ತನ್ನ ಬಳಿ ಕೆಲಸಕ್ಕಿದ್ದ 10 ವಲಸಿಗರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ದೆಹಲಿಯ ರೈತ

10 ವಲಸೆ ಕಾರ್ಮಿಕರು ಬಿಹಾರಕ್ಕೆ ವಿಮಾನದಲ್ಲಿ ಹೋಗುತ್ತಿದ್ದಾರೆ. ಈ ಯಾನಕ್ಕಾಗಿ ಬರೋಬ್ಬರಿ 68 ಸಾವಿರ ರೂ ಖರ್ಚು ಮಾಡಿದ್ದಾರೆ ದೆಹಲಿಯ ರೈತ.

ತನ್ನ ಬಳಿ ಕೆಲಸಕ್ಕಿದ್ದ 10 ವಲಸಿಗರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ದೆಹಲಿಯ ರೈತ

Thursday May 28, 2020,

2 min Read

ಮನೆಗೆ ಮರಳಬೇಕೆಂಬ 10 ವಲಸೆ ಕಾರ್ಮಿಕರ ಕನಸು 2 ತಿಂಗಳ ಲಾಕ್‌ಡೌನ್‌ ನಂತರ ಇಂದಿಗೆ ಪೂರೈಸಿದೆ. ಇದು ಸಾಧ್ಯವಾದದ್ದು ವಲಸೆ ಕಾರ್ಮಿಕರಿಗೆ ಕೆಲಸ ನೀಡಿದ್ದ ದೆಹಲಿಯ ರೈತನಿಂದ. ಅವರು 68 ಸಾವಿರ ಖರ್ಚು ಮಾಡಿ 10 ಜನರ ಟಿಕೆಟ್‌ ಖರೀದಿಸಿ ಅವರು ಊರಿಗೆ ಮರಳಲು ವ್ಯವಸ್ಥೆ ಮಾಡಿದ್ದಾರೆ.


ಬಿಹಾರ್‌ನ ರಾಜಧಾನಿ ಪಾಟ್ನಾಗೆ ಹೋಗುವ ಕಾರ್ಮಿಕರ ವಿಮಾನಯಾನ ಗುರುವಾರ ಬೆಳಿಗ್ಗೆ 6 ಗಂಟೆಗೆ ನಿಗದಿಯಾಗಿತ್ತು. ನಡೆದುಕೊಂಡೊ ಅಥವಾ ಸೈಕಲ್‌ನಲ್ಲೊ ಅಥವಾ ಬಸ್ಸು/ರೈಲಿನಲ್ಲಿ ಕೂತು ತಮ್ಮ ಊರಿಗೆ ಹೋಗಬೇಕೆಂದುಕೊಂಡಿದ್ದ ಕಾರ್ಮಿಕರು ಈಗ ತಾವು ವಿಮಾನದಲ್ಲಿ ಊರಿಗೆ ಹೋಗುತ್ತಿದ್ದೇವೆಂಬುದನ್ನು ಅವರಿಗೆ ನಂಬಲಾಗುತ್ತಿಲ್ಲ.


“ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆಂದು ಯಾವಾಗಲೂ ಅಂದುಕೊಂಡಿರಲಿಲ್ಲ. ನನಗಾಗುತ್ತಿರುವ ಖುಷಿಯನ್ನು ಹೇಗೆ ಹೇಳಬೇಕೆಂದು ತಿಳಿಯುತ್ತಿಲ್ಲ. ಆದರೆ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಏನು ಮಾಡಬೇಕೆಂಬುದರ ಬಗ್ಗೆ ನನಗೆ ಚಿಂತೆಯಾಗಿದೆ,” ಎಂದರು ತಮ್ಮ ಮಗನೊಂದಿಗೆ ಊರಿಗೆ ಹೋಗುತ್ತಿರುವ ಲಖಿಂದರ್‌ ರಾಮ.




ಇದಕ್ಕೆಲ್ಲ ಕಾರಣರಾದವರು ದೆಹಲಿಯ ತಿಹಿಪುರ್‌ ಹಳ್ಳಿಯ ಮಶ್‌ರೂಮ್‌ ಬೆಳೆಯುವ ರೈತರಾದ ಪಪ್ಪನ್‌ ಸಿಂಗ್‌. ವಲಸಿಗರಿಗೆ ವೇತನ ನೀಡದಿರುವುದು, ಹಸಿವು ಮತ್ತು ಪ್ರಯಾಸಕರ ಪ್ರಯಾಣದಿಂದಾಗುತ್ತಿರುವ ಖಾಯಿಲೆ, ಸಾವುಗಳ ಸುದ್ದಿಗಳೆ ಹೆಚ್ಚಾಗಿದ್ದ ಈ ಸಮಯದಲ್ಲಿ ಇವರ ಕೆಲಸ ಶ್ಲಾಘಣೀಯವಾಗಿದೆ.


ಲಖಿಂದರ್‌ ತಮ್ಮ ಮಡದಿಗೆ ಫೋನ್‌ ಮಾಡಿ ತಾನು ವಿಮಾನದಲ್ಲಿ ಬಿಹಾರಕ್ಕೆ ಹೋಗುತ್ತಿದ್ದೇನೆಂದು ಹೇಳಿದಾಗ ಅವರು ಮೊದಲು ನಂಬಲಿಲ್ಲ.


ಪಪ್ಪನ್‌ ಸಿಂಗ್‌ ಅವರ ಜೊತೆ ಮಾತನಾಡಿದಾಗಲೇ ತಮ್ಮ ಪತಿ ಮತ್ತು ಮಗ ನವೀನ್‌ ರಾಮ್‌ ಇಬ್ಬರೂ ವಿಮಾನದಲ್ಲಿ ಊರಿಗೆ ಬರುತ್ತಿದ್ದಾರೆ ಎಂಬುದು ಅವರಿಗೆ ಖಾತ್ರಿಯಾಗಿದೆ.


ಮಾರ್ಚ್‌ 25, ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ ಪಪ್ಪನ್‌ ಅವರೆ ಊಟ ಉಪಚಾರದ ಖರ್ಚನ್ನು ನೋಡಿಕೊಂಡಿದ್ದಾರೆ ಎನ್ನುತ್ತಾರೆ 27 ವರ್ಷದಿಂದ ಅವರ ಬಳಿ ಕೆಲಸ ಮಾಡುತ್ತಿರುವ ಲಖಿಂದರ್‌.


68 ಸಾವಿರ ರೂ. ಮೌಲ್ಯದ ಟಿಕೇಟ್‌ ಬುಕ್‌ ಮಾಡಿದ್ದೇನೆ, ಅಲ್ಲದೆ ಅವರು ತಮ್ಮ ರಾಜ್ಯವನ್ನು ತಲುಪಿದಾಗ ಹಣದ ಸಮಸ್ಯೆ ಬರಬಾರದೆಂದು ಪ್ರತಿಯೊಬ್ಬರಿಗೂ 3 ಸಾವಿರ ರೂ ಹೆಚ್ಚಿಗೆ ಹಣ ನೀಡಿದ್ದೇನೆ ಎಂದರು ಪಪ್ಪನ್‌.


ಇಂದು ಬೆಳಿಗ್ಗೆ(ಗುರುವಾರ) ಅವರೇ ಎಲ್ಲ ಕೆಲಸಗಾರರನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೆಹಲಿಯ ಐಜಿಐ ವಿಮಾನನಿಲ್ದಾಣಕ್ಕೆ ಬಿಟ್ಟಿದ್ದಾರೆ.


“ಈ 10 ಜನರು ಏಪ್ರಿಲ್‌ ತಿಂಗಳ ಮೊದಲ ವಾರದಲ್ಲೆ ರೈಲಿನಲ್ಲಿ ಬಿಹಾರ್‌ ತಲುಪಬೇಕಿತ್ತು, ಆದರೆ ಲಾಕ್‌ಡೌನ್‌ ನಿಂದ ಹೋಗಲಾಗಿಲ್ಲ,” ಎಂದರು ಪಪ್ಪನ್‌.


ಶ್ರಮಿಕ ರೈಲಿನಲ್ಲಿ ಅವರನ್ನು ಅವರ ರಾಜ್ಯಕ್ಕೆ ಕಳುಹಿಸಲು ಹಲವಾರು ಬಾರಿ ಪ್ರಯತ್ನ ಪಟ್ಟರು ಆ ಕೆಲಸವಾಗಿಲ್ಲ.


“ನನ್ನ ಕೆಲಸಗಾರರು ಸಾವಿರಾರು ಮೈಲಿ ನಡೆದುಕೊಂಡು ಹೋಗುವಂತಹ ನಿರ್ಧಾರಕ್ಕೆ ನಾನು ಒಪ್ಪುತ್ತಿರಲಿಲ್ಲ, ಅದು ಅವರ ಜೀವಕ್ಕೆ ಅಪಾಯವಾಗಿದೆ. ಏಕೆಂದರೆ ಇತ್ತೀಚೆಗೆ ವಲಸಿಗರು ರಸ್ತೆ ಅಪಘಾತಕ್ಕೊಳಗಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ,” ಎನ್ನುತ್ತಾರೆ ಪಪ್ಪನ್.‌


ಕಾರ್ಮಿಕರು ಸುಗಮವಾಗಿ ತಮ್ಮೂರಿಗೆ ಪ್ರಯಾಣಿಸಲು ಬೇಕಾದ ಎಲ್ಲ ಆರೋಗ್ಯ ಪರಿಚಾರಿಕತೆಯನ್ನು ಸಂಪೂರ್ಣಗೊಳಿಸಿದ್ದಾರೆ ಅವರು.


"ಎಲ್ಲಾ 10 ಕಾರ್ಮಿಕರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರಗಳನ್ನು ಅಧಿಕಾರಿಗಳು ನೀಡಿದ್ದಾರೆ ಮತ್ತು ಅವರು ವಿಮಾನದಲ್ಲಿ ಪ್ರಯಾಣಿಸಲು ಯೋಗ್ಯರಾಗಿದ್ದಾರೆ," ಎಂದು ಅವರು ಹೇಳಿದರು.


“ನಾನು 1993 ರಿಂದ ಮಶ್‌ರೂಂ ಕೃಷಿ ಮಾಡುತ್ತಿದ್ದೇನೆ, ಅಗಸ್ಟ್‌ ಮತ್ತು ಮಾರ್ಚ್‌ ಮಧ್ಯದಲ್ಲಿ ಅದರ ಋತುವಿರುತ್ತದೆ,” ಎಂದರು ಪಪ್ಪನ್‌.