ಮನೆಯಿಂದ ಕೆಲಸ ಮಾಡುವವರಿಗೆ ಇಲ್ಲಿವೆ ಒಂದಷ್ಟು ಸಲಹೆಗಳು

ಮನೆಯಿಂದಲೇ ಕೆಲಸ ಮಾಡುವುದು ಸದ್ಯದ ಅಗತ್ಯತೆಯಾಗಿದೆ. ಕರೋನವೈರಸ್ ರೋಗದಿಂದಾಗಿ ಜನರು ಮನೆಯಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ, ಇದು ಮುಂದಿನ ಒಂದೆರಡು ತ್ರೈಮಾಸಿಕಗಳವರೆಗೆ ಹೀಗೆ ಮುಂದುವರೆಯಬಹುದು.

ಮನೆಯಿಂದ ಕೆಲಸ ಮಾಡುವವರಿಗೆ ಇಲ್ಲಿವೆ ಒಂದಷ್ಟು ಸಲಹೆಗಳು

Thursday March 26, 2020,

3 min Read

ಈಗ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಒಂದು ಪದವೆಂದರೆ ವರ್ಕ್‌ ಫ್ರಂ ಹೋಮ್‌ ಅಥವಾ 'ಮನೆಯಿಂದಲೆ ಕೆಲಸ ಮಾಡುವುದುʼ (ಡಬ್ಲ್ಯೂಎಫ್‌ಎಚ್‌ ಎಂದು ಸಂಕ್ಷೇಪಿಸಲಾಗಿದೆ), ಮನೆಗಳೆ ಈಗ ಪ್ರತಿಯೊಬ್ಬರ ಕಾರ್ಯಸ್ಥಾನಗಳಾಗಿವೆ!


ಕೋವಿಡ್‌-19 ವೈರಸ್‌ ಪ್ರಸರಣವನ್ನು ತಡೆಯಲು ನಾವೆಲ್ಲರೂ ಸಿದ್ಧರಾಗಿದ್ದೇವೆ. ಇದರ ಫಲವಾಗಿ, ನಾವು ಮನೆಯೊಳಗೆ ಇದ್ದು, ನಮ್ಮ ದೈನಂದಿನ ಜೀವನವನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮುಂದುವರಿಸುವುದು ಅನಿವಾರ್ಯವಾಗಿದೆ. ಆದರೆ ಅದಷ್ಟು ಸುಲಭವಲ್ಲ.


ವರ್ಕ್‌ ಫ್ರಂ ಹೋಮ್‌ ಸುಮಾರು ಅರ್ಧದಷ್ಟು ಜಗತ್ತನ್ನು ಸಾಮೂಹಿಕ ಬೇಜಾರಿಗೆ ಕಳಿಸಿದೆ. ಇದರ ಮೇಲೆ ಹಲವಾರು ಮೇಮೆ, ಜೋಕ್, ಹ್ಯಾಶ್‌ಟ್ಯಾಗ್, ಹಾಟ್ ಟೇಕ್ಸ್ ಮತ್ತು ಮುಂತಾದವುಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಪ್ರಸಿದ್ಧ ಉದ್ಯಮಿಗಳಾದ ಸಚಿನ್ ಬನ್ಸಾಲ್ ಮತ್ತು ಕುನಾಲ್ ಷಾ ಅವರಿಂದ ಹಿಡಿದು ಕೆಲಸ ಮಾಡುವ ತಾಯಂದಿರವರೆಗೆ - ಪ್ರತಿಯೊಬ್ಬರೂ ಮನೆಯಿಂದ ಕೆಲಸಮಾಡಬೇಕಾಗಿದೆ.


ನೇರವಾಗಿ ಹೇಳಬೇಕೆಂದರೆ: ವರ್ಕ್‌ ಫ್ರಂ ಹೋಮ್‌ ಸುಲಭವಲ್ಲ. ವಾಸ್ತವವಾಗಿ, ಇದು ಆಗಾಗ್ಗೆ ತೀವ್ರವಾಗಿ ಪ್ರತ್ಯೇಕಿಸುವ, ಒತ್ತಡದ ಅನುಭವವಾಗಿದೆ - ಇದು ದೀರ್ಘಾವಧಿಯಲ್ಲಿ ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹಾನಿಗೊಳಿಸುತ್ತದೆ.


ದುರದೃಷ್ಟವಶಾತ್, ಈ ಹೊಸ ಕ್ರಮಕ್ಕೆ ಒಗ್ಗಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ.


ಆದ್ದರಿಂದ, ವರ್ಕ್‌ ಫ್ರಂ ಹೋಮ್‌ ಹೊಸತಾಗಿರುವವರಿಗೆ ಹೊರೆ ಎನಿಸದಂತೆ ಈ ಪ್ರಕ್ರಿಯೆಯನ್ನು ಅರ್ಥೈಸಲು ಪ್ರಯತ್ನಿಸೋಣ.


ವರ್ಕ್‌ ಫ್ರಂ ಹೋಮ್‌ ನಲ್ಲಿ 'ಮಾಡಬೇಕಾದದ್ದು'

ವರ್ಕ್‌ ಫ್ರಂ ಹೋಮ್‌ ರಜೆಯಲ್ಲವೆಂಬುದನ್ನು ಮೊದಲು ನೆನಪಿಡಬೇಕು.


ಒಬ್ಬರು ತಮ್ಮ ಬಿಡುವಿನ ವೇಳೆಯನ್ನು ಪ್ರಾರಂಭದಲ್ಲಿಯೇ ನಿರ್ಧರಿಸಿರಬೇಕು. ಮತ್ತು ನೀವು ಇದನ್ನು ಹೀಗೆ ಮಾಡಬಹುದು.


  • ದಿನಚರಿಯನ್ನು ಹೊಂದಿಸಿಕೊಳ್ಳಿ ಮತ್ತು ಅದನ್ನೇ ರೂಢಿಸಿಕೊಳ್ಳಿ.


  • ಬೇಗನೆ ಎದ್ದು ನಿಮ್ಮ ದಿನವನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಿ. ಅದು ಬೆಳಿಗ್ಗೆ 8 ಅಥವಾ 10.30 ಅಥವಾ ಮಧ್ಯಾಹ್ನ 12 ಆಗಿರಬಹುದು - ನಿಮ್ಮ ಕಾಲವೇನೇ ಇರಲಿ, ಆದರೆ ಅದಕ್ಕೆ ಅಂಟಿಕೊಳ್ಳಿ.


  • ಸ್ನಾನ ಮಾಡಿ, ಬಟ್ಟೆಗಳನ್ನು ಧರಿಸಿ. ವರ್ಕ್‌ ಫ್ರಂ ಹೋಮ್‌ ಮಾಡುವ ಅನೇಕರು ಪೈಜಾಮಾನಲ್ಲಿರುವುದು ಫ್ಯಾಶನ್ ಎಂದು ನಂಬಿರುತ್ತಾರೆ, ಆದರೆ ಅದು ನಿಮ್ಮನ್ನು ರಜೆಯ ಮನಸ್ಥಿತಿಗೆ ಕರೆದೊಯ್ದರೆ ಅದನ್ನು ಮಾಡಬೇಡಿ.


  • ಎಷ್ಟೇ ಸಣ್ಣದಾದರೂ, ಶಾಂತ ಮತ್ತು ಪ್ರತ್ಯೇಕವಾದ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳಿ. ಇದು ನಿಮ್ಮ ಹಾಸಿಗೆಯ ಮೇಲಿರುವ ಲ್ಯಾಪ್‌ಟಾಪ್-ಡೆಸ್ಕ್ ಆಗಿರಬಹುದು ಅಥವಾ ನಿಮ್ಮ ವಾಸದ ಕೋಣೆಯಲ್ಲಿನ ಒಂದು ಸಣ್ಣ ಮೂಲೆಯಾಗಿರಬಹುದು, ಆದರೆ ಕೆಲವು ಗಂಟೆಗಳ ಕಾಲ ಇದ್ದರೂ ಸಹ ನೀವು ದೈನಂದಿನ ತಲ್ಲಣದಿಂದ ನಿಮ್ಮನ್ನು ದೂರ ಉಳಿಸಿಕೊಳ್ಳುವುದು ನಿರ್ಣಾಯಕ ಅಂಶವಾಗಿದೆ.


  • ಹೆಡ್‌ಫೋನ್‌ ಬಳಸಿ: ಶಬ್ದ ರದ್ದತಿ ಹೆಡ್‌ಫೋನ್‌ಗಳು, ತೊಂದರೆ ನೀಡುವ ಅಥವಾ ನಿಮ್ಮ ಏಕಾಗ್ರತೆಗೆ ಭಂಗ ತರುವ ಪ್ರಾಪಂಚಿಕ ಶಬ್ದಗಳು ನಿಮಗೆ ಕೇಳಿಸದಂತೆ ಮಾಡುವುದಲ್ಲದೆ, ಸಂಗೀತವು ಏಕಾಗ್ರತೆ ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತವೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನೀವು ಮನೆಯಲ್ಲಿ ಮಕ್ಕಳನ್ನು ಹೊಂದಿದ್ದರೆ, ಹೆಡ್‌ಫೋನ್‌ ಬಳಸುವುದು ಉತ್ತಮ.




  • ಯಾವಾಗಲೂ ಸಂಪರ್ಕದಲ್ಲಿರಿ: ನೀವು ಪ್ರಪಂಚದ ಒಂದು ಮೂಲೆಯಿಂದ ಕೆಲಸ ಮಾಡುತ್ತಿರಬಹುದು, ಆದರೆ ನೀವು ನಿಜವಾಗಿಯೂ ತಂಡದೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಕರೆ, ಮಿಂಚಂಚೆ ಮತ್ತು ಸಂದೇಶಗಳಿಗೆ ಸ್ಪಂದಿಸುವುದು, ವಿಶೇಷವಾಗಿ ಕೆಲಸದ ಸಮಯದಲ್ಲಿ ಸಂಪರ್ಕದಲ್ಲಿರುವುದು ಅತ್ಯಗತ್ಯ.


  • ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಪಡೆಯಿರಿ: ಕಳಪೆ ಸಂಪರ್ಕವು ಮನೆಯಿಂದ ಕೆಲಸ ಮಾಡುವಾಗ ಸಲ್ಲದು. ಆದ್ದರಿಂದ, ಅಕಾಲಿಕ ತಡೆ ಅಥವಾ ಬ್ಯಾಂಡ್‌ವಿಡ್ತ್ ಬಿಕ್ಕಟ್ಟನ್ನು ತಪ್ಪಿಸಲು ಮೊದಲೆ ನಿಮ್ಮ ಇಂಟರ್ನೆಟ್ ಅನ್ನು ಸರಿಪಡಿಸಿಕೊಳ್ಳಿ. ಕರೋನವೈರಸ್ ದಾಳಿಯಿಂದ ಜಗತ್ತಿನಲ್ಲಿ ವರ್ಕ್‌ ಫ್ರಂ ಹೋಮ್‌ ಅನ್ನು ಸರಾಗಗೊಳಿಸುವ ಸಲುವಾಗಿ, ಹಲವಾರು ಇಂಟರ್ನೆಟ್ ಸೇವಾ ಪೂರೈಕೆದಾರರು ಆಕರ್ಷಕ ಡೇಟಾ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ನಿಮಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.


  • ನಿಮ್ಮ ಸಾಧನಗಳನ್ನು ಚಾರ್ಜ್ ಮಾಡಿ: ನಿಮ್ಮ ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಾ ಸಮಯದಲ್ಲೂ ಚಾರ್ಜ್ ಮಾಡಿಕೊಳ್ಳುವುದು ಉತ್ತಮ ಕೆಲಸ, ವಿಶೇಷವಾಗಿ ನೀವು ಮನೆಯಲ್ಲಿ ಪವರ್ ಬ್ಯಾಕಪ್ ಹೊಂದಿರದಿದ್ದಾಗ. ನೀವು ವಾಡಿಕೆಯಂತೆ ವಿದ್ಯುತ್‌ ಶಕ್ತಿಯಿಂದ ಹೊರಗುಳಿಯುವ ಅಥವಾ ಮಳೆ ಬಂದಾಗಲೆಲ್ಲಾ ವಿದ್ಯುತ್ ಕಡಿತಕ್ಕೆ ಒಳಗಾಗುವ ನಗರದಿಂದ ಕೆಲಸ ಮಾಡುತ್ತಿದ್ದರೆ ಇದು ಹೆಚ್ಚು ಮುಖ್ಯವಾಗಿರುತ್ತದೆ.


  • ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ: ಇದ ಕೇಳಲು ಹಿತವೇನಿಸಬಹುದು. ಆದರೆ ನಿಮ್ಮ ಒತ್ತಡದ ಮಟ್ಟವನ್ನು ಗಣನೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲಸದ ಸ್ಥಳದಲ್ಲಿರುವಾಗ, ಊಟಕ್ಕೆ, ಚಹಾಕ್ಕೆ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು. ಹೇಗಾದರೂ, ಮನೆಯಲ್ಲಿ, ಸಮಯದ ಅರ್ಥವನ್ನು ಕಳೆದುಕೊಳ್ಳುವುದು ಅಸ್ವಾಭಾವಿಕವಲ್ಲ. ಆದ್ದರಿಂದ, ನಿಮಗೆ ಅಗತ್ಯವಿರುವಾಗ ಚಹಾ ವಿರಾಮಗಳನ್ನು ತೆಗೆದುಕೊಳ್ಳಿ ಅಥವಾ ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಹೊತ್ತು ಕಳೆಯಿರಿ.


ವರ್ಕ್‌ ಫ್ರಂ ಹೋಮ್‌ ನಲ್ಲಿ 'ಮಾಡಲೇಬಾರದ ಕೆಲಸಗಳು'

ನಿಜಾಂಶವೆಂದರೆ, ತಾವು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳನ್ನು ಪ್ರತಿಯೊಬ್ಬರೂ ಈ ಅವಧಿಯಲ್ಲಿ ತಾವೇ ಕಂಡುಕೊಳ್ಳುತ್ತಾರೆ.


ಆದರೆ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕು.


  • ಭರ್ಜರಿ ಊಟವನ್ನು ತಪ್ಪಿಸಿ: ಮನೆಯಿಂದ ಕೆಲಸ ಮಾಡುವವರಿಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಯೆಂದರೆ: ಊಟದ ನಂತರ ನಿದ್ರೆ ಮಾಡದೆ ನೀವು ಹೇಗೆ ಕಾರ್ಯ ನಿರ್ವಹಿಸುತ್ತೀರಿ? ಎನ್ನುವುದು. ಉತ್ತರ ಸರಳವಾಗಿದೆ ಹೆಚ್ಚಿಗೆ ಆಹಾರ ಸೇವಿಸಬೇಡಿ. ಭಾರವಾದ ಊಟವು ನಿಮಗೆ ಅರೆನಿದ್ರಾವಸ್ಥೆಯನ್ನು ಉಂಟುಮಾಡುತ್ತದೆ, ನಿಮ್ಮ ಸಂಕಲ್ಪವನ್ನು ಶರಣಾಗುವಂತೆ ಒತ್ತಾಯಿಸುತ್ತದೆ ಮತ್ತು ನಿಮ್ಮನ್ನು ಆರಾಮದಾಯಕವಾದ ಹಾಸಿಗೆಯ ಕಡೆಗೆ ತಳ್ಳುತ್ತದೆ. ಆದರೆ ಹಿತ-ಮಿತವಾದ ಉಪ-ಆಹಾರವು ನಿಮ್ಮ ಕೆಲಸಕ್ಕೆ ಸಾಥ್‌ ನೀಡುತ್ತದೆ.


  • ನಿಮ್ಮ ದಿನಚರಿಯನ್ನು ತಪ್ಪಿಸಬೇಡಿ: ಜೀವನದಲ್ಲಿ ಮಾಡಲು ಸುಲಭವಾದ ಕೆಲಸವೆಂದರೆ ಅಶಿಸ್ತು. ಖಂಡಿತ, ಅದು ವಿಮೋಚನೆಯೆಂದೆನಿಸಬಹುದು. ಆದರೆ ವರ್ಕ್‌ಫ್ರಂಹೋಮ್ ನಿರ್ವಾಣದ ಮಾರ್ಗವಲ್ಲ. ಆದ್ದರಿಂದ, ನೀವು ಒಂದು ಮಾದರಿಯನ್ನು ಗುರುತಿಸಬೇಕು ಮತ್ತು ಅನಿವಾರ್ಯ ಸಂದರ್ಭಗಳನ್ನು ಬಿಟ್ಟು ಕೆಲಸಕ್ಕೆ ಹಿಂತಿರುಗಬೇಕು.


  • ಖಿನ್ನತೆಯನ್ನು ತೊಲಗಿಸಿ: ಮನೆಯಿಂದ ಕೆಲಸ ಮಾಡುವ ಅನೇಕ ಕೆಲಸಗಾರರು ಹೊರಗುಳಿಯುತ್ತೇವೆ ಎಂಬ ನಿರಂತರ ಭಾವನೆಯಿಂದ ಬಳಲುತ್ತಾರೆ. ಅವರು ತಂಡದೊಂದಿಗಿನ ಶಿಬಿರಗಳು, ಸಹ ಕೆಲಸಗಾರರೊಟ್ಟಿಗೆ ಊಟಕ್ಕೆ ಹೋಗುವುದು, ಯೋಜನೆ ರೂಪಿಸುವುದು ಇತ್ಯಾದಿಗಳಿಗಾಗಿ ಹಂಬಲಿಸುತ್ತಾರೆ. ಇದರ ಕೊರತೆಯು ಅವರನ್ನು ಸ್ಪೂರ್ತಿ ರಹಿತರನ್ನಾಗಿಸುತ್ತದೆ. ನೀವು ತಿಳಿದುಕೊಳ್ಳಬೇಕಾದ ಮೊದಲನೆಯ ವಿಷಯವೆಂದರೆ, ಆ ರೀತಿ ಅನುಭವಿಸುವುದು ಅಸಹಜವಲ್ಲ ಮತ್ತು ದಿನೇದಿನೇ ಆ ವಿಷಯಗಳು ಉತ್ತಮಗೊಳ್ಳುತ್ತವೆ. ಆದ್ದರಿಂದ, ಖಿನ್ನತೆಯಿಂದ ನಿಮ್ಮನ್ನು ದೂರವಿಡಿ.


  • ಗೊಂದಲವನ್ನು ಕಡಿಮೆ ಮಾಡಿಕೊಳ್ಳಿ: ನೀವು ಕೆಲಸದ ಸ್ಥಳದಿಂದ ಹೊರಗಿರುವಾಗ, ವ್ಯಾಕುಲತೆ ಸುಲಭವಾಗಿ ಬರುತ್ತದೆ. ನೀವು ಗದ್ದಲದ ಮಹಾನಗರದಲ್ಲಿದ್ದರೆ ಅದು ಡೋರ್‌ಬೆಲ್‌ನ ಶಬ್ದ, ದಟ್ಟಣೆಯ ಶಬ್ದ, ಜೋರಾದ ಸಂಭಾಷಣೆ ಅಥವಾ ನಿರಂತರ ನಿರ್ಮಾಣ ಶಬ್ದವಾಗಿರಬಹುದು. ಗೊಂದಲವು ಅನಿವಾರ್ಯವಾಗಿದ್ದರೂ, ಅವುಗಳ ಅವಧಿಯನ್ನು ಕಡಿಮೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ನಿಮ್ಮ ಮೇಲಿದೆ.


ಆದ್ದರಿಂದ, ನಿಮಗೆ ಸಾಧ್ಯವಾದಷ್ಟು ಬೇಗ ಕೆಲಸಕ್ಕೆ ಹಿಂತಿರುಗಿ!


(ವಿಶೇಷ ಸೂಚನೆ: ಈ ಲೇಖನ ಕಳೆದ ಎರಡು+ ವರ್ಷಗಳಲ್ಲಿ ಸುಮಾರು 700 ದಿನಗಳ 6,500 ಗಂಟೆಗಳು ಮನೆಯಿಂದಲೆ ಕೆಲಸ ಮಾಡಿದವರ ಕಲಿಕೆಗಳನ್ನು ಆಧರಿಸಿದೆ.)