ಲಾಕ್ ಡೌನ್ ಸಮಯದಲ್ಲಿ ಹಸಿದವರಿಗೆ ಆಹಾರವನ್ನು ನೀಡುತ್ತಿದೆ ಬೆಂಗಳೂರು ರೋಟರಿಯ ಐಟಿ ಕಾರಿಡಾರ್

ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ‘ಫುಡ್ ಫಾರ್ ಲೈಫ್' ಎಂಬ ಯೋಜನೆಯನ್ನು ಆರಂಭಿಸಿದ್ದು, ಅದು ಕೊರೊನಾ ವೈರಸ್ ಸಮಸ್ಯೆಯ ಸಂದರ್ಭದಲ್ಲಿ ಹಸಿದವರಿಗೆ ಸ್ಥಳೀಯ ಪೊಲೀಸರ ಸಹಾಯದಿಂದ ಆಹಾರ ಮತ್ತು ನೀರನ್ನು ಒದಗಿಸುತ್ತದೆ.

ಲಾಕ್ ಡೌನ್ ಸಮಯದಲ್ಲಿ ಹಸಿದವರಿಗೆ ಆಹಾರವನ್ನು ನೀಡುತ್ತಿದೆ ಬೆಂಗಳೂರು ರೋಟರಿಯ ಐಟಿ ಕಾರಿಡಾರ್

Tuesday March 31, 2020,

2 min Read

ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ ಇದು ಅನೇಕರಿಗೆ ಬದುಕಿನ ಪ್ರಶ್ನೆಯಾಗಿದೆ. ಈ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಣೆ ಲಕ್ಷಾಂತರ ಜನರನ್ನು ನಿರುದ್ಯೋಗಿಗಳಾಗಿ, ಮನೆಯಿಲ್ಲದವರನ್ನಾಗಿ ಮತ್ತು ಆಹಾರವಿಲ್ಲದವರನ್ನಾಗಿ ಮಾಡಿದೆ. ಆರೋಗ್ಯ ಸಮಸ್ಯೆ ಮತ್ತು ನಂತರದ ಆರ್ಥಿಕ ಕುಸಿತವು ವಿಶೇಷವಾಗಿ ದೈನಂದಿನ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ನಿದ್ದೆಗೆಡಿಸಿದೆ.


ಈ ಸಮಯದಲ್ಲಿ ದೀನದಲಿತ ಮತ್ತು ಅತ್ಯಂತ ಹಿಂದುಳಿದವರ ಅಗತ್ಯಗಳನ್ನು ಪೂರೈಸಲು ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅವುಗಳಲ್ಲಿ, ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಕೈಗೊಂಡ ಯೋಜನೆಯೇ ಫುಡ್ ಫಾರ್ ಲೈಫ್.


“ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ಮಾನವೀಯತೆ ಸೋಲಬಾರದು. ನಾವು ಕೊರೊನಾ ವೈರಸ್ ವಿರುಧ್ದ ಗೆಲ್ಲುತ್ತೇವೆ, ಆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರ ಜೀವನವನ್ನು ಬಲಿಕೊಡಬಾರದು,” ಎನ್ನುತ್ತಾರೆ ಯೋಜನಾ ತಂಡದಲ್ಲಿ ಒಬ್ಬರಾದ ಅಭಿಷೇಕ್ ಮಿಶ್ರಾ.


ಆರ್‌ಬಿಐಟಿಸಿ, ಬೆಂಗಳೂರು ಸಿಟಿ ಪೋಲಿಸ್ ಮತ್ತು ಎನ್‌ಜಿಒ ವೈಟ್‌ಫೀಲ್ಡ್ ರೆಡಿ ಜೊತೆಗೂಡಿ, ಪ್ರದೇಶದ ಸುತ್ತಮುತ್ತಲಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ನೀಡುತ್ತಿದೆ. ಪ್ರತಿ ಆಹಾರದ ಡಬ್ಬದಲ್ಲಿ ಬಿಸ್ಲೆರಿ ನೀರಿನ ಬಾಟಲಿಗಳು ಮತ್ತು ಒಬ್ಬ ವಯಸ್ಕರಿಗೆ ಆಹಾರಕ್ಕಾಗಿ ಸಾಕಾಗುವಷ್ಟು ಅನ್ನ ಇರುತ್ತದೆ. ತುಬರಹಳ್ಳಿ ಮೂಲದ ಅಡಿಗೆಮನೆಯಾದ ಫುಡ್ ಕ್ರೇಟ್ ಸಹಭಾಗಿತ್ವದಲ್ಲಿ ಇದನ್ನು ಮಾಡಲಾಗುತ್ತಿದ್ದು ಯೋಜನೆಯ ಸಂಪೂರ್ಣ ಆದ್ಯತೆ ಪ್ರಕ್ರಿಯೆಯಲ್ಲಿ ನೈರ್ಮಲ್ಯವನ್ನು ಕಾಪಾಡಲಾಗುತ್ತಿದೆ.


ಆಹಾರ ಪಾರ್ಸೆಲ್‌ಗಳ ವಿತರಣೆ ಮಾಡುತ್ತಿರುವುದು


ಯೋಜನೆಯ ಮೊದಲ ದಿನವಾದ ಮಾರ್ಚ್ 28 ರಂದು ತಂಡವು ಫುಡ್ ಕ್ರೇಟ್ ಅಡಿಗೆಮನೆಗಳಲ್ಲಿ 450 ಆಹಾರ ಪಾರ್ಸೆಲ್‌ಗಳನ್ನು ತಯಾರಿಸಿತು. ಬೆಳಿಗ್ಗೆ 11:45 ರ ಹೊತ್ತಿಗೆ ಅವುಗಳ ವಿತರಣೆ ಆರಂಭಿಸಲಾಯಿತು. ಬೆಂಗಳೂರು ನಗರ ಪೊಲೀಸ್ ಮತ್ತು ಎಂಟು ಸ್ವಯಂಸೇವಕರ ಸಹಾಯ ಮತ್ತು ಮಾರ್ಗದರ್ಶನದೊಂದಿಗೆ ಆ ದಿನ ಐದು ವಿಭಿನ್ನ ಸ್ಥಳಗಳಲ್ಲಿ ಆಹಾರವನ್ನು ವಿತರಿಸಲಾಯಿತು.


ವೈಟ್‌ಫೀಲ್ಡ್ ಪೊಲೀಸ್ ಠಾಣೆ, ವರ್ತೂರ್ ಪೊಲೀಸ್ ಠಾಣೆ, ಮಾರತಹಳ್ಳಿ ಪೊಲೀಸ್ ಠಾಣೆ, ಕೃಷ್ಣರಾಜಪುರಂ ಪೊಲೀಸ್ ಠಾಣೆ, ಮತ್ತು ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಆಹಾರವನ್ನು ವಿತರಿಸಲಾಗಿದೆ. ಫೆಸಿಲಿಟೇಟರ್ಗಳು ಮತ್ತು ಸ್ವಯಂಸೇವಕರು ಮಾಸ್ಕ್ ಧರಿಸಿದ್ದರು ಅಲ್ಲದೇ ಕೈಗವಸುಗಳನ್ನು ಮತ್ತು ಸ್ಯಾನಿಟೈಸರ್ಗಳನ್ನು ಸಹ ಅವರು ಜೊತೆಗಿರಿಸಿಕೊಂಡಿದ್ದರು. ಆಹಾರ ವಿತರಣೆ ಮಾಡುವವರಿಗೆ ಇತರರೊಂದಿಗೆ ಮೂರು ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು.


ಫುಡ್ ಕ್ರೇಟ್ ಅಡಿಗೆಮನೆ, ತುಬರಹಳ್ಳಿ




ಆಹಾರದ ಬೇಡಿಕೆಯನ್ನು ಪೂರೈಸಲು, ಎರಡನೇ ದಿನ 860 ಆಹಾರ ಪಾರ್ಸೆಲ್‌ಗಳನ್ನು ವಿತರಣೆಗೆ ಸಿದ್ಧಪಡಿಸಲಾಯಿತು. ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಆಹಾರ ಪಾರ್ಸೆಲ್‌ಗಳನ್ನು ಮತ್ತೆ ವಿತರಿಸಲಾಯಿತು. ಫುಡ್ ಫಾರ್ ಲೈಫ್‌ನ ಮೊದಲ ಎರಡು ದಿನಗಳಲ್ಲಿ ಒಟ್ಟು 1310 ಪಾರ್ಸೆಲ್‌ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ದಿನದಿಂದ ದಿನಕ್ಕೆ ಅವಶ್ಯಕತೆ ಹೆಚ್ಚಾಗುತ್ತಿದ್ದಂತೆ, ಮರುದಿನ 1250 ಪಾರ್ಸೆಲ್‌ಗಳನ್ನು ತಯಾರಿಸಿ ವಿತರಿಸಲಾಯಿತು. ಅವಶ್ಯಕತೆಯ ಆಧಾರದ ಮೇಲೆ ಆಹಾರವನ್ನು ತಯಾರಿಸಿ ವಿತರಿಸುವ ಯೋಚನೆಯಿದೆ.


ಧೀರ್ಘಕಾಲದ ಆಹಾರದ ತೊಂದರೆಯನ್ನು ಪರಿಸರಿಸಲು ಸಹ ಫುಡ್ ಫಾರ್ ಲೈಫ್ ಯೋಜನೆಯನ್ನು ಸಿದ್ದಪಡಿಸುತ್ತಿದೆ.


ರೋಟರಿಯು ಸೇವೆ ಮಾಡುವುದನ್ನು ನಂಬುತ್ತದೆ. ಸೇವೆಯ ಮನೋಭಾವ ಹೊಂದಿರುವ ನಮ್ಮ ರೋಟೇರಿಯನ್ ಸದಸ್ಯರು ಎಲ್ಲರೂ ಒಗ್ಗೂಡಿ ಈ ಯೋಜನೆಯನ್ನು ಆರಂಭಿಸಿದ್ದೇವೆ. ನಾವು 500 ಕುಟುಂಬಗಳಿಗೆ ಒಂದು ತಿಂಗಳ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳುವ ಯೋಜನೆ ಮಾಡಿದ್ದೇವೆ ಎಂದು ರೋಟರಿ ಬೆಂಗಳೂರು ಐಟಿ ಕಾರಿಡಾರ್‌ನ 2019-20ರ ಅಧ್ಯಕ್ಷ ವಂಶಧರ್ ಪೊಥುಲಾ ಹೇಳಿದ್ದಾರೆ.


ಈ ಯೋಜನೆಯನ್ನು ಮಾಡುವ ಸಲುವಾಗಿ, ಆರ್‌ಬಿಐಟಿಸಿ ಸದಸ್ಯರು ಕ್ರೌಡ್‌ಫಂಡಿಂಗ್ ಮೊರೆಹೋಗಿದ್ದಾರೆ. ಫುಡ್ ಫಾರ್ ಲೈಫ್ ಅನ್ನು ಸಹ ದೀರ್ಘಾವಧಿಯ ಯೋಜನೆಯೆಂದೆ ಪರಿಗಣಿಸಲಾಗಿದೆ. ಆರ್‌ಬಿಐಟಿಸಿಯ ಸದಸ್ಯರು ಈ ಸಂಕಟದ ಸಮಯದಲ್ಲಿ ಆರ್ಥಿಕ ಸಹಾಯವನ್ನು ಕೋರಿದ್ದಾರೆ.