ಚೆನ್ನೈನಲ್ಲಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಶುರುವಾದರೆ ಇಲ್ಲಿನ ಅಪಾರ್ಟ್‍ಮೆಂಟ್ ಕೇವಲ ಒಂದು ಗಂಟೆಯಲ್ಲಿ 30,000 ಲೀ.ನಷ್ಟು ನೀರನ್ನು ಉಳಿಸಿದೆ

ಚೆನ್ನೈನ ಐಟಿ ಕಾರಿಡಾರ್‍ನ ಜೊತೆಗಿರುವ ಸಬಾರಿ ಟೆರೇಸ್‍ ಅಪಾರ್ಟ್‍ಮೆಂಟ್ ಸಂಕೀರ್ಣವು 25,000 ಚದರ್ ಅಡಿಗಳಷ್ಟು ಉದ್ದದ ಟೆರೇಸ್ ನಿಂದ ನೀರನ್ನು ಉಳಿಸಿದೆ.

ಚೆನ್ನೈನಲ್ಲಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಶುರುವಾದರೆ ಇಲ್ಲಿನ ಅಪಾರ್ಟ್‍ಮೆಂಟ್ ಕೇವಲ ಒಂದು ಗಂಟೆಯಲ್ಲಿ 30,000 ಲೀ.ನಷ್ಟು ನೀರನ್ನು ಉಳಿಸಿದೆ

Thursday July 18, 2019,

2 min Read

ಚೆನ್ನೈನಲ್ಲೀಗ ತೀವ್ರವಾದ ನೀರಿನ ಬಿಕ್ಕಟ್ಟುಗಳಿವೆ. ಇಂತಹ ಸಂದರ್ಭದಲ್ಲಿ ಎಲ್ಲಾ ರೀತಿಯ ಪರಿಹಾರೋಪಾಯಗಳು ಸ್ವಾಗತಾರ್ಹವೇ. ನೀರಿನ ಬಿಕ್ಕಟ್ಟಿಗೆ ಪರಿಹಾರ ಕ್ರಮವಾಗಿ ಈ ಅಪಾರ್ಟ್‍ಮೆಂಟ್ ಕೇವಲ ಒಂದು ಗಂಟೆಯಲ್ಲಿ 30,000 ಲೀ ನೀರನ್ನು ಸಂಗ್ರಹಿಸಿ ಈಗ ಸುದ್ದಿಯಲ್ಲಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಅನೇಕ ಅಪಾರ್ಟ್‍ಮೆಂಟ್‍ಗಳಿಗೆ ಇದು ಮಾದರಿಯಾಗಿದೆ.


“ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಬೆನ್ನಲ್ಲೆ ಚೆನ್ನೈನಲ್ಲಿ ಬಿದ್ದ ಕಳೆದ ವಾರದ ಮಳೆಯನ್ನು ನಗರದ ಐಟಿ ಕಾರಿಡಾರ್‍ನಲ್ಲಿರುವ ಅಪಾರ್ಟ್‍ಮೆಂಟ್ ಸಂಕೀರ್ಣದ 25000 ಚದರ್ ಅಡಿಗಳಷ್ಟಿರುವ ಸಬಾರಿ ಟೇರೆಸ್‍ನಲ್ಲಿ ಮಳೆಕೊಯ್ಲಿನ ಮೂಲಕ 30000ಲೀ ನೀರನ್ನು ಸಂಗ್ರಹಿಸಲಾಯಿತು”


ಆ ಸಂಕೀರ್ಣದಲ್ಲಿ ಒಟ್ಟು 56 ಕುಟುಂಬಗಳಿದ್ದು, ಕೊಳವೆ ನೀರು ಸರಬರಾಜು ಇಲ್ಲದ ಕಾರಣ ಅವರು ವರ್ಷದ ಮೂರು ತಿಂಗಳು ಕೇವಲ ಮಳೆ ನೀರನ್ನೇ ಬಳಸಬೇಕಾಗಿದೆ.


Chennai

ಮಳೆನೀರು ಕೋಯ್ಲಿಗಾಗಿ ಪೈಪನ್ನು ಜೋಡಿಸುತ್ತಿರುವುದು. (ಚಿತ್ರ:ಹರ್ಷ ಕೋಡಾ)

ನಿವಾಸಿಗಳ ಸಂಘದ ಕಾರ್ಯದರ್ಶಿ ಹರ್ಷ ಕೋಡಾ ಎನ್ ಡಿ ಟಿವಿ ಜೊತೆ ಮಾತನಾಡುತ್ತಾ ಹೀಗೆ ಹೇಳಿದರು,


“ಭೂಮಿಯ ಅಂತರ್ಜಲವನ್ನು ಹೆಚ್ಚಿಸಿ, ಆ ನೀರು ನಮ್ಮ ಬಾವಿಗೆ ಬಂದು ಬಳಕೆಗೆ ಸಿಗುವ ಹೊತ್ತಿಗೆ ಸುಮಾರು 6ತಿಂಗಳ ಕಾಲಾವಧಿ ಬೇಕಾಗುತ್ತದೆ. ಆದರೆ ಕೊಳವೆ ನೀರಿನ ಸರಬರಾಜಿಲ್ಲದ ಈ ಒಎಂರ್(ಹಳೆಯ ಮಹಾಬಲಿಪುರಂ ರಸ್ತೆ)ನಲ್ಲಿ ನಮಗೆ ಈಗ ನೀರಿನ ಅವಶ್ಯಕತೆಯಿದೆ. ಆದ್ದರಿಂದ ಇಂದು ಮಳೆಯಾದರರೆ ಆ ನೀರನ್ನು ಸಂಗ್ರಹಿಸುತ್ತೇವೆ. ಆ ನೀರು ಕೇವಲ ಎರಡು ಗಂಟೆಗಳಲ್ಲೇ ನಮಗೆ ಉಪಯೋಗಕ್ಕೆ ಲಭ್ಯವಾಗುತ್ತದೆ. 30,000 ಲೀ ನೀರೆಂದರೆ ಸುಮಾರು 5,000 ರೂ.ಗಳನ್ನು ನಾವು ಉಳಿಸುತ್ತೇವೆ”


ಹರ್ಷ ಕೋಡಾ ರವರ ಪತ್ನಿ ಪ್ರಭಾ ಅವರ ಮಾತಿಗೆ ದನಿಗೂಡಿಸಿ “ಒಂದು ತಾಸು ಮಳೆಯಾದರೆ ಟೆರೆಸ್‍ನ ಪ್ರತಿ ಒಂದು ಚದರ್ ಅಡಿಗಳಿಗೂ ಒಂದು ಲೀಟರ್ ನೀರನ್ನು ಸಂಗ್ರಹಿಸಬಹುದು. ನಮ್ಮ ಟೆರೆಸ್ 25,000 ಚದರ ಅಡಿ ಯಷ್ಟಿದೆ. ಆದ್ದರಿಂದ ಒಂದು ತಾಸಿಗೆ ನಾವು ಕನಿಷ್ಠ 25,000 ಲೀ. ನೀರನ್ನು ಸಂಗ್ರಹಿಸುತ್ತೇವೆ. 3 ಗಂಟೆಗಳ ಕಾಲ ಮಳೆ ಬಂದರಂತೂ ನಾವು ಸುಮಾರು 1 ಲಕ್ಷ ಲೀಟರ್ ನೀರನ್ನು ಸಂಗ್ರಹಿಸಬಹುದು. ಆ ಸಂಗ್ರಹಿಸಿದ ನೀರು ನಮ್ಮ 56 ಪ್ಲಾಟ್‍ನ ಎಲ್ಲಾ ಟ್ಯಾಂಕ್‍ಗಳನ್ನು ಭರ್ತಿ ಮಾಡುತ್ತದೆ. ನಾವು ಆ ನೀರನ್ನು ಸುಮಾರು 3 ದಿನಗಳವರೆಗೆ ಬಳಸಬಹುದು” ಎಂದು ವಿವರಿಸಿದರು.


Harsh Koda

ಚಿತ್ರ:ಹರ್ಷ ಕೋಡಾ

ಈ ಅಪಾರ್ಟ್‍ಮೆಂಟ್ ಸಮುದಾಯದವರು ಕಳೆದ ವರ್ಷ ಮಳೆ ನೀರನ್ನು ಅಂತರ್ಜಲ ಹೆಚ್ಚಿಸಲು ಬಳಸಿದ್ದರು. ಈ ಬಾರಿ ಭಿನ್ನವಾಗಿ ನೀರನ್ನು ತಮ್ಮ ಉಪಯೋಗಕ್ಕೆ ಬಳಸುತ್ತಿದ್ದಾರೆ. ಬಳಕೆಯ ನಂತರದ ನೀರನ್ನು ನೆಲದಡಿಯ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಿ. ಇನ್ನು ಉಳಿದ ನೀರನ್ನು ನೆಲಕ್ಕೆ ಬಿಡುತ್ತಿದ್ದಾರೆ.


ಸ್ಟೋರಿ ಪಿಕ್ ಪ್ರಕಾರ “ಮಳೆನೀರು ಕೊಯ್ಲು ವಿಧಾನವು ನೀರಿನ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸುವುದಲ್ಲದೇ, ನಮ್ಮ ದೈನಂದಿನ ಅವಶ್ಯಕತೆಗಳಿಗೆ ರಾಜ್ಯದ ನೀರಿನ ಸರಬರಾಜಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ.”


ಈ ಅಪಾರ್ಟ್‍ಮೆಂಟ್ ಸಂಕೀರ್ಣವು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಮಾಡಿಕೊಂಡ ಮಳೆನೀರು ಕೊಯ್ಲು ವಿಧಾನವನ್ನು ಮಾದರಿಯಾಗಿಸಿಕೊಂಡು ಸುತ್ತ ಮುತ್ತಲಿನ ನಿವಾಸಿಗಳು ಈ ವಿಧಾನವನ್ನು ಅನುಸರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಸಬಾರಿ ಟೆರೆಸ್ ಅಪಾರ್ಟ್‍ಮೆಂಟ್ ಸಂಕೀರ್ಣದ ಹತ್ತಿರದಲ್ಲಿರುವ ಸೆಂಟ್ರಲ್ ಪಾರ್ಕ್ ಸೌತ್ ಮಳೆನೀರುಕೊಯ್ಲು ಸಂಗ್ರಹ ವಿಧಾನವನ್ನು ಪ್ರಾರಂಭಿಸಿದೆ.