ಆವೃತ್ತಿಗಳು
Kannada

ಕೋಸ್ಟಲ್​​​ವುಡ್​​ನಲ್ಲಿ ಮತ್ತೊಂದು ಅದ್ಭುತ ಹಿಟ್ ಕೊಟ್ಟ ನಿರ್ದೇಶಕ ದೇವದಾಸ್ ಕಾಪಿಕಾಡ್: 50 ದಿನಗಳಲ್ಲಿ ಚಂಡಿಕೋರಿಯ ಲಾಭ 1.68 ಕೋಟಿ..!

ವಿಶ್ವಾಸ್​​ ಭಾರಾಧ್ವಾಜ್​​

Vishwas Bharadwaj
29th Nov 2015
Add to
Shares
4
Comments
Share This
Add to
Shares
4
Comments
Share

ಖ್ಯಾತ ನಾಟಕಕಾರ ಹಾಗೂ ತುಳು ರಂಗಭೂಮಿ ಕಲಾವಿದ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅತ್ಯುತ್ತಮ ಗೆಲುವಿನ ಲಹರಿಯಲ್ಲಿದ್ದಾರೆ. ಏಕೆಂದರೆ ದೇವದಾಸ್ ಸ್ವತಃ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಂಡಿಕೋರಿ ಕೋಸ್ಟಲ್​​ವುಡ್​​ನಲ್ಲಿ ಭರ್ಜರಿ ಸದ್ದು ಮಾಡಿದೆ. ಸೆಪ್ಟೆಂಬರ್ 25ರಂದು ಕೋಸ್ಟಲ್ ಪ್ರದೇಶದ ಬಹುತೇಕ ಥಿಯೇಟರ್​​​ಗಳಲ್ಲಿ ತೆರೆಕಂಡ ಚಂಡಿಕೋರಿ ಯಶಸ್ವಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ.

image


ಬೊಳ್ಳಿ ಮೂವೀಸ್ ಬ್ಯಾನರ್​​ನಡಿಯಲ್ಲಿ ಶರ್ಮಿಳಾ ಕಾಪಿಕಾಡ್ ಹಾಗೂ ಸಚಿನ್ ಸುಂದರ್ ಅವರ ನಿರ್ಮಾಣದಲ್ಲಿ ಸಂಪೂರ್ಣ ಮನೋರಂಜನಾತ್ಮಕ ಚಂಡಿಕೋರಿ ತುಳು ಚಿತ್ರದ ಮುಖ್ಯಭೂಮಿಕೆಯಲ್ಲಿ ದೇವದಾಸ್ ಹಾಗೂ ಶರ್ಮಿಳಾ ಕಾಪಿಕಾಡ್​​ ಪುತ್ರ ಯುವ ಹಾಗೂ ಪ್ರತಿಭಾನ್ವಿತ ನಟ ಅರ್ಜುನ್ ಕಾಪಿಕಾಡ್, ಕರಿಶ್ಮಾ ಅಮೀನ್, ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಿದ್ಧ ತುಳು ಕಲಾವಿದರಾದ ನವೀನ್ ಡಿ.ಪಡೀಲ್, ಭೋಜರಾಜ ವಾಮಂಚೂರು, ಅರವಿಂದ ಬೋಳಾರ್, ಸತೀಶ್ ಬಂದಲೇ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್, ಉಮೇಶ್ ಮಿಜಾರ್, ರಾಘವೇಂದ್ರ ಕಾರಂತ್, ಸುಮಿತ್ರ ರೈ, ಲಾವಣ್ಯ ಬಂಗೇರ, ಮುಂತಾದವರು ಅಭಿನಯವಿದೆ. ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ.

image


ಬಿಡುಗಡೆಯಾದ 50 ದಿನಗಳಲ್ಲಿ ತನ್ನ ವ್ಯಾಪ್ತಿಯ ಕೆಲವೇ ಥಿಯೇಟರ್​​ಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಂಡು 1.68 ಕೋಟಿ ಸಂಪಾದನೆ ಮಾಡಿದ ಕೀರ್ತಿ ಚಂಡಿಕೋರಿ ತಂಡದ್ದು. ಈಗಾಗಲೆ ಹೊರದೇಶಗಳ ಕಲೆಕ್ಷನ್ ಸೇರಿ ಚಂಡಿಕೋರಿ ಹತ್ತಿರ ಹತ್ತಿರ 2 ಕೋಟಿ ನಿವ್ವಳ ಲಾಭ ಗಿಟ್ಟಿಸಿಕೊಂಡು ಬಾಕ್ಸ್ ಆಫೀಸ್​​ನಲ್ಲಿ ಚಂಡಿ ಕೋರಿ ಚಿಂದಿ ಉಡಾಯಿಸಿದೆ.

ಕೋಸ್ಟಲ್​​ವುಡ್ ಸ್ಟಾರ್ ನಿರ್ದೇಶಕ ದೇವದಾಸ್ ಕಾಪಿಕಾಡ್

250 ದಿನಗಳನ್ನು ಪೂರೈಸಿ ತುಳು ಚಿತ್ರರಂಗದಲ್ಲಿ ಕಮಾಲ್ ಮಾಡಿದ ದೇವದಾಸ್ ಕಾಪಿಕಾಡ್​​ರ ‘ಚಾಲಿಪೋಲಿಲು' ಚಿತ್ರದ ಅಪಾರ ಯಶಸ್ಸಿನ ಬಳಿಕ ಅವರು ಕೈಗೆತ್ತಿಕೊಂಡ ‘ಚಂಡಿ ಕೋರಿ' ಚಿತ್ರವೂ ತೆರೆಯ ಮೇಲೆ ಕಮಾಲ್ ಮಾಡಿದೆ. ವೈಚಾರಿಕತೆ, ಉತ್ತಮ ಸಂದೇಶಗಳ ಜತೆಗೆ ತುಳುನಾಡಿನ ಹಿರಿಮೆ ಗರಿಮೆ ಹಾಗೂ ಸಂಸ್ಕಾರಗಳನ್ನು ಸಾರುವ ಚಂಡಿ ಕೋರಿ ಸಿನೆಮಾ ತುಳು ಚಿತ್ರಾಭಿಮಾನಿಗಳ ನಿರೀಕ್ಷೆ ಹುಸಿ ಮಾಡಲಿಲ್ಲ. ಸೆಪ್ಟೆಂಬರ್ 25ರಂದು ಕೋಸ್ಟಲ್ ಪ್ರದೇಶದ ಬಹುತೇಕ ಥಿಯೇಟರ್​​ಗಳಲ್ಲಿ ತೆರೆಕಂಡ ಚಂಡಿಕೋರಿ ಯಶಸ್ವಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ.

image


ಚಂಡಿಕೋರಿ ಕರಾವಳಿಯಾದ್ಯಂತ ಏಕಕಾಲದಲ್ಲಿ ಸುಮಾರು 11 ಮುಖ್ಯ ಥಿಯೇಟರ್​​​ಗಳಲ್ಲಿ ಬಿಡುಗಡೆ ಕಂಡಿತ್ತು. ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಸಿನಿ ಪೊಲಿಸ್ ಹಾಗೂ ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿರೋಡ್​​ನಲ್ಲಿ ನಕ್ಷತ್ರ, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳದಲ್ಲಿ ರಾಧಿಕಾ ಮತ್ತು ಸುರತ್ಕಲ್​​ನಲ್ಲಿ ನಟರಾಜ್ ಚಿತ್ರ ಮಂದಿರದಲ್ಲಿ ರಿಲೀಸ್ ಮಾಡಲಾಗಿತ್ತು. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಚಿತ್ರಕ್ಕೆ ಅದ್ಭುತ ಸ್ವಾಗತ ಸಿಕ್ಕಿದೆ.

ಸೌತ್ ಹಾಗೂ ನಾರ್ತ್ ಕೆನರಾ ಪ್ರದೇಶಗಳಲ್ಲಿ ಚಂಡಿ ಕೋರಿ ತುಳು ಚಿತ್ರ ಸಿನಿ ಪ್ರೇಮಿಗಳಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದೆ. ಸುಳ್ಯದ ಥಿಯೇಟರ್​​ನಲ್ಲಿ ಚಂಡಿಕೋರಿ ವೀಕ್ಷಕ ಪ್ರಭುಗಳ ಶ್ಲಾಘನೆಗೆ ಪಾತ್ರವಾಗಿದ್ದು, ಅತಿ ಹೆಚ್ಚು ಸಂಗ್ರಹವಾಗಿದ್ದು ಇದೇ ಥಿಯೇಟರ್​​​ನಲ್ಲಿ. ಇನ್ನು ಮೂಡಬಿದ್ರಿ ಕಾರ್ಕಳ ಹಾಗೂ ಬೆಳ್ತಂಗಡಿಗಳಲ್ಲಿ ಕೋಮು ದಳ್ಳುರಿಯ ಭೀತಿಯ ಮಧ್ಯೆಯೂ ಚಂಡಿಕೋರಿಗೆ ತುಳು ಸಿನಿ ವೀಕ್ಷಕರು ಬಹುಪರಾಕ್ ಹೇಳಿದ್ದಾರೆ. ಈ ಭಾಗದ ಥಿಯೇಟರ್​​ಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಗಳಿಕೆಯಾಗಿರುವುದು ನಿರ್ಮಾಪಕರನ್ನು ಖುಷಿ ಪಡಿಸಿದೆ.

ಚಂಡಿಕೋರಿಗೆ ಸಾಗರದಾಚೆಗೂ ಅತ್ಯುತ್ತಮ ಪ್ರತಿಕ್ರಿಯೆ

ಚಂಡಿಕೋರಿ ಚಿತ್ರಕ್ಕೆ ಸಾಗರದಾಚೆಯ ರಾಷ್ಟ್ರಗಳಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಇತ್ತೀಚೆಗಷ್ಟೆ ಚಿತ್ರವನ್ನು ಬೆಹರನ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಕುವೈತ್, ಮಸ್ಕತ್, ಶಾರ್ಜಾ, ದುಬೈ ಹಾಗೂ ಅಬುದಾಬಿಯಲ್ಲಿ ಕಂಡ ಎಲ್ಲಾ ಪ್ರದರ್ಶನಗಳಲ್ಲಿಯೂ ಚಂಡಿಕೋರಿ ಅತ್ಯದ್ಭುತ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

image


ವಿಭಿನ್ನ ಶೈಲಿಯ ನಾಲ್ಕು ಹಾಡುಗಳು ಹಾಗೂ ಉತ್ಕ್ರಷ್ಟ ಮಟ್ಟದ ಸಾಹಸ ಆ್ಯಕ್ಷನ್ ಕಾಮಡಿ ಚಂಡಿಕೋರಿ ಚಿತ್ರದ ಹೈಲೈಟ್ಸ್. ನಿರ್ದೇಶಕ ದೇವದಾಸ್ ಕಾಪಿಕಾಡ್ ಹಾಗೂ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ತಲಾ ಒಂದೊಂದು ಹಾಡು ಹೇಳಿರುವುದು ಚಿತ್ರದ ಇನ್ನೊಂದು ವಿಶೇಷ.

ನವಿರಾದ ಪ್ರೇಮ ಕಥೆಯ ಜೊತೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆ ಒದಗಿಸುತ್ತಿದೆ. ಸುಮಾರು 2 ತಾಸು 20 ನಿಮಿಷಗಳ ಈ ಸಿನಿಮಾ ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿದೆ..

ಚಂಡಿ ಕೋರಿಯ ಅದ್ಭುತ ಯಶಸ್ಸಿನಿಂದ ಪ್ರೇರಿತಗೊಂಡ ಚಿತ್ರದ ನಿರ್ಮಾಪಕರು ಅರ್ಜುನ್ ಕಾಪಿಕಾಡ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ "ಬರ್ಸ" ಹೆಸರಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಈಗಾಗಲೆ ಅರ್ಜುನ್ ತಮಿಳಿನ ಅಂಜಿಲ್​​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್​​ವುಡ್​​ನಲ್ಲಿ ಅರ್ಜುನ್ ನಟಿಸಿರುವ ಮಧುರ ಸ್ವಪ್ನ ಚಿತ್ರವೂ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಿದ್ಧವಿದೆ. ಇದರ ಮಧ್ಯೆ ಈಗ ಘೋಷಣೆಯಾಗಿರುವ "ಬರ್ಸ" ಚಿತ್ರದಲ್ಲಿ ಅರ್ಜುನ್ ವಿಭಿನ್ನವಾಗಿ ಮಿಂಚಲಿದ್ದಾರಂತೆ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags