ಪ್ಲಾಸ್ಟಿಕ್ ಸ್ಟ್ರಾಗೆ ಪರ್ಯಾಯವಾಗಿ ಬಂದವು ಪರಿಸರ ಸ್ನೇಹಿ ಹರಳೆ ಸ್ಟ್ರಾ

ಪ್ಲಾಸ್ಟಿಕ್‌ ಸಮಸ್ಯೆಗೆ ಅದೆಷ್ಟೇ ಪರಿಹಾರಗಳಿದ್ದರೂ ಸಮಸ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ದಿನನಿತ್ಯದ ಬಳಕೆಯಲ್ಲಿ ಸ್ಟ್ರಾಗಳ ಪಾತ್ರ ಬಹಳಷ್ಟಿದೆ. ಸ್ಟ್ರಾಗಳಲ್ಲಿ ಹಲವಾರು ಥರವಿದ್ದು, ಇವೆಲ್ಲವಕ್ಕಿಂತ ಕಡಿಮೆ ವೆಚ್ಚದ, ಪರಿಸರ ಸ್ನೇಹಿಯಾದ ಸ್ಟ್ರಾ ತಯಾರಿಸಿದ್ದಾರೆ ಶಿವ ಮಂಜೇಶ್‌.

ಪ್ಲಾಸ್ಟಿಕ್ ಸ್ಟ್ರಾಗೆ ಪರ್ಯಾಯವಾಗಿ ಬಂದವು ಪರಿಸರ ಸ್ನೇಹಿ ಹರಳೆ ಸ್ಟ್ರಾ

Saturday October 26, 2019,

2 min Read

ಸ್ಟ್ರಾಗಳು ಜ್ಯೂಸ್‌ ಸ್ಟಾಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಹಾಗೂ ಅತೀ ಹೆಚ್ಚಾಗಿ ತೆಂಗಿನ ಕಾಯಿ ವ್ಯಾಪಾರದಲ್ಲಿ ಬಳಕೆಯಾಗುತ್ತವೆ.


ದಿನವೊಂದಕ್ಕೆ ಖರ್ಚಾಗುವ ಸಾವಿರಾರು ತೆಂಗಿನ/ಎಳನೀರಿನ ಜೊತೆಗೆ ಅಷ್ಟೇ ಪ್ಲಾಸ್ಟಿಕ್‌ ಸ್ಟ್ರಾಗಳೂ ಬಳಸಲ್ಪಡುತ್ತವೆ. ಪ್ಲಾಸ್ಟಿಕ್‌ ಹೆಚ್ಚಾಗಲು ಪರಿಸರಪೂರಕವಾದ ಎಳನೀರು ಕಾರಣವಾಗುವುದು ವಿಪರ್ಯಾಸವೇ ಸರಿ.


ಅಂಗಡಿಗಳಿಗೆ ಸ್ಟ್ರಾ ವಿತರಿಸಿದ ಮಂಜೇಶ್‌ (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)


ಪ್ಲಾಸ್ಟಿಕ್‌ ಸ್ಟ್ರಾ ಬಿಡಿ, ಹರಳೆ ಗಿಡದ ಕಾಂಡ ಬಳಸಿ

ಬೆಂಗಳೂರಿನಲ್ಲಿ ಕಂಟ್ರಾಕ್ಟರ್‌ ಆಗಿರುವ ಶಿವ ಮಂಜೇಶ್ ಹಾಗೂ ಜಗದೀಶ್‌ ಗೆಳೆಯರು ಹರಳೆ ಗಿಡದ ಕಾಂಡವನ್ನು ಸ್ಟ್ರಾ ರೀತಿಯಲ್ಲಿ ಬಳಸುವ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಇದು ಪರಿಸರಕ್ಕೆ ಪೂರಕವಾಗಿ ಬೇಗನೆ ಮಣ್ಣಿನಲ್ಲಿ ಕೊಳೆತುಹೋಗುತ್ತದೆ.


ಹರಳಿನ ಗಿಡದ ಕಾಂಡ ಬಳಸಿ ತಯಾರಿಸಿದ ಸ್ಟ್ರಾ ಬಗ್ಗೆ ಮಾಹಿತಿ ನೀಡುತ್ತ ಮಂಜೇಶ್‌,


“ಹಿಂದೆ ನಮ್ಮ ಹಳ್ಳಿಗಳಲ್ಲಿ ಪೂರ್ವಜರು ಎಳನೀರು ಕುಡಿಯಲು ಹೊಲದಲ್ಲಿ ಸಿಗುವ ಹರಳಿನ ಕಡ್ಡಿಯನ್ನು ಬಳಸುತ್ತಿದ್ದರು. ಕ್ರಮೇಣ ಪ್ಲಾಸ್ಟಿಕ್‌ ಬಳಕೆ ಬಂದ ಬಳಿಕ ಇದನ್ನು ಯಾರೂ ಉಪಯೋಗಿಸುತ್ತಿಲ್ಲ. ಇತ್ತೀಚೆಗೆ ಪ್ಲಾಸ್ಟಿಕ್‌ ಬಳಕೆ ನಿ಼ಷೇದಿಸಿದ ನಂತರ ಇವನ್ನು ಮತ್ತೆ ಬಳಕೆಗೆ ತರಬಹುದು ಎಂದು ಅನಿಸಿತು. ಹೀಗಾಗಿ ನಾವು ತುಮಕೂರಿನ ಬಳಿ ತೋಟದಲ್ಲಿ ಹರಳೆ ಗಿಡಗಳನ್ನು ಬೆಳೆಯುತಿದ್ದೇವೆ.”

ಹೇಗೆ ತಯಾರಾಗುತ್ತವೆ?

ಹರಳಿನ ಗಿಡಗಳು ಬೆಳೆದಾಗ ಅದರ ಕಾಂಡವು ಒಂದೂವರೆ ಅಡಿ ಉದ್ದವಿರುತ್ತದೆ. ಇದನ್ನು ಕತ್ತರಿಸಿದರೆ ಕೊಳವೆಯಾಕರಕ್ಕೆ ಬರುತ್ತದೆ. 4 ಎಂಎಂನಿಂದ 8 ಎಂಎಂನವರೆಗೆ ಅಗಲವಿರುತ್ತದೆ. ಅದನ್ನು ಬಿಸಿ ನೀರಿನ ಶಾಖಕ್ಕೆ ತಂದು, ಸ್ಟ್ರಾಗಳನ್ನಾಗಿ ತಯಾರಿಸಲಾಗುತ್ತದೆ.


ಹರಳೆಗಿಡ ಹಾಗೂ ಅದರಿಂದ ತಯಾರಾದ ಸ್ಟ್ರಾ (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)




ಪ್ರಯೋಗಾರ್ಥವಾಗಿ ಈ ಸ್ಟ್ರಾಗಳನ್ನು ಬೆಂಗಳೂರಿನ ಸ್ಯಾಂಕಿ ಟ್ಯಾಂಕಿನ ಸುತ್ತಮುತ್ತಲು ಹಂಚಿದ್ದಾರೆ. ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಜಗದೀಶ್,


“ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 800ಕ್ಕೂ ಹೆಚ್ಚು ಅಂಗಡಿಗಳಲ್ಲಿ ಉಚಿತವಾಗಿ ವಿತರಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ಜ್ಯೂಸ್‌ ಅಂಗಡಿ ಮಾಲೀಕರು, ಎಳನೀರು ಮಾರುವವರು, ಹೋಟೆಲ್‌ ಮಾಲೀಕರು ಹಾಗೂ ಸಾರ್ವಜನಿಕರು ಇದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತಷ್ಟು ಸ್ಟ್ರಾಗಳಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ನಗರದ ನಾನಾಕಡೆಯೂ ವಿತರಿಸಲಿದ್ದೇವೆ. ನಮ್ಮ ಮುಖ್ಯ ಗುರಿ ಬೆಂಗಳೂರನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡುವುದಾಗಿದೆ” ಎಂದರು.


ಅಂಗಡಿಗಳಿಗೆ ಸ್ಟ್ರಾ ವಿತರಿಸಿದ ಮಂಜೇಶ್‌ (ಚಿತ್ರಕೃಪೆ : ದಿ ಬೆಟರ್‌ ಇಂಡಿಯಾ)


ಎಳನೀರು ವ್ಯಾಪರಿ ಸ್ರೀನಿವಾಸ್‌ ಮಾತನಾಡುತ್ತ,


“ಅಧಿಕಾರಿಗಳು ಬಂದು ಪ್ಲಾಸ್ಟಿಕ್‌ ಉಪಯೋಗಿಸಬೇಡಿ ಎನ್ನುತ್ತಿದ್ದರು. ನಾವು ಬೇರೆ ದಾರಿಯಿಲ್ಲದೆ ಕದ್ದುಮುಚ್ಚಿ ಉಪಯೋಗಿಸುತ್ತಿದ್ದೆವು. ಈಗ ಪರಿಸರ ಸ್ನೇಹಿ ಸ್ಟ್ರಾಗಳನ್ನು ನೀಡಿದ್ದಾರೆ. ಆದರೆ ಇವು ಮಾರುಕಟ್ಟೆಯಲ್ಲಿ ಈಗ ಲಭ್ಯವಿಲ್ಲ. ಇವು ಎಲ್ಲರಿಗೂ ದೊರೆಯುವಂತಾದರೆ ಅನುಕೂಲವಾಗುತ್ತದೆ," ಎಂದರು.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.