ಕೊರೊನಾವೈರಸ್‌ ಜನಸಾಮಾನ್ಯರಲ್ಲಿ ಶಿಸ್ತನ್ನು ಮೂಡಿಸುತ್ತಿದೆಯೇ?

ಭಾರತದಲ್ಲಿ ಕೊರೊನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸಾಂಕ್ರಾಮಿಕವು ಜನರ ವರ್ತನೆಯ ಬದಲಾವಣೆಗೆ ಕಾರಣವಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ, ಅಷ್ಟೇ ಅಲ್ಲದೆ ಅನಾರೋಗ್ಯ ಮತ್ತು ಆರೋಗ್ಯ ಸಮಸ್ಯೆಗಳಿಗೆ ಭಾರತೀಯರು ಈಗ ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಸ್ಪಂದಿಸುತ್ತಿದ್ದಾರೆ.

ಕೊರೊನಾವೈರಸ್‌ ಜನಸಾಮಾನ್ಯರಲ್ಲಿ ಶಿಸ್ತನ್ನು ಮೂಡಿಸುತ್ತಿದೆಯೇ?

Wednesday March 25, 2020,

3 min Read

ಡಿಸೆಂಬರ್ 31 ರಂದು ಚೀನಾದ ವುಹಾನ್ ನಲ್ಲಿ ಮೊದಲ ಕೊರೊನವೈರಸ್ ಪ್ರಕರಣಗಳು ವರದಿಯಾದವು. ಒಂದು ತಿಂಗಳ ನಂತರ, ವಿಶ್ವ ಆರೋಗ್ಯ ಸಂಸ್ಥೆ ಈ ಕೊರೊನವೈರಸ್ ನ ವಿಷವರ್ತುಲದಿಂದ ಹೊರಬರಲು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿತು.


ಕೋವಿಡ್-19 ಸಾಂಕ್ರಾಮಿಕವು ಈಗ ಪ್ರಪಂಚದಾದ್ಯಂತ ಹರಡಿ 14,652 ಸಾವುಗಳನ್ನು ಮತ್ತು 334,981 ಪ್ರಕರಣಗಳನ್ನು ಉಂಟುಮಾಡಿದೆ ಎಂದು ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ತಿಳಿಸಿವೆ.


ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಪ್ರಕಾರ ಭಾರತದಲ್ಲಿ ಈವರೆಗೆ ಸುಮಾರು 500 ಕೊರೊನವೈರಸ್ ಪ್ರಕರಣಗಳು ವರದಿಯಾಗಿವೆ.


ಆದರೆ ವಿನಾಶದ ಕತ್ತಲೆಯ ಮಧ್ಯೆ ಒಂದು ಬೆಳಕಿನ ಆಶಾಕಿರಣ ಕಾಣುತ್ತಿದೆ, ಈ ಸಾಂಕ್ರಾಮಿಕವು ಜನರ ವರ್ತನೆಯ ಮೇಲೆ ಬದಲಾವಣೆಯನ್ನು ತಂದಿದೆ, ಇದರಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.


ಫೋರ್ಟಿಸ್, ಗುರಗಾಂವ್ ನ ಡಾ. ಮೊಹಮ್ಮದ್ ಯೂಸೆಫ್ ಮಜಾರ್ ಕೊರೊನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ವೈದ್ಯರ ಬಳಿ ತೆರಳುವ ರೋಗಿಗಳ ಬೆಳಕಿಗೆ ಬಾರದ ಕಾಯಿಲೆಗಳು ಹೊರಬರುತ್ತಿವೆ ಎನ್ನುತ್ತಾರೆ.


ದೆಹಲಿ ಮೂಲದ ಅವಿನಾಶ್ ಮಿಶ್ರಾ (66) ಅವರ ಮಗ ಕೊರೊನವೈರಸ್ ಮೇಲಿನ ಭಯದಿಂದ ತಮ್ಮ ತಂದೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಅವರಿಗೆ ಅಪರೂಪದ ರೀತಿಯ ಆಸ್ತಮಾ ಇರುವುದು ಗೊತ್ತಾಗಿ ಅದಕ್ಕೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿದೆ ಎಂಬುದನ್ನು ಕಂಡುಕೊಂಡರು.


“ನಾನು ನಿಯಮಿತವಾಗಿ ಧೂಮಪಾನ ಮಾಡುತ್ತೇನೆ. ಕಳೆದ ಎಂಟು ತಿಂಗಳಿಂದ ನಾನು ತೀವ್ರವಾಗಿ ಕೆಮ್ಮುತ್ತಿದ್ದೆ, ಅದರ ಕಾರಣ ದೆಹಲಿ ಮಾಲಿನ್ಯವೆಂದುಕೊಂಡು, ವೈದ್ಯರ ಬಳಿಗೆ ಹೋಗಲಿಲ್ಲ. ಕೊರೊನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನನ್ನ ಮಗ ನನ್ನನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಕರೋನಾ ಪರೀಕ್ಷೆಯನ್ನು ಸೂಚಿಸಿದರು, ಆಗ ನಾನು ಶ್ವಾಸಕೋಶಶಾಸ್ತ್ರಜ್ಞರನ್ನು ಭೇಟಿಮಾಡಿದೆ ನಂತರ ನನ್ನ ಎದೆಯಲ್ಲಿ ತೀವ್ರವಾದ ಉರಿಯೂತವಿದೆ ಎಂದು ಕಂಡುಕೊಂಡೆ," ಎಂದರು ಅವಿನಾಶ್.


ಕೋವಿಡ್-19 ಪರೀಕ್ಷೆಯಲ್ಲಿ ಅವಿನಾಶ್ ಋಣಾತ್ಮಕ ಫಲಿತಾಂಶವನ್ನು ಪಡೆದುಕೊಂಡರು.


ಕೋವಿಡ್-19 ನಡವಳಿಕೆಯಲ್ಲಿ ಬದಲಾವಣೆಯನ್ನು ತಂದಿದೆ ಎಂಬುದನ್ನು ದೆಹಲಿಯ ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ.ಅಪ್ರಜೀತ್ ಕಾರ್ ಒಪ್ಪುತ್ತಾರೆ.


"ಜನರು ವೈರಸ್‌ಗೆ ಒಳಗಾಗಬಹುದೆಂದು ಭಾವಿಸಿ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಆದರೆ ಈಗ ಅವರು ಹೆಚ್ಚು ಜಾಗೃತರಾಗಿದ್ದಾರೆ. ಜನರ ನಡವಳಿಕೆಯಲ್ಲಿ ಬದಲಾವಣೆಯಾಗಿದೆ - ರೋಗಲಕ್ಷಣಗಳನ್ನು ನಿರ್ಲಕ್ಷಿಸುವ ಬದಲು, ಜನರು ಗಮನ ಹರಿಸುತ್ತಿದ್ದಾರೆ ಮತ್ತು ಪರಿಶೀಲಿಸುತ್ತಿದ್ದಾರೆ,” ಎಂದು ಅವರು ಹೇಳುತ್ತಾರೆ.


ಕೊರೊನವೈರಸ್‌ನಿಂದ ಮಲಗಾದ ಅಟ್ಲೆಟಿಕಾ ಪೋರ್ಟಾಡಾ ಆಲ್ಟಾದ ಕಿರಿಯರ ತಂಡದ ತರಬೇತುದಾರ ಫ್ರಾನ್ಸಿಸ್ಕೊ ​​ಗಾರ್ಸಿಯಾ ಎಂಬ 21 ವರ್ಷದ ಯುವಕನ ಸಾವು, ಕೋವಿಡ್-19 ಜೊತೆಗೆ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮಾರಕವಾಗಬಹುದು ಎಂದು ತೋರಿಸಿದೆ. ಈ ಮೊದಲು ಫ್ರಾನ್ಸಿಸ್ಕೋಗೆ ಲ್ಯುಕೇಮಿಯಾ ಇದೆ ಎಂದೇ ತಿಳಿದಿರಲಿಲ್ಲ.


ತಮ್ಮ ಹೆಸರನ್ನು ಹೇಳಲು ಇಚ್ಚಿಸದ ದೆಹಲಿಯ ಸರ್ಕಾರಿ ಆಸ್ಪತ್ರೆಯ ವಿಭಾಗದ ಮುಖ್ಯಸ್ಥರೊಬ್ಬರು, ಕೊರೊನವೈರಸ್ ಪ್ರಕರಣಗಳಲ್ಲಿ ಸಾವಿಗೆ ಪ್ರಮುಖ ಕಾರಣ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಎಂದು ಹೇಳುತ್ತಾರೆ. ಟಿಬಿ, ಕ್ಯಾನ್ಸರ್, ಅಧಿಕ ರಕ್ತದ ಸಕ್ಕರೆ ಕಾಯಿಲೆ ಮತ್ತು ಇತರ ರೋಗಗಳನ್ನು ಹೊಂದಿರುವವರಿಗೆ ಹೆಚ್ಚಿನ ಅಪಾಯವಿದೆ ಎನ್ನುತ್ತಾರೆ.


"ಜನರು ಈಗ ತಮ್ಮ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಹೆಚ್ಚು ತಿಳಿದಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಾವು ಕೋವಿಡ್-19 ಅನ್ನು ನಿರ್ಮೂಲನೆ ಮಾಡಿದ ನಂತರವೂ ಈ ಎಚ್ಚರಿಕೆಯ ನಡವಳಿಕೆ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳುತ್ತಾರೆ.


ಕೋವಿಡ್-19 ಮೂಲತಃ “ಉಸಿರಾಟದ ವೈರಸ್” ಎಂದು ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ರವಿ ಮಲಿಕ್ ಹೇಳುತ್ತಾರೆ, ಲ್ಯುಕೇಮಿಯಾ, ತೀವ್ರ ಆಸ್ತಮಾ, ಅನಿಯಂತ್ರಿತ ಮಧುಮೇಹ ಮತ್ತು ದೀರ್ಘಕಾಲದ ಸ್ಟೀರಾಯ್ಡ್ ಹೊಂದಿರುವ ರೋಗಿಗಳು ವೈರಸ್ ಸೋಂಕು ತಗಲುವ ದೊಡ್ಡ ಅಪಾಯದಲ್ಲಿದ್ದಾರೆ ಎನ್ನುತ್ತಾರವರು.


ಆದರೆ, ಏಕಾಏಕಿ ಜನರಿಗೆ ಕೆಮ್ಮು, ಸೀನುವಿಕೆಯಲ್ಲಿ ಶಿಸ್ತನ್ನು ಮತ್ತು ಸಾಮಾಜಿಕ ಅಂತರದ ಶಿಷ್ಟಾಚಾರವನ್ನು ಕಲಿಸಿದೆ ಎಂದು ಅವರು ಹೇಳುತ್ತಾರೆ.


ಭಾರತದಲ್ಲಿ ಜನರು ಉಸಿರಾಟದ ನೈರ್ಮಲ್ಯವನ್ನು ಕಲಿತಿದ್ದಾರೆ. ಹಲವರು ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಇದು ಕೋವಿಡ್-19 ಅನ್ನು ಎದುರಿಸಲು ಸಹಾಯ ಮಾಡುವುದಲ್ಲದೆ, ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುವ ಟಿಬಿ ಮತ್ತು ವರ್ಷಕ್ಕೆ 60,000 ಜೀವಗಳನ್ನು ತೆಗೆದುಕೊಳ್ಳುವ ಜ್ವರ ಮುಂತಾದ ಕಾಯಿಲೆಗಳಿಗೂ ಸಹ ಸಹಾಯ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ.


ಕೊರೊನವೈರಸ್ ಅನ್ನು ಪರೀಕ್ಷಿಸುವ ಪರೀಕ್ಷೆಯು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ತಂತ್ರಗಳನ್ನು ಆಧರಿಸಿದೆ ಎಂದು ಡಾ.ಸಂತೋಷ್ ಕುಮಾರ್ ಯುವರ್‌ಸ್ಟೋರಿಗೆ ತಿಳಿಸಿದರು. "ಆದರೆ ಪ್ರಸ್ತುತ ಪರೀಕ್ಷಾ ಕಿಟ್‌ಗಳನ್ನು ಕೊರೊನವೈರಸ್ ಪರೀಕ್ಷಿಸಲು ನಿರ್ದಿಷ್ಟವಾಗಿ ತಯಾರಿಸಲಾಗುತ್ತದೆ; ಒಬ್ಬ ವ್ಯಕ್ತಿಯು ಇಂತಹ ಕೋವಿಡ್-19 ಪರೀಕ್ಷೆಗೆ ಒಳಪಟ್ಟರೆ ಅವರು ಧನಾತ್ಮಕವೋ ಅಥವಾ ಋಣಾತ್ಮಕವೋ ಎಂದದು ಬಹಿರಂಗಪಡಿಸುತ್ತದೆ,” ಎನ್ನುತ್ತಾರೆ ಸಂತೋಷ.


ಆದಾಗ್ಯೂ, ಕೆಲವು ಆಸ್ಪತ್ರೆಗಳು ಪೂರ್ಣ ಪಿಸಿಆರ್ ಪರೀಕ್ಷೆಯನ್ನು ನಡೆಸುತ್ತವೆ, ಇದು ಎಚ್ 1 ಎನ್ 1 ಅಥವಾ ಹಂದಿ ಜ್ವರ ಮುಂತಾದ ಇತರ ಕಾಯಿಲೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಎಂದು ಡಾ ಯೂಸುಫ್ ಹೇಳುತ್ತಾರೆ.


ಕೋವಿಡ್-19 ಗೆ ವ್ಯಕ್ತಿಯು ಋಣಾತ್ಮಕವಾಗಿದ್ದರೆ, ಇತರ ಕಾಯಿಲೆಗಳನ್ನು ಪರೀಕ್ಷಿಸುವುದು ಅರ್ಥಪೂರ್ಣವಾಗಿರುತ್ತದೆ ಎನ್ನುತ್ತಾರೆ ಡಾ. ಸಂತೋಷ.


"ಪ್ರತಿ ಕೆಮ್ಮು ಕೊರೊನವೈರಸ್ ಅಲ್ಲ, ಪ್ರತಿ ಸೀನು ಕೊರೊನವೈರಸ್ ಅಲ್ಲ ಮತ್ತು ಪ್ರತಿ ಜ್ವರವು ಕೊರೊನವೈರಸ್ ಅಲ್ಲ.”


ಜನರು ಭಯಭೀತರಾಗಬೇಕಾಗಿಲ್ಲ ಆದರೆ ತಮ್ಮನ್ನು ಜಾಗೃತರಾಗಿಟ್ಟುಕೊಳ್ಳಬೇಕು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು," ಎನ್ನುತ್ತಾರೆ ಡಾ.ರವಿ. ಕೊರೊನವೈರಸ್ ನ ತಾಂಡವ ನಿಜವೇ, ಆದರೆ ಮುನ್ನೆಚ್ಚರಿಕೆಗಳನ್ನು ಪಾಲಿಸಿಸುವುದರಿಂದ ಮಾತ್ರ ರೋಗವನ್ನು ದೂರವಿಡಬಹುದು.