ಕೊರೊನಾವೈರಸ್‌: 1,610 ಕೋಟಿಯ ವಿಶೇಷ ಪ್ಯಾಕೆಜ್‌ ಘೋಷಿಸಿದ ಬಿ.ಎಸ್‌.ಯಡಿಯೂರಪ್ಪ

ಕಳೆದ ಒಂದುವರೆ ತಿಂಗಳಿನಿಂದ ದೇಶಾದ್ಯಾಂತ ಘೋಷಿಸಲಾಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರಿಗೆ ಸಹಾಯವಾಗುವಂತೆ ಬುಧವಾರ 1,610 ಕೋಟಿ ರೂ. ಪ್ಯಾಕೆಜ್‌ ಘೋಷಿಸಿದರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.

ಕೊರೊನಾವೈರಸ್‌: 1,610 ಕೋಟಿಯ ವಿಶೇಷ ಪ್ಯಾಕೆಜ್‌ ಘೋಷಿಸಿದ ಬಿ.ಎಸ್‌.ಯಡಿಯೂರಪ್ಪ

Wednesday May 06, 2020,

2 min Read

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಬುಧವಾರ ಪತ್ರಿಕಾ ಘೋಷ್ಠಿ ನಡೆಸಿದ ಮುಖ್ಯಮಂತ್ರಿಗಳು 1,610 ಕೋಟಿ ರೂ, ಪ್ಯಾಕೆಜ್‌ ಘೋಷಿಸಿದರು. ಅದರ ಪ್ರಮುಖಾಂಶಗಳು ಇಲ್ಲಿವೆ.


  • 11,687 ಹೆಕ್ಟೆರ್‌ ವಿಸ್ತೀರ್ಣದಲ್ಲಿ ಬೆಳೆದ ಹೂವುಗಳಿಗೆ ಬೇಡಿಕೆಯಿಲ್ಲದೆ ಹೊಲದಲ್ಲೆ ಹಾಳಾಗಿವೆ. ಆದ್ದರಿಂದ ರೈತರಿಗೆ ಗರಿಷ್ಠ 1 ಹೆಕ್ಟೆರ್‌ಗೆ 25,000 ರೂ ಪರಿಹಾರ ನೀಡಲು ನಿರ್ಧರಿಸಲಾಗಿದೆ.
  • ಕೋವಿಡ್-19‌ ರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಅಂದಾಜು 60,000 ಅಗಸರು ಮತ್ತು 2.30 ಲಕ್ಷ ಕ್ಷೌರಿಕರಿಗೆ ಒಂದು ಬಾರಿ ಪರಿಹಾರವಾಗಿ 1 ಸಾವಿರ ರೂ ನೀಡಲಾಗುವುದು.
  • ದೈನಂದಿನ ಆದಾಯವನ್ನು ಕಳೆದುಕೊಂಡಿರುವ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ನೆರವಾಗಲು, ರಾಜ್ಯದ ಅಂದಾಜು 7.75 ಲಕ್ಷ ಚಾಲಕರಿಗೆ ಒಂದು ಬಾರಿಯ 5 ಸಾವಿರ ರೂ ಪರಿಹಾರ ನೀಡಲಾಗುವುದು.
  • ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಎರಡು ತಿಂಗಳ ವಿದ್ಯುತ್‌ ಫಿಕ್ಸಡ್‌ ಶುಲ್ಕವನ್ನು ಮನ್ನ ಮಾಡಲಾಗಿದೆ.
  • ನಿಗದಿತ ಸಮಯದಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವ ಗ್ರಾಹಕರಿಗೆ 1 ಪ್ರತಿಶತ ಪ್ರೋತ್ಸಾಹ ರಿಯಾಯಿತಿ ನೀಡಲಾಗುವುದು. ವಿಳಂಬ ಪಾವತಿಯ ಬಡ್ಡಿದರವನ್ನು ಶೇ 50 ಹಾಗೂ ಶೇ 75 ರಷ್ಟು ಕಡಿಮೆ ಮಾಡಲಾಗಿದೆ. ಮುಂಗಡವಾಗಿ ವಿದ್ಯುತ್‌ ಬಿಲ್‌ ಪಾವತಿಸುವವರಿಗೆ ಶೇ 6 ರಷ್ಟು ರಿಯಾಯಿತಿ ನೀಡಲಾಗುವುದು.
  • ಬೃಹತ್‌ ಕೈಗಾರಿಕೆಗಳ 2 ತಿಂಗಳ ವಿದ್ಯುತ್‌ ಬಿಲ್‌ ಅನ್ನು ದಂಡವಿಲ್ಲದೆ ಮುಂದೂಡಲಾಗಿದೆ.
  • ನೇಕಾರರ ಸಾಲಮನ್ನಾ ಮಾಡಲು 80 ಕೋಟಿ ಬಿಡುಗಡೆಮಾಡಲಾಗುವುದು. 1 ಲಕ್ಷ ಸಾಲವನ್ನು ಈಗಾಗಲೇ ತೀರಿಸಿದವರಿಗೆ ಮರುಪಾವತಿ ಮಾಡಲಾಗುವುದು.
  • ನೇಕಾರ ಸಮ್ಮಾನ್‌ ಯೋಜನೆ ಎಂಬ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಅಂದಾಜು 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2 ಸಾವಿರವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು.
  • 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ 2 ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಉಳಿದವರಿಗೂ ನೀಡಲಾಗುವುದು.
  • ವಲಸೆ ಕಾರ್ಮಿಕರನ್ನು ಇಲ್ಲೇ ಉಳಿಸಿಕೊಳ್ಳಲು ಈಗಾಗಲೇ ನೀಡಿರುವ 2,000 ರೂ. ಜೊತೆ 3,000 ರೂ. ಹೆಚ್ಚುವರಿ ಹಣ ನೀಡಲಾಗುವುದು.
  • ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ರಾಷ್ಟ್ರಾದ್ಯಂತದ ಲಾಕ್‌ಡೌನ್‌ನಿಂದ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಅವರಿಗೆ ಪ್ಯಾಕೆಜ್‌ ಅನ್ನು ಶೀಘ್ರವೆ ಘೋಷಿಸಲಾಗುವುದು.


ಆರ್ಥಿಕ ಸುಧಾರಣೆಗಾಗಿ ಲಾಕ್‌ಡೌನ್‌ ಸಡಿಲಗೊಳಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಮನೆಯಲ್ಲಿ, ಕೆಲಸ ಮಾಡುವಾಗ, ಕಾರ್ಯದ ನಿಮಿತ್ತ ಓಡಾಡುವಾಗ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಜನ ಸೇರುವಂತಹ ಸಭೆ ಸಮಾರಂಭಗಳನ್ನು ಯಾರೂ ಆಯೋಜಿಸಬಾರದು. ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುಬೇಕು ಎಂದರು.