ನಗುವಿನ ಹಾದಿಯಲಿ ಕಾರ್ಟೂನ್ ಯಾತ್ರೆ

ಕಳೆದ 4 ವರ್ಷಗಳಿಂದ ನಾಡಿನ ಖ್ಯಾತ ಕಾರ್ಟೂನಿಸ್ಟ್ಗಳು ಮತ್ತು ವಿಭಿನ್ನ ಕುಂದಾಪುರ ಕಾರ್ಟೂನ್ ಅವರು ನಡೆಸಿಕೊಂಡು ಬರುತ್ತಿರುವ ಕಾರ್ಟೂನ್ ಹಬ್ಬ, ಜನಸಮುದಾಯದಲ್ಲಿ ಕಾರ್ಟೂನ್ ಕುರಿತ ಅಭಿರುಚಿಯನ್ನು ಬೆಳೆಸುತ್ತಾ ಬಂದಿದೆ.

ನಗುವಿನ ಹಾದಿಯಲಿ ಕಾರ್ಟೂನ್ ಯಾತ್ರೆ

Friday November 22, 2019,

4 min Read

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ | ನಗುವ ಕೇಳುತ ನಗುವುದತಿಶಯದ ಧರ್ಮ || ನಗುವ ನಗಿಸುವ ನಗಿಸಿ ನಗುತ ಬಾಳುವ ವರವ | ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ||


ನಕ್ಕರೆ ಅದುವೇ ಸ್ವರ್ಗ ಎಂದು ತಿಳಿದವರು ಸುಮ್ಮನೆ ಹೇಳಿಲ್ಲ ನೋಡಿ, ನಗ್ತಾ ನಗ್ತಾನೆ ತಪ್ಪನ್ನು ತಿದ್ದಬಹುದು, ತಿಳಿವನ್ನು ಹರಡಬಹುದು. ಬಹುಶಃ ಈ ಕೆಲಸವನ್ನು ಕಾರ್ಟೂನ್ ಕಲೆ ಬಹಳ ಪರಿಣಾಮಕಾರಿಯಾಗಿ ಮಾಡುತ್ತದೆ. ಕಾರ್ಟೂನ್ ಎಂದರೆ ಬರಿಯ ಚಿತ್ರವಲ್ಲ, ಅದು ಸಮಕಾಲೀನ ಸಮಾಜಕ್ಕೆ ಹಿಡಿದ ಕೈಗನ್ನಡಿ. ಇಲ್ಲಿ ಕಾರ್ಟೂನಿಸ್ಟ್ ಗೆ ರಾಜಕೀಯ, ಧಾರ್ಮಿಕ, ಆರ್ಥಿಕ, ಕಲೆ ಸಾಹಿತ್ಯ ಜೊತೆಗೆ ಹೊಂದಿಷ್ಟು ಹಾಸ್ಯ ಪ್ರಜ್ಞೆಯ ಅಗತ್ಯವಿರುತ್ತದೆ.


ಈ ಹಿನ್ನಲೆಯಲ್ಲಿ ಕಾರ್ಟೂನ್ ಕುರಿತು ಒಂದಿಷ್ಟು ಕುತೂಹಲ, ಆಸಕ್ತಿ ಮತ್ತು ಅರಿವನ್ನು ಮೂಡಿಸಲು ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಸಂಘಟನೆಯಲ್ಲಿ ಹೊರಟಿದೆ ಕುಂದಾಪುರದ ಕಾರ್ಟೂನ್ ಕಾರ್ಯಾಗಾರ. ಈ ತಿಂಗಳ 23 ರಿಂದ ನಡೆಯುವ 4 ದಿನದ ಈ ಕಾರ್ಯಾಗಾರ ವಿವಿಧ ಚಟುವಟಿಕೆಗಳನ್ನು ಹೊಂದಿದೆ.


ಕಾರ್ಟೂನ್‌ ಹಬ್ಬದಲ್ಲಿ ಜಯಂತ ಕಾಯ್ಕಿನಿ ಮತ್ತು ಸತೀಶ ಆಚಾರ್ಯ

ಮುಂಬೈ ನ ಮಿಡ್ ಡೇ ಅಲ್ಲಿ ಕಾರ್ಟೂನ್ ಬದುಕನ್ನ ಕಟ್ಟಿಕೊಂಡ ಸತೀಶ್ ಆಚಾರ್ಯರು ಮೂಲತ ಎಂ ಬಿ ಎ ಪಧವೀಧರರು. ತೀವ್ರವಾದ ಕಾರ್ಟೂನ್ ಸೆಳೆತ ಅವರ ಹವ್ಯಾಸವನ್ನೇ ವೃತ್ತಿಯಾಗಿ ಆಯ್ದುಕ್ಕೊಳ್ಳುವಂತೆ ಮಾಡಿತು. ಹಲವು ವರ್ಷಗಳ ಸೇವೆಯ ನಂತರ ಮತ್ತೆ ಕುಂದಾಪುರಕ್ಕೆ ವಾಪಸ್ಸಾದ ಸತೀಶ್ ಆಚಾರ್ಯರು ತಮ್ಮ ಹುಟ್ಟೂರಿನಲ್ಲಿ ಕಾರ್ಟೂನ್ ಅಲೆಯನ್ನ ಸೃಷ್ಠಿಸಲು ಪ್ರಾರಂಭಿಸಿದರು.


"ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಂದು ಬಹಳಷ್ಟು ಕಾರ್ಟೂನಿಸ್ಟ್ ಗಳು ದೇಶದೆಲ್ಲದೆಡೆ ಗುರುತಿಸಲ್ಪಟ್ಟಿದ್ದಾರೆ. ಇದು ಒಂದು ಅಲೆಯಾಗಿ ಮುಂದಿನ ತಲೆಮಾರಿಗೂ ತಲುಪಬೇಕು. ಮುಖ್ಯವಾಗಿ ಮಕ್ಕಳಲ್ಲಿ ಈ ಕುರಿತು ಆಸಕ್ತಿ ಮೂಡಬೇಕು, ಜನಸಾಮಾನ್ಯರಲ್ಲಿ ಅಭಿರುಚಿ ಬೆಳೆಯಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರೆಲ್ಲ ಸೇರಿ ಈ ಪ್ರಯತ್ನಕ್ಕೆ ಕೈಹಾಕಿದ್ದೇವೆ" ಎಂದರು ಸತೀಶ್ ಆಚಾರ್ಯ.


ಕಾರ್ಟೂನ್ ಹಬ್ಬ


ಕುಂದಾಪುರದ ಈ ಕಾರ್ಟೂನ್ ಹಬ್ಬ ದೇಶದಲ್ಲೇ ಇದುವರೆಗೆ ನಡೆದ ಕಾರ್ಟೂನ್ ಕುರಿತಾದ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿದ್ದು, ಕಳೆದ 4 ವರ್ಷಗಳಿಂದ ಯಶ್ವಸಿಯಾಗಿ ನಡೆದುಕೊಂಡು ಬಂದಿದೆ ಎಂದರು.


ಕಾರ್ಟೂನ್ ಹಬ್ಬದ ವಿಶೇಷತೆಗಳು

ಈಶ್ವರ್ ಅಲ್ಲಾ ತೇರೋ ನಾಮ್


ಈ ವರ್ಷದ ಕಾರ್ಟೂನ್ ಹಬ್ಬದ ವಿಷಯ ಈಶ್ವರ್ ಅಲ್ಲಾ ತೇರೋ ನಾಮ್. ಕೋಮು ಸಾಮರಸ್ಯವನ್ನು ಸಾರುವ ನಿಟ್ಟಿನಲ್ಲಿ, ಗಾಂಧೀಜಿ ಅವರ ಚಿಂತನೆಗಳ ಮತ್ತು ಸಮಕಾಲೀನ ಪ್ರಶ್ನೆಗಳ ಬಗ್ಗೆ ಕಾರ್ಟೂನ್ ಹಬ್ಬ ಚರ್ಚಿಸಲಿದೆ.


ನಾನೂ ಗಾಂಧಿ


ಕಾರ್ಟೂನ್ ಹಬ್ಬದ ಪ್ರಯುಕ್ತವಾಗಿ ತಮ್ಮಲ್ಲಿ ಅಡಗಿರುವ ಗಾಂಧಿಯನ್ನು, ಗಾಂಧಿ ಚಿಂತನೆಯನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಗಾಂಧಿ ಚಿಂತನೆ ಕುರಿತ ತಮ್ಮ ಅಭಿಪ್ರಾಯವನ್ನು ವಿಡಿಯೋ ಮೂಲಕ ನೂರಾರು ಜನರು ಹಂಚಿಕೊಂಡರು. ಇದು ಅನೇಕ ವೈವಿಧ್ಯತೆಯನ್ನು ಮೀರಿ, ನಮ್ಮೆಲ್ಲರಲ್ಲಿರುವ ಐಕ್ಯತಾ ಭಾವವನ್ನು ತೋರಿಸುತ್ತದೆ, ಎಂದು ಸತೀಶ್ ಆಚಾರ್ಯ ಹೇಳಿದರು.


ಈ ವರ್ಷ ದ ಥೀಮ್


ಬಣ್ಣ ಬಣ್ಣದ ಕಾರ್ಟೂನ್ ಪ್ರದರ್ಶನ


ಸುಮಾರು 4 ದಿನಗಳ ವರೆಗೆ ನಾಡಿನ ಹಾಗೂ ಇತರೆ ರಾಜ್ಯಗಳಿಂದ ಆಗಮಿಸುವದ ಕಾರ್ಟೂನಿಸ್ಟ್ ಗಳು ತಮ್ಮ ಕಾರ್ಟೂನ್ ನನ್ನು ಪ್ರದರ್ಶನಕ್ಕೆ ಇಡುತ್ತಾರೆ.


ಕಾರ್ಟೂನ್ ಪ್ರದರ್ಶನ


ಸ್ಟ್ಯಾಂಡ್ ಅಪ್ ಕಾಮಿಡಿ


ಕುಂದಾಪ್ರ ಕನ್ನಡದ ನಗೆ ಕಡಲಲ್ಲಿ ಎಲ್ಲರನ್ನು ತೇಲಾಡಿಸುವುದೇ ಈ ಸ್ಟ್ಯಾಂಡ್ ಅಪ್ ಕಾಮಿಡಿಯ ಗುರಿ. "ನಿತ್ಕಂಡ್ ಕಾಮಿಡಿ ಮಾಡಿ ಕುತ್ಕಂಡ್ ನಗಾಡಿ" ಎನ್ನುತ್ತಲೇ, ಖ್ಯಾತ ಕುಂದಾಪ್ರಕನ್ನಡದ ವಾಗ್ಮಿಗಳಿಂದ ಕೂಡಿರುವ ಈ ಕಾರ್ಯಕ್ರಮ ಎಲ್ಲರನ್ನು ನಗೆ ಕಡಲಲ್ಲಿ ತೇಲಿಸುತ್ತದೆ.


ಕಾರ್ಟೂನ್ ರಥ ಯಾತ್ರೆ


ಕ್ರಾಂತಿಕಾರಕ ಕಾರ್ಟೂನ್


ಕಾರ್ಟೂನ್ ಕೇವಲ ಒಂದು ವರ್ಣಚಿತ್ರವಲ್ಲ. ಚಿತ್ರಕಾರರಿಗೂ ಕಾರ್ಟೂನಿಸ್ಟ್ ಗಳಿಗೂ ವ್ಯತ್ಯಾಸವಿದೆ. ಕಾರ್ಟೂನ್ ಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಕಲೆ, ಮೊದಲಾದ ವಿಷಯಗಳ ಬಗ್ಗೆ ಅರಿವು ಅಗತ್ಯ. ಮತ್ತು ಅದನ್ನು ಹಾಸ್ಯದ ಮೂಲಕವೇ ಬಿತ್ತರಿಸಲು ಹಾಸ್ಯ ಪ್ರಜ್ಞೆಯು ಕ್ಯಾರ್ಗೂನಿಸ್ಟ್ ಗಳಲ್ಲಿ ಇರಬೇಕಾಗುತ್ತದೆ. ಆದರಿಂದ ಕಾರ್ಟೂನ್ ಮತ್ತು ಕಾರ್ಟೂನಿಸ್ಟ್ ನ ಪಾತ್ರವನ್ನು, ಸವಾಲುಗಳನ್ನು ಮತ್ತು ಸುಧಾರಣೆಗಳ ಕುರಿತ ಚರ್ಚೆ, ವಿಚಾರ ಗೋಷ್ಠಿಗಳು ಇಲ್ಲಿನ ಪ್ರಮುಖ ಕಾರ್ಯಕ್ರಮವಾಗಿರುತ್ತವೆ.


ದಿವಂಗತ ಮಾಯಾ ಕಾಮತ್ ಚಿತ್ರ ಬಿಡಿಸುವ ಸ್ಪರ್ಧೆ


ಮೊಟ್ಟ ಮೊದಲ ಮಹಿಳಾ ಪ್ರೊಫೆಷನಲ ಕಾರ್ಟೂನಿಸ್ಟ್ ದಿವಂಗತ ಮಾಯಾ ಕಾಮತ್ ಅವರ ಸ್ಮರಣಾರ್ಥ ಪ್ರತಿ ವರ್ಷವೂ ಕಾರ್ಟೂನ್ ಹಬ್ಬ ಅವರ ಹೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದೆ. ಇದು ಎಳೆಯ ಮಕ್ಕಳಲ್ಲಿ ಕಾರ್ಟೂನ್ ಪ್ರಜ್ಞೆಯನ್ನು ಜಾಗೃತಗೊಳಿಸುವುದಲ್ಲದೆ ಅವರ ಪ್ರತಿಭೆಗೆ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ.


ಮಾಸ್ಟರ್ ಸ್ಟ್ರೋಕ್


ದೇಶದ ಖ್ಯಾತ ಜರ್ನಲಿಸ್ಟ್ ಗಳು, ಕಾರ್ಟೂನಿಸ್ಟ್ ಗಳ ಸಮಾಗಮವೇ ಮಾಸ್ಟರ್ ಸ್ಟ್ರೋಕ್. ಇದು ಕೇವಲ ಉಪನ್ಯಾಸವಲ್ಲ ಬದಲಿಗೆ ಆರೋಗ್ಯಕರ ಚರ್ಚೆ ಹಾಗೂ ಸಂವಾದ. ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವನ್ನು ಹಂಚಿಕೊಳ್ಳುತ್ತಾರೆ, ಪ್ರಶ್ನೆಗಳಿಗೆ ಉತ್ತರಿಸುತ್ತಾರೆ, ಹಾಗೆ ಆಸಕ್ತರಲ್ಲಿ ಕಾರ್ಟೂನ್ ಪ್ರೀತಿಯನ್ನು ಚಿಗುರೊಡೆಸುತ್ತಾರೆ.


ಚಿತ್ರನಿಧಿ


ಕಾರ್ಟೂನ್ ಹಬ್ಬದ ಸಾಮಾಜಿಕ ಕಳಕಳಿಯನ್ನು ಪ್ರತಿನಿಧಿಸುತ್ತದೆ, ಚಿತ್ರನಿಧಿ. ನಾಡಿನ ಕಾರ್ಟೂನ್ ದಿಗ್ಗಜರಿಂದ ಆಸಕ್ತರು ತಮ್ಮ ಕ್ಯಾರಿಕೆಚರ್ ನನ್ನು ಬಿಡಿಸಿಕೊಳ್ಳಬಹುದು, ಹೀಗೆ ಬಿಡಿಸಿಕೊಂಡ ಆಸಕ್ತರು ನೀಡುವ ಹನವನ್ನೆಲ್ಲಾ ಸಂಗ್ರಹಿಸಿ ಕಾರ್ಟೂನ್ ಹಬ್ಬದ ಸಮಾರೋಪದ ಸಮಯದಲ್ಲಿ, ಒಟ್ಟು ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ, ಯಾವುದಾದರೂ ಶಾಲೆಯೊಂದಕ್ಕೆ ದೇಣಿಗೆ ರೂಪದಲ್ಲಿ ನೀಡಲಾಗುತ್ತದೆ.


ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ


ಅಂದ ಹಾಗೆ ಈ ವರ್ಷದ ಕಾರ್ಟೂನ್ ಹಬ್ಬ ಇದೇ ಶನಿವಾರ 23 ನವೆಂಬರ್ ರಂದು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಕಲಾಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ವರ್ಷದ ವಿಷಯ ಕೋಮು ಸೌಹಾರ್ದವನ್ನು ಸೂಚಿಸುವ ಈಶ್ವರ ಅಲ್ಲಾ ತೇರೋ ನಾಮ್, ಕನ್ನಡದ ಖ್ಯಾತ ನಟ, ನಿರ್ದೇಶಕ, ರಿಷಬ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಐ ಪಿ ಎಸ್ ಅಧಿಕಾರಿ ಅಣ್ಣಾಮಲೈ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ, ಹಿರಿಯ ವ್ಯಂಗ್ಯ ಚಿತ್ರಕಾರ ಸುರೇಂದ್ರ, ಕ್ರಿಕೆಟ್ ಕೋಚ್ ಪ್ರದೀಪ್ ವಾಜ್, ಪವರ್ ಲಿಫ್ಟರ್ ವಿಶ್ವನಾಥ್ ಗಾಣಿಗ, ನಿರ್ದೇಶಕ ಯಾಕೂಬ್ ಗುಲ್ವಾಡಿ, ಕುಂದಾಪ್ರಕನ್ನಡದ ನಗೆ ಬುಟ್ಟಿ ಹೊತ್ತು, ಎ ಎಸ್ ಎನ್ ಹೆಬ್ಬಾರ್, ಮನು ಹಂದಾಡಿ, ಚೇತನ್ ನೆಲ್ಯಾಡಿ, ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.


ಮತ್ತೆ ಇನ್ಯಾಕೆ ತಡ, ಈ ವಾರದ ಅಂತ್ಯಕ್ಕೆ ನಡೆಯಲಿರುವ ಕಾರ್ಟೂನ್ ಹಬ್ಬಕ್ಕೆ ನೀವು ಸಾಕ್ಷಿಯಾಗಿ. "ಹೊಯ್ ಎಲ್ಲಾ ಹಬ್ಬಕ್ಕೆ ಬನ್ನಿ ಆಕ" ಎಂದು ಎಲ್ಲರನ್ನು ತುಂಬು ಮನಸ್ಸಿನಿಂದ ಹಬ್ಬಕ್ಕೆ ಸ್ವಾಗತಿಸುತ್ತಿದ್ದಾರೆ ಸಂಘಟಕರಾದ ಸತೀಶ್ ಆಚಾರ್ಯ.


ಏನೇ ಆದ್ರೂ ನಗುತ್ತಲೇ ಸಮಾಜದ ಓರೆಕೊರೆಗಳನ್ನು ಪ್ರಶ್ನಿಸುವ, ಕಾರ್ಟೂನ್ ಗಳನ್ನು ಕಂಡಾಗ ಡಿವಿಜಿ ಯವರ ಮಾತುಗಳು ನೆನಪಾಗುತ್ತವೆ.


ನಗು; ಮನದಿ ಲೋಗರ ವಿಕಾರಂಗಳನು ನೋಡಿ | ಬಿಗಿ ತುಟಿಯ; ದುಡಿವಂದು ನೋವಪಡುವಂದು || ಪೊಗು; ವಿಶ್ವಜೀವನದ ಜೀವಾಂತರಂಗದಲಿ | ನಗುನಗುತ ಬಾಳ್; ತೆರಳು - ಮಂಕುತಿಮ್ಮ ||