ಮನೆಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ಊಟ ನೀಡುತ್ತಿದೆ ಬಿಹಾರ್‌ನ ಈ ಧಾಬಾ

ಆದಿತ್ಯ ರಾಜ್‌ ಧಾಬಾ ಪ್ರತಿದಿನ 500 ರಿಂದ 700 ಜನರ ಹಸಿವು ನೀಗಿಸುತ್ತಿದೆ.

ಮನೆಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಉಚಿತವಾಗಿ ಊಟ ನೀಡುತ್ತಿದೆ ಬಿಹಾರ್‌ನ ಈ ಧಾಬಾ

Thursday May 21, 2020,

1 min Read

ಕೊರೊನಾವೈರಸ್‌ ಮಹಾಮಾರಿ ತಂದೊಡ್ಡಿರುವ ಲಾಕ್‌ಡೌನ್‌ ಹಲವು ವಲಸಿಗರನ್ನು ಭಾರತದ ಬೇರೆ ಬೇರೆ ನಗರಗಳಲ್ಲಿ ಸಿಲುಕಿಸಿದೆ. ಕೆಲವರು ಮನೆಗೆ ಮರಳಬೇಕೆಂಬ ಆಸೆಯಿಂದ ನಡೆದುಕೊಂಡೇ ಹೋಗುತ್ತಿದ್ದಾರೆ.


ಉತ್ತರಪ್ರದೇಶದಿಂದ ಆಹಾರವಿಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಲಸಿಗರಿಗೆ ಉತ್ತರ ಪ್ರದೇಶ ಮತ್ತು ಬಿಹಾರ್‌ ನ ಗಡಿಯಲ್ಲಿರುವ ಒಂದು ಧಾಬಾ ಊಟದ ವ್ಯವಸ್ಥೆ ಮಾಡುತ್ತಿದೆ.


ಸರನ್‌ ಜಿಲ್ಲೆಯಲ್ಲಿರುವ ಆದಿತ್ಯ ರಾಜ್‌ ಧಾಬಾ ಪ್ರತಿದಿನ ಸುಮಾರು 500 ರಿಂದ 700 ಜನರಿಗೆ ಉಚಿತವಾಗಿ ಊಟ ನೀಡುತ್ತಿದೆ. ರಸ್ತೆ ಪಕ್ಕದಲ್ಲಿರುವ ತಮ್ಮ ಧಾಬಾವನ್ನು ಲಂಗರ್(ಸಿಖ್‌ರ ಉಚಿತವಾದ ಅಡುಗೆ ಮನೆ) ಆಗಿ ಪರಿವರ್ತಿಸಿದ ಬಸಂತ್‌ ಸಿಂಘ್‌, ಗಲ್ಲಾಪೆಟ್ಟಿಗೆಗೆ ಬೀಗ ಹಾಕಿ ಹಸಿದವರಿಗೆ ಆಹಾರ ನೀಡುತ್ತಿದ್ದಾರೆ.


“ಲಾಕ್‌ಡೌನ್‌ ಶುರುವಾದಾಗಿನಿಂದ ಪ್ರತಿದಿನ ಉತ್ತರ ಪ್ರದೇಶದಿಂದ ದೊಡ್ಡ ಸಂಖೈಯಲ್ಲಿ ಕಾರ್ಮಿಕರು ಬಿಹಾರ್‌ ಮತ್ತು ಜಾರ್ಖಂಡ್‌ಗೆ ತೆರಳುತ್ತಿದ್ದಾರೆ. ಕಾರ್ಮಿಕರ ತಂಡವೊಂದು 17 ದಿನಗಳ ಹಿಂದೆ ಬಂದು ಊಟ ಕೇಳಿದರು, ಅವರ ಬಳಿ ಹಣವಿರಲಿಲ್ಲ. ಅವರ ಹಸಿವನ್ನು ನೀಗಿಸುವುದರಲ್ಲಿ ನನಗೆ ತೃಪ್ತಿ ಕಾಣಿಸಿತು, ಆಗಿನಿಂದ ಈ ಕೆಲಸ ನಡೆಯುತ್ತಿದೆ,” ಎಂದರು ಬಸಂತ್‌ ಸಿಂಗ್‌, ವರದಿ ಐಎಎನ್‌ಎಸ್‌.


ದೇಶವ್ಯಾಪಿ ಲಾಕ್‌ಡೌನ್‌ನಿಂದ ಮನೆಗೆ ಮರಳುತ್ತಿರುವ ವಲಸೆ ಕಾರ್ಮಿಕರು (ಚಿತ್ರ: ಪಿಟಿಐ)




ಬೆಳಿಗ್ಗೆ ಬರುವ ಕಾರ್ಮಿಕರಿಗೆ ಬೆಲ್ಲ ಮತ್ತು ಅನ್ನವನ್ನು ನೀಡಲಾಗುತ್ತಿದ್ದು, ಮಧ್ಯಾಹ್ನ ಮತ್ತು ರಾತ್ರಿಗೆ ಅನ್ನ, ಬೇಳೆಕಾಳು ಮತ್ತು ತರಕಾರಿಯ ಆಹಾರವನ್ನು ಕೊಡಲಾಗುತ್ತಿದೆ. ಧಾಬಾದಲ್ಲಿ ಅಡುಗೆ ಮಾಡುವ ಭಟ್ಟರು ಇದು ಸಮಾಜ ಸೇವೆ ಎಂದು ತಿಳಿದು ತಮ್ಮ ಕೆಲಸಕ್ಕೆ ಹಣಪಡೆಯುವುದನ್ನು ನಿಲ್ಲಿಸಿದ್ದಾರೆ.


ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮೋಹನ್‌ ಎಂಬ ವಲಸಿಗ ತಾನು ದೆಹಲಿಯಿಂದ ಬರುತ್ತಿದ್ದೇನೆ, ತುಂಬಾ ಜನರು ನಮಗೆ ದಾರಿಯಲ್ಲಿ ಪೂರಿ, ಕಚೋರಿ ಮತ್ತು ಅನೇಕ ತಿಂಡಿಗಳನ್ನು ನೀಡಿದ್ದಾರೆ. ಆದರೆ ದಾಲ್‌-ಚಾವಲ್‌ ನ ಸಂಪೂರ್ಣವಾದ ಊಟ ಸಿಂಗ್‌ ಅವರ ಧಾಬಾದಲ್ಲೆ ದೊರಕಿದೆ,

“ಸಿಂಗ್‌ ಅವರು ನೀಡಿದ ಊಟದಿಂದ ನನ್ನ ಹೊಟ್ಟೆ ತುಂಬಿತು. ಬಹಳ ದಿನಗಳ ಮೇಲೆ ಈ ತರಹದ ರುಚಿಕರವಾದ ಊಟ ಮಾಡುತ್ತಿದ್ದೇನೆ,” ಎಂದರು ಮೋಹನ, ವರದಿ ಎಡೆಕ್ಸ್‌ ಲೈವ್‌.