ಕೊಚ್ಚಿಯಲ್ಲಿ ಕೇವಲ 2 ರೂ.ಗೆ ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುತಿದ್ದಾರೆ ಈ ವ್ಯಕ್ತಿ

ಕರೊನಾ ವೈರಸ್‌ನಿಂದ ಏಕಾಏಕಿ ಕೆಲವು ಚಿಲ್ಲರೆ ವ್ಯಾಪಾರಿಗಳು ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದರೆ, ಕೊಚ್ಚಿಯ ಈ ವ್ಯಕ್ತಿ ಕೇವಲ 2 ರೂಪಾಯಿಗೆ ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕೊಚ್ಚಿಯಲ್ಲಿ ಕೇವಲ 2 ರೂ.ಗೆ ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುತಿದ್ದಾರೆ ಈ ವ್ಯಕ್ತಿ

Wednesday March 18, 2020,

2 min Read

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಕರೊನಾವನ್ನು ಸಾಂಕ್ರಾಮಿಕ ರೋಗವೆಂದು ವರ್ಗೀಕರಿಸಿದೆ. ಈ ಕರೊನಾ ವೈರಸ್ ಏಕಾಏಕಿ ಸಾಮೂಹಿಕ ಉನ್ಮಾದಕ್ಕೆ ಕಾರಣವಾಗಿದ್ದು, ಜನರಲ್ಲಿ ಭೀತಿಯನ್ನು ಮೂಡಿಸಿದೆ. ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಫೇಸ್‌ಮಾಸ್ಕ್ ಖರೀದಿಗೆ ಧಾವಿಸುತ್ತಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಈ ಫೇಸ್‌ಮಾಸ್ಕ್‌ಗಳ ಕೊರತೆ ಕಂಡು ಬರುತ್ತಿದೆ. ಕೊರತೆ ಹಾಗೂ ಹೆಚ್ಚಿನ ವೆಚ್ಚವನ್ನು ಪರಿಹರಿಸಲು, ಕೊಚ್ಚಿಯ ತಸ್ಲೀಮ್ ಪಿಕೆ ಎಂಬುವವರು ತಮ್ಮ ಅಂಗಡಿಯಲ್ಲಿ‌ ಫೇಸ್‌ಮಾಸ್ಕ್‌ಗಳನ್ನು 2 ರೂ.ಗೆ ಮಾರಾಟ ಮಾಡುತ್ತಿದ್ದಾರೆ.


ಪಸ್ಲಾಮ್ನಲ್ಲಿರುವ ತಮ್ಮ ಅಂಗಡಿಯಲ್ಲಿ ತಸ್ಲೀಮ್ ಪಿಕೆ ಮತ್ತು ಎಂ.ವಿ.ನಧೀಮ್ (ಚಿತ್ರಕೃಪೆ: ದಿ ಹಿಂದೂ)



ವಿಶ್ವದಾದ್ಯಂತ ಅನೇಕ ಔಷಧಾಲಯಗಳು ಹೆಚ್ಚುತ್ತಿರುವ ಈ ಬೇಡಿಕೆಯ ಲಾಭವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇವರ ಈ ಕೆಲಸ ಸಾಕಷ್ಟು ಗಮನ ಸೆಳೆದಿದೆ. ಕೊಚ್ಚಿಯ ಕೊಚ್ಚಿನ್ ಸರ್ಜಿಕಲ್ಸ್‌ನ ಮಾಲೀಕ ತಸ್ಲೀಮ್ ಪಿಕೆ ಅವರು ಬಿಕ್ಕಟ್ಟಿನ ಲಾಭವನ್ನು ನಿರೀಕ್ಷಿಸದೆ ಮಾನವೀಯತೆಗೆ ತಲೆ ಬಾಗಿದ್ದಾರೆ.


"ನಾವು ಈ ಫೇಸ್‌ಮಾಸ್ಕ್‌ಗಳನ್ನು ಕಳೆದ ತಿಂಗಳವರೆಗೆ ಒಂದಕ್ಕೆ 2 ರೂಪಾಯಿಯಂತೆ ಮಾರಾಟ ಮಾಡಿದ್ದೇವೆ. ಆದರೆ ಈಗ ಬೆಲೆ ಹೆಚ್ಚಾಗಿದ್ದು, ಇತ್ತೀಚೆಗೆ ನಾನು ಪ್ರತಿ ತುಂಡಿಗೆ 8 ರೂಪಾಯಿಯಂತೆ ಖರೀದಿಸಿದೆ. ಏಕಾಏಕಿ ಉಂಟಾಗುವ ಆರೋಗ್ಯದ ಅಪಾಯವನ್ನು ಪರಿಗಣಿಸಿ, ನಾವು ಫೇಸ್‌ಮಾಸ್ಕ್‌ಗಳನ್ನು ತುಂಬಾ ಅಗತ್ಯ ಹೊಂದಿರುವವರಿಗೆ ಮೂಲ ದರದಲ್ಲಿ ವಿತರಿಸುತ್ತಿದ್ದೇವೆ," ಎಂದು ತಸ್ಲೀಮ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌‌ಗೆ ತಿಳಿಸಿದ್ದಾರೆ.


ಕೇವಲ ಎರಡೇ ದಿನಗಳಲ್ಲಿ ಈ ಔಷಧಾಲಯವು ಸುಮಾರು 5,000 ಫೇಸ್‌ಮಾಸ್ಕ್‌ಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಿದೆ. ನಷ್ಟದ ಹೊರತಾಗಿಯೂ ತಸ್ಲೀಮ್ ಈ ಫೇಸ್‌ಮಾಸ್ಕ್‌ಗಳನ್ನು ಮೂಲ ಬೆಲೆಗೆ ಮಾರಾಟ ಮಾಡುವುದನ್ನು ಮುಂದುವರೆಸಿದ್ದಾರೆ.


ಅಂಗಡಿಯ ಸಹ-ಮಾಲೀಕರಾದ ಎಂ.ವಿ.ನದೀಂ ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡುತ್ತ,

"ನಾವು ಎರಡು ದಿನದಲ್ಲಿ 5,000 ಮಾಸ್ಕ್‌ಗಳನ್ನು ಮಾರಾಟ ಮಾಡಿದ್ದೇವೆ. ವಿಶೇಷವಾಗಿ ಸಾಮಾನ್ಯ ಜನರಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ನಾವು ಮಾಸ್ಕ್‌ಗಳನ್ನು ಸಮಂಜಸ ಬೆಲೆಯಲ್ಲಿ ಮಾರಾಟ ಮಾಡಲು‌ ನಿರ್ಧರಿಸಿದ್ದೇವೆ," ಎಂದಿದ್ದಾರೆ.


ಭೀತಿ ಹೆಚ್ಚಿರುವ ಈ ಸಮಯದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವುದಕ್ಕೂ ಕೈ ಹಾಕಲು ಹಿಂಜರಿಯುವುದಿಲ್ಲ. ಆದರೆ ಇವರು ಪರಿಸ್ಥಿತಿಯ ಲಾಭಕ್ಕಾಗಿ ಯೋಚಿಸದೆ,‌ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಮಾನವೀಯತೆಯ ಸಕರಾತ್ಮಕ ಭಾಗವನ್ನು ಎಲ್ಲರಿಗೂ ತೆರೆದಿಡುತ್ತಿದ್ದಾರೆ. ಇತರ ಔಷಧಲಾಯಗಳು ತಮ್ಮ ಮುನ್ನಡೆಯನ್ನು ಅನುಸರಿಸುವಂತೆ ಮತ್ತು ಫೇಸ್‌ಮಾಸ್ಕನಂತಹ ಅಗತ್ಯ ವಸ್ತುಗಳನ್ನು ಜನರಿಗೆ ಕೈಗೆಟುಕುವಂತೆ ಮಾಡಲು ಇವರು ಆಶಿಸುತ್ತಾರೆ.