ಆವೃತ್ತಿಗಳು
Kannada

ಯಶಸ್ಸಿಗೆ ಸರಳ ಸೂತ್ರ...ಕುಮುದ್ ಶ್ರೀನಿವಾಸನ್ ಸಾಧನೆಯ ಹಾದಿ

ಟೀಮ್​​ ವೈ.ಎಸ್​​.

YourStory Kannada
6th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

"ಇಂಟೆಲ್ ಇಂಡಿಯಾ"ದ ಪ್ರೆಸಿಡೆಂಟ್ ಕುಮುದ್ ಶ್ರೀನಿವಾಸನ್ ಅವರ ಮಾತುಗಳನ್ನು ನಾವು ಕೇಳಿದ್ದು ಯುವರ್‍ಸ್ಟೋರಿ ಆಯೋಜಿಸಿದ್ದ ಟೆಕ್‍ಸ್ಪಾರ್ಕ್ಸ್​​​ -2015ರಲ್ಲಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಕೊರತೆಯಿದೆ ಅನ್ನೋದು ಕುಮುದ್ ಅವರ ಅಭಿಪ್ರಾಯ. ಹೆಣ್ತನ ಒಂದು ಶಾಪ ಅನ್ನೋ ವಿಚಾರ ಪ್ರತಿಯೊಬ್ಬ ಮಹಿಳೆಯರನ್ನು ಕಾಡುತ್ತಿದೆ. ವೃತ್ತಿ ಜೀವನದ ಬಗೆಗಿನ ಒಲವು ಕಳೆದುಕೊಳ್ಳುವಂತಹ ಪರಿಸ್ಥಿತಿಯೂ ಎದುರಾಗಬಹದು ಅನ್ನೋದು ಅವರ ಆತಂಕ. ಈ ಎಲ್ಲ ವಿಚಾರಗಳ ಬಗ್ಗೆ ಕುಮುದ್ ಶ್ರೀನಿವಾಸನ್ ಮಾತನಾಡಿದ್ದಾರೆ.

ಆರಂಭಿಕ ಜೀವನ ಮತ್ತು ತಂತ್ರಜ್ಞಾನದತ್ತ ದಿಟ್ಟ ಹೆಜ್ಜೆ...

ಕುಮುದ್ ಪರಿಶ್ರಮಿ ಹಾಗೂ ಪೈಪೋಟಿ ಒಡ್ಡುವಂಥ ಬುದ್ದಿವಂತ ವಿದ್ಯಾರ್ಥಿನಿಯಾಗಿದ್ರು. ಕಲಿಕೆ ಬಗ್ಗೆ ಅಪಾರ ಆಸಕ್ತಿಯಿತ್ತು. ಪದವಿಯ ಕೊನೆ ವರ್ಷದಲ್ಲಿದ್ದಾಗ ಕೆಲ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗೋದಾಗಿ ಮಾತನಾಡಿಕೊಳ್ತಿದ್ರು. ಸಹಜವಾಗಿಯೇ ಕುಮುದ್ ಅವರಿಗೂ ಅಮೆರಿಕಕ್ಕೆ ಹಾರುವ ಯೋಚನೆ ಬಂದಿತ್ತು. ತಂದೆಯ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ ಕುಮುದ್ ಕೋಲ್ಕತ್ತಾದಿಂದ ನ್ಯೂಯಾರ್ಕ್ ನಗರಕ್ಕೆ ಬಂದಿಳಿದ್ರು. ಅಲ್ಲಿ ಎಂಬಿಎ ಮಾಡ್ತಿದ್ದಾಗ್ಲೇ ಕುಮುದ್ ಅವರಿಗೆ ಹತ್ತಾರು ಕೆಲಸದ ಆಫರ್ ಬಂದಿತ್ತು. ಪ್ರೋಗ್ರಾಮಿಂಗ್ ಬಗ್ಗೆ ಆಸಕ್ತಿ ಇದ್ದಿದ್ರಿಂದ ಕುಮುದ್ ಅವರಿಗೆ ಕೆಲಸ ಇಷ್ಟವಾಗಿತ್ತು.

image


ಇಂಟೆಲ್‍ನಲ್ಲಿ ಆರಂಭಿಕ ವರ್ಷಗಳು...

ಕುಮುದ್ ಇಂಟೆಲ್ ಕಂಪನಿಯನ್ನು ಸೇರಿದ್ದು ಆಕಸ್ಮಿಕ. ಅವರ ಪತಿ ಇಂಟೆಲ್ ಉದ್ಯೋಗಿಯಾಗಿದ್ದು, ಕುಮುದ್ ಕೂಡ ಅದೇ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದ್ರು. ಕೆಲ ವರ್ಷಗಳ ಬಳಿಕ ಕುಮುದ್ ಬೇರೆ ಕಂಪನಿಗೆ ಸೇರಲು ಬಯಸಿದ್ದೇನೋ ನಿಜ. ಆದ್ರೆ 28 ವರ್ಷಗಳಿಂದ ಇಂಟೆಲ್ ಜೊತೆಗಿನ ಅವರ ನಂಟು ಹಾಗೇ ಇದೆ. ಕಲಿಕೆ ಹಾಗೂ ಬೆಳವಣಿಗೆಗೆ ಇಂಟೆಲ್‍ನಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ ಎನ್ನುತ್ತಾರೆ ಅವರು. ನಿಮ್ಮ ದೃಷ್ಟಿಕೋನ ಸರಿಯಾಗಿದ್ರೆ ನಿಮ್ಮ ಚಿಂತನೆಗಳನ್ನು ಜನರೂ ಆಲಿಸುತ್ತಾರೆ ಅನ್ನೋದನ್ನು ಇಂಟೆಲ್‍ನಲ್ಲಿ ಕಲಿತೆ ಎನ್ನುತ್ತಾರೆ ಕುಮುದ್. ಇಂಟೆಲ್‍ನಲ್ಲಿ ಪುರುಷ ಉದ್ಯೋಗಿಗಳ ಸಂಖ್ಯೆ ಹೆಚ್ಚಿತ್ತು. ಮೊದಮೊದಲು ಕುಮುದ್ ಅವರಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಆದ್ರೆ ಅದೇ ಅಭ್ಯಾಸವಾಗಿ ಹೋಯ್ತು. 28 ವರ್ಷಗಳ ಸೇವೆಯಲ್ಲಿ 21 ವರ್ಷಗಳನ್ನು ಅವರು ಇಂಟೆಲ್‍ನ ತಂತ್ರಜ್ಞಾನ ಹಾಗೂ ಉತ್ಪಾದನಾ ವಿಭಾಗದಲ್ಲಿ ಕಳೆದಿದ್ದಾರೆ. ತಮ್ಮಲ್ಲಿ ಧೈರ್ಯ ಹೆಚ್ಚಿಸಿದ್ದು ಇದೇ ಕೆಲಸ ಎನ್ನುತ್ತಾರೆ ಕುಮುದ್.

ಉದ್ಯೋಗ ಹಾಗೂ ಕುಟುಂಬದ ಮಧ್ಯೆ ಸಮತೋಲನ...

ಕೆಲಸ, ಕುಟುಂಬ ಹಾಗೂ ತಾಯ್ತನ ಎಲ್ಲವನ್ನೂ ನಿಭಾಯಿಸುವುದು ಆರಂಭದ ದಿನಗಳಲ್ಲಿ ಕುಮುದ್ ಅವರಿಗೆ ಕಷ್ಟವಾಗಿತ್ತು. ಆದ್ರೆ ಅದನ್ನೆಲ್ಲ ಕುಮುದ್ ಸಮರ್ಥವಾಗಿ ಎದುರಿಸಿದ್ದಾರೆ. ಛಲ, ಒಬ್ಬರ ಆದ್ಯತೆ ಬಗೆಗಿನ ಸ್ಪಷ್ಟತೆ, ಮನೆ ಮತ್ತು ಉದ್ಯೋಗದ ಸ್ಥಳದಲ್ಲಿ ಎಲ್ಲರ ಬೆಂಬಲ ಪಡೆಯುವುದು ಈ ಮೂರು ವಿಚಾರಗಳಿಂದಾಗಿ ಕುಮುದ್ ಅವರಿಗೆ ವೃತ್ತಿ ಮುಂದುವರಿಸುವುದು ಕಷ್ಟವಾಗಲಿಲ್ಲ. ನಿಮ್ಮನ್ನು ಬೆಂಬಲಿಸುವ ಪತಿಯನ್ನು ಪಡೆಯುವುದು ಅತ್ಯಂತ ಮಹತ್ವದ್ದು ಅನ್ನೋದು ಕುಮುದ್ ಅವರ ಅಭಿಪ್ರಾಯ. ಮಕ್ಕಳ ಲಾಲನೆ ಪಾಲನೆಯಲ್ಲಿ ಗಂಡನ ಸಹಾಯ ಸಿಕ್ಕಿದ್ರೆ ಮನೆ ಹಾಗೂ ಕೆಲಸ ಎರಡನ್ನೂ ನಿಭಾಯಿಸೋದು ಸುಲಭ ಅನ್ನೋದು ಕುಮುದ್ ಅವರ ಅನುಭವದ ಮಾತು. ಅಮೆರಿಕದಲ್ಲಿ ಜೀವನ ನಡೆಸೋದು ಕೂಡ ಬಲು ದುಬಾರಿ ಎಂದು ಅರ್ಥಮಾಡಿಕೊಂಡಿದ್ದ ಕುಮುದ್, ಖರ್ಚು ಕಡಿಮೆ ಮಾಡಿ ಹೂಡಿಕೆ ಮಾಡೋಣ ಅಂತಾ ಮೊದಲೇ ಪ್ಲಾನ್ ಮಾಡಿದ್ರು. ಇದು ಮುಂದೆ ಅವರ ನೆರವಿಗೆ ಬಂತು.

ಇಂಟೆಲ್‍ನಲ್ಲಿ ಸಾಧನೆ...

ಆಲ್ಬುಕರ್ಕ್‍ನಲ್ಲಿದ್ದಾಗ ಕುಮುದ್ ಅವರಿಗೆ ಫ್ಯಾಬ್ರಿಕೇಶನ್ ಯೂನಿಟ್ ತಯಾರಿಸುವ ಪ್ರಾಜೆಕ್ಟ್ ಕೊಡಲಾಗಿತ್ತು. ಕಾಗದ ರಹಿತ ಫ್ಯಾಬ್ ತಯಾರಿಕೆ ಸವಾಲಾಗಿತ್ತು. ಇದರಲ್ಲಿ ಯಶಸ್ವಿಯಾಗಿರುವ ಬಗ್ಗೆ ಇವತ್ತಿಗೂ ಕುಮುದ್ ಅವರಿಗೆ ಹೆಮ್ಮೆಯಿದೆ.

ಭಾರತಕ್ಕೆ ವಾಪಸ್...

ಬಿಲ್ ಜಾರ್ಜ್ ತಮ್ಮ `ಟ್ರೂ ನಾರ್ತ್' ಪುಸ್ತಕದಲ್ಲಿ ಸುದೀರ್ಘ ವೃತ್ತಿ ಜೀವನವನ್ನು ಮೂರು ಹಂತಗಳಾಗಿ ವಿಭಾಗಿಸಿದ್ದಾರೆ. ಮೊದಲ ಹಂತ ತಂಡ ಮುನ್ನಡೆಸಲು ಸಿದ್ಧತೆ, ಎರಡನೆಯದು ನೀವೇ ಮುನ್ನಡೆಸುವ ಸಮಯ, ಮೂರನೆಯದು ಮರಳಿಸುವುದು. ಈಗ ಕುಮುದ್ ಅವರಿಗೂ ಮರಳಿಸುವ ಇಚ್ಛೆಯಾಗಿದೆ. ಉದ್ಯೋಗಿಗಳಿಗೆ ತರಬೇತಿ ಹಾಗೂ ಸಲಹೆ ನೀಡಲು ಕುಮುದ್ ಮುಂದಾಗಿದ್ದಾರೆ. ತಾವು ಹುಟ್ಟಿ ಬೆಳೆದ ಸಮುದಾಯದ ಅಭ್ಯುದಯಕ್ಕೆ ತಮ್ಮ ಕೈಯ್ಯಲ್ಲಾದ ಪ್ರಯತ್ನ ಮಾಡುವ ಇರಾದೆ ಅವರದ್ದು.

ಇಂಟೆಲ್‍ನಲ್ಲಿ ಆದ್ಯತೆಗಳು...

ಕಳೆದ 15 ವರ್ಷಗಳಲ್ಲಿ ಇಂಟೆಲ್ ಇಂಡಿಯಾ, ಇಂಟೆಲ್ ಸಂಸ್ಥೆಯ ಪಾಲಿಗೆ ಶಕ್ತಿಯುತ ನಿರ್ವಹಣಾ ಎಂಜಿನ್‍ನಂತಾಗಿದೆ. ಹೊಸ ಹೊಸ ಆವಿಷ್ಕಾರಗಳ ಮೂಲಕ ನಮ್ಮ ಕೊಡುಗೆಯ ಮೌಲ್ಯ ಹೆಚ್ಚಿಸುವುದು ಇವರ ಮುಂದಿರುವ ಗುರಿ. ಮೊದಲು ಇಂಟೆಲ್ ಇಂಡಿಯಾಗೆ ಕಾಲಿಟ್ಟಾಗ ಕುಮುದ್, ಮ್ಯಾನೇಜ್‍ಮೆಂಟ್ ವಿಭಾಗಕ್ಕಿಂತ ತಂತ್ರಜ್ಞಾನ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ರು. ಈ ನಿಟ್ಟಿನಲ್ಲಿ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ರೂಪಿಸಿದ್ರು. ಆದ್ರೆ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ಇಂಟೆಲ್ ಇಂಡಿಯಾಗೆ ಕೊಂಚ ನ್ಯೂನ್ಯತೆ ಇದೆ ಅನ್ನೋದನ್ನು ಕುಮುದ್ ಒಪ್ಪಿಕೊಳ್ತಾರೆ. ಸದ್ಯ ಈ ಬಗ್ಗೆ ಕುಮುದ್ ಹೆಚ್ಚಿನ ಗಮನಹರಿಸಿದ್ದಾರೆ.

ಕೆಲಸದ ಹೊರತಾದ ಆಸಕ್ತಿ...

ಒಬ್ಬ ವ್ಯಕ್ತಿಯಾಗಿ, ಉದ್ಯೋಗಿಯಾಗಿ, ಕುಟುಂಬದ ಸದಸ್ಯೆಯಾಗಿ, ಸಮುದಾಯದ ಭಾಗವಾಗಿ ಸಂಪೂರ್ಣವಾಗಿ ಜೀವಿಸಬೇಕು ಅನ್ನೋದು ಕುಮುದ್ ಅವರ ಆಸೆ. ಬೆಳವಣಿಗೆ ಹಾಗೂ ಕಲಿಕೆಯತ್ತ ತಮ್ಮನ್ನು ತಾವೇ ಅವರು ಪ್ರೋತ್ಸಾಹಿಸಿಕೊಳ್ತಾರೆ. ಫಿಟ್‍ನೆಸ್ ಅವರಿಗೆ ಬಹಳ ಮುಖ್ಯ. ಯೋಗ ಮತ್ತು ಧ್ಯಾನದ ಮೂಲಕ ಅದನ್ನವರು ಕಾಪಾಡಿಕೊಳ್ತಾರೆ. ಕುಮುದ್ ಪುಸ್ತಕ ಪ್ರಿಯರೂ ಹೌದು. ಒಬ್ಬ ತಾಯಿಯಾಗಿ ಮಕ್ಕಳೊಂದಿಗೆ ಸಮಯ ಕಳೀತಾರೆ.

ಅರ್ಧದಲ್ಲೇ ವೃತ್ತಿ ತ್ಯಜಿಸಿದ ಮಹಿಳೆಯರಿಗೆ ನೆರವು...

ಇಂಟೆಲ್‍ನಲ್ಲಿ ಇತ್ತೀಚೆಗಷ್ಟೆ `ಹೋಮ್ ಟು ಆಫೀಸ್' ಎಂಬ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಮಹಿಳೆಯರು ಉದ್ಯೋಗಕ್ಕೆ ಮರಳಲು ಸದವಕಾಶ ಇಲ್ಲಿದೆ. ಕೆಲಸದ ವಾತಾವರಣ ಹಾಗೂ ವೈಖರಿ ಇಷ್ಟವಾದ್ರೆ ಅವರು ಅಲ್ಲೇ ಮುಂದುವರಿಯಬಹುದು. ವೈಯಕ್ತಿಕ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಇದು ಮಹಿಳೆಯರಿಗೆ ನೆರವಾಗುತ್ತಿದೆ.

ಉದ್ಯಮ ಹಾಗೂ ಇಂಟೆಲ್...

ಉದ್ಯಮ ಭಾರತದ ಅಭಿವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಕೂಡ ನಡೆಯುತ್ತಿವೆ. ಈಗಾಗ್ಲೇ ಇಂಟೆಲ್ ಕ್ಯಾಪಿಟಲ್ ವೆಂಚರ್ ಆರಂಭಿಸಲಾಗಿದ್ದು, ಕಂಪನಿಗಳಿಗೆ ಹೂಡಿಕೆ ಮಾಡಲಾಗ್ತಿದೆ ಎನ್ನುತ್ತಾರೆ ಕುಮುದ್ ಶ್ರೀನಿವಾಸನ್.

ಮಹಿಳೆಯರಿಗೆ ಸಲಹೆ...

ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂದ್ರೆ ನೀವು ಏನು ಮಾಡ್ತಿದ್ದೀರಾ? ಯಾವ ರೀತಿ ಮಾಡ್ತಿದ್ದೀರಾ ಅನ್ನೋದನ್ನು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಆ ಪ್ರಶ್ನೆಯಿಂದ ನಿಮ್ಮ ಬದುಕು ಬದಲಾಗಬಹುದು. ಅದಕ್ಕೆ ಸಿಕ್ಕ ಉತ್ತರದಲ್ಲೇ ನೀವು ಯಶಸ್ಸನ್ನು ಹುಡುಕಬಹುದು. ವೃತ್ತಿ ಮುಂದುವರಿಸಬೇಕೋ? ಅಥವಾ ಒಂದು ಬ್ರೇಕ್ ತೆಗೆದುಕೊಳ್ಳಬೇಕೋ ಎಂಬ ಗೊಂದಲವಿದ್ದಾಗ ಸಿಕ್ಕ ಉತ್ತರ ಬದುಕಲ್ಲಿ ನಿಮ್ಮನ್ನು ಮುನ್ನಡೆಸುತ್ತದೆ ಅನ್ನೋದು ಕುಮುದ್ ಶ್ರೀನಿವಾಸನ್ ಅವರ ಸಲಹೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags