22 ವರ್ಷಗಳಿಂದ ಸೈಕಲಿನಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಿರುವ 86 ವರ್ಷದ ವಯೋವೃದ್ಧ

ಬೆಂಗಳೂರು ನಿವಾಸಿ 86 ವರ್ಷ ವಯಸ್ಸಿನ ಬ್ಯಾಲಹಳ್ಳಿ ರಘುನಾಥ ಜನಾರ್ಧನ್, 22 ವರ್ಷಗಳಿಂದ ಸೈಕಲಿನಲ್ಲಿ ಪ್ರಪಂಚ ಪರ್ಯಟನೆ ಮಾಡುತಿದ್ದು, ಈವರೆಗೆ ಸುಮಾರು 4 ಲಕ್ಷ ಕಿಲೋಮೀಟರುಗಳ ದೂರವನ್ನು ಪ್ರಯಾಣಿಸಿದ್ದಾರೆ. ಇವರು ಸೈಕ್ಲಿಂಗ್ ನೊಂದಿಗೆ ಮ್ಯಾರಾಥಾನ್, ಸ್ಟೇರ್ ರೇಸಿಂಗ್‌ ಪಂದ್ಯಗಳಲ್ಲಿ ಭಾಗವಹಿಸುತ್ತಾರೆ ಮತ್ತು ಹಿಮಾಲಯ ಪರ್ವತಕ್ಕೆ ಟ್ರೆಕ್ಕಿಂಗ್ ಹೋಗಿದ್ದಾರೆ.

22 ವರ್ಷಗಳಿಂದ ಸೈಕಲಿನಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಿರುವ 86 ವರ್ಷದ ವಯೋವೃದ್ಧ

Thursday August 22, 2019,

2 min Read

ಬಹಳಷ್ಟು ಜನರು ನಿವೃತ್ತಿಯ ನಂತರ ನಿರುಮ್ಮಳವಾದ ಜೀವನ ನಡೆಸುತ್ತಿರುತ್ತಾರೆ. ಮತ್ತೆ ಕೆಲವರು ತಮ್ಮ 60 ನೇಯ ವಯಸ್ಸಿನ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ತುಂಬಾ ಕಡಿಮೆ ಜನ ಅದ್ರುಷ್ಟವಂತರು ಅವರ ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅದರಂತೆ 86 ವರ್ಷ ವಯಸ್ಸಿನ ನಿವೃತ್ತ ರೈಲ್ವೆ ನೌಕರರಾದ ಬ್ಯಾಲಹಳ್ಳಿ ರಘುನಾಥ ಜನಾರ್ಧನ್ ತಮ್ಮ 64 ನೇಯ ವಯಸ್ಸಿನಲ್ಲಿ ಸೈಕ್ಲಿಂಗ್ ನಲ್ಲಿ ತೊಡಗಿಕೊಂಡರು.


ಸೈಕ್ಲಿಸ್ಟ್, ಟ್ರೆಕ್ಕರ್ ಮತ್ತು ಅಥ್ಲೀಟ್ ಕೂಡ ಆಗಿರುವ ಅವರು ನಗರದಲ್ಲಿ ಸೈಕಲ್ಲಿನಲ್ಲಿಯೇ ಸಂಚರಿಸಲು ಇಷ್ಟಪಡುತ್ತಾರೆ.


ಬ್ಯಾಲಹಳ್ಳಿ ರಘುನಾಥ ಜನಾರ್ಧನ್, ಚಿತ್ರಕೃಪೆ: ವರ್ಡ್ ಪ್ರೆಸ್


ಸೈಕ್ಲಿಂಗ್ ನಿಂದಾಗಿ ಕಳೆದು ಹೋಗಿರುವ ಬಾಲ್ಯ ಮರಳಿ ಸಿಕ್ಕಿರುವುದಲ್ಲದೆ 4 ಲಕ್ಷ ಕಿಲೋಮೀಟರ್ ದೂರವನ್ನು ಸೈಕಲ್ಲಿನಲ್ಲಿ ಪ್ರಯಾಣಿಸಿದ್ದೇನೆ ಎಂದು ಜನಾರ್ಧನ್ ಹೇಳುತ್ತಾರೆ.


ದಿ ಕ್ವಿಂಟ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ


ನನ್ನ 64 ನೆಯ ವಯಸ್ಸಿನಲ್ಲಿ ನಾನು ಸೈಕ್ಲಿಂಗ್ ಪ್ರಾರಂಭಿಸಿದೆ. ಈಗ 265 ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಸುಮಾರು 4 ಲಕ್ಷ ಕಿಲೋಮೀಟರ್ ದೂರ ಅಂದರೆ ಭೂಮಿಯಿಂದ ಚಂದ್ರನಿಗೆ ಇರುವಷ್ಟು ದೂರವನ್ನು ಸೈಕಲಿನಲ್ಲಿ ಪ್ರಯಾಣಿಸಿದ್ದೇನೆ. ಆತ್ಮ ವಿಶ್ವಾಸ ಮತ್ತು ದೈಹಿಕ ಸಾಮರ್ಥ್ಯವನ್ನು ಗಳಿಸಿಕೊಂಡು 68 ನೇಯ ವಯಸ್ಸಿನಲ್ಲಿ ಟ್ರೆಕ್ಕಿಂಗ್ ಶುರು ಮಾಡಿದೆ. ಮೌಂಟ್‌ ಕೈಲಾಸ ಪರ್ವತವನ್ನು ಒಳಗೊಂಡಂತೆ 20 ಬಾರಿ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗಿದ್ದೇನೆ.


ಇದು ದೇಹದ ಮೇಲೆ ಮನಸ್ಸಿಗೆ ಇರುವ ಹತೋಟಿ ಯಿಂದ ಸಾಧ್ಯವಾಯಿತು ಎನ್ನುತ್ತಾರೆ ಜನಾರ್ಧನ್. ತಮ್ಮ ಸಶಕ್ತ ದೇಹದ ರಹಸ್ಯ ತಮ್ಮ ಮನಸ್ಸಿನಲ್ಲಿದೆ ಎಂದು ಅವರು ನಂಬಿದ್ದಾರೆ. ದೇಹವು ಮನಸ್ಸಿನ ಮೇಲೆ ಹತೋಟಿಯನ್ನು ಹೊಂದಿದಾಗ‌ ಅಸ್ವಸ್ಥತೆ ಉಂಟಾಗುತ್ತದೆ ಎಂದು ಅವರು ಹೇಳುತ್ತಾರೆ.


ನಾವು ದೈಹಿಕವಾಗಿ ಸಶಕ್ತರಾಗಬೇಕೆಂದರೆ ಉತ್ತಮ ಪೋಷಕಾಂಶಭರಿತ ಆಹಾರವನ್ನು ಸೇವಿಸಬೇಕು. ಜನಾರ್ಧನ್ ಮನೆಯಲ್ಲಿ ತಯಾರಿಸಿದ ಸರಳವಾದ ಸಸ್ಯಾಹಾರವನ್ನು ಮಾತ್ರ ಸೇವಿಸಲು ಇಷ್ಟಪಡುತ್ತಾರೆ ಎಂದು ಸಿಲ್ವರ್ ಟಾಕೀಸ್ ವರದಿ ಮಾಡಿದೆ.


ಮ್ಯಾರಥಾನ್ ಒಂದರಲ್ಲಿ ಭಾಗವಹಿಸಿರುವ ಜನಾರ್ಧನ್, ಚಿತ್ರ ಕೃಪೆ: ಡೆಕ್ಕನ್ ಕ್ರೋನಿಕಲ್ಸ್

ಅವರ ಆಹಾರ ಶೈಲಿಯ ಬಗ್ಗೆ ಕೇಳಿದಾಗ ಅವರು ಈ ರೀತಿಯಲ್ಲಿ ಉತ್ತರಿಸಿದರು.


ನಾನು ನನ್ನ ದಿನವನ್ನು ಖರ್ಜೂರಗಳನ್ನು ತಿನ್ನುವುದರೊಂದಿಗೆ ಪ್ರಾರಂಭಿಸುತ್ತೇನೆ. ಸಾಧಾರಣವಾಗಿ ಕಾಫಿ ಅಥವಾ ಟೀ ಕುಡಿಯುವುದಿಲ್ಲ. ಎಣ್ಣೆಯಿಂದ ಕರೆದ ಪದಾರ್ಥಗಳನ್ನು ತಿನ್ನುವುದಿಲ್ಲ. ನನ್ನ ಶಕ್ತಿಯ ಬಹುಭಾಗ ನೀರು ಕುಡಿಯುವುದರಿಂದ ಬರುತ್ತದೆ. ನಾನು ತಾಜಾ ಮತ್ತು ಹಸಿ ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತೇನೆ ಮತ್ತು ಸಂಜೆಯ ಹೊತ್ತು ಬಾಳೆ ಹಣ್ಣು ತಿಂದು ಹಾಲು ಕುಡಿಯುತ್ತೇನೆ.


ಸೈಕ್ಲಿಂಗ್ ನೊಂದಿಗೆ ಜನಾರ್ಧನ್ ಮೆಟ್ಟಿಲು ಹತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಬಹುಮಹಡಿ ಕಟ್ಟಡಗಳನ್ನು ಮೆಟ್ಟಿಲುಗಳ ಮೂಲಕ ವೇಗವಾಗಿ ಹತ್ತಬೇಕು. ಅವರು ಈವರೆಗೆ 32 ಅಂತಸ್ತಿನ ಕಟ್ಟಡಗಳನ್ನು ನಾಲ್ಕು ಬಾರಿ, 52 ಅಂತಸ್ತಿನ ಕಟ್ಟಡ ಮತ್ತು ದುಬೈನಲ್ಲಿ 64 ಅಂತಸ್ತಿನ ಕಟ್ಟಡವನ್ನು ಒಂದು ಬಾರಿ ಹತ್ತಿದ್ದಾರೆ.


ಜನಾರ್ಧನ್ ಅವರ ಗಮನಕ್ಕೆ ಬಂದ‌ ಬಹುತೇಕ ಎಲ್ಲಾ ಮ್ಯಾರಥಾನ್ ‌ಮತ್ತು ಟ್ರೆಕ್ಕಿಂಗ್ ಗಳಲ್ಲಿ‌ ಅವರು ಭಾಗವಹಿಸಿದ್ದಾರೆ. ಅವರ ವಯಸ್ಸು ಅವರಿಗೆ ಎಂದೂ ಅಡ್ಡಿಯಾಗಿಲ್ಲ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ಅವರು ದುಬೈ ಮತ್ತು‌ ಸಿಡ್ನಿ‌ ನಗರಗಳಿಗೂ ಹೋಗಿ ಬಂದಿದ್ದಾರೆ. ಅವರು ಮುಂಬೈನಲ್ಲಿ ಮೂರು, ಬೆಂಗಳೂರಿನಲ್ಲಿ ಎರಡು ಮತ್ತು ದುಬೈನಲ್ಲಿ ಒಂದು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ.


ನಾವು ನಗರದಲ್ಲಿ ಸಂಚರಿಸಲು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ‌ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಜನಾರ್ಧನ್ ಈಗಲೂ ನಗರದಲ್ಲಿ ಸೈಕಲ್ಲಿನಲ್ಲಿಯೇ ಸಂಚರಿಸಲು ಬಯಸುತ್ತಾರೆ.


“ನಾನು ನಿಜವಾದ ಹಸಿರು ಪ್ರೇಮಿ ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲ. ಏಕೆಂದರೆ ನಾನು ಬೆಂಗಳೂರು ನಗರದಲ್ಲಿ ‌ಮತ್ತು‌ ನಗರದಿಂದ ‌ನಗರಕ್ಕೆ ಸೈಕಲ್ಲಿನಲ್ಲಿಯೇ ಸಂಚರಿಸುತ್ತೇನೆ. ಪ್ರತಿದಿನ ಸುಮಾರು 55 ಕಿಲೋಮೀಟರ್ ‌ದೂರ ಸಂಚರಿಸುತ್ತೇನೆ” ಎಂದು ಅವರು ಹೇಳುತ್ತಾರೆ


ಎರಡು ವರ್ಷಗಳ ಹಿಂದೆ ‌ಸರ್ಕಾರವು ಅವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಜಯನಗರ ಅಂಚೆ ಕಚೇರಿಯು ‌ಕೆಲವು ವರ್ಷಗಳ ಹಿಂದೆ ಅವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ನಿಜವಾಗಿಯೂ ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.