ಕೊರೊನಾವೈರಸ್: ಆರೋಗ್ಯ ವೃತ್ತಿಪರರಿಗಾಗಿ ಸೋಂಕುನಿವಾರಣಾ ಕೊಠಡಿ ಮತ್ತು ವಿಶೇಷ ಮುಖವಾಡವನ್ನು ಸಿದ್ಧಪಡಿಸಿದ ಡಿಆರ್‌ಡಿಒ

‘ಪಿಎಸ್‌ಇ' ಎಂಬ ವಿಶೇಷ ಕೊಠಡಿಯನ್ನು ಸಿಬ್ಬಂದಿಗಳನ್ನು ಸೋಂಕುಮುಕ್ತ ಮಾಡಲು ವಿನ್ಯಾಸಗೊಳಿಸಲಾಗಿದೆ. ಶುಚಿಗೊಳಿಸುವ ಈ ವ್ಯವಸ್ಥೆ ಸ್ಯಾನಿಟೈಸರ್ ಮತ್ತು ಸೋಪ್ ವಿತರಕವನ್ನು ಹೊಂದಿದ ಪೋರ್ಟಬಲ್ ವ್ಯವಸ್ಥೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾವೈರಸ್: ಆರೋಗ್ಯ ವೃತ್ತಿಪರರಿಗಾಗಿ ಸೋಂಕುನಿವಾರಣಾ ಕೊಠಡಿ ಮತ್ತು ವಿಶೇಷ ಮುಖವಾಡವನ್ನು ಸಿದ್ಧಪಡಿಸಿದ ಡಿಆರ್‌ಡಿಒ

Monday April 06, 2020,

2 min Read

ಕೋವಿಡ್-19 ರ ವಿರುದ್ಧ ಹೋರಾಡುವ ಪ್ರಯತ್ನಗಳಿಗೆ ಕೈ ಜೋಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪೂರ್ಣ-ದೇಹದ ಸೋಂಕುನಿವಾರಣಾ ಕೊಠಡಿ ಮತ್ತು ಆರೋಗ್ಯ ವೃತ್ತಿಪರರಿಗೆ ವಿಶೇಷ ಮುಖ ರಕ್ಷಣೆಯ ಮುಖವಾಡವನ್ನು ವಿನ್ಯಾಸಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


‘ಪಿಎಸ್‌ಇ' ಎಂಬ ವಿಶೇಷ ಕೊಠಡಿಯನ್ನು ಡಿಆರ್‌ಡಿಒ ಪ್ರಯೋಗಾಲಯದ ಅಹಮದ್‌ನಗರದ ವಾಹನ ಸಂಶೋಧನಾ ಅಭಿವೃದ್ಧಿ ಸ್ಥಾಪನೆ (ವಿಆರ್‌ಡಿಇ) ವಿನ್ಯಾಸಗೊಳಿಸಿದೆ.


ಕೊಠಡಿಯ ಮೂಲಕ ನಡಿಗೆಯಲ್ಲಿ ಸಿಬ್ಬಂದಿ ತಮ್ಮನ್ನು ಶುಚಿಗೊಳಿಸಲು ಹಾದುಹೋಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಉಪಯೋಗಿಸುವ ಹಾಗೆ ತಯಾರಿಸಲಾಗಿದೆ. ಇದು ಸ್ಯಾನಿಟೈಸರ್ ಮತ್ತು ಸೋಪ್ ವಿತರಕವನ್ನು ಹೊಂದಿದ ಪೋರ್ಟಬಲ್ ವ್ಯವಸ್ಥೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕೃಪೆ: ಟ್ವಿಟರ್

ಪ್ರವೇಶದ್ವಾರದಲ್ಲಿ ಕಾಲು ಪೆಡಲ್ ಬಳಸಿ ತಮ್ಮನ್ನು ತಾವು ಶುಚಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಬಹುದಾಗಿದೆ. ಕೋಣೆಗೆ ಪ್ರವೇಶಿಸಿದಾಗ, ವಿದ್ಯುತ್ ಚಾಲಿತ ಪಂಪ್ ಸೋಂಕುನಿವಾರಕಕ್ಕಾಗಿ ಹೈಪೋ ಸೋಡಿಯಂ ಕ್ಲೋರೈಡ್‌ನ ಸೋಂಕುನಿವಾರಕ ಮಂಜನ್ನು ಸೃಷ್ಟಿಸುತ್ತದೆ ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.


ಮಂಜಿನ ಸಿಂಪಡಣೆಯನ್ನು 25 ಸೆಕೆಂಡುಗಳವರೆಗೆ ಸಿಂಪಡಿಸುವಂತೆ ನಿಗದಿ ಮಾಡಲಾಗುತ್ತದೆ ಮತ್ತು ಕಾರ್ಯಾಚರಣೆಯ ಪೂರ್ಣಗೊಂಡ ನಂತರ ಅದು ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಕಾರ್ಯವಿಧಾನದ ಪ್ರಕಾರ, ಸೋಂಕುನಿವಾರಣೆಗೆ ಒಳಗಾಗುವ ಸಿಬ್ಬಂದಿ ಕೋಣೆಯೊಳಗೆ ಇರುವಾಗ ಕಣ್ಣು ಮುಚ್ಚಿರಬೇಕಾಗುತ್ತದೆ ಎಂದು ಹೇಳಲಾಗಿದೆ.


ಈ ವ್ಯವಸ್ಥೆಯು ಒಟ್ಟು 700 ಲೀಟರ್ ಸಾಮರ್ಥ್ಯದೊಂದಿಗೆ ಮೇಲ್ಚಾವಣಿ ಮತ್ತು ಕೆಳಭಾಗದ ಟ್ಯಾಂಕ್‌ಗಳನ್ನು ಒಳಗೊಂಡಿದೆ. ಒಮ್ಮೆ ವ್ಯವಸ್ಥೆಯನ್ನು ಭರ್ತಿ ಮಾಡಿದರೆ ಸುಮಾರು 650 ಬಾರಿ ಸಿಬ್ಬಂದಿ ಕೋಣೆಯನ್ನು ಉಪಯೋಗಿಸಬಹುದು.


ಮೇಲ್ವಿಚಾರಣಾ ಉದ್ದೇಶಕ್ಕಾಗಿ ಈ ವ್ಯವಸ್ಥೆಯು ಪಕ್ಕದ ಗೋಡೆಗಳ ಮೇಲೆ ಪಾರದರ್ಶಕ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ ಮತ್ತು ರಾತ್ರಿಯ ಸಮಯದಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ ದೀಪಗಳನ್ನು ಅಳವಡಿಸಲಾಗಿದೆ.


ಆಸ್ಪತ್ರೆಗಳು, ಮಾಲ್‌ಗಳು, ಕಚೇರಿ ಮತ್ತು ಕಟ್ಟಡಗಳ ನಿಯಂತ್ರಿತ ಪ್ರವೇಶ ಮತ್ತು ನಿರ್ಗಮನ ಪ್ರದೇಶಗಳಲ್ಲಿ ಸಿಬ್ಬಂದಿಗಳ ಸೋಂಕುನಿವಾರಣೆಗೆ ಈ ವ್ಯವಸ್ಥೆಯನ್ನು ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅಲ್ಲದೆ, ಹೈದರಾಬಾದ್‌ನ ಸಂಶೋಧನಾ ಕೇಂದ್ರ ಇಮರತ್ (ಆರ್‌ಸಿಐ) ಮತ್ತು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (ಟಿಬಿಆರ್ಎಲ್), ಕೋವಿಡ್-19 ರೋಗಿಗಳನ್ನು ಉಪಚರಿಸುವ ಆರೋಗ್ಯ ವೃತ್ತಿಪರರಿಗೆ ಮುಖ ಸಂರಕ್ಷಣಾ ಮುಖವಾಡವನ್ನು ಅಭಿವೃದ್ಧಿಪಡಿಸಿದೆ ಎಂದು ಡಿಆರ್‌ಡಿಒ ಹೇಳಿದೆ.


ಈ ಮುಖವಾಡಗಳ ಹಗುರವಾದ ಗುಣವು ದೀರ್ಘಕಾಲದವರೆಗೆ ಉಪಯೋಗಿಸಲು ಆರಾಮದಾಯಕ ಮತ್ತು ಅನುಕೂಲಕರವಾಗಿದೆ. ಈ ವಿನ್ಯಾಸವು ಮುಖದ ರಕ್ಷಣೆಗಾಗಿ ಸಾಮಾನ್ಯವಾಗಿ ಲಭ್ಯವಿರುವ ಎ 4 ಗಾತ್ರದ ಓವರ್-ಹೆಡ್ ಪ್ರೊಜೆಕ್ಷನ್ (ಒಎಚ್‌ಪಿ) ಫಿಲ್ಮ್ ಅನ್ನು ಬಳಸುತ್ತದೆ ಎಂದು ಅದು ಹೇಳಿದೆ.


ಟಿಬಿಆರ್‌ಎಲ್‌ನಲ್ಲಿ ಪ್ರತಿದಿನ ಒಂದು ಸಾವಿರ ಮುಖವಾಡಗಳನ್ನು ಉತ್ಪಾದಿಸಲಾಗುತ್ತಿದೆ ಮತ್ತು ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಪಿಜಿಐಎಂಇಆರ್) ಒದಗಿಸಲಾಗುತ್ತಿದೆ ಎಂದು ಅದು ಹೇಳಿದೆ.


ಅಂತೆಯೇ, 100 ಮುಖವಾಡಗಳನ್ನು ಆರ್‌ಸಿಐನಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇವುಗಳನ್ನು ಹೈದರಾಬಾದ್‌ನ ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) ಹಸ್ತಾಂತರಿಸಲಾಗುತ್ತಿದೆ. ಯಶಸ್ವಿ ಬಳಕೆದಾರರ ಪ್ರಯೋಗಗಳ ಆಧಾರದ ಮೇಲೆ ಪಿಜಿಐಎಂಇಆರ್ ಮತ್ತು ಇಎಸ್ಐಸಿ ಆಸ್ಪತ್ರೆಗಳಿಂದ 10,000 ಮುಖವಾಡಗಳ ಬೇಡಿಕೆಯನ್ನು ಸ್ವೀಕರಿಸಲಾಗಿದೆ ಎಂದು ಡಿಆರ್‌ಡಿಒ ಹೇಳಿದೆ.