ಹಸಿರನ್ನು ಹೆತ್ತು ಸಲಹುತ್ತಿರುವ ದೇವಕಿ ಅಮ್ಮ

ಕೇರಳದ ಓರ್ವ ಸಾಧಾರಣ ಮಹಿಳೆ, ಕೊಲ್ಲಕ್ಕಾಯಿಲ್ ದೇವಕಿಅಮ್ಮ ತನ್ನ 5 ಎಕರೆ ಭೂಮಿಯಲ್ಲಿ ಕಾಡನ್ನು ಸೃಷ್ಟಿಸಿ ಹಲವಾರು ಜಾತಿಯ ಪಕ್ಷಿ ಸಂಕುಲಗಳಿಗೆ ಆಶ್ರಯ ಒದಗಿಸಿ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಸಿರನ್ನು ಹೆತ್ತು ಸಲಹುತ್ತಿರುವ ದೇವಕಿ ಅಮ್ಮ

Saturday January 04, 2020,

3 min Read

ಕಾಡು ಪರಿಸರದ ಕುರಿತು ಪ್ರೀತಿ ಕಾಳಜಿ ವಹಿಸಲು ನಾವೇನು ವಿಶ್ವವಿದ್ಯಾಲಯದ ಪದವೀಧರರೇ ಆಗಿರಬೇಕೆಂದೇನು ಇಲ್ಲಾ. ಕಂದೀಲು ಹಿಡಿದು ಮರವನ್ನು ತಬ್ಬಿಕೊಂಡು ಚಿಪ್ಕೋ ಚಳುವಳಿಯನ್ನು ಆರಂಭಿಸಿದ ಭಚ್ಛನಿ ದೇವಿ ಓರ್ವ ಸಾಧಾರಣ ಮಹಿಳೆಯೇ, ಸಾಲು ಸಾಲು ಮರಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಅವುಗಳನ್ನು ಸಾಕಿ ಸಲುಹಿದ ನಮ್ಮ ಸಾಲುಮರದ ತಿಮ್ಮಕ್ಕ ಪಿಎಚ್‌ಡಿ ಪದವೀಧರರೇನು ಅಲ್ಲಾ. ಪ್ರಕೃತಿಯೊಂದಿಗಿನ ಒಡನಾಟ, ಪ್ರೀತಿ, ಕಾಳಜಿಗಳಷ್ಟೇ ಸಾಕು ಓರ್ವ ಸಾಧಾರಣ ವ್ಯಕ್ತಿಯನ್ನು ಪರಿಸರ ಶಾಸ್ತ್ರಜ್ಞರನ್ನಾಗಿ ರೂಪಿಸುತ್ತದೆ.


ಇಂದು ನಾವು ಹೇಳಹೊರಟಿರುವುದು, ಕೇರಳದ ಓರ್ವ ಸಾಧಾರಣ ಮಹಿಳೆ, ತನ್ನ 5 ಎಕರೆ ಭೂಮಿಯಲ್ಲಿ ಕಾಡನ್ನು ಸೃಷ್ಟಿಸಿ ಹಲವಾರು ಜಾತಿಯ ಪಕ್ಷಿ ಸಂಕುಲಗಳಿಗೆ ನೆರವಾಗಿರುವ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಕೊಲ್ಲಕ್ಕಾಯಿಲ್ ದೇವಕಿ ಅಮ್ಮನವರ ಬಗ್ಗೆ.


ಕೇರಳದ ಶಾಲಾ ಶಿಕ್ಷಕರಾದ ಗೋಪಾಲಕೃಷ್ಣ ಪಿಳ್ಳೈ ಅವರನ್ನು ಮದುವೆಯಾದ ದೇವಕಿ ಅಮ್ಮ, ಅವರ ಕುಟುಂಬ ಮುಂದುವರೆಸಿಕೊಂಡು ಬಂದ ಭತ್ತದ ಕೃಷಿಯಲ್ಲೇ ತಮ್ಮನ್ನೂ ತೊಡಗಿಸಿಕೊಂಡರು. 1980 ರಲ್ಲಿ ನಡೆದ ಅಪಘಾತ ದೇವಕಿ ಅಮ್ಮನವರನ್ನು ಈ ಕೃಷಿಕೆಲಸದಿಂದ ಹೊರಗುಳಿಯುವಂತೆ ಮಾಡಿತು.


ಪ್ರತಿಯೊಂದರ ಅಂತ್ಯವೂ ಹೊಸತರ ಆರಂಭವಂತೆ. ದೇವಕಿ ಅಮ್ಮ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಸಸಿಗಳನ್ನು ನೆಟ್ಟುಬೆಳೆಸಲು ಆರಂಭಿಸಿದರು. ಇದು ಕೇರಳದ ಆಲಪ್ಪುಳ ಜಿಲ್ಲೆಯ ಒನತ್ತುಕಾರ ಪ್ರದೇಶದಲ್ಲಿ ಅವರ ಖಾಸಗಿ ಆಸ್ತಿಯಲ್ಲಿ ಐದು ಎಕರೆ ಪ್ರದೇಶದಲ್ಲಿ ಹರಡಿರುವ ಹಚ್ಚ ಹಸಿರಿನ ಅರಣ್ಯವನ್ನು ಬೆಳೆಸಲು ಕಾರಣವಾಯಿತು.


ತಾವು ಬೆಳೆಸಿದ ಕಾಡು ಮತ್ತೆ ಕಾಡಿನೊಳಗಿರುವ ದೇವಕಿ ಅಮ್ಮನವರ ಮನೆ (ಚಿತ್ರ ಕೃಪೆ: ಫೆಮಿನಿಸಮ್ಇನ್ಇಂಡಿಯಾ)




ಪರಿಸರದ ರಕ್ಷಣೆ ಅವರ ಗುರಿಯಾಗಿದ್ದರಿಂದ, ದೇವಕಿ ಅಮ್ಮ ಸಸ್ಯಗಳು ಮತ್ತು ಮರಗಳನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ಹಸಿರು ಸಾವಯವ ಗೊಬ್ಬರವನ್ನು ಮಾತ್ರ ಬಳಸುತ್ತಾರೆ. ತೇಗ, ಮಹಾಗೋನಿ, ಹುಣಸೆಹಣ್ಣು, ಮಾವು, ಪೈನ್, ಬಿದಿರು ಮುಂತಾದ 3.000 ಕ್ಕೂ ಹೆಚ್ಚು ಮರಗಳು ಈ ಕಾಡಿನಲ್ಲಿವೆ. ಕೆಲವು ಅಪರೂಪದ ಸಸ್ಯಗಳಾದ ಲಕ್ಷ್ಮಿ ಥಾರು, ಚೈನೀಸ್ ಆರೆಂಜ್ ಇತ್ಯಾದಿಗಳೂ ಕಂಡುಬರುತ್ತವೆ. ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳನ್ನು ಹೇರಳವಾಗಿ ಪೂರೈಸುವ 200 ವಿವಿಧ ಬಗೆಯ ಮರಗಳು ಮತ್ತು ಪೊದೆಗಳನ್ನು ಹೊರತುಪಡಿಸಿ, ಕಾಡಿನಲ್ಲಿ ಕೊಳಗಳು, ಗದ್ದೆ ಮತ್ತು ಹಸುಗಳು, ಎಮ್ಮೆ, ಎತ್ತುಗಳು ಮುಂತಾದ ಪ್ರಾಣಿಗಳಿವೆ. ಪಕ್ಷಿಗಳಾದ ಅಮುರ್ ಫಾಲ್ಕನ್, ಬ್ಲೂಥ್ರೋಟ್, ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್ ಮತ್ತು ಎಮರಾಲ್ಡ್ ಡವ್ ಅನ್ನು ಇಲ್ಲಿ ನೋಡಬಹುದು, ವರದಿ ಫೆಮಿನಿಸಮ್ಇನ್ಇಂಡಿಯಾ.


ದಿ ಬೆಟರ್ ಇಂಡಿಯ ದೊಂದಿಗೆ ಮಾತನಾಡಿದ ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನ ಪರಿಸರ ವಿಭಾಗದ ಮುಖ್ಯಸ್ಥೆ, ದೇವಕಿ ಅಮ್ಮ ಅವರ ಪುತ್ರಿ ಪ್ರೊ. ಡಿ. ಧಂಕಮಣಿ,


"ನನ್ನ ತಾಯಿಯ ಮರಗಳನ್ನು ನೆಡುವ ಪ್ರಯಾಣಕ್ಕೆ ನಾಲ್ಕು ತಲೆಮಾರುಗಳು ಕೊಡುಗೆ ನೀಡಿವೆ. ಶಾಲಾ ರಜಾದಿನಗಳಲ್ಲಿ, ಹಳೆಯ ಸಸ್ಯಗಳ ಸ್ಥಿತಿಯನ್ನು ನೋಡಲು ಮತ್ತು ಹೊಸದನ್ನು ನೆಡಲು ಅಮ್ಮನ ಮೊಮ್ಮಕ್ಕಳು ಮತ್ತು ಅವರ ಮಕ್ಕಳು ಮನೆಗೆ ಭೇಟಿ ನೀಡುತ್ತಾರೆ. ಮರಗಳನ್ನು ನೆಡುವ ಬಗ್ಗೆ ಉತ್ಸಾಹವು ಬಹುತೇಕ ಹಬ್ಬದಂತಿದೆ,” ಎಂದರು.


ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ, ತಾಪಮಾನದ ಇಳಿಕೆ ಮೊದಲಾದ ವಿಷಯಗಳ ಕುರಿತು ಯೋಜನೆ ಯೋಚನೆಗಳು ತಯಾರಾಗುತ್ತಿರುವ ಸಂಧರ್ಭದಲ್ಲಿ ದೇವರ ನಾಡು ಕೇರಳದಲ್ಲಿ ದೇವಕಿ ಅಮ್ಮ ಸದ್ದಿಲ್ಲದಂತೆ ಕಾಡನ್ನೇ ಸೃಷ್ಠಿಸಿ ಜಗತ್ತೇ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.


ರಾಷ್ಟ್ರಪತಿ ಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ (ಚಿತ್ರ ಕೃಪೆ: ದಿ ಬೆಟರ್ ಇಂಡಿಯ)


ಸಸ್ಯವಿಜ್ಞಾನಿಗಳು, ಪ್ರವಾಸಿಗರು, ಸಂಶೋಧಕರು, ವಿದ್ಯಾರ್ಥಿಗಳು ಮೊದಲಾದವರು ದೇವಕಿ ಅಮ್ಮನವರ ಕಾಡಿಗೆ ಭೇಟಿ ನೀಡುತ್ತಾರೆ, ಮತ್ತು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ದೇವಕಿ ಅಮ್ಮನವರಿಗೆ ವಿವಿಧ ಜಾತಿಯ ಸಸ್ಯಗಳ ಬೀಜಗಳನ್ನ ಉಡಿಗೊರೆಯಾಗಿ ನೀಡುತ್ತಾರೆ.


ದೇವಕಿ ಅಮ್ಮನವರ ಈ ನಿಸ್ವಾರ್ಥ ಸೇವೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರದ ಎರಡು ಪ್ರಶಸ್ತಿಗಳು ಬಂದಿವೆ- ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಮತ್ತು ನಾರಿ ಶಕ್ತಿ ಪುರಸ್ಕಾರ. ಈ ವರ್ಷ ಅವರಿಗೆ ಭಾರತದ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ನಾರಿ ಶಕ್ತಿ ಪುರಸ್ಕಾರ ಪ್ರಧಾನ ಮಾಡಿದರು. ಮಾತ್ರವಲ್ಲದೆ, ಅವರು ರಾಜ್ಯ ಸರ್ಕಾರವು ವನಮಿತ್ರ ಪ್ರಶಸ್ತಿ, ಹರಿ ವ್ಯಕ್ತಿ ಪುರಸ್ಕಾರ ಮತ್ತು ಸ್ವದೇಶಿ ವಿಜ್ಞಾನದ ಭೂಮಿತ್ರ ಪುರಸ್ಕಾರದಂತಹ ಇತರ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.


ದೇವಕಿ ಅಮ್ಮನವರ ಈ ಹಸಿರು ಪ್ರೀತಿ ಎಲ್ಲರ ಎದೆಯಲ್ಲೂ ಜಿನುಗಲಿ, ಸುಸ್ಥಿರ ಅಭಿವೃದ್ಧಿ ಎಂದು ಪುಂಖಾನುಪುಂಖವಾಗಿ ಬರಿ ಬಾಯಿಮಾತಲ್ಲೇ ಹೇಳದೆ, ಅಮ್ಮ ನಂತೆ ಕಾರ್ಯಪ್ರವೃತ್ತರಾಗುವ ಗುಣ ಎಲ್ಲರಲ್ಲೂ ಜಾಗೃತವಾಗಲಿ ಎಂದು ಆಶಿಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.