ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತಡೆದುಹಾಕಲು ವಾಸ್ತವಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಿದ ಎಫ್ಎಸ್ಎಸ್ಎಐ ಗೆ ಕೊಹ್ಲಿ ಸಾಥ್

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ‌ ಜಾಲತಾಣದ ಖಾತೆಯ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳನ್ನು ತಲುಪಿ ಗುರುವಾರದಂದು 'ಈಟ್ ರೈಟ್ ಇಂಡಿಯಾ ಫಾರ್ ಸಸ್ಟೈನಬಲ್ ಲಿವಿಂಗ್' ಎಂಬ ಅಭಿಯಾನಕ್ಕೆ ಚಾಲನೆ‌ ನೀಡಿದ್ದು, ಅಭಿಮಾನಿಗಳನ್ನು ಸಂಗ್ರಹಣಾ ಚಳುವಳಿಗೆ ಆಹ್ವಾನಿಸಿದರು.

ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತಡೆದುಹಾಕಲು ವಾಸ್ತವಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಿದ ಎಫ್ಎಸ್ಎಸ್ಎಐ ಗೆ ಕೊಹ್ಲಿ ಸಾಥ್

Friday September 13, 2019,

2 min Read

ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಲು ಹಲವಾರು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ, ಅದರಲ್ಲಿ ಈ ಅಭಿಯಾನವೂ‌ ಒಂದು ಎಂದು ಆಹಾರ ನಿಯಂತ್ರಕ ಮಂಡಳಿ ಎಫ್‌ಎಸ್‌ಎಸ್‌ಎಐ ಗುರುವಾರ ತಿಳಿಸಿದೆ.


"ಮುಂಬರುವ ವರ್ಷಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕಬೇಕೆಂಬ ಪ್ರಧಾನಮಂತ್ರಿಯವರ ಕರೆಗೆ ಅನುಗುಣವಾಗಿ, ಪರಿಸರ ಸ್ನೇಹಿ ಬದಲಿಗಳನ್ನು ಅಭಿವೃದ್ಧಿಪಡಿಸಿ ಮತ್ತು ಆಹಾರ ಮತ್ತು ಪಾನೀಯಗಳ ವಲಯದಲ್ಲಿ ಸಮರ್ಪಕವಾಗಿ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸಹಭಾಗಿತ್ವದಲ್ಲಿ‌‌ ಎಫ್ಎಸ್ಎಸ್ಎಐ ವಾಸ್ತವಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ" ಎಂದು ನಿಯಂತ್ರಣ ಮಂಡಳಿ ಹೇಳಿಕೆ ನೀಡಿದೆ‌.


ಭಾರತದ 60 ದೊಡ್ಡ ನಗರಗಳು ಪ್ರತಿದಿನ 15,000 ಟನ್ ಪ್ಲಾಸ್ಟಿಕ್ ಉತ್ಪಾದಿಸುತ್ತವೆ.


ಇತ್ತೀಚೆಗೆ ಆಹಾರ ಮತ್ತು ಪಾನೀಯ ಉದ್ಯಮಗಳು ತನ್ನ ಪ್ಲಾಸ್ಟಿಕ್ ಹೆಜ್ಜೆಗುರುತನ್ನು ಕಡಿಮೆ ಮಾಡಲು ಕೆಲವು ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.


ಈ ಕ್ರಮಗಳ ಅನುಸಾರ "ಬಿಐಎಸ್ ಪ್ರಮಾಣೀಕರಣವಿಲ್ಲದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವ ಸ್ಥಳದಲ್ಲಿ ಹೋಟೆಲ್‌ಗಳು ಕಾಗದ ಹಾಗೂ ಮೊಹರು ಹೊಂದಿದ ಗಾಜಿನ ಬಾಟಲಿಗಳನ್ನು ಬಳಸಬಹುದು.”


ಪ್ಲಾಸ್ಟಿಕ್ ಸ್ಟ್ರಾಗಳು, ತಟ್ಟೆಗಳು, ಬಟ್ಟಲುಗಳು ಮತ್ತು ಕಟ್ಲರಿಗಳ ಬಳಕೆಗೆ ಪರ್ಯಾಯವಾಗಿ ಬಿದಿರಿನ ಬಳಕೆಗೆ ಎಫ್‌ಎಸ್‌ಎಸ್‌ಎಐ ಅನುಮತಿಸಿದೆ.


ಕೃತಕವಾಗಿ ಸಿಹಿ ಪಾನೀಯಗಳ ಪ್ಯಾಕೇಜಿಂಗ್ ಗಾಗಿ ಬಳಸುವ ಹಾಗೂ ಹಿಂತಿರುಗಿಸಬಹುದಾದ ಬಾಟಲಿಗಳ ಮೇಲಿನ ನಿರ್ಬಂಧವನ್ನು ಎಫ್‌ಎಸ್‌ಎಸ್‌ಎಐ ತೆಗೆದುಹಾಕಿದ್ದು, ಕುಡಿಯುವ ನೀರಿನ ಪ್ಯಾಕೇಜಿಂಗ್ ಗೆ ಬಳಸುವ ಪಿಇಟಿ ಬಾಟಲಿಗಳಲ್ಲಿ ದ್ರವ ಸಾರಜನಕದ ಪ್ರಮಾಣವನ್ನು ಬಳಸಲು ಕೂಡಾ ಅನುಮತಿ ನೀಡಿದೆ.


ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹಾಗೂ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು 'ಈಟ್ ರೈಟ್ ಇಂಡಿಯಾ ಫಾರ್ ಸಸ್ಟೈನಬಲ್ ಲಿವಿಂಗ್' ಎಂಬ ಗ್ರಾಹಕ ಜಾಗೃತಿ ಅಭಿಯಾನವನ್ನು ಪ್ರಾಧಿಕಾರ ಇದೀಗ ಚಾಲನೆ ನೀಡಿದೆ.



ಈ ಆಂದೋಲನವನ್ನು ಪ್ರಾರಂಭಿಸಲು, ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ತಲುಪಿ, ಗುರುವಾರ ಆಯೋಜಿಸಿದ್ದ ಸಂಗ್ರಹಣಾ ಚಳುವಳಿಗೆ ಅವರನ್ನು ಆಹ್ವಾನಿಸಿದರು.


ಸುಸ್ಥಿರ ಜೀವನ ನಡೆಸುವ ಉದ್ದೇಶದಿಂದಾಗಿ ಅಭಿಮಾನಿಗಳಿಂದ‌ ಕೋಹ್ಲಿ, ಖಾಲಿ‌ ಆಹಾರ ಮತ್ತು ಪಾನೀಯಗಳ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲಿಗಳು, ಅಲ್ಯೂಮಿನಿಯಂ ಕ್ಯಾನುಗಳು ಮತ್ತು ಟೆಟ್ರಾ ಪ್ಯಾಕ್ ಗಳನ್ನು ಮರುಬಳಕೆಗಾಗಿ ಸಂಗ್ರಹಿಸಲು ಕೋರಿದ್ದಾರೆ.


ಹರಿಯಾಣದ ಗುರುಗ್ರಾಮ್ ನ ಎಂಜಿಎಫ್ ಮಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಹ್ಲಿ ಸ್ವತಃ ‌ ಆಹಾರ ಮತ್ತು ಪಾನೀಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯವನ್ನು ಬೇರ್ಪಡಿಸಿ, ತಮ್ಮೊಂದಿಗೆ‌ ಕೈ ಜೋಡಿಸಿದ್ದ ಜನರನ್ನು ಅವರ ಹೆಜ್ಜೆಗಳನ್ನು ಅನುಸರಿಸುವಂತೆ ಪ್ರೇರೇಪಿಸಿದರು.


ಈ ಸಂದರ್ಭದಲ್ಲಿ, ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಕೇವಲ ಪ್ರಸ್ತುತ ಸಮಸ್ಯೆಯ ಬಗ್ಗೆ ತಿಳಿಸದೇ, ಪರಿಹಾರದ ಅನುಸಾರವಾಗಿ ಮುನ್ನುಗ್ಗಬೇಕೆಂದು ಒತ್ತಾಯಿಸಿದರು.


"ಕೇವಲ‌ ನನ್ನ ಕೇಶವಿನ್ಯಾಸ ಅಥವಾ ಬಟ್ಟೆಗಳಿಂದ ಪ್ರೇರಿತರಾಗಬೇಡಿ, ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಪ್ರೇರಣೆ ಪಡೆಯಿರಿ. ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಭಾರತವನ್ನು ಸಾಧಿಸಲು ಈ ಅಭಿಯಾನಕ್ಕೆ ಕೈಜೋಡಿಸಿ" ಎಂದು ಕೊಹ್ಲಿ ಹೇಳಿದರು.


ಎಫ್‌ಎಸ್‌ಎಸ್‌ಎಐ ನ ಮುಖ್ಯ‌‌ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಅಗರ್‌ವಾಲ್ ಮಾತನಾಡಿ "ವಿರಾಟ್ ಕೊಹ್ಲಿ ಭಾರತದ ಉತ್ತಮ ಕ್ರಿಕೆಟಿಗ ಮಾತ್ರವಲ್ಲ, ಸಮಾಜಕ್ಕೆ ಒಳಿತು ಬಯಸುವ ಸೂಕ್ಷ್ಮ ಹೃದಯ ಇರುವ ಅದ್ಭುತ ಮನುಷ್ಯ" ಎಂದರು


ಸುರಕ್ಷಿತ ಆಹಾರ ಮತ್ತು ಸುಸ್ಥಿರ ಆಹಾರ ಪದ್ಧತಿಗಳ ಮೂಲಕ ಆರೋಗ್ಯಕರ ಭಾರತವನ್ನು ರೂಪಿಸುವಲ್ಲಿ ಜನರು ನೀಡಿದ ಬೆಂಬಲಕ್ಕೆ ಕೊಹ್ಲಿ ಧನ್ಯವಾದ ಅರ್ಪಿಸಿದರು.


ಶೀಘ್ರದಲ್ಲೇ ಭಾರತವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲು ವಿರಾಟ್ ಕೊಹ್ಲಿಯಂತಹ ಪ್ರಸಿದ್ಧ ವ್ಯಕ್ತಿಗಳ ಅನುಮೋದನೆಯು ಸಹಾಯ ಮಾಡುತ್ತದೆ ಎಂದು ಅಗರ್ವಾಲ್ ಅಭಿಪ್ರಾಯ ಪಟ್ಟರು.