ಪ್ರಾಣಿಗಳಿಗಾಗಿ ಅತೀ ದೊಡ್ಡ ಆಶ್ರಯ ತಾಣ ಒದಗಿಸುತ್ತಿರುವ ಚೆನ್ನೈನ 18 ವರ್ಷದ ಯುವ ಕಾರ್ಯಕರ್ತ

ಕೆಲ ವರ್ಷಗಳಿಂದ 18 ವರ್ಷದ ಸಾಯಿ ವಿಗ್ನೇಶ್ ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾನೆ. ಇತ್ತಿಚೆಗೆ ಅವನು ಪರಿತ್ಯಕ್ತ(ಬಿಟ್ಟ), ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಹೊಸ ಬದುಕನ್ನು ಕಟ್ಟಿಕೊಡುವ ಆಶ್ರಯ ತಾಣವನ್ನು ನಿರ್ಮಿಸಿ, ಆ ಪ್ರಾಣಿಗಳಗೂ ಮನೆಯನ್ನು ಮಾಡಿಕೊಡುವ ಬಹುದೊಡ್ಡ ಗುರಿಯನ್ನು ಹೊಂದಿದ್ದಾನೆ.

ಪ್ರಾಣಿಗಳಿಗಾಗಿ ಅತೀ ದೊಡ್ಡ ಆಶ್ರಯ ತಾಣ ಒದಗಿಸುತ್ತಿರುವ ಚೆನ್ನೈನ 18 ವರ್ಷದ ಯುವ ಕಾರ್ಯಕರ್ತ

Friday July 19, 2019,

5 min Read

ದಾರಿಯಲ್ಲಿ ಸಿಗುವ ದಿಕ್ಕು ತಪ್ಪಿದ, ಅನಾಥ ಪ್ರಾಣಿಗಳನ್ನು ನೋಡಿದಾಗ ಎಲ್ಲರಿಗೂ ಅನುಕಂಪ ಮೂಡುತ್ತದೆ. ಅಂತವರಲ್ಲಿಯೇ ಹಲವರು ಒಂದು ಹೆಜ್ಜೆ ಮುಂದೆ ಹೋಗಿ ಆ ಪ್ರಾಣಿಯನ್ನು ರಕ್ಷಿಸಿ ಉತ್ತಮ ಬದುಕನ್ನು ನೀಡಲು ಮುಂದಾಗುತ್ತಾರೆ. ಅಂತವರಲ್ಲಿಯೇ ಒಬ್ಬನಾಗಿದ್ದಾನೆ ಚೆನ್ನೈನ 18 ವರ್ಷದ ಸಾಯಿ ವಿಗ್ನೇಶ್. ಚಿಕ್ಕಂದಿನಿಂದಲೂ ನೂರಕ್ಕೂ ಹೆಚ್ಚು ಪ್ರಾಣಿಗಳ ಸ್ನೇಹಿತನಾಗಿರುವ ಇವನು ಈಗ ದಾನವಾಗಿ ನೀಡಿದ ಎರಡು ಎಕರೆ ಪ್ರದೇಶದಲ್ಲಿ ಎಲ್ಲಾ ಪ್ರಾಣಿಗಳಿಗಾಗಿ ಇಂದು ದೊಡ್ಡ ಆಶ್ರಯ ತಾಣ ನಿರ್ಮಿಸಲು ಮುಂದಾಗಿದ್ದಾನೆ.


e

ಸಾಯಿ ವಿಘ್ನೇಶ ತಾನು ರಕ್ಷಿಸಿದ ನಾಯಿಗಳೊಂದಿಗೆ

ಇಲ್ಲಿಯವರೆಗೆ ವಿಗ್ನೇಶ್ ನಾಯಿಗಳು, ಬೆಕ್ಕುಗಳು, ಹಕ್ಕಿಗಳು ಮತ್ತು ಹಸುಗಳನ್ನು ಹಿಡಿದು 300ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿದ್ದಾನೆ. ಅಲ್ಲದೇ ಅವನು 900ಕ್ಕೂ ಹೆಚ್ಚು ಪ್ರಾಣಿಗಳಿಗೆ ಸ್ಟೆರಿಲೈಸ್ ಮತ್ತು ಲಸಿಕೆ ಹಾಕಿಸಿದ್ದಾನೆ. ಹಾಗೂ 200ಕ್ಕೂ ಹೆಚ್ಚು ನಾಯಿಮರಿ ಮತ್ತು ಬೆಕ್ಕಿನ ಮರಿಗಳನ್ನು ಸಾಕಲು ಕೊಟ್ಟು ಅವಕ್ಕೆ ಮನೆ ಸಿಗುವಂತೆ ಮಾಡಿದ್ದಾನೆ.


ವಿಗ್ನೇಶ್ ಸ್ವತಃ 15 ನಾಯಿಗಳನ್ನು ದತ್ತು ತೆಗೆದುಕೊಂಡು ತನ್ನ ಪಾಲಕರೊಂದಿಗೆ ಸಾಕುತ್ತಿದ್ದಾನೆ. ಅಲ್ಲದೇ ಅವನು ಪ್ರಾಣಿಗಳ ದುರಪಯೋಗ, ಕಿರುಕುಳದ ವಿರುದ್ಧ 5 ಪ್ರಕರಣಗಳನ್ನು ದಾಖಲಿಸಿದ್ದಾನೆ. ಆ ಪ್ರಕರಣಗಳಲ್ಲಿ ಕೂಮ್ ಪ್ರದೇಶದಲ್ಲಿ ನಾಯಿಗೆ ವಿಷ ಹಾಕಿದ ಪ್ರಕರಣದ ಮೇಲೆ ಎಪ್ ಐ ಆರ್ ದಾಖಲಾಗಿದೆ ಮತ್ತು ಹೊಂಡದಲ್ಲಿ ನಾಯಿ ಸತ್ತ ಪ್ರಕರಣಕ್ಕೆ ಸಂಭಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.


ಸೋಷಿಯಲ್ ಸ್ಟೋರಿಯೊಂದಿಗೆ ಮಾತನಾಡಿದ ವಿಗ್ನೇಶ್ ತಾನು ಯಾಕೆ ಮತ್ತು ಹೇಗೆ ಈ ಪ್ರಾಣಿಗಳನ್ನು ರಕ್ಷಿಸುತ್ತಾ ಬಂದಿದ್ದೇನೆ ಎಂಬುದನ್ನು ಹೇಳಿದನು.


ಪ್ರಾಣಿ ರಕ್ಷಣೆಯ ಕಾರ್ಯ ಪ್ರಾರಂಭವಾದ ಬಗೆ


ವಿಗ್ನೇಶನ ಜೊತೆಯಲ್ಲಿಯೇ ಬೆಳೆಯುತ್ತಿದ್ದ ಸಾಕುನಾಯಿ ಭೈರವನಿಂದಲೇ ಅವನ ಪ್ರಾಣಿಪ್ರೀತಿಯೂ ಶುರುವಾಗಿತ್ತು. ಆದರೆ ಅವನ ನಾಯಿ ಕೆಲ ವರ್ಷಗಳಲ್ಲಿಯೇ ಸತ್ತುಹೋದಾಗ ಅವನಿಗೆ ಬಹಳ ಘಾಸಿಯಾಗಿತ್ತು. ಭೈರವನ ನೆನಪಿನಲ್ಲಿ ಅವನು ತನ್ನ ಮನೆಯ ಸುತ್ತ ಸಿಗುವ ಬೀದಿ ನಾಯಿಗಳಿಗೆ ಆಹಾರ ನೀಡಲು ಶುರು ಮಾಡಿದ. ದಿನ ಕಳೆದಂತೆ ಅವನ ಸಹಾನುಭೂತಿ ಹಾಗೂ ಪ್ರಾಣಿಪ್ರೀತಿ ಹೆಚ್ಚುತ್ತಾ ಬಂತು.


ವಿಗ್ನೇಶ್ ಬೆಳೆಯುತ್ತಾ ಹೆಚ್ಚು ಹೆಚ್ಚು ಪ್ರಾಣಿಗಳಿಗೆ ಸಹಾಯ ಮಾಡತೊಡಗಿದ. 2015ರಲ್ಲಿ ಅವನು ಪ್ರಾಣಿಗಳ ರಕ್ಷಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡತೊಡಗಿದಾಗ ಅವನ ಪಾಲಕರು ಮತ್ತು ಸ್ನೇಹಿತರು ಅವನ ಶಿಕ್ಷಣ ಮತ್ತು ಸಾಮಾಜಿಕ ಬದುಕಿನ ಕುರಿತು ಆಲೋಚಿಸಿ ಮೊದಲು ಹಿಂದೇಟು ಹಾಕಿದರು. ಆದರೆ ವಿಗ್ನೇಶ್ ಆಗಲೇ ಎಲ್ಲಕ್ಕಿಂತ ಮಿಗಿಲಾಗಿ ಪ್ರಾಣಿಗಳನ್ನು ಪ್ರೀತಿಸ ತೊಡಗಿದ್ದ.


2017ರಲ್ಲಿ ಸರ್ವಶಕ್ತ ಪ್ರಾಣಿಗಳ ಆರೈಕೆ (Almighty Animal Care Trust) ಟ್ರಸ್ಟ್/ಸಂಘವನ್ನು ಪ್ರಾರಂಭಿಸಿದ. ಒಂದೆ ಮನಸ್ಥಿತಿಯ ಜನರನ್ನು ಹೊಂದಿದ ಈ ಸಂಸ್ಥೆಯು ಹೆಚ್ಚು ಸಂಘಟಿತವಾಗಿ ಪ್ರಾಣಿಗಳನ್ನು ರಕ್ಷಿಸತೊಡಗಿತು.


ಆಶ್ರಯ ತಾಣದ ನಿರ್ಮಾಣ


ವಿಗ್ನೇಶ್ ಸ್ವತಃ ಪ್ರಾಣಿಗಳ ಆಶ್ರಯ ತಾಣದ ಪ್ರಕ್ರಿಯೆಗಳ ಬಗ್ಗೆ ಸಂಶೋಧಿಸಿದ ನಂತರ ಈ ವರ್ಷದ ಮಾರ್ಚ್‍ನಲ್ಲಿ ತೊಂದರೆಗೀಡಾದ ಪ್ರಾಣಿಗಳಿಗೆ ಆಶ್ರಯ ತಾಣ ನಿರ್ಮಿಸಲು ನಿರ್ಧರಿಸಿದ.


“ನಾನು ಯಾವಾಗಲೂ ಪ್ರಾಣಿಗಳಿಗೆ ಒಂದು ಆಶ್ರಯ ತಾಣ ನಿರ್ಮಿಸುವ ಕನಸು ಕಾಣುತ್ತಿದ್ದೆ. ಆದರೆ ಅನುಭವವಿಲ್ಲದೆ ಅದನ್ನು ಪ್ರಾರಂಭಿಸಲು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅದರ ಪ್ರಕ್ರಿಯೆಗಳನ್ನೆಲ್ಲ ಒಂದು ವರ್ಷದವರೆಗೆ ಅವಲೋಕಿಸಿ ಮತ್ತು ಹಲವು ಪ್ರಾಣಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಅನುಭವ ಪಡೆದುಕೊಂಡೆ. ಈಗ ನಾವು ನಾಯಿ, ಬೆಕ್ಕು, ಹಕ್ಕಿ ಮತ್ತು ಕೃಷಿ ಪ್ರಾಣಿಗಳಿಗಾಗಿ ಪ್ರತ್ಯೇಕ ಆವರಣ ನಿರ್ಮಿಸುತ್ತಿದ್ದೇವೆ. ಹೆಚ್ಚು ಪ್ರಾಣಿಗಳಿಗಾಗಿ ಆಸ್ಪತ್ರೆಗಳು ಆಶ್ರಯ ತಾಣಗಳು ಇಲ್ಲವಾದ್ದರಿಂದ ಮತ್ತೊಂದು ಪ್ರತ್ಯೇಕ ಕೊಠಡಿಯನ್ನು ಸಾಂಕ್ರಮಿಕ ರೋಗಗಳಿಂದ ಬಳಲುತ್ತಿರುವ ಪ್ರಾಣಿಗಳನ್ನು ಸೇರಿಸಿಕೊಳ್ಳಲು ನಿರ್ಮಿಸಲಾಗುತ್ತಿದೆ. ಮತ್ತು ಪ್ರಾಣಿಗಳಿಗಾಗಿ ಉಚಿತ ಔಷಧಾಲಯವನ್ನು ಹೊಂದಿದ್ದೇವೆ” ಎಂದು ವಿಗ್ನೇಶ್ ವಿವರಿಸಿದನು.


ಅವನು ಮಾತನಾಡುತ್ತಾ ತಾನು ಹಲವು ಪಶುವೈದ್ಯರನ್ನು ಸಂಪರ್ಕಿಸಿದ್ದೇನೆ ಮತ್ತು ಅವರು ಸಹಾಯ ಮಾಡಲು ಒಪ್ಪಿದ್ದಾರೆ ಎಂದನು. ವಿಗ್ನೇಶ್ ಕುಟುಂಬವು ತಿರುನೆಲ್ವೇಲಿಯಲ್ಲಿರುವ ತಮ್ಮ ಪೂರ್ವಜರ ಹಳೆ ಮನೆಯನ್ನು ಮಾರಾಟ ಮಾಡಿದ ನಂತರ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಆಶ್ರಯ ತಾಣದ ನಿರ್ಮಾಣ ಮತ್ತು ಇತರ ವೆಚ್ಚಕ್ಕಾಗಿ ನೀಡುತ್ತಿದ್ದಾರೆ.


ದ್

ಪ್ರಾಣಿಗಳ ಆಶ್ರಯ ತಾಣ ಕಟ್ಟುವ ಕೆಲಸ ಪ್ರಗತಿಯಲ್ಲಿರುವುದು

ಮಧ್ಯರಾತ್ರಿಯ ಆ ಕರೆ


ಪ್ರಾಣಿಗಳ ಭೀಕರ ಪರಿಸ್ಥಿತಿಯು ನನಗೆ 2016ರಲ್ಲಿ ಚೆನ್ನೈನಲ್ಲಿ ಸಂಭವಿಸಿದ ವರ್ದಾ ಚಂಡಮಾರುತದಿಂದ ತಿಳಿಯಿತು ಎಂದು ವಿಗ್ನೆಶ್ ಹೇಳಿದ್ದಾನೆ. ಒಂದೆಡೆ ಜನರು ತಮ್ಮ ಪ್ರಾಣಭೀತಿಯಲ್ಲಿದ್ದರೆ, ಆಗ 16ವರ್ಷದಲ್ಲಿದ್ದ ವಿಗ್ನೆಶ್ ಮುಳುಗುತ್ತಿರುವ ಎರಡು ನಾಯಿಮರಿಗಳನ್ನು ಕಾಪಾಡಲು ತೆರಳಿದ್ದ.


ಆ ಅನುಭವವನ್ನು ನೆನಪಿಸಿಕೊಳ್ಳುತ್ತಾ ವಿಗ್ನೇಶ್ “ಮಧ್ಯರಾತ್ರಿಯಲ್ಲಿ ನನಗೆ ನಾಯಿಮರಿಗಳು ಮುಳುಗುತ್ತಿವೆ ಎಂದು ಕರೆ ಬಂದಿತ್ತು. ನಾನು ಸ್ಥಳಕ್ಕೆ ಧಾವಿಸಿದಾಗ ಆ ಮರಿಗಳು ತಮ್ಮನ್ನು ರಕ್ಷಿಸಿ ಎಂದು ಕೇಳಿ ಕೊಳ್ಳುತ್ತಿರುವಂತೆ ಕಂಡಿತ್ತು. ಆದರೆ ಜನರು ಸುಮ್ಮನೆ ನಿಂತು ನೋಡುತ್ತಿದ್ದರು. ಆಗಲೇ ನನಗೆ ಅನಿಸಿದ್ದು ಈ ಪ್ರಾಣಿಗಳ ರಕ್ಷಣೆಗಾಗಿ ಏನನ್ನಾದರೂ ಮಾಡಬೇಕೆಂದು ಅನಿಸಿದ್ದು ಎಂದು ಹೇಳಿದ.”


ದಿನವೆಲ್ಲಾ ಕೆಲಸ


ವಿದ್ಯಾರ್ಥಿಯೂ ಆಗಿರುವಂತಹ ವಿಗ್ನೇಶ್ ಸಹಜವಾಗಿಯೇ ಅವಿಶ್ರಾಂತ ಬದುಕನ್ನು ನಡೆಸುತ್ತಿದ್ದಾನೆ, ಈ ಬಗ್ಗೆ ಮಾತನಾಡಿದ ಅವನು


“ನಾನು ದಿನವೂ ನನ್ನ 15 ನಾಯಿಗಳಿಗೆ ಆಹಾರ ಒದಗಿಸಲು ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ನಂತರ ಮೂರು ಗಂಟೆ ಅಮ್ಮನ ಜೊತೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತೇನೆ. ಉಳಿದ ಸಮಯವನ್ನೆಲ್ಲಾ ನಾನು ಪ್ರಾಣಿಗಳನ್ನು ಪಶುವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು, ರಕ್ಷಿಸಿದ ಪ್ರಾಣಿಗಳ ಆಗುಹೋಗನ್ನು ನೋಡಿಕೊಳ್ಳುವುದು ಮತ್ತು ಅವುಗಳು ಚೆನ್ನಾಗಿವೆಯೇ ಎಂದು ನೋಡುವುದು, ಅಲ್ಲದೇ ಅವುಗಳಿಗೇನಾದರೂ ತುರ್ತುಪರಿಸ್ಥಿತಿ ಎದುರಾದರೇ ನನ್ನ ಎಲ್ಲಾ ಕೆಲಸ ಬದಿಗಿರಿಸಿ ಮೊದಲು ಅವುಗಳ ಸಹಾಯಕ್ಕೆ ತೆರಳುತ್ತೇನೆ” ಎಂದು ಹೇಳುತ್ತಾನೆ.


ಇಂತಹ ನಿರಂತರ ಕೆಲಸದ ದಿನಗಳಲ್ಲಿಯೂ ಅವನು ತನ್ನ ಶಿಕ್ಷಣವನ್ನು ಕಡೆಗಣಿಸುವುದಿಲ್ಲ. ರಾತ್ರಿ 10 ರಿಂದ ಬೆಳಿಗ್ಗೆ 2 ಗಂಟೆಯವರೆಗೂ ಅಭ್ಯಾಸ ಮಾಡುತ್ತಾನೆ. ಅವನಿಗೆ ದಿನವೂ ನಿದ್ದೆ ಮಾಡಲು ಅತೀ ಕಡಿಮೆ ಸಮಯ ಸಿಗುತ್ತದೆ. ಈ ಎಲ್ಲಾ ಕೆಲಸದ ನಡುವೆಯೇ ಅವನು ಅರೆಕಾಲಿಕವಾಗಿ ವೆಬ್‍ಸೈಟ್ ಡೆವೆಲಪರ್ ಆಗಿಯೂ ಕೆಲಸ ಮಾಡುತ್ತಾನೆ. ಮತ್ತು ಅದರಿಂದ ಬಂದ ಹಣವನ್ನು ತನ್ನ ಗುರಿ ಆಶ್ರಯ ತಾಣಕ್ಕೆ ಮೀಸಲಿಟ್ಟಿದ್ದಾನೆ.


ಇಂತಹ ದೈಹಿಕ ಮತ್ತು ಮಾನಸಿಕವಾದ ಒತ್ತಡದ ನಡುವೆಯೂ ಈ ಪ್ರಾಣಿಗಳ ಸಹಾಯವನ್ನು ಹೇಗೆ ಮಾಡುತ್ತಿಯಾ ಎಂದರೆ ವಿಗ್ನೇಶ್ ಹೇಳುವುದು


“ಈ ಕೆಲಸಗಳಿಂದ ನನಗೆ ಬಳಲಿಕೆಯಾಗಬಹುದು. ದಿನದ ಕೊನೆಗೆ ಪ್ರಾಣಿಗಳ ಬದುಕಿನಲ್ಲಿ ಬದಲಾವಣೆ ತಂದೆ ಎಂಬ ಖುಶಿ ಇರುತ್ತದೆ. ಅಲ್ಲದೇ ಸಮಾಜದಲ್ಲಿ ಧ್ವನಿಯಿರದವರಿಗೆ ನಾನು ಧ್ವನಿಯಾಗಿದ್ದೇನೆ” ಎನ್ನುತ್ತಾನೆ.


ಮುಂದುವರೆದು ಹೇಳುತ್ತಾ ವಿಗ್ನೇಶ್ “ನನ್ನ ಪಾಲಕರು ನನಗೆ ಹಾಗೂ ನನ್ನ ಆಯ್ಕೆಗಳಿಗೆ ಬೆಂಬಲ ನೀಡುತ್ತಾರೆ. ನನ್ನ ತಂದೆ ಒಬ್ಬ ವಿಜ್ಞಾನಿ ಮತ್ತು ಅವರ ಸಂಪಾದನೆಯ ಸ್ವಲ್ಪ ಹಣವನ್ನು ನನ್ನ ಆಶ್ರಯ ತಾಣಕ್ಕೆ ದಾನವಾಗಿ ನೀಡುತ್ತಾರೆ” ಎಂದಿದ್ದಾನೆ.


ಕ

ಪ್ರಾಣಿಗಳ ಆಶ್ರಯ ತಾಣದ ಒಂದು ಘಟಕ ನಿರ್ಮಾಣವಾಗುತ್ತಿರುವುದು

ಸರಳ ದಾರಿಯಲ್ಲ


ವಿಗ್ನೆಶ್ ಪ್ರಾಣಿಗಳನ್ನು ಪ್ರೀತಿಸಿದರೂ ಸಹ, ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೆರೆಹೊರೆಯವರು ನಾಯಿಯಿಂದ ತೊಂದರೆಯಾಗುತ್ತದೆ ಎಂದು ದೂರಿದ್ದರಿಂದ ಕೆಲವೇ ವರ್ಷಗಳಲ್ಲಿ ಅವನ ಕುಟುಂಬವನ್ನು 8 ಬಾರಿ ಒತ್ತಾಯ ಪೂರ್ವಕವಾಗಿ ಮನೆ ಖಾಲಿ ಮಾಡಿಸಿದ್ದಾರೆ. ಕೆಲವಷ್ಟು ಮಂದಿ ವಿಷ ನೀಡಿ ಅವನ ನಾಯಿಯನ್ನು ಕೊಲ್ಲಲೂ ಸಹಿತ ಪ್ರಯತ್ನಿಸಿದ್ದರು ನಂತರ ಪೋಲಿಸ್‍ಗೆ ದೂರು ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು ಎಂದು ವಿಗ್ನೇಶ್ ಹೇಳುತ್ತಾನೆ.


ನಿಮ್ಮ ಕೊಡುಗೆಯು ಬೇಕು


ಈ ರೀತಿಯ ಕಾರ್ಯಗಳು ಎಲ್ಲರಿಂದಲೂ ಆಗದು, ಆದರೆ ಎಲ್ಲರೂ ಪ್ರಾಣಿಗಳಿಗೆ ಸಹಾಯ ಮಾಡಬಹುದು ಎಂದು ವಿಗ್ನೆಶ್ ಹೇಳುತ್ತಾನೆ.


“ಪ್ರಾಣಿಗಳಿಗೆ ಆಹಾರ ಒದಗಿಸುವುದು, ಮನೆಯ ಮುಂದೆ ನೀರನ್ನು ಇಡುವುದು ಹಾಗೂ ಮಳೆ ಬಂದಾಗ ಅಥವಾ ತೀರಾ ಬಿಸಿಲಿದ್ದಾಗ ನಿಮ್ಮ ಮನೆಯ ಮುಂದಿನ ಆವರಣದಲ್ಲಿ ಪ್ರಾಣಿಗಳಿಗೆ ಆಶ್ರಯ ನೀಡುವುದು ಹೀಗೆ ಪ್ರಾಣಿಗಳನ್ನು ನೋಡಿಕೊಳ್ಳುವುದು ನಿಮ್ಮಿಂದ ಹೆಚ್ಚಿನದೇನನ್ನು ಆಶಿಸದು.” ಎನ್ನುತ್ತಾನೆ.


ನಿಲ್ಲದ ಪಯಣ


ಪ್ರಾಣಿಗಳ ಹಕ್ಕಿನಲ್ಲಿ ಮೊದಲು ಬದಲಾಗಬೇಕಾದುದು ಪ್ರಾಣಿಗಳ ಪ್ರಕರಣಗಳಲ್ಲಿ ವ್ಯವಹರಿಸುವ ರೀತಿಯೆಂದು ವಿಗ್ನೇಶ್ ಹೇಳುತ್ತಾನೆ. ಇಂತಹ ಪ್ರಕರಣಗಳಲ್ಲಿ ದೋಷಿಗಳನ್ನು ದಂಡ ವಿಧಿಸಿಯೋ ಎಚ್ಚರಿಕೆ ನಿಡಿಯೋ ಬಿಟ್ಟು ಬಿಡುತ್ತಾರೆ. ಅವರು ಕಟ್ಟುವ ದಂಡವೂ ಕೇವಲ 50ರೂ ನಷ್ಟಿರುತ್ತದೆ. ಅವನು 1960ರ ಪ್ರಾಣಿ ಕ್ರೂರತೆ ಆಕ್ಟನ್ನು (Cruelty to Animals Act)ಬಲಗೊಳಿಸಿ ತಿದ್ದುಪಡಿ ಮಾಡಬೇಕೆಂದು ಹೇಳುತ್ತಾನೆ.


ಪ್ರಾಣಿಗಳಿಗೆ ತೊಂದರೆ ಕೊಡುವಂತಹ, ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ವಿಗ್ನೇಶ್ ಸಿದ್ಧಗೊಳ್ಳುತ್ತಿದ್ದಾನೆ. ಮತ್ತು ಈ ಕಾರಣದಿಂದಲೇ ಕಾಲೇಜಿನಲ್ಲಿ ಕಾನೂನು ಕಲಿಯುವ ಬಗ್ಗೆ ಆಲೋಚಿಸಿದ್ದಾನೆ. “ಕಾನೂನಿನ ಶಿಕ್ಷಣ ನನಗೆ ಪ್ರಾಣಿಗಳನ್ನು ಹಿಂಸಿಸುವವರ ವಿರುದ್ಧ ಹೋರಾಡಲು ಮತ್ತಷ್ಟು ಶಕ್ತಿ ನೀಡುತ್ತದೆ” ಎಂದು ವಿಗ್ನೇಶ್ ಹೇಳುತ್ತಾನೆ.


ಪ್ರಾಣಿಗಳನ್ನು ಕಾಳಜಿ ಮಾಡುವುದು ಎಂದರೇನೆ ಮುಖ ಗಂಟಿಕ್ಕುವ ಜನರಿಗೆ ವಿಗ್ನೇಶ್


“ಸಹಾನುಭೂತಿ ತೋರುವುದು ತಪ್ಪಲ್ಲ. ನಾವು ಮನುಷ್ಯರು ಎಂದ ಮಾತ್ರಕ್ಕೆ ನಾವೇನು ಶ್ರೇಷ್ಟ ಜೀವಿಗಳಲ್ಲ. ನಮಗೆ ಎಲ್ಲಾ ಜೀವಿಗಳಿಗೂ ಸಹಾಯ ಮಾಡುವ ಜವಬ್ದಾರಿಗಳಿರುತ್ತವೆ" ಎಂದು ಹೇಳುತ್ತಾನೆ.


ಜನರ ಆಲೋಚನಾ ಕ್ರಮವನ್ನು ಹೇಗೆ ಬದಲಿಸಬಹುದು ಎಂದು ಕೇಳಿದರೆ ವಿಗ್ನೇಶ್ “ಜಾಗ್ರತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಅದರಲ್ಲೂ ಮಕ್ಕಳಲ್ಲಿ ಪ್ರಾಣಿಗಳ ಬಗೆಗೆ ಅರಿವು ಮೂಡಿಸಬೇಕು. ಏಕೆಂದರೆ ಮಕ್ಕಳಲ್ಲಿಯೇ ಹೆಚ್ಚು ಪ್ರಾಣಿಗಳನ್ನು ಕಾಯುವ ಮತ್ತು ಅವರೆಡೆಗೆ ಸಹಾನುಭೂತಿ ಹೆಚ್ಚಾಗಿರುತ್ತದೆ” ಎನ್ನುತ್ತಾನೆ.


“ನನ್ನ ಕೊನೆಯ ಗುರಿ ಎಂದರೆ ಪ್ರಾಣಿಗಳೆಡೆಗೆ ಜನರಿಗಿರುವ ಆಲೋಚನಾಕ್ರಮವನ್ನು ಬದಲಿಸುವುದು, ಸಾಧ್ಯವಾದಷ್ಟು ಪ್ರಾಣಿಗಳಿಗೆ ಉತ್ತಮವಾದ ಜೀವನ ಕಲ್ಪಿಸುವುದು ಮತ್ತು ಪಾಣಿಗಳ ಕಾನೂನುಗಳನ್ನು ಬಲಗೊಳಿಸುವುದು” ಎಂದು ವಿಗ್ನೆಶ್ ಹೇಳುತ್ತಾನೆ.


ಈ ವಿದ್ಯಾರ್ಥಿಯು ಅವನ ಪ್ರಾಣಿಗಳ ಆಶ್ರಯ ತಾಣದ ನಿರ್ಮಾಣಕ್ಕಾಗಿ ಸುಮಾರು 10 ಲಕ್ಷ ರೂ.ಗಳಷ್ಟು ನಿಧಿಯನ್ನು ಸಂಗ್ರಹಿಸಲು ಸಾರ್ವಜನಿಕರಿಂದ ಸಹಾಯ ಬಯಸುತ್ತಿದ್ದಾನೆ. ಸಹಾಯ ಮಾಡಲು ಬಯಸುವವರರು ಇಲ್ಲಿ ದೇಣಿಗೆ ನೀಡಬಹುದು