ಕೊರೊನಾವೈರಸ್: ಹತ್ತಿರದ ಹಳ್ಳಿಗಳಿಗೆ ಆಹಾರವನ್ನು ವಿತರಿಸುತ್ತಿದೆ ಚಂಡೀಗರ್ ವಿಶ್ವವಿದ್ಯಾಲಯ

ಕೊರೊನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ಮಾಡಲಾದ ಈ ಸಮಯದಲ್ಲಿ, ಘರುವಾನ್‌ನ ಚಂಡೀಗರ್ ವಿಶ್ವವಿದ್ಯಾಲಯವು ನೆರೆ ಹೊರೆಯ ಆರು ಹಳ್ಳಿಗಳ ಬಡವರಿಗೆ ಮತ್ತು ನಿರ್ಗತಿಕರಿಗೆ ದಿನಕ್ಕೆ ಎರಡು ಬಾರಿ ಊಟವನ್ನು ವಿತರಿಸುತ್ತಿದೆ.

ಕೊರೊನಾವೈರಸ್: ಹತ್ತಿರದ ಹಳ್ಳಿಗಳಿಗೆ ಆಹಾರವನ್ನು ವಿತರಿಸುತ್ತಿದೆ ಚಂಡೀಗರ್ ವಿಶ್ವವಿದ್ಯಾಲಯ

Friday April 03, 2020,

2 min Read

ಜಾಗತಿಕ ಅಂಕಿಅಂಶಗಳ ದತ್ತಸಂಚಯವಾದ ವರ್ಲ್ಡೋಮೀಟರ್ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಆವರಿಸಿದೆ. ಜಾಗತಿಕವಾಗಿ ಸುಮಾರು 1,016,372 ಪಾಸಿಟಿವ್ ಪ್ರಕರಣಗಳು ಮತ್ತು 53,238 ಸಾವುಗಳು ಸಂಭವಿಸಿವೆ. ಶುಕ್ರವಾರದ ವೇಳೆಗೆ, ಭಾರತದಲ್ಲಿ ಸುಮಾರು 2561 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.


ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದ್ದು, ವಲಸೆ ಕಾರ್ಮಿಕರು ಸಾಮೂಹಿಕವಾಗಿ ತಾವು ಇದ್ದ ಸ್ಥಳದಿಂದ ನಿರ್ಗಮಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಕೆಲಸದಿಂದಲೂ ವಂಚಿತವಾಗಿದ್ದಾರೆ. ತಮ್ಮ ತಮ್ಮ ಊರಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಾರಿಗೆಯ ಕೊರತೆಯಿಂದಾಗಿ ಅವರು ಮನೆಗೆ ಹಿಂದಿರುಗಲಾಗುತ್ತಿಲ್ಲ. ಇದರಿಂದ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಉಂಟಾಗಿದೆ. ಇನ್ನೂ ಅನೇಕ ಕುಟುಂಬಗಳು 200 ಕಿ.ಮೀ ಗಿಂತ ಹೆಚ್ಚು ನಡೆದುಕೊಂಡು ಸ್ವಂತ ಊರಿನೆಡೆಗೆ ಪಯಣ ಬೆಳೆಸಿದ್ದಾರೆ.


ಚಂಡೀಗರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಹಾರವನ್ನು ವಿತರಿಸುತ್ತಿರುವುದು. (ಚಿತ್ರಕೃಪೆ: ಎಎನ್‌ಐ)




ಕೆಲವು ರಾಜ್ಯಗಳು ಈ ಜನರಿಗೆ ಆಹಾರವನ್ನು ಒದಗಿಸಲು ಅಡಿಗೆಮನೆಗಳನ್ನು ಸ್ಥಾಪಿಸಿವೆ ಮತ್ತು ಆಹಾರ ಪ್ಯಾಕೆಟ್ಗಳನ್ನು ಹಸ್ತಾಂತರಿಸುವಂತೆ ಪೊಲೀಸರಿಗೆ ಸೂಚನೆ ನೀಡಿವೆ.


ಭೀಕರ ಪರಿಸ್ಥಿತಿಯಲ್ಲಿ ಮೊಹಾಲಿಯ ಘರುವಾನ್‌ನಲ್ಲಿರುವ ಚಂಡೀಗರ್ ವಿಶ್ವವಿದ್ಯಾಲಯವು ದಿನಕ್ಕೆ ಎರಡು ಬಾರಿ ಊಟವನ್ನು ಆರು ನೆರೆಹೊರೆಯ ಗ್ರಾಮಗಳಾದ ಘರುವಾನ್, ಬಟ್ಟಾ, ಮಂಖೇರಿ, ಮಾಮುಪುರ, ರೂರ್ಕಿ ಪುಕ್ತಾ ಮತ್ತು ಮದೌಲಿಗಳಿಗೆ ವಿತರಿಸುತ್ತಿದೆ.


"ನಾವು ಪ್ರಸ್ತುತ ಪ್ರತಿದಿನ ಸುಮಾರು 500 ಜನರಿಗೆ ಆಹಾರವನ್ನು ನೀಡುತ್ತಿದ್ದೇವೆ. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಎದುರಾದರೆ ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಹುದು," ಎಂದು ಸ್ವಯಂಸೇವಕರಲ್ಲಿ ಒಬ್ಬರಾದ ಜೈ ವರ್ಧನ್ ಹೇಳಿದರು, ವರದಿ ಎಸೆಕ್ಸ್ ಲೈವ್.


ಲಾಕ್‌ಡೌನ್‌ನ ಮೊದಲ ದಿನದಿಂದ ವಿತರಣೆ ಪ್ರಾರಂಭವಾಯಿತು ಮತ್ತು 21 ದಿನಗಳಿಗೆ ಮುಂದುವರಿಯುತ್ತದೆ. ವಿಶ್ವವಿದ್ಯಾನಿಲಯದ ಊಟದ ಮನೆಯಲ್ಲಿ ಆಹಾರ ತಯಾರಿಸಿದ ನಂತರ ಗ್ರಾಮಗಳಿಗೆ ಸಂಸ್ಥೆಯ ಸಾರಿಗೆ ಸೌಲಭ್ಯಗಳೊಂದಿಗೆ ಸಾಗಿಸಲಾಗುತ್ತದೆ.


"ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಬಡ ಮತ್ತು ನಿರ್ಗತಿಕ ಸಮುದಾಯಕ್ಕೆ ಆಹಾರ ವಿತರಣೆಯನ್ನು ಮಾಡುತ್ತಿದ್ದರೂ, ಒಂದು ಸಂಸ್ಥೆಯಾಗಿ ಸಮಾಜದ ಕೆಳವರ್ಗದವರಿಗೆ ನಮಗೆ ಸಾಧ್ಯವಾದಷ್ಟು ರೂಪದಲ್ಲಿ ಸಹಾಯ ಮಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ," ಎಂದು ಚಂಡೀಗರ್ ವಿಶ್ವವಿದ್ಯಾಲಯದ ಕುಲಪತಿ ಸತ್ನಂ ಸಿಂಗ್ ಸಂಧು ಎಎನ್‌ಐ ಗೆ ಹೇಳಿದರು.


ಭೀತಿಗೊಳಿಸುವ ಸಾಂಕ್ರಾಮಿಕ ರೋಗದಿಂದ ಕೈಗೊಳ್ಳಬೇಕಾದ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಗ್ರಾಮಗಳ ನಿವಾಸಿಗಳಿಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನವನ್ನು ಸಹ ವಿಶ್ವವಿದ್ಯಾನಿಲಯವು ನಡೆಸುತ್ತಿದೆ ಎಂದು ಅವರು ಹೇಳಿದರು


ಆಹಾರದ ಹೊರತಾಗಿಯೂ ವಿಶ್ವವಿದ್ಯಾಲಯದ ಅನ್ವಯಿಕ ಆರೋಗ್ಯ ವಿಜ್ಞಾನ ಇಲಾಖೆ ಹಳ್ಳಿಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಲ್ಲಿ ಸ್ಯಾನಿಟೈಸರ್‌ಗಳನ್ನು ವಿತರಿಸಲು ತಯಾರಿ ನಡೆಸುತ್ತಿದೆ.


ಇಲ್ಲಿಯವರೆಗೆ, ಚಂಡೀಗರ್‌ದಲ್ಲಿ ಸುಮಾರು 18 ಪ್ರಕರಣಗಳು ಕಂಡುಬಂದಿವೆ. ಕೋವಿಡ್-19 ಭಾರತದಲ್ಲಿ ಇದುವರೆಗೆ ಸುಮಾರು 56 ಜೀವಗಳನ್ನು ಬಲಿ ಪಡೆದುಕೊಂಡಿದೆ.