ಆವೃತ್ತಿಗಳು
Kannada

ಕಬ್ಬು ಬೆಳೆಗಾರರ ಬಾಯಿಗೆ ಸಿಹಿ ಹಂಚಿದ ಹಳ್ಳಿ ಹೈದ : ದೇಶದ ಕೃಷಿಕರಿಗೆ ವರವಾದ ರೋಷನ್ ಲಾಲ್ ಅನ್ವೇಷಣೆ

ಟೀಮ್​ ವೈ.ಎಸ್​. ಕನ್ನಡ

20th Dec 2015
Add to
Shares
3
Comments
Share This
Add to
Shares
3
Comments
Share

ಭಾರತ ಕೃಷಿಯನ್ನೇ ನೆಚ್ಚಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಷ್ಟ್ರ. ಇಲ್ಲಿ ಅದೆಷ್ಟೋ ಮಂದಿ ರೈತರ ನಾಡಿಮಿಡಿತ ಕೃಷಿ. ಯಾಂತ್ರಿಕತೆ ಹಾಗೂ ತಾಂತ್ರಿಕತೆ ಮೇಲೆ ಜನಜೀವನ ಹೆಚ್ಚು ಅವಲಂಬಿತವಾಗುತ್ತಿರುವಂತೆ ಕೃಷಿಯೂ ಹಲವು ಪ್ರಯೋಗ ಹಾಗೂ ಅನ್ವೇಷಣೆಗಳಿಗೆ ವೇದಿಕೆಯಾಗಿದೆ. ಈ ವಲಯದಲ್ಲೂ ಹತ್ತು ಹಲವು ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಅದ್ರಲ್ಲೂ ಆಧುನಿಕ ಕಾಲದ ರೈತ ತನ್ನ ಕೃಷಿ ಚಟುವಟಿಕೆಗಳಿಗೆ ನೆರವಾಗುವಂತೆ ಸ್ವತಃ ಮಾರ್ಪಾಡುಗಳನ್ನ ತಂದುಕೊಳ್ಳುತ್ತಿದ್ದಾನೆ. ಅಲ್ಲದೆ ವಿವಿಧ ಸಲಕರಣೆಗಳನ್ನ ಕಂಡು ಹಿಡಿದು ಕೃಷಿ ಲೋಕಕ್ಕೆ ಸಮರ್ಪಿಸುತ್ತಿದ್ದಾನೆ. ಅದ್ರಲ್ಲೂ ಕನಿಷ್ಠ ಶಿಕ್ಷಣ ಜ್ಞಾನ ಹೊಂದಿರುವ ರೈತರೂ ತಮ್ಮ ಪ್ರತಿಭೆಯಿಂದಲೇ ವಿಶಿಷ್ಠ ಸಲಕರಣೆಗಳನ್ನ ಕಂಡುಹಿಡಿದು ಅಚ್ಚರಿ ಮೂಡಿಸುತ್ತಿದ್ದಾರೆ. ಇಂತಹ ಸಾಲಿನಲ್ಲಿ ಗುರುತಿಸಿಕೊಳ್ಳುವ ರೈತ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಮೆಖ್ ಗ್ರಾಮದ ರೋಷನ್ ಲಾಲ್ ವಿಶ್ವಕರ್ಮ. ಏಕಾಂಗಿಯಾಗಿ ಕಬ್ಬು ಪ್ಲಾಂಟೇಶನ್ ಮಾಡುವ ಸರಳ ಯಂತ್ರವನ್ನ ನಿರ್ಮಿಸಿ ಇಡೀ ದೇಶದ ರೈತರಿಗೆ ಮಾದರಿಯಾಗಿದ್ದಾರೆ.

image


ಕಬ್ಬು ಪ್ಲಾಂಟೇಶನ್ ಗೆ ಕೆಲವು ಸರಳ ಸೂತ್ರಗಳನ್ನ ಅಳವಡಿಸಿಕೊಂಡಿರುವ ರೋಷನ್ ಲಾಲ್, ಸಿರಿವಂತರ ಹಳೇ ಕೃಷಿ ಸಂಪ್ರದಾಯಗಳಿಗೆ ಗುಡ್ ಬೈ ಹೇಳಿದ್ದಾರೆ. ಇವರು ಕಂಡು ಹಿಡಿದಿರುವ ಯಂತ್ರ ಸಣ್ಣ ಕೃಷಿಕರಿಗೆ ಬಹಳಷ್ಟು ಲಾಭದಾಯಕವಾಗಿದ್ದು, ಅವರ ಮೂಲ ಬಂಡವಾಳ, ಸಮಯ ಹಾಗೂ ಶ್ರಮವನ್ನ ಉಳಿಸುತ್ತಿದೆ. ಅಲ್ಲದೆ ಕಬ್ಬು ಪ್ಲಾಂಟೇಶನ್ ಗೂ ಮೊದ್ಲು ನೆಲವನ್ನು ಹಸನುಗೊಳಿಸಿ ಕಳೆ – ಗಂಟಿಗಳನ್ನ ಕೀಳಲು ಸಹಾಯಕವಾಗುವ ಕಡಿಮೆ ವೆಚ್ಚದ ಯಂತ್ರವನ್ನೂ ರೋಷನ್ ಲಾಲ್ ವಿಶ್ವಕರ್ಮ ಆವಿಷ್ಕರಿಸಿದ್ದಾರೆ. ಈ ಮೂಲಕ ಭಾರತದ ಅಸಂಖ್ಯಾತ ಕೃಷಿಕರಿಗೆ ರೋಷನ್ ಲಲ್ ನೆರವಾಗಿದ್ದಾರೆ. ಆದ್ರೆ ಕನಿಷ್ಠ ಶಿಕ್ಷಣ ಪಡೆದಿರುವ ರೋಷನ್ ಲಾಲ್ ಒಬ್ಬ ಕೃಷಿಕನಾಗಿ ಇನ್ನಿಲ್ಲದ ಸಂಕಷ್ಟಗಳನ್ನ ಎದುರಿಸಬೇಕಾಯ್ತು.

ಸಣ್ಣ ವಯಸ್ಸಿನಲ್ಲೇ ಶಾಲಾ ಶಿಕ್ಷಣದಿಂದ ವಂಚಿತರಾದ ರೋಷನ್ ಲಾಲ್ ವಿಶ್ವಕರ್ಮ ತಮ್ಮ ಕುಟುಂಬದ ಸಾಂಪ್ರದಾಯಿಕ ಕೃಷಿಗೇ ಜೋತು ಬೀಳುವ ಅನಿವಾರ್ಯತೆ ಇತ್ತು. ಆದ್ರೆ ಕಬ್ಬು ಬೆಳೆಯಲ್ಲಿ ಭರ್ಜರಿ ಲಾಭ ಪಡೆಯಬಹುದು ಅಂತ ವಿಶ್ವಕರ್ಮರಿಗೆ ಅನ್ನಿಸಿದ್ರೂ, ಕುಟುಂಬದ ಅದೇ ಹಳೇ ಕೃಷಿ ಪದ್ಧತಿ ಅಡ್ಡಗಾಲಾಗುತ್ತಿತ್ತು. ಅಲ್ಲದೆ ಶ್ರೀಮಂತ ಕೃಷಿಕರು ಶ್ರೀಮಂತರಾಗಿ, ಬಡ ಕೃಷಿಕರು ಸದಾ ಬಡವರಾಗೇ ಇದ್ದಿದ್ದನ್ನೂ ಇವರು ಗಮನಿಸುತ್ತಿದ್ದರು. ಜೊತೆಗೆ ಸದಾ ನಷ್ಟಕ್ಕೆ ತುತ್ತಾಗುತ್ತಿದ್ದ ಸಣ್ಣ ಕೃಷಿಕರು ತಮ್ಮ ಭೂಮಿಯನ್ನ ಶ್ರೀಮಂತರಿಗೆ ಮಾರಿ ನಂತ್ರ ಅವರದ್ದೇ ಜಾಗದಲ್ಲಿ ಕೂಲಿಗಳಾಗಿ ದುಡಿಯುವುದು ಸರ್ವೇ ಸಾಮಾನ್ಯವಾಗಿತ್ತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು ಅಂತ ನಿರ್ಧರಿಸಿದ್ದ ರೋಷನ್ ಲಾಲ್ ವಿಶ್ವಕರ್ಮ ಕೃಷಿಗೆ ಸಂಬಂಧಸಿದ ಪ್ರಯೋಗಗಳಿಗೆ ಮುಂದಾದ್ರು.

image


“ ಆಲೂಗಡ್ಡೆ ಬೆಳೆಯುತ್ತಿದ್ದ ಜಾಗದಲ್ಲಿ ನಾನು ಕಬ್ಬನ್ನ ಬೆಳೆಯುವ ಪ್ರಯತ್ನ ನಡೆಸಿದೆ. ನನ್ನ ಎರಡು ಎಕರೆ ಕೃಷಿ ಭೂಮಿಯಲ್ಲಿ ಎರಡು ವರ್ಷಗಳ ಕಾಲ ಪ್ರಯೋಗಗಳನ್ನ ನಡೆಸಿದೆ. ಕೊನೆಗೂ ನಾನಂದುಕೊಂಡಿದ್ದ ಫಲವನ್ನ ಅದು ಕೊಟ್ಟಿದೆ ” ಅಂತ ಪ್ರಗತಿ ಪರ ಕೃಷಿಕ ರೋಷನ್ ಲಾಲ್ ವಿಶ್ವಕರ್ಮ ತಮ್ಮ ಪ್ರಯೋಗಗಳನ್ನ ನೆನಪಿಸಿಕೊಳ್ಳುತ್ತಾರೆ. ವಿಶೇಷ ಅಂದ್ರೆ ರೋಷನ್ ಅವರ ಈ ಪ್ರಯೋಗ ಭರ್ಜರಿಯಾಗಿ ಯಶಸ್ಸು ಕಾಣುವ ಜೊತೆಗೆ ಊಹಿಸಿದಕ್ಕಿಂತ ಶೇಕಡಾ 20ರಷ್ಟು ಹೆಚ್ಚು ಪ್ರಮಾಣದಲ್ಲಿ ಕಬ್ಬು ಬೆಳೆಯಲ್ಪಟ್ಟಿತ್ತು. ಪ್ರತೀ ಎಕರೆಗೆ 35 ರಿಂದ 40 ಕ್ವಿಂಟಲ್ ಕಬ್ಬು ಬೆಳೆದಿದ್ರು. ಅದೇ ಇತರೆ ಕೃಷಿಕರು ತಮ್ಮ ಭೂಮಿಯಲ್ಲಿ ಕಬ್ಬು ಬೆಳೆದಿದ್ರೂ, ಅದ್ರಿಂದ ಕೂಲಿ ಕೊಡುವಷ್ಟು ದುಡ್ಡೂ ಅವರಿಗೆ ಸಿಕ್ಕಿರಲಿಲ್ಲ ಅನ್ನೋದು ವಾಸ್ತವ. ಹೀಗಾಗಿ ಸಣ್ಣ ಕೃಷಿಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ರೋಷನ್ ಲಾಲ್ ವಿಶ್ವಕರ್ಮ ಅವರದ್ದು ಅದ್ಭುತ ಸಾಧನೆ.

ಮೆಕ್ ಗ್ರಾಮದಲ್ಲಿ ಬೇರು ಬಿಟ್ಟಿದ್ದ ಹಳೇಯ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನ ಕೇವಲ ರೋಷನ್ ಲಾಲ್ ಒಬ್ಬರೇ ಏಕಾಂಗಿಯಾಗಿ ಬದಲಾಯಿಸಿದ್ದಾರೆ. ರೋಷನ್ ಅವರ ಈ ಯಶೋಗಾಥೆ ಕ್ರಮೇಣ ಇಡೀ ಹಳ್ಳಿಯಲ್ಲಿ ಹಬ್ಬಿದ್ದು, ಇತರೆ ಕೃಷಿಕರೂ ಅವರ ಪ್ರಯೋಗಗಳನ್ನ ಅಳವಡಿಸಿಕೊಂಡು ಬೆಳೆಯಲ್ಲಿ ಭರ್ಜರಿ ಲಾಭ ಪಡೆದಿದ್ದಾರೆ. ತನ್ನಂತೆ ಇತರರೂ ಲಾಭ ಕಾಣಬೇಕು ಅನ್ನುವುದು ರೋಷನ್ ಲಾಲ್ ವಿಶ್ವಕರ್ಮ ಅವರ ಆಶಯ. ಹೀಗಾಗಿ ತಾವು ಕಂಡುಹಿಡಿದಿರುವ ಸಲಕರಣೆಗಳನ್ನು ಎಲ್ಲಾ ಕೃಷಿಕರೂ ಬಳಸಬೇಕು ಅಂತ ಆಶಿಸಿದ್ರು. ಇದ್ರ ಪರಿಣಾಮ ರೋಷನ್ ಲಾಲ್ ಕಂಡುಹಿಡಿದಿರುವ ಕಬ್ಬು ಪ್ಲಾಂಟೇಶನ್ ಯಂತ್ರ ಇದೀಗ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಒರಿಸ್ಸಾ, ಹರ್ಯಾಣ, ಉತ್ತರ ಪ್ರದೇಶ ಹಾಗೂ ಛತ್ತೀಸ್ ಗಢ ರಾಜ್ಯದ ರೈತರಿಗೆ ವರದಾನವಾಗಿದೆ. ಈ ರಾಜ್ಯಗಳ ರೈತರು ಕಬ್ಬು ಬೆಳೆಯಲ್ಲಿ ಹೊಸ ಮಾದರಿಯನ್ನ ಅಳವಡಿಸಿಕೊಂಡು ಭರ್ಜರಿ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೆ ದೇಶದ ಬಹುತೇಕ ರಾಜ್ಯಗಳಲ್ಲಿ ರೋಷನ್ ಲಾಲ್ ಯಂತ್ರವನ್ನೇ ಬಳಸಿಕೊಳ್ಳುತ್ತಿದ್ರೂ, ಅದು ಅವರಿಗೆ ಅಷ್ಟಕ್ಕೇ ಸಮಾಧಾನ ನೀಡಿರಲಿಲ್ಲ. ತಾವು ತಯಾರಿಸಿದ ಯಂತ್ರದಲ್ಲಿ ಇನ್ನಷ್ಟು ಸುಧಾರಣೆ ತರಬೇಕು, ಅದರ ವೆಚ್ಚ ಇನ್ನಷ್ಟು ತಗ್ಗಿಸಬೇಕು ಅಂತ ಯೋಚಿಸಿ ಕೆಲವು ಮಾರ್ಪಾಡುಗಳನ್ನ ತಂದರು. ಅಲ್ಲದೆ ಕಡಿಮೆ ವೆಚ್ಚಕ್ಕೆ ಕಬ್ಬು ಕಟಾವಿನ ಯಂತ್ರವನ್ನೂ ರೈತರಿಗೆ ಪರಿಚಯಿಸಿದ್ರು. ಹಾಗಂತ ರೋಷನ್ ಲಾಲ್ ಕೇವಲ ತನ್ನ ಐಡಿಯಾದಂತೆ ಯಂತ್ರಗಳನ್ನ ರೂಪಿಸಲಿಲ್ಲ. ಬದಲಾಗಿ ಕೃಷಿ ತಜ್ಞರನ್ನ ಸಂಪರ್ಕಿಸಿ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ರು. ಸ್ಥಳೀಯ ವರ್ಕ್ ಶಾಪ್ ಗಳಲ್ಲಿ ಭಾಗವಹಿಸಿ ರೈತರೊಂದಿಗೆ ಸಮಾಲೋಚನೆ ನಡೆಸುತ್ತಿದ್ರು. ಹೀಗಾಗಿ ಹಲವು ಬದಲಾವಣೆಗಳ ನಂತರ ಇವರ ಯಂತ್ರ ಕೇವಲ 1 ಗಂಟೆಯಲ್ಲಿ 400 ಕಬ್ಬುಗಳನ್ನ ಕಟಾವು ಮಾಡುವ ಸಾಮರ್ಥ್ಯ ಪಡೆಯಿತು. ಇಷ್ಟೆಲ್ಲಾ ರೈತರಿಗೆ ಲಾಭ ಮಾಡಿಕೊಟ್ಟಿರುವ ರೋಷನ್ ಲಾಲ್ ರೂಪಿಸಿರುವ ಯಂತ್ರದ ಬೆಲೆ ಕೇವಲ 1500 ರೂಪಾಯಿ ಅನ್ನೋದು ವಿಶೇಷ.

ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ರೋಷನ್ ಲಾಲ್ ವಿಶ್ವಕರ್ಮ ಗಂಟೆಗೆ 2000 ಕಬ್ಬುಗಳನ್ನ ಕಟಾವು ಮಾಡುವ ವಿದ್ಯುತ್ ಚಾಲಿತ ಯಂತ್ರವನ್ನೂ ಕಂಡುಹಿಡಿದಿದ್ದಾರೆ. ಇದಕ್ಕೆ ದೊಡ್ಡ ಮಟ್ಟದ ಕೃಷಿಕರಿಂದ, ಶುಗರ್ ಮಿಲ್ ಗಳ ಮಾಲಿಕರಿಂದ ಹಾಗೂ ನರ್ಸರಿಗಳಿಂದ ಹೆಚ್ಚು ಬೇಡಿಕೆ ಬಂದಿರೋದು ವಿಶೇಷ. ಆದ್ರೆ ಈ ಯಂತ್ರದ ಬೆಲೆ ಸದ್ಯಕ್ಕೆ 1 ಲಕ್ಷ 20 ಸಾವಿರ ರೂಪಾಯಿ ಇದ್ದು, ಸಂಬಂಧ ಪಟ್ಟ ಇಲಾಖೆಯ ಅಧಿಕಾರಗಳು ಸಹಕಾರ ಕೊಟ್ರೆ, ಯಂತ್ರವನ್ನ ಕಡಿಮೆ ಬೆಲೆಗೆ ರೈತರಿಗೆ ನೀಡಬಹುದು ಅನ್ನುವುದು ರೋಷನ್ ಅವರ ಅಭಿಪ್ರಾಯ. ಹೀಗೆ ದೇಶದ ಕಬ್ಬು ಬೆಳಗಾರರ ಪಾಲಿನ ವರದಂತಿರುವ ರೋಷನ್ ಲಾಲ್ ವಿಶ್ವಕರ್ಮರ ಯಂತ್ರ ಆಧುನಿಕ ಶೈಲಿಯ ಕೃಷಿ ಪದ್ಧತಿಯಲ್ಲಿ ಪವಾಡವನ್ನೇ ಸೃಷ್ಠಿಸಿದೆ.

ಲೇಖಕರು – ಸೌರವ್ ರಾಯ್

ಅನುವಾದಕರು – ಬಿ ಆರ್ ಪಿ ಉಜಿರೆ

Add to
Shares
3
Comments
Share This
Add to
Shares
3
Comments
Share
Report an issue
Authors

Related Tags