ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಪೋಷಕರೇ ಅಡುಗೆ ಮಾಡಿ ತಮ್ಮ ಮಕ್ಕಳಿಗೆ ಬಡಿಸುತ್ತಿದ್ದಾರೆ

ಛತ್ತೀಸ್‌ಗಢದ ಬುಡಕಟ್ಟು ಪ್ರದೇಶದ ಖಾಸಗೀ ಶಾಲೆಯೊಂದರಲ್ಲಿ ಮಕ್ಕಳ ಅಪ್ಪಂದಿರೇ ತಾವು ಬೆಳೆದ ತಾಜಾ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕಾಗಿ ನೀಡುತ್ತಿದ್ದಾರೆ ವಿಶೇಷ ಅಂದರೆ ಆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ತಾಯಂದಿರೇ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳ ಆರೋಗ್ಯ.

ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಪೋಷಕರೇ ಅಡುಗೆ ಮಾಡಿ ತಮ್ಮ ಮಕ್ಕಳಿಗೆ ಬಡಿಸುತ್ತಿದ್ದಾರೆ

Tuesday October 22, 2019,

2 min Read

ಮಕ್ಕಳಿಗೆ ಬಿಸಿಯೂಟ ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಬಂದು ವರ್ಷಗಳೇ ಕಳೆದಿವೆ. ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬಿಸಿಯೂಟ ಮಾಡುವ ಮಕ್ಕಳು ಅಸ್ವಸ್ಥವಾಗುವ ಘಟನೆಗಳನ್ನು ನಾವೆಲ್ಲಾ ಕೇಳಿದ್ದೇವೆ, ನೋಡಿದ್ದೇವೆ.


ಬಿಸಿಯೂಟ ತಯಾರು ಮಾಡುವವರಿಗೆ ತರಬೇತಿ ಕೂಡ ನೀಡಲಾಗಿದೆ. ಆದರೂ ಬಿಸಿಯೂಟ ತಿನ್ನುವ ಎಷ್ಟೋ ಮಕ್ಕಳು ಆಸ್ಪತ್ರೆ ಪಾಲಾಗಿದ್ದಾರೆ. ಅಷ್ಟೆ ಅಲ್ಲ ಮರಣ ಹೊಂದಿದ ಘಟನೆಗಳು ಕೂಡ ನಡೆದಿವೆ. ಇವೆಲ್ಲವನ್ನು ಗಮನಿಸಿದ ಛತ್ತೀಸ್‌ಗಢದ ಶಾಲೆಯೊಂದರ ಪೋಷಕರು ತಾವೇ ಬೆಳೆದ ತರಕಾರಿಯನ್ನು ಶಾಲೆಗೆ ನೀಡುತ್ತಿದ್ದಾರೆ. ವಿಶೇಷ ಅಂದರೆ ಆ ಮಕ್ಕಳ ತಾಯಂದಿರೇ ಶಾಲೆಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದಾರೆ.


ಟ

ಅದಾನಿ ವಿದ್ಯಾ ಮಂದಿರ ವಿದ್ಯಾರ್ಥಿಗಳು (ಚಿತ್ರ ಕೃಪೆ: ಸ್ಟೋರಿ ಪಿಕ್)



ಹೌದು ಛತ್ತೀಸ್‌ಗಢದ ಬುಡಕಟ್ಟು ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳ ಆರೋಗ್ಯ ದೃಷ್ಠಿಯಿಂದ ಆ ಮಕ್ಕಳ ತಂದೆ ತಾಯಿಂದಿರೇ ಶ್ರಮಿಸುತ್ತಿದ್ದಾರೆ. ತಾವು ಬೆಳೆದ ತಾಜಾ ತರಕಾರಿಯನ್ನು ಶಾಲೆಗೆ ನೀಡುವ ಮೂಲಕ ಅಪ್ಪಂದಿರು ತಮ್ಮ ಜವಾಬ್ದಾರಿ ನಿಭಾಯಿಸಿದರೆ ತಾಯಂದಿರು, ಅಲ್ಲಿನ ತಮ್ಮ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ.

ಹೌದು, ಅಂಬಿಕಾಪುರ್ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸಲ್ಹಿ ಗ್ರಾಮದಲ್ಲಿ ಇಂಥಹದೊಂದು ಮೆಚ್ಚುಗೆ ಕಾರ್ಯ ನಡೆಯುತ್ತಿದೆ. ಅಂಬಿಕಾಪುರದಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿರುವ ಸಲ್ಹಿ ಗ್ರಾಹದ ಅದಾನಿ ವಿದ್ಯಾಮಂದಿರ ಖಾಸಗಿ ಶಾಲೆ, ಅಲ್ಲಿನ ಸಿಬ್ಬಂದಿ ಸೇರಿದಂತೆ ಸುಮಾರು 750 ಕ್ಕೂ ಅಧಿಕ ಮಂದಿಗೆ ಅಲ್ಲಿ ಓದುತ್ತಿರುವ ಮಕ್ಕಳ ಪೋಷಕರೇ ಅಡುಗೆಗೆ ಬೇಕಾದ ವ್ಯವಸ್ಥೆ ಮಾಡುವ ಅವಕಾಶ ಕಲ್ಪಿಸಿದೆ. ಈ ಅಡುಗೆ ಹಾಗೂ ಆಹಾರ ಪೂರೈಸುವ ಕೆಲಸವನ್ನು ಯಾವುದೇ ವ್ಯಾಪಾರಿ ಅಥವಾ ಗುತ್ತಿಗೆ ದಾರರಿಗೆ ನೀಡಿಲ್ಲ. ಕಾರಣ ಅಲ್ಲಿನ ತಮ್ಮ ಮಕ್ಕಳ ಆರೋಗ್ಯ ದೃಷ್ಟಿಯಿಂದ ಎನ್ನುವುದು ವಿಶೇಷ. ಆ ಗ್ರಾಮದ ಮಹಿಳೆಯರನ್ನೊಳಗೊಂಡ ಸಮಿತಿ ಈ ಕೆಲಸ ಮಾಡುತ್ತಿದೆ. ಇದರಲ್ಲಿ 12 ಮಂದಿ ಮಹಿಳೆಯರು ಅಡಿಗೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಬೇಕಾದ ಆಹಾರವನ್ನು ತಯಾರಿಸಿ ನೀಡುತ್ತಿದ್ದಾರೆ.


ಈ ಹಿಂದೆ ಮಧ್ಯಾಹ್ನದ ಊಟ ಅಪೌಷ್ಟಿಕತೆಯಿಂದ ಇತ್ತು ಅನ್ನೋದು ಸಾಕಷ್ಟು ವರದಿಗಳಿಂದ ಬಹಿರಂಗವಾಗಿತ್ತು. ಯುಪಿಯ ಒಂದು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 900 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರೆಂಬ ವರದಿಗಳು ಬಂದಿದ್ದವು. ಅಷ್ಟೇ ಅಲ್ಲಾ ಆ ಭಾಗದಲ್ಲಿ ಕಳಪೆ ಗುಣಮಟ್ಟದ ಊಟವನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂಬ ವರದಿ ಬಹಿರಂಗವಾಗಿತ್ತು. ಈ ನಿಟ್ಟಿನಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಹಿನ್ನೆಲೆ ಪೋಷಕರೇ ಈ ನಿರ್ಧಾರ ಮಾಡಿದ್ದಾರಂತೆ. ಮಕ್ಕಳ ಪೋಷಕರೇ ಅಡುಗೆ ಮಾಡುವುದರಿಂದ ಮಕ್ಕಳಿಗೆ ಪೌಷ್ಟಿಕತೆ ಕಾಡುವುದಿಲ್ಲ. ಮಕ್ಕಳು ಪೌಷ್ಟಿಕ ಆಹಾರವನ್ನು ಸೇವಿಸಬಹುದಾಗಿದೆ. ಎಲ್ಲಾ ಉತ್ಪನ್ನಗಳು ಪೋಷಕರ ಮನೆಯಿಂದಲೇ ಬರುವುದರಿಂದ ಶುದ್ಧ ಹಾಗೂ ಗುಣಮಟ್ಟದ್ದಾಗಿರುತ್ತದೆ ಎನ್ನುತ್ತಾರೆ.


ಅಡುಗೆ ತಯಾರಿಸುತ್ತಿರುವ ಮಕ್ಕಳ ತಾಯಂದಿರು (ಚಿತ್ರ ಕೃಪೆ: ದಿ ನ್ಯೂವ್‌ ಇಂಡಿಯನ್‌ ಎಕ್ಸ್‌ ಪ್ರೆಸ್)


ಮಕ್ಕಳಿಗೆ ನೀಡುವ ಅಕ್ಕಿ, ಗೋದಿ ಹಾಗೂ ತರಕಾರಿಗಳನ್ನು ಸಾವಯುವ ಕೃಷಿಯಲ್ಲಿಯೇ ಬೆಳೆಯಲಾಗುತ್ತದೆ. ಇನ್ನು ಮಸಾಲೆ ಪದಾರ್ಥಗಳನ್ನು ಸ್ಥಳೀಯ ಸ್ವ-ಸಹಾಯ ಸಂಘ, ಮಹಿಳಾ ಉದ್ಯಮಿ ಬಹುದ್ದೇಶೀ ಸಹಕಾರಿ ಸಮಿತಿಯಿಂದ ಖರೀದಿಸಲಾಗುತ್ತದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಉತ್ತೇಜನ ನೀಡಲಾಗುತ್ತಿದೆ. ಇನ್ನು ಮಕ್ಕಳಿಗೆ ಹಲ್ವಾ, ದಲಿಯಾ, ಪೋಹ, ಉಪ್ಮಾ, ಹಾಗೂ ಹಾಲನ್ನು ನೀಡಲಾಗುತ್ತದೆ. ಇನ್ನು ವಿಶೇಷ ದಿನಗಳಲ್ಲಿ ಮಕ್ಕಳ ಆಯ್ಕೆಯಂತೆ ಆಹಾರ ತಯಾರಿಸಲಾಗುತ್ತದೆ.


ದಿ ನ್ಯೂವ್‌ ಇಂಡಿಯನ್‌ ಎಕ್ಸ್‌ ಪ್ರೆಸ್ ಜೊತೆ ಮಾತನಾಡುತ್ತಾ,


“ನಮ್ಮ ಶಾಲೆಯಲ್ಲಿ ಪೋಷಕರೇ ಅಡುಗೆ ಮಾಡುವುದರಿಂದ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಿಕೊಂಡಿದ್ದೇವೆ. ನಮ್ಮ ಶಾಲೆಯಲ್ಲಿ 2013 ರಿಂದ ಬಿಸಿಯೂಟ ನೀಡಲಾಗುತ್ತಿದೆ. ಆಗಿನಿಂದಲೂ ದಾಖಲಾತಿ ಕೂಡ ಹೆಚ್ಚಳವಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಿದ್ದೇವೆ. ಮೊದ ಮೊದಲು ಪೌಷ್ಟಿಕತೆಯ ಮಹತ್ವದ ಬಗ್ಗೆ ಈ ಬುಡಕಟ್ಟು ಜನರಿಗೆ ತಿಳಿದಿರಲಿಲ್ಲ. ಆದರೆ ನಂತರದಲ್ಲಿ ಬದಲಾವಣೆಯಾಗಿದೆ. ಪೌಷ್ಟಿಕತೆಯ ಬಗ್ಗೆ ಈ ಭಾಗದಲ್ಲಿ ವೇಗವಾಗಿ ವಿಷಯ ಹರಡುತ್ತಿದೆ. ಇದೊಂದು ಉತ್ತಮ ಬೆಳವಣಿಗೆ,” ಎಂದು ಅದಾನಿ ವಿದ್ಯಾಮಂದಿರ ಶಾಲೆಯ ಪ್ರಾಂಶುಪಾರರಾದ ರಜಿನಿಕಾಂತ್ ಶರ್ಮಾ ಹೀಗೆ ಹೇಳಿದರು.


ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಸಲ್ಹಿ ಗ್ರಾಮದ ಖಾಸಗಿ ಶಾಲೆಯಲ್ಲಿ ತಂದೆ ತಾಯಿ ಮಾಡುತ್ತಿರುವ ಕೆಲಸ ಶ್ಲಾಘನೀಯವೇ ಸರಿ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.