ತಮ್ಮ ಸ್ವಂತ ಸಂಬಳದಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣದ ವ್ರತವನ್ನೊತ್ತ ಈ ದಂಪತಿಗಳು

ಮೂಲಸೌಕರ್ಯಗಳನ್ನು ನವೀಕರಿಸುವುದರಿಂದ ಹಿಡಿದು ಶಾಲೆಯೊಳಗಿನ ಗ್ರಂಥಾಲಯವನ್ನು ನಿರ್ಮಿಸುವವರೆಗೆ ಯಾವುದೇ ಸರ್ಕಾರಿ ಭತ್ಯೆಯಿಲ್ಲದೆ ದಂಪತಿಗಳಿಬ್ಬರೂ ಶಾಲೆಯನ್ನು ಉನ್ನತಗೊಸಿದ್ದಾರೆ.

ತಮ್ಮ ಸ್ವಂತ ಸಂಬಳದಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣದ ವ್ರತವನ್ನೊತ್ತ ಈ ದಂಪತಿಗಳು

Saturday August 17, 2019,

4 min Read

ಶಾಲೆಯೊಂದಕ್ಕೆ ಅದರ ಮೂಲಸೌಕರ್ಯ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ಎಲ್ಲಾ ಖರ್ಚುಗಳನ್ನು ಒಳಗೊಂಡು, ಇದರೆಲ್ಲಾ ನಿರ್ವಹಣೆಗಾಗಿ ದಿನಕ್ಕೆ ಕೇವಲ 14 ರೂ.ಗಳಂದರೆ ಅದು ಅಸಾಧ್ಯವೆನಿಸುತ್ತದೆ. ಹೌದಲ್ಲವೇ?


ಆದರೆ ಚತ್ತೀಸಗಡ್ಡಿನ ಮುಂಗೇಲಿ ಜಿಲ್ಲೆಯ ಲೋರ್ಮಿ ಗ್ರಾಮದಲ್ಲಿರುವ ಈ ಸರ್ಕಾರಿ ಶಾಲೆಯು ಇಷ್ಟು ಹಣದಲ್ಲೇ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಶಾಲೆಯು ಅದರ ಮೂಲಸೌಕರ್ಯದ ನಿರ್ವಹಣೆಗಾಗಿ ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ 5,000 ರೂ.ಗಳನ್ನು ಪಡೆಯುತ್ತದೆ. ಆದರೆ 2017 ರಲ್ಲಿ ಹಣ ನಿಂತುಹೋದಾಗ ಪರಿಸ್ಥಿತಿ ಹದಗೆಟ್ಟಿತು ಎಂದು ಶಾಲೆಯ ಸಹಾಯಕ ಮುಖ್ಯ ಶಿಕ್ಷಕರಾದ ರಾಮ್ ಪ್ರಸಾದ್ ಧಿಂದೋರೆ ನೆನಪಿಸಿಕೊಳ್ಳುತ್ತಾರೆ.


“ಯಾವುದೇ ಬೆಂಚುಗಳಿಲ್ಲದೆ, ಕಿತ್ತುಹೋದ ನೆಲಹಾಸುಗಳಿಂದ, ಮುರಿದು ಬೀಳುತ್ತಿದ್ದ ಚಪ್ಪರದಿಂದ, ಇನ್ನಿಲ್ಲಿ ಪಾಠಮಾಡಲು ಸಾಧ್ಯವೇಯಿಲ್ಲ ಎನ್ನುವಷ್ಟು ಶಾಲೆಯು ತುಂಬಾ ಅಸ್ತವ್ಯಸ್ಥವಾಗಿತ್ತು.”


q

ತಮ್ಮ ಮಡದಿ ರೀಟಾ ಅವರೊಂದಿಗೆ ರಾಮ್ ಪ್ರಸಾದ್ ಧಿಂದೋರೆ.


ಆದರೆ 2018 ರಲ್ಲಿ ರಾಜ್ಯ ಸರ್ಕಾರವು, ಸರ್ಕಾರಿ ಶಾಲಾ ಶಿಕ್ಷಕರ ಆದಾಯವನ್ನು ಪರಿಷ್ಕರಿಸಿದಾಗ ಈ ಸಮಸ್ಯೆಗೊಂದು ದಾರಿದೊರಕಿತು. ರಾಮ್ ಅವರ ಮಡದಿ ರೀಟಾ ಜೀವಶಾಸ್ತ್ರದ ಶಿಕ್ಷಕಿ. ಇಬ್ಬರಿಗೂ ತಿಂಗಳಿಗೆ ತಲಾ 29,000 ರೂ.ಗಳ ಸಂಬಳ‌. ಹೆಚ್ಚಳಗೊಂಡ ಈ ಅದಾಯವನ್ನೆಲ್ಲಾ ಇಬ್ಬರೂ ಶಾಲೆಯ ಉನ್ನತಿಗಾಗಿಯೇ ಬಳಿಸಬೇಕೆಂದು ನಿರ್ಧರಿಸಿದರು.


ಇದೆಲ್ಲಾ ಶುರುವಾದದ್ದು ಹೇಗೆ ?


ಐದನೇ ತರಗತಿಯವರೆಗಿನ ಮಕ್ಕಳನ್ನು ಒಳಗೊಂಡಿರುವ ಬರಂಪೂರಿನ ಈ ಪ್ರಾಥಮಿಕ ಶಾಲೆ, 80 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಕೇವಲ ಎರಡೇ ತರಗತಿ ಕೊಠಡಿಗಳನ್ನು ಹೊಂದಿದ್ದು, ಮೂರು ಜನ ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಾರೆ. ಇದ್ದ ಎರಡು ಕೊಠಡಿಗಳಲ್ಲಿ, ಒಂದು 5 ನೇ ತರಗತಿ ವಿದ್ಯಾರ್ಥಿಗಳಿಗೆ ಮೀಸಲು, ಉಳಿದೆಲ್ಲಾ ತರಿಗತಿಗಳ ವಿದ್ಯಾರ್ಥಿಗಳು ಎರಡನೆ ಕೋಣೆಯಲ್ಲಿ ಕುಳಿತು ಅಭ್ಯಾಸ ಮಾಡುತ್ತಾರೆ. 


“ನಾವು ಈ ಸಮಾಜಕ್ಕಾಗಿ ಏನನ್ನಾದರೂ ಮಾಡಲು ಬಯಸಿದ್ದೆವು. ಹೀಗೆ ಹಳ್ಳಿಯಲ್ಲಿನ ಶಿಕ್ಷಣವನ್ನು ಸುಧಾರಿಸುವುದು ನಮ್ಮ ಪ್ರಯತ್ನವಾಯಿತು. ಈ ಮೂಲಕ ಈ ಹಳ್ಳಿಯ ಮಕ್ಕಳು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂಬುದೇ ನಮಗೆ ಹೆಮ್ಮೆ” ಎನ್ನುತ್ತಾರೆ ರಾಮ್.


ಮೊದಲ ಬಾರಿಗೆ ತಮ್ಮ ಹೆಚ್ಚಳಗೊಂಡ ಸಂಬಳವನ್ನು ಪಡೆದಾಗ, ಅವರಿಗೆ ಆ ಹಣವನ್ನು ಉತ್ತಮ ರೀತಿಯಲ್ಲಿ ಹೇಗೆ ಬಳಸಬೇಕೆನ್ನುವುದೇ ತಿಳಿಯದಾಯಿತು. ಈ ಹಣವನ್ನು ವೈಯಕ್ತಿಕ ಹೂಡಿಕೆಯಾಗಿಯೋ ಅಥವಾ ಮನೆಗೆ ಇನ್ನೂ ಹೆಚ್ಚೆಚ್ಚು ವಸ್ತುಗಳನ್ನು ಕೊಂಡು ತರುವುದಕ್ಕೋ ಖರ್ಚು ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಹೆಚ್ಚುವರಿ ಹಣವನ್ನು ಗ್ರಾಮದ ಶಿಕ್ಷಣ ಕಲ್ಯಾಣಕ್ಕಾಗಿಯೇ ಬಳಸಬೇಕೆಂದು ನಿರ್ಧರಿಸಿದರು.


ರೂಪಾಂತರಕ್ಕೆ ನಾಂದಿ ಹಾಡುತ್ತಾ


ನವೆಂಬರ್ 2018 ರಲ್ಲಿ, ರಾಮ್ ಶಾಲೆಯ ಮೂಲಸೌಕರ್ಯಗಳನ್ನು ನವೀಕರಿಸಲು ಯೋಚಿಸಿದರು. ಅಸ್ತಿತ್ವದಲ್ಲಿರುವ ನೈರ್ಮಲ್ಯ ನಿಬಂಧನೆಗಳನ್ನು ಸರಿಪಡಿಸುವ ಮೂಲಕ ಇದನ್ನು ಕೈಗೊಳ್ಳಲು ಅವರು ನಿರ್ಧರಿಸಿದರು. ಶೌಚಾಲಯಗಳಲ್ಲಿ ಸರಿಯಾದ ಆಸನಗಳೂ, ಅದಕ್ಕೆ ರಚನೆಯೂ ಇಲ್ಲವೆಂದು ಮನಗಂಡು, ಸರಿಯಾದ ಆಸನಗಳೊಂದಿಗೆ ಶೌಚಾಲಯಗಳನ್ನು ತಾವೇ ಸ್ವತಃ ನವೀಕರಿಸಿದರು. ಕಾರ್ಮಿಕ ವೆಚ್ಚವೂ ಸೇರಿ ಸುಮಾರು 16,000 ರೂ.ಗಳ ಹಣವನ್ನು ರಾಮ್ ಈ ಕೆಲಸಕ್ಕಾಗಿ ಖರ್ಚು ಮಾಡಿದರು.


ವಿದ್ಯಾರ್ಥಿಗಳಿಗೆ ತಮ್ಮ ಪುಸ್ತಕಗಳನ್ನು ಇಟ್ಟುಕೊಳ್ಳಲು ಶಾಲೆಯಲ್ಲಿ ಕಪಾಟುಗಳನ್ನು ರಾಮ್ ಮಾಡಿಸಿದ್ದಾರೆ. ಎರಡೂ ತರಗತಿ ಕೋಣೆಗಳಿಗೆ ಬಣ್ಣದ ಪರದೆಗಳನ್ನು ಸಹ ಹಾಕಿಸಿದ್ದಾರೆ. ಗ್ರಂಥಾಲಯವಿಲ್ಲದಿದ್ದರೂ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಅರಿವು ಮೂಡಿಸಲು ಅವರಿಗಾಗಿ 600 ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಂಡಿದ್ದಾರೆ. ತಾತ್ಕಾಲಿಕ ಗ್ರಂಥಾಲಯವಾಗಿ ಸಣ್ಣ ಬೀರುಗಳನ್ನು ನಿರ್ಮಿಸಿ, ತಲಾ ಒಂದು ಕೋಣೆಯಲ್ಲೂ 3,00 ಪುಸ್ತಕಗಳನ್ನು ಇಟ್ಟಿದ್ದಾರೆ.


ಈ ಪುಸ್ತಕಗಳ ಪಟ್ಟಿಯಲ್ಲಿ, ಸುಭಾಶ್ ಚಂದ್ರ ಬೋಸ್‌ ರಂತಹ ನಾಯಕರ ಆತ್ಮಕತೆಗಳು, ವಿಜ್ಞಾನ ಮತ್ತು ಪ್ರಸ್ತುತ ವ್ಯವಹಾರಗಳ ಪುಸ್ತಕಗಳು, ಹೀಗೆ ಮುಂತಾದವು ಸೇರಿವೆಯೆಂದು ರಾಮ್ ಹೇಳುತ್ತಾರೆ. ಇಲ್ಲಿ ರೆಡಿಮೇಡ್ ಬ್ಲಾಕ್ ಬೋರ್ಡುಗಳನ್ನು ಕೊಳ್ಳುವ ಬದಲಿಗೆ, ಗೋಡೆಗಳಿಗೆ ಕಪ್ಪು ಬಣ್ಣ ಬಳೆದು, ಅದನ್ನೇ ಕಪ್ಪು ಹಲಗೆಯನ್ನಾಗಿ ಉಪಯೋಗಿಸಲಾಗುತ್ತಿದೆ. ಪ್ರತಿ ಕಪ್ಪು ಹಲಗೆಯ ಬಳಿ ಡಸ್ಟರ್ ಮತ್ತು ಸೀಮೆಸುಣ್ಣವನ್ನು ಇಡಲು ಗಾಜಿನ ಡಬ್ಬಿಗಳನ್ನು ಇಡಲಾಗಿದೆ.


q


ಶಾಲೆಯ ಹಳೆಯ ಗೋಡಗಳಿಗೆ ಹೊಸ ರೂಪಕೊಡಲು(ಹೊಸಹುರುಪು) ರಾಮ್ 18 ಚೀಲಗಳ ವಾಲ್ ಕಲರನ್ನು 850 ರೂ.ಗಳ ವೆಚ್ಚದಲ್ಲಿ ಖರೀದಿಸಿದ್ದಾರೆ. ಈ ಕೆಲಸಕ್ಕಾಗಿ ಪ್ರತಿ ಕಾರ್ಮಿಕನಿಗೆ ದಿನಕ್ಕೆ 150 ರೂ. ಕೊಡಬೇಕಾಗಿತ್ತು ಎಂದು ಅವರು ಹೇಳುತ್ತಾರೆ.


ಮಕ್ಕಳೇ ನಮ್ಮ ಸಮಾಜದ ನಿಜ ಭವಿಷ್ಯವೆಂದು ನಂಬುವ ರಾಮ್, ಅವರನ್ನು ಉತ್ತೇಜಗೊಳಿಸಲು, ಒಳ್ಳೆಯ ಹಾದಿಗೆ ಕರೆದೊಯ್ಯಲು ಕೆಲ ಸ್ಪೂರ್ತಿದಾಯಕ ವ್ಯಕ್ತಿಗಳ ಮೂರ್ತಿಗಳು ಅತ್ಯವಶಕ ಎಂದೂ ಸಹ ಭಾವಿಸುತ್ತಾರೆ. ಇದರ ಸಲುವಾಗಿಯೇ-


“ಶಾಲೆಯ ಗೋಡೆಗಳನ್ನು ಅಲಂಕರಿಸಲು ಭಾರತದ 35 ಶ್ರೇಷ್ಠ ಸಾಧಕರ ಭಾವಚಿತ್ರಗಳನ್ನು ಹೇಳಿ ಮಾಡಿಸಿದ್ದೇನೆ.” ಎನ್ನುತ್ತಾರೆ ರಾಮ್.


"ಶಾಲೆಯ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಲು ಅತ್ಯಗತ್ಯ ಸೌಲಭ್ಯವಾದ ಕಂಪ್ಯೂಟರ್ ವ್ಯವಸ್ಥೆಯು ನಮಗೆ ಸಿಗುತ್ತಿಲ್ಲ” ಎನ್ನುತ್ತಾ ಸರ್ಕಾರಿ ಅಧಿಕಾರಿಗಳು ಸಹ ಇದರ ಬಗ್ಗೆ ಶ್ರದ್ಧೆವಹಿಸುತ್ತಿಲ್ಲವೆಂದು ರಾಮ್ ಮುಂದುವರೆದು ಹೇಳಿದ್ದಾರೆ.


ವಿದ್ಯಾರ್ಥಿಯು ಕೇವಲ ಓದು-ಬರಹ ಮಾತ್ರವಲ್ಲದೆ ಸುಸಂಗತವಾದ ಬೆಳವಣಿಗೆಯನ್ನೂ ಹೊಂದಿರಬೇಕಾದ ಕಾರಣ, ಹಾಳುಬಿದ್ದ ಆಟದ ಮೈದಾನವನ್ನು ಸ್ವಚ್ಚಗೊಳಿಸಲು ರಾಮ್ ನಿರ್ಧರಿಸಿದ್ದಾರೆ. ಒಂದು ಟ್ರಕ್ ಮರಳಿಗೆ 1,000 ರೂ.ಗಳ ವೆಚ್ಚದಲ್ಲಿ ಏಳ ರಿಂದ ಎಂಟು ಟ್ರಕ್ ಮರಳನ್ನು ಮೈದಾನದಲ್ಲಿ ಹಾಕಿಸಿದ್ದಾರೆ. ಶಾಲೆಯ ಒಟ್ಟಾರೆ ಅಭಿವೃದ್ಧಿಗೆ ದಂಪತಿಗಳಿಬ್ಬರೂ ಇದುವರೆಗೆ 94,500 ರೂ.ಗಳನ್ನು ಖರ್ಚು ಮಾಡಿದ್ದಾರೆ.


ಪರಿವರ್ತನಾತ್ಮಕ ಶಿಕ್ಷಣ


ರಾಮ್ ತಮ್ಮ ಕೆಲಸ-ಕಾರ್ಯಗಳಿಗೆ ಯಾವುದೇ ಹಣದ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ರಾಮ್, ರೀಟಾರ ಜೊತೆಗೆ ಮತ್ತೊಬ್ಬ ಶಿಕ್ಷಕರಾದ ಪ್ರಮೋದ್ ಕುಮಾರ್ ಸೇರಿಕೊಂಡು ಮಕ್ಕಳಿಗೆ ಗಣಿತ, ಪರಿಸರ ವಿಜ್ಞಾನ, ಹಿಂದಿ, ಇಂಗ್ಲೀಷ ಮತ್ತು ವಿಜ್ಞಾನವನ್ನು ಕಲಿಸುತ್ತಾರೆ.


ತಮ್ಮ ವಿದ್ಯಾರ್ಥಿಯಾದ ಮುಕುಲ್ ಬಗ್ಗೆ ಮಾತನಾಡುತ್ತಾ


“ಐದು ವರ್ಷಗಳ ಹಿಂದೆ, ಮುಕುಲ್ ಸಂಜೆಮುಂಜಾವು ಬರೀ ಊರು ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದ. ಭವಿಷ್ಯದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಮೂಲಭೂತ ಶಿಕ್ಷಣವನ್ನಾದರೂ ಪಡೆಯಲು ಅನೇಕ ಸಲ ನಾನವನಿಗೆ ಹುರಿದುಂಬಿಸುತ್ತಿದ್ದೆ. ಆದರೂ ಉಪಯೋಗವಾಗಲಿಲ್ಲ. ಪಕ್ಕದ ರಾಜ್ಯಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಅವನ ಹೆತ್ತವರ ಬಳಿಯೇ ನೇರ ಹೋಗಿ ವಿಷಯ ತಿಳಿಸಿದೆ. ಆ ಬಳಿಕ ಮುಕುಲ್ ನಾಲ್ಕನೆಯ ತರಗತಿಗೆ ಹೆಸರು ಹಚ್ಚಿದ. ಒಂದೇ ವರ್ಷದೊಳಗೆ ಎಲ್ಲ ವಿಷಯಗಳನ್ನೂ ಚೆನ್ನಾಗಿ ಓದತೊಡಗಿದ. 5ನೆಯ ತರಗತಿಯಲ್ಲಿ ಪ್ರತಿಶತ 90 ಅಂಕಗಳನ್ನು ಪಡೆದು ಎಲ್ಲರನ್ನು ಚಕಿತಗೊಳಿಸಿದ” ಎಂದು ಸಂತೋಷದಿಂದ ಹೇಳುತ್ತಾರೆ ರಾಮ್.


ತಮ್ಮ ವಿದ್ಯಾರ್ಥಿಗಳು ಅವರನ್ನು ಮೊದಲಿಗೆ ಗೆಳೆಯನಾಗಿ ತದನಂತರವೇ ಶಿಕ್ಷಕನಾಗಿ ಭಾವಿಸುವಂತೆ ರಾಮ್ ನೋಡಿಕೊಳ್ಳುತ್ತಾರೆ. ಅನೇಕ ಸಲ ಅವರನ್ನು ಮನೆಗೂ ಕರೆಯುತ್ತಾರೆ.


“ಅಗತ್ಯದ ಸಮಯದಲ್ಲಿ ಶಿಕ್ಷಕನು ಅಭಯವಾಗಿ ಕಂಡು ಬಂದಲ್ಲಿ, ವಿದ್ಯಾರ್ಥಿಯು ಉತ್ತಮವಾಗಿ ಕಲಿಯುತ್ತಾನೆ. ಇದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಲ್ಲದೆ, ವಿದ್ಯೆಯನ್ನು ಕಲಿಯಲು ಆ ಮೂಲಕ ಒಟ್ಟಿಗೆ ಬೆಳೆಯಲು ಸಹಾಯ ಮಾಡುತ್ತದೆ." ಎನ್ನುತ್ತಾರೆ ರಾಮ್.


ರಾಮ್ ಮತ್ತು ರೀಟಾ ಅವರಿಗೆ ಎಂಟು ವರ್ಷದ ಮಗನಿದ್ದು, ಅವನು ಲಾರ್ಮಿಯಲ್ಲಿ ಓದುತ್ತಿದ್ದಾನೆ‌. ಜೊತಗೆ ಎರಡು ವರ್ಷದ ಮಗಳಿದ್ದಾಳೆ. ಮಕ್ಕಳಿಬ್ಬರ ಬಗ್ಗೆಯೂ ದೊಡ್ಡ ಕನಸುಗಳೇನೂ ಇಲ್ಲ. ಸರಿಯಾದ ಶಿಕ್ಷಣವನ್ನು ಪಡೆದುಕೊಂಡು ತಮ್ಮ ಬದುಕು ತಾವು ಕಟ್ಟಿಕೊಂಡರಷ್ಟೇ ಸಾಕೆಂದು ಭಾವಿಸಿದ್ದಾರೆ.