಮಾತನಾಡಿದ ಕುನ್ವಾರ್,


" ನಾನು ಒಂದಷ್ಟು ಹೆಲ್ಮೆಟ್ ಮಾರಾಟಗಾರರು ಮತ್ತು ವಿಮಾ ಏಜೆಂಟರನ್ನು ಕರೆತಂದೆ, ಅವರು ಚೆಕಿಂಗ್ ಪಾಯಿಂಟ್‌ಗಳ ಪಕ್ಕ ತಮ್ಮ ಅಂಗಡಿಗಳನ್ನು ಸ್ಥಾಪಿಸಿದ್ದಾರೆ. ಚೆಕ್ ಪಾಯಿಂಟ್ ಬಳಿ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸುವುದಿಲ್ಲ, ಏಕೆಂದರೆ ಅದು ಅವರಿಗೆ ಅಪರಾಧಿ ಎಂಬ ಭಾವನೆ ಮೂಡಿಸುತ್ತದೆ. ಅದರ ಬದಲಾಗಿ, ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಖರೀದಿಸಲು ಮತ್ತು ಅವರ ವಿಮೆಯನ್ನು ನವೀಕರಿಸಲು ಅವರಿಗೆ ಸಹಾಯ ಮಾಡುತ್ತೇವೆ" ಎಂದು ನ್ಯೂಸ್ 18 ವರದಿ ಮಾಡಿದೆ.


ಇದಲ್ಲದೆ, ಲೈಸನ್ಸ್‌ ಇಲ್ಲದೆ ಸವಾರಿ ಮಾಡುವವರಿಗೆ ಸ್ಥಳದಲ್ಲೇ ಕಲಿಕಾ ಲೈಸನ್ಸ್‌ ಮಂಜೂರು ಮಾಡಿಕೊಡುವಂತಹ ಇನ್ನೊಬ್ಬ ಅಧಿಕಾರಿಯನ್ನು ನಿಯೋಜಿಸಲು ಎಸ್ಎಚ್ಓ 'ನೇರ ಸಾರಿಗೆ ಅಧಿಕಾರಿ'ಗೆ ವಿನಂತಿಸಿದೆ.


ಮಿಂಟ್ ವರದಿಯ ಪ್ರಕಾರ, ತಿದ್ದುಪಡಿ ಮಾಡಿದ ಮೋಟಾರು ವಾಹನಗಳ ಕಾಯ್ದೆಯು ಟ್ರಾಫಿಕ್ ಪೋಲಿಸರಿಗೆ ಸುಲಿಗೆ ಮಾಡಲು ದಾರಿ ಮಾಡಿಕೊಟ್ಟಿದೆ ಎಂದು ಭಾವಿಸುವ ಜನರಲ್ಲಿ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಪೋಲಿಸ್ ಕಾರ್ಯ ನಿರ್ವಹಿಸುತ್ತಿದೆ.


ಇದರ ಕುರಿತು ಕುನ್ವಾರ್ ಅವರ ಹತ್ತಿರ ಕೇಳಿದಾಗ, 


"ನಾನು ಪಟ್ಟಣದ ಐತಿಹಾಸಿಕ ಪರಂಪರೆಯಿಂದ ಸ್ಪೂರ್ತಿ ಪಡೆದಿದ್ದು ಮತ್ತು ತಿದ್ದುಪಡಿ ಮಾಡಿದ ಮೋಟಾರ್ ಸೈಕಲ್ ಕಾಯ್ದೆಯ ಉದ್ದೇಶಗಳನ್ನು ಮಾನವೀಯ ಮತ್ತು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ನಮಗೆ ಸಹಾಯ ಮಾಡುವ ಯೋಜನೆಯೊಂದಿಗೆ ಬಂದಿದ್ದೇನೆ" ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


ಇದಲ್ಲದೆ, ಬಿಹಾರ್ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದರೂ, ಯಾರಾದರೂ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದನ್ನು ನಾವು ಕಂಡುಕೊಂಡರೆ, ಆಗ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕುನ್ವಾರ್ ಹೇಳುತ್ತಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.