ಆವೃತ್ತಿಗಳು
Kannada

ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡುಲ್ಕರ್- ವಿಶ್ವಕಪ್ ಎತ್ತುವ ಕನಸು ಕಾಣ್ತಿದ್ದಾರೆ ಮಿಥಾಲಿ ರಾಜ್

ಟೀಮ್​ ವೈ.ಎಸ್​. ಕನ್ನಡ

26th Jun 2017
Add to
Shares
33
Comments
Share This
Add to
Shares
33
Comments
Share

ಭಾರತದ ಸರ್ವಶ್ರೇಷ್ಟ ಕ್ರಿಕೆಟರ್​​ಗಳ ಹೆಸರು ಹೇಳಲು ಹೋದರೆ ಅದೊಂದು ದೊಡ್ಡ ಲಿಸ್ಟ್ ಆಗಿ ಬಿಡುತ್ತದೆ. ಮನ್ಸೂರ್ ಆಲಿ ಖಾನ್ ಪಟೌಡಿಯಿಂದ ಹಿಡಿದು, ಫಾರೂಕ್ ಎಂಜಿನಿಯರ್ ತನಕ ಒಂದು ಜಮಾನವಾಗಿದ್ದರೆ, ವೆಂಕಟ್ ರಾಘವನ್, ಚಂದ್ರಶೇಖರ್ ಮತ್ತು ಬಿ.ಎಸ್.ಪ್ರಸನ್ನರದ್ದು ಇನ್ನೊಂದು ಜಮಾನ. ಕಪಿಲ್ ದೇವ್ ತಂಡದ ಸಾಧನೆ ಭಾರತೀಯ ಕ್ರಿಕೆಟ್​​ನ ಇತಿಹಾಸವನ್ನೇ ಬದಲಿಸಿತ್ತು. ರವಿಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್ ವಿನೋದ್ ಕಾಂಬ್ಳಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್ ಮತ್ತು ಅನಿಲ್ ಕುಂಬ್ಳೆಯಂತಹ ಸಾಧಕರು ಕ್ರಿಕೆಟ್ ಪಾಲಿನ ದಂತಕಥೆಗಳು. ಇನ್ನು ಮಹೇಂದ್ರ ಸಿಂಗ್ ಧೋನಿ, ಜಹೀರ್ ಖಾನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಶ್ವಿನ್, ಜಡೇಜಾ ಹೀಗೆ ಯುವ ಜನತೆಯ ಮನಸ್ಸು ಗೆದ್ದ ದೇಶದ ಹೀರೋಗಳಿಗೇನು ಕಡಿಮೆ ಇಲ್ಲ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ರಣಜಿಯಿಂದ ಹಿಡಿದು, ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದವರ ಬಗ್ಗೆ ಎಲ್ಲರಿಗೂ ಗೊತ್ತಿದೆ.

image


ಪುರುಷರ ಕ್ರಿಕೆಟ್ ಅಬ್ಬರದ ಮಧ್ಯೆ ಮಹಿಳಾ ಕ್ರಿಕೆಟ್ ಕಳೆ ಕಳೆದುಕೊಂಡಿದೆ ಅನ್ನುವುದು ಸತ್ಯವಾದರೂ, ಮಹಿಳಾ ಕ್ರಿಕೆಟ್​ನಲ್ಲಿ ಸಾಧಕರ ಪಟ್ಟಿ ಮಾತ್ರ ಚಿಕ್ಕದಿಲ್ಲ. ಅದರಲ್ಲೂ ಟೀಮ್ ಇಂಡಿಯಾದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್​​ನ ರನ್ ಮಷಿನ್ ಅನ್ನುವುದರಲ್ಲಿ ಸಂಶಯವೇ ಇಲ್ಲ. ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ 34 ವರ್ಷದ ಮಿಥಾಲಿ ದೊರೈ ರಾಜ್ ನಿಜಕ್ಕೂ ದೇಶದ ಹೆಮ್ಮೆಯ ಮಹಿಳಾ ಕ್ರಿಕೆಟರ್.

ಮಹಿಳಾ ಕ್ರಿಕೆಟ್​ " ಸಚಿನ್ ತೆಂಡುಲ್ಕರ್" ಅಂತಾನೇ ಮಿಥಾಲಿ ರಾಜ್ ರನ್ನು ಕರೆಯಲಾಗುತ್ತಿದೆ. ಮಿಥಾಲಿ ಸಾಧನೆಗೆ 2003ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಬಂದಿವೆ. ಮಿಥಾಲಿ ಕೇವಲ ಭಾರತೀಯ ಮಹಿಳಾ ಕ್ರಿಕೆಟ್​ನ ದಿ ಬೆಸ್ಟ್ ಆಟಗಾರ್ತಿ ಮಾತ್ರವಲ್ಲ, ವಿಶ್ವವೇ ಹೆಮ್ಮೆ ಪಡುವ ಮಹಿಳಾ ಕ್ರಿಕೆಟ್.

ಶಿಸ್ತು ಎಲ್ಲದಕ್ಕೂ ಮೂಲ ಕಾರಣ..!

ವಾಯುಪಡೆಯಲ್ಲಿ ಮಿಥಾಲಿ ತಂದೆ ಕೆಲಸ ಮಾಡಿದ್ದರು. ಶಿಸ್ತು ಈ ಕುಟುಂಬದ ಒಂದು ಅಂಗವಾಗಿತ್ತು. ಹುಡುಗಿಯ ತಾಯಿ ಹಾಗೂ ಸಹೋದರ ಕೂಡ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸ್ತಾ ಇದ್ದರು. ಆದ್ರೆ ಈ ಹುಡುಗಿ ಮಾತ್ರ ಕುಟುಂಬದವರಿಗಿಂತ ಭಿನ್ನವಾಗಿದ್ದಳು. ಆಲಸಿಯಾಗಿದ್ದಳು. ಶಾಲೆ ಗಂಟೆ ಎಂಟು ಮೂವತ್ತಕ್ಕೆ ಬಾರಿಸಿದ್ರೆ ಈಕೆ 8 ಗಂಟೆಗೆ ಏಳ್ತಾ ಇದ್ದಳು. ಮಗಳ ಈ ಆಲಸಿತನವನ್ನು ನೋಡಿದ ತಂದೆ ಬೇಸರಗೊಂಡಿದ್ದರು. ಮಗಳನ್ನು ಕ್ರಿಕೆಟ್ ಆಟಗಾರ್ತಿಯನ್ನಾಗಿ ಮಾಡುವ ಪಣ ತೊಟ್ಟರು. ಕ್ರಿಕೆಟ್ ಅಕಾಡೆಮಿಯಲ್ಲಿ ಮಗಳ ಹೆಸರು ಸೇರಿಸಿದ್ರು. ಹುಡುಗಿಯ ಸಹೋದರ ಕೂಡ ಕ್ರಿಕೆಡ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ. ಶಾಲಾ ಮಟ್ಟದ ಟೂರ್ನಮೆಂಟ್ ನಲ್ಲಿ ಆತ ಪಾಲ್ಗೊಳ್ತಾ ಇದ್ದ. ಮೊದ ಮೊದಲು ಹುಡುಗಿ ಅಲ್ಲಿಗೆ ಹೋಗಿ ಶಾಲೆಯ ಹೋಂ ವರ್ಕ್ ಮಾಡ್ತಾ ಇದ್ದಳು. ದಿನ ಕಳೆದಂತೆ ಅಣ್ಣನ ಆಟ ನೋಡ್ತಾ ಈಕೆ ಕೂಡ ಬ್ಯಾಟ್ ಹಿಡಿದಳು. ನೆಟ್ ಪ್ರ್ಯಾಕ್ಟೀಸ್ ಶುರುಮಾಡಿದಳು. ತಂದೆ ಪ್ರತಿ ದಿನ ಸ್ಕೂಟರ್ ನಲ್ಲಿ ಮಗ ಹಾಗೂ ಮಗಳನ್ನು ಕ್ರಿಕೆಟ್ ಅಕಾಡೆಮಿಗೆ ಕರೆದುಕೊಂಡು ಹೋಗ್ತಾ ಇದ್ದರು. ದಿನ ಕಳೆದಂತೆ ಹುಡುಗಿಗೆ ಕ್ರಿಕೆಟ್ ನಲ್ಲಿ ಆಸಕ್ತಿ ಜಾಸ್ತಿಯಾಯ್ತು. ಕ್ರಿಕೆಟನ್ನು ಪ್ರೀತಿಸಲು ಶುರುಮಾಡಿದಳು. ಕ್ರಿಕೆಟ್ ಜೀವನವಾಯ್ತು. ಪ್ರತಿಭೆ ಜೊತೆ ಅಭ್ಯಾಸ, ಉತ್ಸಾಹ, ಸಾಧಿಸಬೇಕೆಂಬ ಛಲ ಮೈದಾನದಲ್ಲಿ ಆಕೆ ಸಾಕಷ್ಟು ದಾಖಲೆ ಮಾಡಲು ನೆರವಾಯ್ತು. ಭಾರತ ತಂಡಕ್ಕೆ ಅನೇಕ ಐತಿಹಾಸಿಕ ಗೆಲುವು ತಂದುಕೊಟ್ಟಳು ಈಕೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಪ್ರಸಿದ್ಧಿಗೆ ಈಕೆ ಕಾರಣಳಾದ್ಲು. `ಮಹಿಳಾ ಕ್ರಿಕೆಟ್ ನ ತೆಂಡೂಲ್ಕರ್’ ಎಂಬ ಬಿರುದು ಈಕೆ ಮುಡಿಗೇರಿತು. ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಮಿಥಾಲಿ ಹಿಂದೆ ಶಿಸ್ತಿನ ಪಾಠವಿದೆ.

image


ಭರತನಾಟ್ಯದಿಂದ ಕ್ರಿಕೆಟ್ ಆಟಗಾರ್ತಿವರೆಗೆ..

ಮಿಥಾಲಿ ರಾಜ್ ಕೇವಲ ಭಾರತದ ಕ್ರಿಕೆಟ್ ಆಟಗಾರ್ತಿಯಲ್ಲ. ಅವರು ವಿಶ್ವದ ಅತ್ಯುತ್ತಮ ಮಹಿಳಾ ಕ್ರಿಕೆಟ್ ಬ್ಯಾಟ್ಸ್ಮನ್. ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮುನ್ನ ಮಿಥಾಲಿ ಭರತನಾಟ್ಯ ಕಲಿಯುತ್ತಿದ್ದರು. ಭರತನಾಟ್ಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಮಿಥಾಲಿ,ನಾಟ್ಯಗಾರ್ತಿಯಾಗುವ ಕನಸು ಹೊತ್ತಿದ್ದರು. ದೇಶ,ವಿದೇಶಗಳಲ್ಲಿ ಡಾನ್ಸ್ ಕಾರ್ಯಕ್ರಮ ನೀಡುವ ಬಯಕೆ ಅವರಲ್ಲಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಿಥಾಲಿ ನೀಡಿದ್ದರು. ವೇದಿಕೆಯಲ್ಲಿ ಅವರ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸ್ತಾ ಇತ್ತು. ಆದ್ರೆ ಕ್ರಿಕೆಟ್ ಅಕಾಡೆಮಿಗೆ ಕಾಲಿಟ್ಟ ನಂತ್ರ ಭರತನಾಟ್ಯ ಅಭ್ಯಾಸ ಮಾಡುವುದು ಕಡಿಮೆಯಾಗ್ತಾ ಬಂತು.ಸಮಯ ಸಿಕ್ಕಾಗ ಮಿಥಾಲಿ ಭರತನಾಟ್ಯವನ್ನು ಅಭ್ಯಾಸ ಮಾಡ್ತಾ ಇದ್ದರು. ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಅವರು ಭಾಗಿಯಾಗ್ತಾ ಇದ್ದಂತೆ,ಬೇರೆ ಬೇರೆ ಊರು,ದೇಶಗಳಿಗೆ ಹೋಗುವ ಸಂದರ್ಭ ಬಂದಿದ್ದರಿಂದ ನೃತ್ಯದ ಅಭ್ಯಾಸ ಸಂಪೂರ್ಣ ನಿಂತು ಹೋಯ್ತು. ಆಗ ಮಿಥಾಲಿ ನೃತ್ಯ ಶಿಕ್ಷಕರು ಡಾನ್ಸ್ ಅಥವಾ ಕ್ರಿಕೆಟ್ ಈವೆರಡರಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಹೇಳಿದರು. ತುಂಬಾ ಯೋಚನೆ ಮಾಡಿದ ನಂತ್ರ ಮಿಥಾಲಿ ನೃತ್ಯ ಹಾಗೂ ವೇದಿಕೆ ಬಿಟ್ಟು ಕ್ರಿಕೆಟ್ ಮತ್ತು ಮೈದಾನವನ್ನು ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು.

"ನಿರ್ಧಾರ ತೆಗೆದುಕೊಳ್ಳುವುದು ತುಂಬ ಕಠಿಣವಾಯ್ತು. ಆದ್ರೆ ಕ್ರಿಕೆಟ್ ನನ್ನನ್ನು ಸಂಪೂರ್ಣ ಆಕ್ರಮಿಸಿತ್ತು.ಅದನ್ನು ಹೊರತು ಬೇರೆ ವೃತ್ತಿಯನ್ನು ಆಯ್ದುಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ.’’
- ಮಿಥಾಲಿ ರಾಜ್, ಕ್ರಿಕೆಟ್ ಆಟಗಾರ್ತಿ

ಕ್ರಿಕೆಟ್​ ಸಾಧನೆ ಹಿಂದೆ ಇದ್ದಾರೆ ತಂದೆ

ಮೈದಾನದಲ್ಲಿ ಮಿಥಾಲಿ ರಾಜ್ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಮಿಥಾಲಿ ತಮ್ಮ ಯಶಸ್ಸನನ್ನು ತಮ್ಮ ತಂದೆ ದೊರೈ ರಾಜ್ ಗೆ ನೀಡ್ತಾರೆ. ಮಗಳು ಚಿಕ್ಕ ವಯಸ್ಸಿನಲ್ಲಿಯೇ ಭಾರತ ಕ್ರಿಕೆಟ್ ತಂಡದಲ್ಲಿ ಆಡಲಿ ಎಂಬುದು ಮಿಥಾಲಿ ತಂದೆಯ ಆಸೆಯಾಗಿತ್ತಂತೆ. ತಂದೆ ಹಾಗೂ ಮಗಳ ಪರಿಶ್ರಮದಿಂದಾಗಿ 14ನೇ ವಯಸ್ಸಿನಲ್ಲಿಯೇ ಮಿಥಾಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟ್ಯಾಂಡ್ ಬೈ ಆಗಿ ಆಯ್ಕೆಯಾಗಿದ್ದರು. 16ನೇ ವಯಸ್ಸಿನಲ್ಲಿ ಮಿಥಾಲಿ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿದ್ರು. ಜೂನ್ 26,1999ರಲ್ಲಿ ಮಿಲ್ಟಂ ಕಿನೇಸ್ ನ ಕ್ಯಾಂಪ್​ಬೆಲ್ ಪಾರ್ಕ್ ನಲ್ಲಿ ರೇಶ್ಮಾ ಗಾಂಧಿ ಜೊತೆ ಐರ್​ಲೆಂಡ್ ವಿರುದ್ಧ ತಮ್ಮ ಅಂತರಾಷ್ಟ್ರೀಯ ಪಂದ್ಯವಾಡಿದ್ದರು ಮಿಥಾಲಿ. ಈ ಪಂದ್ಯದಲ್ಲಿ 114 ರನ್ ಗಳಿಸಿದ್ದರು. ರೇಶ್ಮಾ 104 ರನ್ ಗಳಿಸಿದ್ದರು. ಭಾರತ ತಂಡ 161 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯ ಮೂಲಕ ಭಾರತಕ್ಕೊಂದು ಭರವಸೆಯ ಆಟಗಾರ್ತಿ ಸಿಕ್ಕಿದ್ದರು. ನಂತರ ಏಕದಿನ ಪಂದ್ಯದಲ್ಲಿ 5,500 ಸಾವಿರ ರನ್ ಗಳಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಗೆ ಗಳಿಸಿದ್ರು ಮಿಥಾಲಿ. ಮಿಥಾಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು 2002ರಲ್ಲಿ ಆಡಿದ್ರು. ಜನವರಿ 14-17ರವರೆಗೆ ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮಿಥಾಲಿ ಶೂನ್ಯಕ್ಕೆ ಔಟ್ ಆಗಿದ್ದರು. ನಂತ್ರ ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಬಿರುದು ಪಡೆದ್ರು.

ಇದನ್ನು ಓದಿ: ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

ಮಹಿಳಾ ಕ್ರಿಕೆಟ್ ಮತ್ತು ಸತ್ಯ

ಮಿಥಾಲಿ ರಾಜ್ ಪಯಣ ಸುಲಭವಾಗಿರಲಿಲ್ಲ. ಚಿಂತೆ,ಒತ್ತಡವಿಲ್ಲದೆ ಇಲ್ಲಿಯವರೆಗೆ ಅವರು ಬಂತು ನಿಂತಿಲ್ಲ. ಮಹಿಳೆಯರೂ ಕ್ರಿಕೆಟ್ ಆಡ್ತಾರೆ ಎಂಬುದು ಗೊತ್ತಿಲ್ಲದ ಕಾಲದಲ್ಲಿ ಮಿಥಾಲಿ ಕ್ರಿಕೆಟ್ ಆಡಲು ಶುರುಮಾಡಿದ್ದರು. ಅನೇಕರಿಗೆ ಮಹಿಳೆಯರು ಕ್ರಿಕೆಟ್ ಆಡ್ತಾರೆ ಎಂಬುದು ಗೊತ್ತೇ ಇರಲಿಲ್ಲ. ಮಹಿಳಾ ಕ್ರಿಕೆಟ್ ತಂಡ ಕೂಡ ಇದೆ. ಅವರೂ ಪುರುಷರು ಆಡುವ ಮೈದಾನದಲ್ಲಿಯೇ ಆಡ್ತಾರೆ, ಎರಡೂ ಕ್ರಿಕೆಟ್ ನಿಯಮಗಳು ಒಂದೇ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಮಿಥಾಲಿ ಭಾರತೀಯ ಕ್ರಿಕೆಟ್ ತಂಡ ಸೇರಿದಾಗ, ಭಾರತ ಮಹಿಳಾ ಕ್ರಿಕೆಟ್ ತಂಡದ ಉತ್ತಮ ಆಟಗಾರ್ತಿ ಯಾರು? ನೋಡಲು ಅವರು ಹೇಗಿದ್ದಾರೆ? ಅವರ ದಾಖಲೆಗಳು ಏನು? ಎಂಬುದರ ಬಗ್ಗೆ ತಿಳಿದಿರಲಿಲ್ಲವಂತೆ. ಹಿರಿಯ ತಂಡದಲ್ಲಿ ಸ್ಥಾನ ಪಡೆದ ನಂತ್ರ ಮಿಥಾಲಿಗೆ ಶಾಂತಾ ರಂಗಸ್ವಾಮಿ, ಡಯಾನಾ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ತಂತೆ. ಆ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಪುರುಷ ಕ್ರಿಕೆಟ್ ತಂಡದ ಬಗ್ಗೆ, ಪಂದ್ಯದ ಬಗ್ಗೆ ಚರ್ಚೆಯಾಗ್ತಾ ಇತ್ತು. ಆದ್ರೆ ಮಹಿಳಾ ತಂಡದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ರೈಲಿನಲ್ಲಿ ಮಹಿಳಾ ಕ್ರಿಕೆಟ್ ತಂಡ ಪ್ರಯಾಣ ಮಾಡ್ತಾ ಇದ್ದರೆ ಹಾಕಿ ತಂಡವಾ ಎಂದು ಪ್ರಶ್ನೆ ಮಾಡ್ತಾ ಇದ್ದರಂತೆ. ಇಲ್ಲ ಕ್ರಿಕೆಟ್ ಟೀಮ್​ ಅಂದ್ರೆ ಜನ ಆಶ್ಚರ್ಯಗೊಳ್ಳುತ್ತಿದ್ದರಂತೆ. ಜೊತೆಗೆ ಅನೇಕ ಪ್ರಶ್ನೆಗಳನ್ನು ಕೇಳ್ತಾ ಇದ್ದರಂತೆ.

ಪುರುಷ ಆಟಗಾರರ ಜೊತೆ ಅಭ್ಯಾಸ ಮಾಡಲು ಹೋಗ್ತಾ ಇದ್ದ ದಿನ ಮಿಥಾಲಿಗೆ ಇನ್ನೂ ನೆನಪಿದೆ. ಆಗ ಆಟಗಾರರು ಕೆಟ್ಟದಾಗಿ ಕಮೆಂಟ್ ಮಾಡ್ತಾ ಇದ್ದರಂತೆ. ಆಟವಾಡ್ತಾ ಇರುವವಳು ಹುಡುಗಿ. ಚೆಂಡನ್ನು ನಿಧಾನವಾಗಿ ಹಾಕು,ಗಾಯವಾದ್ರೆ ಕಷ್ಟ ಎನ್ನುತ್ತಿದ್ದರಂತೆ. ಆದ್ರೆ ಎಲ್ಲಿಯೂ ಮಿಥಾಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಭರವಸೆ ಕಳೆದುಕೊಳ್ಳಲಿಲ್ಲ. ಸವಾಲನ್ನು ಎದುರಿಸಿ ನಿಂತರು. ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯಿಂದಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಒಂದು ಗೌರವಾನ್ವಿತ ಸ್ಥಾನ ನೀಡಲುವಲ್ಲಿ ಮಹತ್ವದ ಪಾತ್ರವಹಿಸಿದ್ರು.

image


ಚೆನ್ನಾಗಿ ಆಡುವುದೇ ಗುರಿ

ಕ್ರಿಕೆಟ್ ಆಡಲು ಶುರುಮಾಡಿದ್ದ ಮಿಥಾಲಿ ಯಾವುದೇ ದೊಡ್ಡ ಗುರಿ ಇಟ್ಟುಕೊಂಡಿರಲಿಲ್ಲ. ಕ್ರಿಕೆಟ್ ಟೀಂಗೆ ಆಯ್ಕೆಯಾಗುವುದು ಅವರ ಮೊದಲ ಗುರಿಯಾಗಿತ್ತು. ಆಯ್ಕೆಯಾದ ನಂತರ ತಮ್ಮ ಸ್ಥಾನವನ್ನು ಖಾಯಂಗೊಳಿಸುವುದು ಅವರ ಟಾರ್ಗೆಟ್ ಆಯ್ತು. ನಂತ್ರ ತಂಡದಲ್ಲಿ ಮುಖ್ಯ ಆಟಗಾರ್ತಿಯಾಗುವುದು ಅವರ ಗುರಿಯಾಗಿತ್ತು.ಅದಕ್ಕಾಗಿ ಅವರು ಪರಿಶ್ರಮ ಪಟ್ಟರು. ಪ್ರತಿಯೊಂದು ಪಂದ್ಯದಲ್ಲಿಯೂ ಪಣತೊಟ್ಟು ಆಟವಾಡಿದರು. ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದರು. ಉತ್ತಮ ಆಟದಿಂದಾಗಿ ಅವರು ಟೀಂ ಇಂಡಿಯಾದ ನಾಯಕಿ ಪಟ್ಟಕ್ಕೇರಿದರು. ನಾಯಕಿ ಪಟ್ಟ ಎಲ್ಲರಿಗೂ ಸಿಗುವಂತಹದ್ದಲ್ಲ. ಅದೃಷ್ಟ ಯಾರಿಗಿದೆಯೋ ಅವರು ಮಾತ್ರ ಈ ಸ್ಥಾನಕ್ಕೇರುತ್ತಾರೆ ಎನ್ನುತ್ತಾರೆ ಮಿಥಾಲಿ.

'' ಡ್ಯಾಡಿಯಿಂದಾಗಿಯೇ ನಾನು ಕ್ರಿಕೆಟ್ ವೃತ್ತಿಯನ್ನು ಆರಂಭಿಸಿದೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ಭಾರತ ಪರ ಆಡಲಿ ಎಂದು ಅವರು ಬಯಸಿದ್ದರು. ನಾನು ಹೆಚ್ಚಿನ ಸ್ಕೋರ್ ಮಾಡಿದಾಗ ಡ್ಯಾಡಿಗೆ ಪೋನ್ ಮಾಡಿ ತಿಳಿಸುತ್ತೇನೆ. ಅವರು ಖುಷಿಯಾಗುತ್ತಾರೆ. ಅವರ ಈ ಖುಷಿಯೇ ನನಗೆ ಪ್ರೇರಣೆ ನೀಡುತ್ತದೆ.’’

ಮಗಳಿಗಾಗಿ ತಾಯಿಯ ತ್ಯಾಗ

ಕ್ರಿಕೆಟ್ ಬಗ್ಗೆ ಅಪ್ಪನಿಗೆ ತಿಳಿದಷ್ಟು ಮಿಥಾಲಿ ಅಮ್ಮನಿಗೆ ತಿಳಿದಿಲ್ಲ. ಆದ್ರೂ ಮಗಳ ಭವಿಷ್ಯದಲ್ಲಿ ತಾಯಿಯ ಪಾತ್ರ ಮಹತ್ವದ್ದು. ಮಗಳಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಅಮ್ಮ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಿಥಾಲಿ ಅಮ್ಮನ ಸಲಹೆ ಪಡೆಯುತ್ತಾರಂತೆ. ಮಾನಸಿಕ ಚಿಂತೆಗೆ ಒಳಗಾದಾಗ ಮಿಥಾಲಿ ಅಮ್ಮನಿಗೆ ಫೋನ್ ಮಾಡ್ತಾರಂತೆ. ಅವರು ಹೇಳಿದಂತೆ ನಡೆಯುವುದರಿಂದ ಮಿಥಾಲಿಗೆ ನೆಮ್ಮದಿ ಸಿಗುತ್ತದೆಯಂತೆ.

ಸಚಿನ್​ ತೆಂಡುಲ್ಕರ್​ ಜೊತೆ ತುಲನೆ

ಸಚಿನ್ ತೆಂಡೂಲ್ಕರ್ ಗೆ ನನ್ನನ್ನು ಹೋಲಿಸಿದ್ರೆ ನನಗೆ ಬಹಳ ಖುಷಿಯಾಗುತ್ತದೆ. ಅವರ ಸಾಧನೆ ಮತ್ತು ಕೊಡುಗೆ ತುಂಬಾ ದೊಡ್ಡದು. ಅಷ್ಟು ದೊಡ್ಡ ಆಟಗಾರನ ಜೊತೆ ನನ್ನನ್ನು ತುಲನೆ ಮಾಡುವುದು ಖುಷಿ ವಿಚಾರ. ಆದ್ರೆ ಜನರು ನನ್ನನ್ನು ನನ್ನ ಹೆಸರಿನಿಂದ ಗುರುತಿಸಲಿ, ನನ್ನ ಸಾಧನೆ ಹಾಗೂ ಕೊಡುಗೆಗಳ ಮೂಲಕ ಗುರುತಿಸಲಿ ಎಂಬುದು ನನ್ನ ಆಸೆ.

ಯಶಸ್ಸಿನ ಮಂತ್ರ 

ಪರಿಶ್ರಮವಿಲ್ಲದೆ ಹೋದಲ್ಲಿ ಯಶಸ್ಸು ಸಿಗುವುದಿಲ್ಲ. ಭಾರತೀಯ ಕ್ರಿಕೆಟ್ ಟೀಂನಲ್ಲಿ ಸ್ಥಾನ ಪಡೆಯಲು ಹುಡುಗಿಯರಿಗೆ ವರ್ಷಾನುಗಟ್ಟಲೆ ಪರಿಶ್ರಮಪಡಬೇಕಾಗುತ್ತದೆ.ಮಹಿಳೆಯರು ಮೊದಲು ತಮ್ಮ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ನಂತರ ಅದನ್ನು ಗಮನದಲ್ಲಿಟ್ಟುಕೊಂಡು ಗುರಿಯೆಡೆಗೆ ಸಾಗಬೇಕೆಂದು ಮಿಥಾಲಿ ಸಲಹೆ ನೀಡಿದ್ದಾರೆ.


ಕ್ರಿಕೆಟ್​​ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿರುವ ಮಿಥಾಲಿ ಮಹಿಳಾ ಕ್ರಿಕೆಟ್ ಏಕದಿನ ಪಂದ್ಯಗಳಲ್ಲಿ ವಿಶ್ವದಲ್ಲೇ ಅತೀ ಹೆಚ್ಚಿನ ರನ್ ಬಾರಿಸಿದ ಆಟಗಾರ್ತಿಯರ ಪೈಕಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವಕಪ್ ಎತ್ತಿಹಿಡಿಯುವ ಕನಸು ಕಾಣುತ್ತಿರುವ ಮಿಥಾಲಿ ರಾಜ್ 5,500ಕ್ಕಿಂತಲೂ ಹೆಚ್ಚು ರನ್ ಸ್ಕೋರ್ ಮಾಡಿದ್ದಾರೆ.

ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುತ್ತಿರುವ ಟೀಮ್ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. 8ನೇ ಬಾರಿಗೆ ವಿಶ್ವಕಪ್ನಲ್ಲಿ ಪಾಲ್ಗೊಳ್ಳುತ್ತಿರುವ ಟೀಮ್ ಇಂಡಿಯಾ ಈಗ ಮಿಥಾಲಿ ನೇತೃತ್ವದಲ್ಲಿ ಕಪ್ ಎತ್ತಿ ಸಂಭ್ರಮಿಸುವ ಕನಸು ಕಾಣ್ತಿದೆ. ಮಿಥಾಲಿ ಮತ್ತು ಅವರ ತಂಡಕ್ಕೆ ಎಲ್ಲರಿಂದಲೂ ಶುಭ ಹಾರೈಕೆಗಳು.

ಇದನ್ನು ಓದಿ:

1. ವ್ಯವಹಾರ ಕುದುರಿಸಿಕೊಳ್ಳುವುದು ಸುಲಭದ ಮಾತಲ್ಲ..! ಅದಕ್ಕೂ ಬೇಕು ಸಖತ್​​ ಐಡಿಯಾ..!

2. ಶೇಫ್ ಆಫ್ ಯೂ; ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿರುವ ಮ್ಯೂಸಿಕ್

3. ಬಂಗಾರದಿಂದ್ಲೇ ಬಂಗಾರದಂಥ ಬದುಕು ಕಟ್ಟಿದ 'ಪ್ರಜ್ಞಾ'ವಂತೆ... 

Add to
Shares
33
Comments
Share This
Add to
Shares
33
Comments
Share
Report an issue
Authors

Related Tags