ವೇಶ್ಯಾವೃತ್ತಿಯಲ್ಲಿ ತೊಡಗಿ ಹೆಚ್ಐವಿ ಪೀಡಿತರಾಗಿರುವ ವ್ಯಕ್ತಿಗಳು ಸಮಾಜದಲ್ಲಿ ತಲೆ ಎತ್ತಿಕೊಂಡು ನಡೆದಾಡುವಂತೆ ಮಾಡಿರುವ ಸಮುದಾಯ ಸೇವಾ ಸಂಸ್ಥೆಗಳು

ಯುಎನ್ಎಐಡಿಎಸ್ 2018 ಅಂಕಿಸಂಖ್ಯೆಗಳ ಪ್ರಕಾರ ಭಾರತವು 2.1 ದಶಲಕ್ಷ ಹೆಚ್ಐವಿ ಪೀಡಿತರನ್ನು ಹೊಂದಿರುವ ಜಗತ್ತಿನ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಈ ಸಾಂಕ್ರಾಮಿಕ ರೋಗವು ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರು ಮತ್ತು ಪುರುಷ-ಪುರುಷರ ನಡುವೆ ದೈಹಿಕ ಸಂಬಂಧ ಬೆಳೆಸುವ ಸಲಿಂಗಕಾಮಿಗಳಲ್ಲಿ ಹೆಚ್ಚಾಗಿ ಹರಡಿಕೊಂಡಿದೆ.

ವೇಶ್ಯಾವೃತ್ತಿಯಲ್ಲಿ ತೊಡಗಿ ಹೆಚ್ಐವಿ ಪೀಡಿತರಾಗಿರುವ ವ್ಯಕ್ತಿಗಳು ಸಮಾಜದಲ್ಲಿ ತಲೆ ಎತ್ತಿಕೊಂಡು ನಡೆದಾಡುವಂತೆ ಮಾಡಿರುವ ಸಮುದಾಯ ಸೇವಾ ಸಂಸ್ಥೆಗಳು

Friday August 09, 2019,

2 min Read

“ಇದು ಸಾಧ್ಯವಿಲ್ಲವೆಂದು ನನಗೆ ಗೊತ್ತಿದ್ದರೂ ಕೂಡ ನಾನು ನನಗೆ ಜನಿಸಿದ ಮಗನಿಗೆ ನನ್ನಿಂದ ಹೆಚ್ಐವಿ ಬರಬಹುದೆಂಬ ಭಯದಿಂದ ಒಂದು ವರ್ಷ ಆತನನ್ನು ಮುಟ್ಟಲಿಲ್ಲ. ಅವನಿಗೆ ಹಾಲುಣಿಸಲೂ ಕೂಡ ನಾನು ಅವನನ್ನು ಮುಟ್ಟಲಿಲ್ಲ. ನನ್ನ ತಾಯಿಯೇ ಆತನ ಆರೈಕೆ ಮಾಡಿದರು. ನನಗೆ ಅವನನ್ನು ಪ್ರೀತಿಯಿಂದ ಸಲಹಬೇಕೆಂಬ ಹಂಬಲಕ್ಕಿಂತ ಅವನನ್ನು ಹೆಚ್ಐವಿ ತಪಾಸಣೆಗೆ ಒಳಪಡಿಸಿ ಅವನು ಹೆಚ್ಐವಿ ನೆಗೆಟೀವ್ ಎಂದು ದೃಢಪಡಿಸಿಕೊಳ್ಳಬೇಕೆಂಬ ಆತಂಕವಿತ್ತು” ಎಂದು ಗೀತಾ (ಹೆಸರು ಬದಲಿಸಿದೆ) ಎಂಬ ಮಹಿಳೆ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.

ಈಕೆ ತಮಿಳುನಾಡಿನ ಧರ್ಮಪುರಿಯಲ್ಲಿ ನೆಲೆಸಿ ತನ್ನ ಹದಿನೇಳನೆಯ ವಯಸ್ಸಿನಿಂದಲೇ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆ. ವೇಶ್ಯಾವೃತ್ತಿಗೆ ಇಳಿದ ಕಾರಣಗಳು ಏನೇ ಆಗಿದ್ದರೂ, ಆಕೆಯನ್ನು ಆ ವೃತ್ತಿಯಲ್ಲಿ ಬಹಳಷ್ಟು ಕಾಲ ನೆಲೆನಿಲ್ಲುವಂತೆ ಅವು ಮಾಡಿವೆ. ಇದರಿಂದಾಗಿ ಆಕೆ ಹೆಚ್ಐವಿ ಪೀಡಿತಳಾಗಿದ್ದು ಮಾತ್ರ ಕಟುವಾಸ್ತವವಾಗಿದೆ.


2004 ನೇ ಇಸವಿಯಲ್ಲಿ ಗೀತಾ ತನ್ನ ಮೊದಲ ಮಗುವಿಗೆ ಜನ್ಮ ನೀಡಿದಳು. ಆದರೆ ಅದು ಒಂಬತ್ತು ತಿಂಗಳ ನಂತರ ಅಸುನೀಗಿತು. ತನ್ನ ಮಗುವಿನ ಸಾವಿನ ದುಃಖದಿಂದಾಕೆ ಕೆಲವಾರು ತಿಂಗಳುಗಳವರಗೆ ಅನ್ನ-ನೀರು ಬಿಟ್ಟು ಕೃಶಳಾದಳು. ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಆ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿದ ಗೀತಾ ಮತ್ತು ಆಕೆಯ ಗಂಡನಿಗೆ ತಾವು ಹೆಚ್ಐವಿ ಪೀಡಿತರೆಂಬ ಸತ್ಯ ತಿಳಿಯಿತು.


“2004 ಕ್ಕಿಂತ ಹಿಂದಿನ ವರ್ಷಗಳಲ್ಲಿ ಜನರು ಹೆಚ್ಐವಿ ಪೀಡಿತ ವ್ಯಕ್ತಿಗಳನ್ನು ಕಂಡರೆ ಭಯಭೀತರಾಗುತಿದ್ದರು. ಅಂತಹವರನ್ನು ಸಮಾಜದಿಂದ ಬೇರ್ಪಡಿಸಿ ದೂರವಿಡುತಿದ್ದರು. ಅಂತಹ ದಿನಗಳಲ್ಲಿ ನನಗೆ ಸಾವೇ ಉತ್ತಮ ಆಯ್ಕೆ ಎನಿಸುತಿತ್ತು. ನಾನು ಮತ್ತು ನನ್ನ ಗಂಡ ಸಾಯೋಣವೆಂದು ತೀರ್ಮಾನಿಸಿ ಅಂಗಡಿಯಿಂದ ವಿಷದ ಪ್ಯಾಕೆಟನ್ನು ತಂದಿಟ್ಟುಕೊಂಡಿದ್ದೆ. ಆದರೆ ಧೈರ್ಯ ಸಾಕಾಗಲಿಲ್ಲ. ನನ್ನ ಸಂಬಂಧಿಕರು ನಾನು ಕೆಲವೇ ದಿನಗಳಲ್ಲಿ ಸಾಯುತ್ತೇನೆಂದುಕೊಂಡಿದ್ದರು. ನನ್ನ ದೇಹ ಬಹಳಷ್ಟು ನಿಶ್ಯಕ್ತವಾಗಿತ್ತು ಮತ್ತು ನಾನು ಪ್ರತಿದಿನ ಕಾಯಿಲೆ ಬೀಳುತಿದ್ದೆ” ಎನ್ನುತ್ತಾಳೆ ಗೀತಾ.


ಮೊದಲ ಮಗುವಿನ ಸಾವಿನಿಂದ ಉಂಟಾಗಿದ್ದ ಮಾನಸಿಕ ಮತ್ತು ದೈಹಿಕ ನೋವುಗಳು ಮರೆಯಾಗುವ ಮುನ್ನವೇ ಗೀತಾ ಎರಡನೆಯ ಮಗುವಿನ ಗರ್ಭಿಣಿಯಾದಳು. ವಿಷಾದನೀಯ ಸಂಗತಿಯೆಂದರೆ ತನ್ನ ವೇಶ್ಯಾವೃತ್ತಿಯಲ್ಲಿ ಕಾಂಡೋಮ್ ಬಳಕೆಯನ್ನು ಕಡ್ಡಾಯವಾಗಿ ಗೀತಾ ಪಾಲಿಸುತಿದ್ದಳು. ಆದರೆ ಆಕೆಯ ಗಂಡ ದೈಹಿಕ ಸಂಪರ್ಕದ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕೆಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ನಿರಾಕರಿಸುತಿದ್ದ.


ತಾನು ಗರ್ಭಿಣಿಯೆಂದು ತಿಳಿದ ನಂತರ ತಾನು ಹೆಚ್ಐವಿ ಪೀಡಿತಳೆಂಬ ಕಾರಣದಿಂದ ಗರ್ಭಪಾತ ಮಾಡಿಸಿಕೊಳ್ಳಲು ಗೀತಾ ನಿರ್ಧರಿಸಿದಳು. ಆದರೆ ಇದೇ ಸಮಯದಲ್ಲಿ ಸಮುದಾಯ ಸೇವಾ ಸಂಸ್ಥೆಯ ಸದಸ್ಯರೊಬ್ಬರು ಆಕೆಯನ್ನು ಸಂಪರ್ಕಿಸಿ ಆಕೆಯೊಂದಿಗೆ ಸಮಾಲೋಚನೆ ನಡೆಸಿದರು. ಹುಟ್ಟುವ ಮಗುವಿಗೆ ಹೆಚ್ಐವಿ ಬಾರದಂತೆ ತಡೆಯಲು ಸಾಕಷ್ಟು ಔಷದಿಗಳಿವೆ ಎಂಬುದನ್ನು ಆಕೆಗೆ ಮನವರಿಕೆ ಮಾಡಿದರು ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ಜನ್ಮ ನೀಡುವಂತೆ ಪ್ರೋತ್ಸಾಹಿಸಿದರು.


ಅವರ ಮಾರ್ಗದರ್ಶನ, ಸರಿಯಾದ ಔಷದಿಗಳ ಸೇವನೆ ಮತ್ತು ಸಮುದಾಯ ಸೇವಾ ಸಂಸ್ಥೆಯ ಬೆಂಬಲದಿಂದಾಗಿ ಗೀತಾ ತನ್ನ ಎರಡನೆಯ ಮಗುವಿಗೆ ಜನ್ಮ ನೀಡಿದ್ದಾಳೆ ಮತ್ತು ಆ ಮಗು ಹೆಚ್ಐವಿ ನೆಗೆಟೀವ್ ಎಂಬುದು ದೃಢಪಟ್ಟಿದೆ.


ತನ್ನ ಮಗನಿಗೆ ಉತ್ತಮ ಶಿಕ್ಷಣ ನೀಡುತ್ತಾ, ತನ್ನಿಂದಾದಷ್ಟು ಆತನ ಅವಶ್ಯಕತೆಗಳನ್ನು ಪೂರೈಸುತ್ತಾ ಆತನ ಆರೈಕೆಯಲ್ಲಿ ತೊಡಗಿರುವ ಗೀತಾ ಇಂದು ಒಬ್ಬ ತಾಯಿಯಾಗಿ ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುತಿದ್ದಾಳೆ. ಸಮುದಾಯ ಸೇವಾ ಸಂಸ್ಥೆಯ ಸದಸ್ಯರ ಉತ್ತೇಜನ ಮತ್ತು ಪ್ರೋತ್ಸಾಹದ ಮಾತುಗಳು ಆಕೆಯ ಬದುಕಿನಲ್ಲಿ ಭರವಸೆ ಮೂಡಿಸಿವೆ. ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಬದುಕನ್ನು ಹಸನುಗೊಳಿಸುವಲ್ಲಿ ಸಮುದಾಯ ಸೇವಾ ಸಂಸ್ಥೆಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂಬುದು ಸಾಬೀತಾಗಿದೆ.

ಗೀತಾ ಈಗ ಹೂವಿನ ಹಾರಗಳನ್ನು ತಯಾರಿಸಿ ಮಾರುವ ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ತೊಡಗಿಕೊಂಡು ಯಶಸ್ವಿ ಉದ್ಯಮಿಯಾಗಿದ್ದಾಳೆ. ಆಕೆ ಇತರ ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ನೆರವಾಗುತಿದ್ದಾಳೆ. ಆಕೆಯ ಮಗನಿಗೆ ಇನ್ನೇನು ಹತ್ತು ವರ್ಷ ತುಂಬಲಿದೆ. ಗೀತಾ ತನ್ನ ಕನಸನ್ನು ಸಾಕಾರಗೊಳಿಸಿಕೊಂಡಂತೆ ವೇಶ್ಯಾ ವೃತ್ತಿಯಲ್ಲಿ ತೊಡಗಿರುವ ಇತರ ಮಹಿಳೆಯರೂ ಕೂಡ ತಮ್ಮ ಕನಸಿಗೆ ಕುಲಾವಿ ಹೆಣೆಯಬಹುದಾಗಿದೆ.