ಎದೆಹಾಲು ನೀಡಿ 5 ಮಕ್ಕಳ ಬದುಕಿಗೆ ಬೆಳಕಾದ ಸೂಪರ್ ಅಮ್ಮ

ರುಶಿನಾ ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಿದ ನಂತರ ಹೆಚ್ಚಾಗಿ ಉಳಿಯುತ್ತಿದ್ದ ತಮ್ಮ ಎದೆಹಾಲನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಎದೆಹಾಲು ನೀಡಿ 5 ಮಕ್ಕಳ ಬದುಕಿಗೆ ಬೆಳಕಾದ ಸೂಪರ್ ಅಮ್ಮ

Sunday December 29, 2019,

2 min Read

ಮಾತೃ ವಾತ್ಸಲ್ಯ ಕೇವಲ ತನ್ನ ಮಗುವಿನೆಡೆಗೆ ಮಾತ್ರ ಜಿನುಗುವುದಿಲ್ಲ. ಅದು ಪ್ರತಿಯೊಂದು ಮಗುವಿನಲ್ಲೂ ತನ್ನ ಮಗುವನ್ನು ಕಾಣುವ ಕ್ರಿಯೆ. ತಾಯಿಯಾಗುವ ಪ್ರಕ್ರಿಯೆಯೇ ಒಂದು ವಿಶೇಷ ಅನುಭವ. ಆದರೆ ಈ ಪ್ರಕ್ರಿಯೆಯಲ್ಲಿ ಒಂದಲ್ಲಾ ಒಂದು ರೀತಿಯ ನೋವು, ಭಯ ಸಹಜವಾದದ್ದು.


ಮಗು ಜನಿಸಿದ ತಕ್ಷಣ ಹಾಗೂ ಮುಂದಿನ 6 ತಿಂಗಳುಗಳ ವರೆಗೆ ತಾಯಿಯ ಎದೆಹಾಲು ಮಾತ್ರ ಆಹಾರವಾಗಿ ನೀಡುವಂತೆ ವೈದ್ಯರು ಸೂಚಿಸುತ್ತಾರೆ. ಸುಲಭವಾಗಿ ಜೀರ್ಣಗೊಳ್ಳುವ ಈ ಪದಾರ್ಥವೇ ಮಗುವಿನ ಮುಂದಿನ ಭವಿಷ್ಯಕ್ಕೂ ಸದೃಢ ಆರೋಗ್ಯವನ್ನು ನೀಡಲು ಪೂರಕವಾದಾದ್ದು.


ಕೆಲವೊಮ್ಮೆ ಅವಧಿಗೂ ಮುನ್ನ ಮಗು ಜನಿಸುವ ಕಾರಣ, ಮಗುವಿಗೆ ಸ್ತನ್ಯಪಾನ ಮಾಡಿಸಲು ತಾಯಿ ಅಶಕ್ತಳಾಗಿರುತ್ತಾಳೆ. ಮಗು ಅಪೌಷ್ಟಿಕತೆಯಿಂದ, ಕಡಿಮೆ ತೂಕದಲ್ಲಿ ಜನಿಸಿದಾಗ ತಾಯಿಯ ಎದೆಹಾಲಿನ ಅವಶ್ಯಕತೆ ಅತ್ಯಗತ್ಯವಾಗಿರುತ್ತದೆ.


ಇಂತಹ ಸಂದರ್ಭದಲ್ಲಿ ಅಗತ್ಯವಿರುವ ಮಗುವಿಗೆ ತಾಯಿಯ ಎದೆಹಾಲನ್ನು ಪೂರೈಸಲು ಅರ್ಪಣಾ ನವಜಾತ ಶಿಶುಗಳ ಆರೈಕೆ ಕೇಂದ್ರ ತಾಯಿಯ ಎದೆಹಾಲನ್ನು ಸಂಗ್ರಹಿಸಿ, ಅದನ್ನು ಅಗತ್ಯವಿರುವಲ್ಲಿ ತಲುಪಿಸುವ ಕೆಲಸವನ್ನು ಮಾಡುತ್ತಿದೆ.


ಟ

ರುಶಿನಾ ಡಾಕ್ಟರ್ ಮಾರ್ಫಟಿಯಾ (ಚಿತ್ರಕೃಪೆ: ಇಂಡಿಯಾ ಟೈಮ್ಸ್)


ಇಷ್ಟಕ್ಕೂ ನಾವು ಹೇಳಹೊರಟಿರುವುದು ಸುಮಾರು 12 ಲೀಟರ್ ಎದೆಹಾಲನ್ನು ಕಳೆದ ಮೂರು ತಿಂಗಳಿಂದ 5 ನವಜಾತ ಶಿಶುಗಳಿಗೆ ನೀಡಿ, 5 ಮಕ್ಕಳ ಬದುಕಿಗೆ ಬೆಳಕಾದ ಸೂಪರ್ ಅಮ್ಮ ಅಹಮದಾಬಾದ್ ನ ರುಶಿನಾ ಡಾಕ್ಟರ್ ಮಾರ್ಫಟಿಯಾ.


29 ವರ್ಷದ ರುಶಿನಾ ಖಾಸಗಿ ವಿದ್ಯಾಸಂಸ್ಥೆ ಒಂದರಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನ ಭೋಧಕರಾಗಿ ಕೆಲಸಮಾಡುತ್ತಿದ್ದು, ಕಳೆದ ಸೆಪ್ಟೆಂಬರ್ ನಲ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಿದ ನಂತರ ಹೆಚ್ಚಾಗಿ ಉಳಿಯುತ್ತಿದ್ದ ತಮ್ಮ ಎದೆಹಾಲನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ಬಳಸಲು ನಿರ್ಧರಿಸಿದರು.


ಅರ್ಪಣಾ ನವಜಾತ ಶಿಶುಗಳ ಆರೈಕೆ ಕೇಂದ್ರದ ಮೂಲಕ ರುಶಿನಾ ಅವರು ತಮ್ಮ ಸಾಮಾಜಿಕ ಕಳಕಳಿಯನ್ನು ಬಿತ್ತಲು ಮುಂದಾದರು.


"ರುಶಿನಾ ಅವರ ಕಾರ್ಯವು ಅಮೂಲ್ಯವಾದುದು. ಸೋಂಕುಗಳಿಗೆ ಹೆಚ್ಚು ಒಳಗಾಗುವ 600 ಗ್ರಾಂ ಮತ್ತು 1.5 ಕೆಜಿ ತೂಕದ ಈ ದುರ್ಬಲವಾದ ಶಿಶುಗಳಿಗೆ ಆಕೆಯ ಹಾಲು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ," ಎಂದು ಅರ್ಪಣ ನವಜಾತ ಆರೈಕೆ ಕೇಂದ್ರದ ಹಿರಿಯ ನವಜಾತ ಶಿಶುಗಳಶಾಸ್ತ್ರಜ್ಞ ಡಾ.ಅಶಿಶ್ ಮೆಹ್ತಾ ಹೇಳಿದರು.


ಅರ್ಪಣ ನವಜಾತ ಆರೈಕೆ ಕೇಂದ್ರದ (ಚಿತ್ರ ಕೃಪೆ: ಟೈಮ್ಸ್ ನೌ ನ್ಯೂಸ್)


ಸುಮಾರು 5 ನವಜಾತ ಶಿಶುಗಳು ಕಳೆದ ಮೂರು ತಿಂಗಳಿಂದ ರುಷಿನ ಅವರ ಈ ಸಾಮಾಜಿಕ ಕಳಕಳಿಯಿಂದ ಉತ್ತಮ ಆರೋಗ್ಯವನ್ನು ಪಡೆದುಕೊಂಡಿದ್ದಾರೆ. ಅಕಾಲಿಕವಾಗಿ ಜನಿಸಿದ, ಸದಾ ಜೀವನ್ಮರನದ ನಡುವೆ ಹೋರಾಡುತ್ತಾ ಬಂದಿರುವ ತಮ್ಮ ಮಗು ಕೊನೆಗೂ ತಾಯಿಯ ಎದೆಹಾಲಿನ ಸಂಪೂರ್ಣ ಪೋಷಕಾಂಶಗಳಿಂದ ಚೇತರಿಸಿಕೊಳ್ಳುತ್ತಿರುವುದಕ್ಕೆ ಮಕ್ಕಳ ಪೋಷಕರು ರುಶಿನಾ ಅವರಿಗೆ ಚಿರರುಣಿಗಳಾಗಿದ್ದಾರೆ.


ಅರ್ಪಣಾ ನವಜಾತ ಶಿಶುಗಳ ಆರೈಕೆ ಕೇಂದ್ರ ಇಂದಿಗೆ ಸುಮಾರು 200ಕ್ಕೂ ಹೆಚ್ಚು ಅಧಿಕ ಎದೆಹಾಲನ್ನು ದಾನಮಾಡುವ ತಾಯಂದಿರನ್ನು ಹೊಂದಿದ್ದು, ನವಜಾತ ಶಿಶುಗಳ ಉತ್ತಮ ಆರೋಗ್ಯಕರ ಬದುಕಿಗಾಗಿ ಶ್ರಮಿಸುತ್ತಿದ್ದೆ. ರುಷಿನ ಅವರಂತಹ ಪ್ರಜ್ಞಾವಂತ, ತ್ಯಾಗಮಯಿ ತಾಯಂದಿರ ಸಂಖ್ಯೆ ಸಾಸಿರವಾಗಲಿ ಎಂದು ಆಶಿಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.