ಬೆಂಗಳೂರು, ಕೋಲ್ಕತ್ತಾದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಸಹಾಯಕ್ಕೆ ನಿಂತ ಸ್ನೇಹಿತರು

ಬೆಂಗಳೂರು ಕೋಲ್ಕತ್ತಾದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ರೇಷನ್‌ ಕಿಟ್‌ ನೀಡಿ ಸಹಾಯ ಮಾಡುತ್ತಿದ್ದಾರೆ ದೇಬಯಾನ್‌ ಮುಖರ್ಜೀ, ಸೌಮ್ಯದೀಪ್‌ ಮೊಂಡಲ್‌ ಮತ್ತು ದೇಬೊತ್ತಮ ಬಸು ಎಂಬ ಮೂವರು ಗೆಳೆಯರು.

ಬೆಂಗಳೂರು, ಕೋಲ್ಕತ್ತಾದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಸಹಾಯಕ್ಕೆ ನಿಂತ ಸ್ನೇಹಿತರು

Tuesday May 26, 2020,

2 min Read

ಕಳೆದ ಎರಡು ತಿಂಗಳಿನಿಂದ ಕಷ್ಟದಲ್ಲಿರುವ ದಿನಗೂಲಿ ನೌಕರರು ಮತ್ತು ವಲಸೆ ಕಾರ್ಮಿಕರು ಊರಿಗೆ ಸೇರಲು ನಡೆದುಕೊಂಡು ಹೋಗುತ್ತಿರುವುದನ್ನು ನೋಡುತ್ತಲಿದ್ದೇವೆ. ಇದಕ್ಕೆ ಪರಿಹಾರ ನೀಡಲು ಸರ್ಕಾರವು ಹಲವು ಕ್ರಮಗಳನ್ನು ಜಾರಿಗೊಳಿಸಿದ್ದು ವಲಸಿಗರಿಗಾಗಿ ರೈಲು, ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.


ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಮತ್ತು ಸೀಟುಗಳ ಕೊರತೆಯಿಂದಾಗಿ ಇನ್ನೂ ಹಲವಾರು ವಲಸಿಗರು ಊಟ ವಸತಿಯ ಕೊರತೆಯೊಂದಿಗೆ ಬೇರೆ ಬೇರೆ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.


ದೇಬಯಾನ್‌ ಮತ್ತು ಅವರ ತಂಡ ಬಡವರಿಗೆ ರೇಷನ್‌ ಕಿಟ್‌ ನೀಡಿದರು.


ಕಳೆದ ವಾರ ಈಶಾನ್ಯ ರಾಜ್ಯಗಳ ಮತ್ತು ಒಡಿಶಾದ 9,000 ವಲಸೆ ಕಾರ್ಮಿಕರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುಂಪಾಗಿ ತಮ್ಮೂರಿಗೆ ಮರಳಲು ಹೆಚ್ಚಿನ ಸಾರೊಗೆ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಇಟ್ಟರು. ಇದು ಬರೀ ಕರ್ನಾಟಕದ ಕಥೆಯಲ್ಲ, ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ.


ದಿನಗೂಲಿ ನೌಕರರಿಗೆ ಸಹಾಯ ಮಾಡಲು ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಕಲ್ಪಿಸಲು ಮುಂದೆ ಬಂದಿರುವ ಹಲವಾರು ಸರ್ಕಾರೇತರ ಸಂಸ್ಥೆಗಳು ಮತ್ತು ಜನರಲ್ಲಿ 30 ರ ಹರೆಯದ ದೇಬಯಾನ್‌ ಮುಖರ್ಜೀಯವರು ಒಬ್ಬರು.


ತಮ್ಮ ಗೆಳೆಯರಾದ ಸೌಮ್ಯದೀಪ್‌ ಮೊಂಡಲ್‌ ಮತ್ತು ದೇಬೊತ್ತಮ ಬಸು ಅವರ ಸಹಕಾರದೊಂದಿಗೆ, ಮತ್ತು ‘ಹಂಡ್ರೆಡ್‌ʼ ಎಂಬ ಫೇಸ್‌ಬುಕ್‌ ಕ್ಯಾಂಪೆನ್‌ ಮೂಲಕ ದೇಬಯಾನ್‌ ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇವರು ನಗರದ ಅಕ್ಸೆಂಚರ್‌ ಕಂಪನಿಯಲ್ಲಿ ಸೀನಿಯರ್‌ ಕ್ಲೌಡ್‌ ಅನಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.


“ನಮ್ಮ ಮೂಲ ಉದ್ದೇಶವೆಂದರೆ ಅವರು(ವಲಸಿಗರು) ಹಸಿದುಕೊಂಡು ಹೋಗಬಾರದು, ಅವರು ಯಾವುದಕ್ಕಾಗಿ ಬಂದಿದ್ದಾರೋ ಅದನ್ನು ದಕ್ಕಿಸಿಕೊಳ್ಳಬೇಕು ಮತ್ತು ಲಾಕ್‌ಡೌನ್‌ ಮುಗಿದ ನಂತರ ಮೊದಲಿನಂತೆ ಕೆಲಸ ಮಾಡಬೇಕು,” ಎಂದರು ದೇಬಯಾನ್‌ ಮುಖರ್ಜೀ, ವರದಿ ದಿ ಲಾಜಿಕಲ್‌ ಇಂಡಿಯನ್‌.


ದೇಬೊತ್ತಮ ಮತ್ತು ಸೌಮ್ಯದೀಪ ಹಿಂದೆ ನಿಂತು ಆಸರೆಯಾಗಿದ್ದಲ್ಲದೆ, ಕೋಲ್ಕತ್ತಾದಲ್ಲಿ ರೇಷನ್‌ ವಿತರಿಸಿದ್ದಾರೆ. ದೇಬಯಾನ್‌ ಬೆಂಗಳೂರಿನಲ್ಲಿ ಸ್ಥಳಿಯ ಪೋಲಿಸರೊಂದಿಗೆ ಜೊತೆಗೂಡಿ ರೇಷನ್‌ ತಲುಪಿಸಿದ್ದಾರೆ.


ಫೇಸ್‌ಬುಕ್‌ ಕ್ಯಾಂಪೆನ್‌ ದಿನಗೂಲಿ ಕಾರ್ಮಿಕರಿಗೆ ಆಹಾರದ ಸಹಾಯ ಮಾಡಬಯಸುವವರಿಗೆ 100 ರೂ. ನೀಡಲು ಕೇಳುತ್ತದೆ. ಇಲ್ಲಿಯವರೆಗೆ ದೇಬಯಾನ್‌ ಮತ್ತು ಅವರ 10 ಜನರ ತಂಡ ಸುಮಾರು 3.8 ಲಕ್ಷ ರೂ. ಹಣವನ್ನು ಸಂಗ್ರಹಿಸಿದ್ದು, ಅದರಿಂದ ಬೆಂಗಳೂರಿನ 3,500 ಕಾರ್ಮಿಕರಿಗೆ ಸಹಾಯವಾಗಿದೆ. ಅಲ್ಲದೆ ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಮುರ್ಶಿದಾಬಾದ್‌ ನಲ್ಲಿಯೂ ಈ ಕಾರ್ಯವಾಗಿದೆ.


ವಿತರಿಸಿದ ರೇಷನ್‌ ಕಿಟ್‌ನ ಬೆಲೆ 500 ರೂ ಆಗಿದ್ದು, ಕಿಟ್‌ 2 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಬೇಳೆ, 2 ಸೋಪುಗಳು, ಬ್ರಷ್‌, ತೂಥ್‌ಪೇಸ್ಟ್‌, 250 ಗ್ರಾಂ ಟೀ, 1 ಕೆ.ಜಿ. ಈರುಳ್ಳಿ ಹಾಗೂ 10 ಪಾಕೆಟ್‌ ಬಿಸ್ಕತ್ತುಗಳನ್ನು ಒಳಗೊಂಡಿರುತ್ತದೆ.

“ಯಾರಿಗಾದರೂ ಅವಶ್ಯಕತೆಯಿದೆಯೆಂದು ತಿಳಿದರೆ ಜನರು ಅದನ್ನು ನಮಗೆ ತಿಳಿಸಬೇಕು, ನಾವವರಿಗೆ ಸಹಾಯ ಮಾಡಬಹುದು. ಇದರ ಬಗ್ಗೆ ಎಲ್ಲರಿಗೂ ಹೇಳಿರಿ. ಇದು ಜಾಸ್ತಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಮ್ಮದು ಎನ್‌ಜಿಓ ಅಲ್ಲ, ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿತರ ಗುಂಪೊಂದು ಸೇರಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇವೆ,” ಎನ್ನುತ್ತಾರೆ ದೇಬೊತ್ತಮ ಬಸು, ವರದಿ ದಿ ನ್ಯೂ ಇಂಡಿಯನ್‌ ಎಕ್ಸಪ್ರೆಸ್.