ಕೊರೊನಾವೈರಸ್: ಕೋವಿಡ್-19 ಪತ್ತೆಮಾಡಲು ಕಡಿಮೆ ಬೆಲೆಯ ಪೇಪರ್-ಸ್ಟ್ರಿಪ್ ಸಾಧನವನ್ನು ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

ದೆಹಲಿ ಮೂಲದ ಸಿಎಸ್ಐಆರ್ ಲ್ಯಾಬ್ ಈ ಹೊಸ ಆವಿಷ್ಕಾರದಿಂದ ಕೊರೊನಾವೈರಸ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯ ಸಂಪೂರ್ಣವಾಗಿ ವೇಗಗೊಳ್ಳಲ್ಲಿದೆ ಎಂದು ಆಶಿಸುತ್ತದೆ.

ಕೊರೊನಾವೈರಸ್: ಕೋವಿಡ್-19 ಪತ್ತೆಮಾಡಲು ಕಡಿಮೆ ಬೆಲೆಯ ಪೇಪರ್-ಸ್ಟ್ರಿಪ್ ಸಾಧನವನ್ನು ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

Saturday April 04, 2020,

2 min Read

ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಯ ಭಾರತೀಯ ವಿಜ್ಞಾನಿಗಳು ಕಡಿಮೆ-ವೆಚ್ಚದ, ಪೇಪರ್ ಸ್ಟ್ರಿಪ್ ಪರೀಕ್ಷೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ, ಇದು ಒಂದು ಗಂಟೆಯೊಳಗೆ ಕೊರೊನಾವೈರಸ್ ಅನ್ನು ಪತ್ತೆ ಮಾಡುವುದಲ್ಲದೆ ದೇಶದಲ್ಲಿ ತ್ವರಿತ ಪರೀಕ್ಷೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.


ಮಿಂಟ್ ನಲ್ಲಿಯ ಒಂದು ವರದಿಯ ಪ್ರಕಾರ ಕೋವಿಡ್-19 ಪರೀಕ್ಷೆ ಹೊಸ ತಂತ್ರಜ್ಞಾನವಾದ ಜಿನ್ ಎಡಿಟಿಂಗ್ ಸಾಧನ ಕ್ರಿಸ್ಪರ್-ಕ್ಯಾಸ್9 ಅನ್ನು ಬಳಸಿ ಕೊರೋನವೈರಸ್ ನ ಶಂಕಿತ ವ್ಯಕ್ತಿಗಳ ಮಾದರಿಗಳಲ್ಲಿ ಜೀನೋಮಿಕ್ ಸರಣಿಗಳನ್ನು ಗುರುತಿಸುತ್ತದೆ.





ಐಜಿಐಬಿ ನವದೆಹಲಿ ಮೂಲದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಪ್ರಧಾನ ಪ್ರಯೋಗಾಲಯವಾಗಿದೆ. ವರದಿಯ ಪ್ರಕಾರ, ಈ ಕಿಟ್ ಗರ್ಭಧಾರಣೆಯನ್ನು ದೃಢೀಕರಿಸಲು ಬಳಸುವ ಪೋರ್ಟಬಲ್ ಪೇಪರ್ ಸ್ಟ್ರಿಪ್ ಪರೀಕ್ಷೆಯನ್ನು ಹೋಲುತ್ತದೆ ಮತ್ತು ಇದನ್ನು ನಿರ್ವಹಿಸಲು ಯಾವುದೇ ವಿಭಿನ್ನ, ವಿಶೇಷ ಕೌಶಲ್ಯದ ಅಗತ್ಯವಿಲ್ಲ, ಮತ್ತು ಇದು ಜನರಿಗೆ ತಿಳಿಯದಷ್ಟು ಕ್ಲಿಷ್ಟವಾದ ಹೊಸ ಪರೀಕ್ಷೆಯೇನಲ್ಲ.


ಪತ್ರಿಕೆಯೊಂದಿಗೆ ಮಾತನಾಡಿದ ಐಜಿಐಬಿಯ ದೇಬ್ಜೋತಿ ಚಕ್ರವರ್ತಿ, “ನಾವು ಸುಮಾರು ಎರಡು ವರ್ಷಗಳಿಂದ ಈ ಉಪಕರಣದ ಮೇಲೆ ಕೆಲಸ ಮಾಡುತ್ತಿದ್ದೇವೆ. ಆದರೆ ಜನವರಿ ಅಂತ್ಯದಲ್ಲಿ ಕೊರೋನಾ ಚೀನಾದಲ್ಲಿ ಏಕಾಏಕಿ ಉತ್ತುಂಗಕ್ಕೇರಿದಾಗ, ಉಪಕರಣ ಕೋವಿಡ್-19 ಗಾಗಿ ಕೆಲಸ ಮಾಡಬಹುದೇ ಎಂದು ಪರೀಕ್ಷಿಸಲು ಪ್ರಾರಂಭಿಸಿದೆವು. ಈ ಫಲಿತಾಂಶಕ್ಕೆ ಬರಲು ನಮಗೆ ಸುಮಾರು ಎರಡು ತಿಂಗಳು ಬೇಕಾಯಿತು," ಎಂದಿದ್ದಾರೆ.


ವಿಜ್ಞಾನಿಗಳ ಪ್ರಕಾರ, ನಿಗದಿತ ಯಂತ್ರೋಪಕರಣಗಳ ಅಗತ್ಯವಿರುವ ಹೆಚ್ಚಿನ ಕ್ಷಿಪ್ರ ಪರೀಕ್ಷೆಗಳಂತಲ್ಲದೆ ಇದು, ಪ್ರತಿ ರೋಗಶಾಸ್ತ್ರೀಯ ಪ್ರಯೋಗಾಲಯದಲ್ಲಿ ಲಭ್ಯವಿರುವ ಸಾಮಾನ್ಯ ಸಾಧನಗಳನ್ನು ಬಳಸಿ ಪರೀಕ್ಷೆ ಮಾಡಬಹುದಾಗಿದೆ.



ಸೌವಿಕ್ ಮೈಟಿ ಮತ್ತು ದೇಬ್ಜೋತಿ ಚಕ್ರವರ್ತಿ ನೇತೃತ್ವದ ತಂಡವು ಪ್ರಸ್ತುತ ಅದರ ನಿಖರತೆ ಮತ್ತು ಸೂಕ್ಷ್ಮತೆಗಾಗಿ ರೋಗಿಗಳ ಸಮೂಹದಲ್ಲಿ ಕಿಟ್ ಅನ್ನು ಪರೀಕ್ಷಿಸುತ್ತಿದ್ದು, ಒಂದು ವಾರದೊಳಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿಯಂತ್ರಕ ಸಂಸ್ಥೆಯಿಂದ ಪರವಾನಗಿ ಪಡೆಯುವ ಭರವಸೆ ಹೊಂದಿದೆ.


ಭಾರತದಲ್ಲಿ ಕೋವಿಡ್-19 ರೋಗನಿರ್ಣಯಕ್ಕಾಗಿ ಪ್ರಸ್ತುತ ಬಳಸುತ್ತಿರುವ ರಿಯಲ್ ಟೈಮ್ ಪಿಸಿಆರ್ ಪರೀಕ್ಷೆಯ ಬೆಲೆಯು ಸುಮಾರು 4,500 ರೂ. ಪೇಪರ್ ಸ್ಟ್ರಿಪ್ ಪರೀಕ್ಷೆಯ ಬೆಲೆ 500 ರೂ.ಗಿಂತ ಕಡಿಮೆಯಾಗಿದ್ದು. ಇದು ಆರ್‌ಎನ್‌ಎ ಪ್ರತ್ಯೇಕತೆ, ಡಿ ಎನ್ ಎ ಪರಿವರ್ತನೆ, ಅಂಪ್ಲಿಫಿಕೇಶನ್ ಗಾಗಿ ರಿಯಲ್ ಟೈಮ್ ಪಿಸಿಆರ್ ಯಂತ್ರಗಳನ್ನು ಅವಲಂಬಿಸಿರುವುದಿಲ್ಲ.


ಕೊರೊನಾವೈರಸ್ ಅನ್ನು ಪತ್ತೆಹಚ್ಚಲು ಪರೀಕ್ಷಾ ತಂತ್ರಜ್ಞಾನಗಳನ್ನು ವೇಗಗೊಳಿಸಲು ವಿಶ್ವದಾದ್ಯಂತ ತೀವ್ರವಾದ ಸಂಶೋಧನೆಗಳು ನಡೆದಿದ್ದು, ಪ್ರಪಂಚದಾದ್ಯಂತ ಸೋಂಕಿತರ ಸಂಖ್ಯೆ ಗುರುವಾರ ಒಂದು ಮಿಲಿಯನ್ ದಾಟಿದೆ.


ಪ್ರಸ್ತುತ, ಭಾರತದಲ್ಲಿ ಸುಮಾರು 3,122 ಕರೋನವೈರಸ್ ಸೋಂಕಿತ ಪ್ರಕರಣಗಳು ಮತ್ತು 86 ಸಾವುಗಳು ವರದಿಯಾಗಿವೆ.