ವಿದ್ಯಾರ್ಥಿಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಪೆಪೆ ರೋಬೋಟ್‌ಗಳನ್ನು ಸ್ಥಾಪಿಸಿದ ಡಿಎಸ್‌ಜಿಎಂಸಿಯ ಶಾಲೆ

7,000 ರೂ ವೆಚ್ಚದಲ್ಲಿ ಈ ರೋಬೋಟ್‌ ಅನ್ನು ಕೈ ತೊಳೆಯುವ ಜಾಗದ ಗೋಡೆಯ ಮೇಲೆ ಅಳವಡಿಸಲಾಗಿದ್ದು, ಅದು ವಿದ್ಯಾರ್ಥಿಗಳಿಗೆ ಕೈ ತೊಳೆಯಲು ನೆನಪಿಸುತ್ತದೆ.

ವಿದ್ಯಾರ್ಥಿಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಪೆಪೆ ರೋಬೋಟ್‌ಗಳನ್ನು ಸ್ಥಾಪಿಸಿದ ಡಿಎಸ್‌ಜಿಎಂಸಿಯ ಶಾಲೆ

Wednesday February 26, 2020,

2 min Read

ಕರೋನಾ ಎಂಬ ಸಾಂಕ್ರಾಮಿಕ ವೈರಸ್‌ನಿಂದ ಚೀನಾದಲ್ಲಿ ಪ್ರಾಣಹಾನಿ ಉಂಟಾಗಿರುವುದು ಭಾರತ ಸೇರಿದಂತೆ ವಿಶ್ವದಾದ್ಯಂತ ಎಚ್ಚರಿಕೆಯ ಸಂಕೇತವಾಗಿದೆ. ಕೇರಳದಲ್ಲಿ ಕರೋನಾ ವೈರಸ್‌ನ ಮೂರು ಪ್ರಕರಣಗಳು ವರದಿಯಾಗಿವೆ. ಕೇರಳ ಆರೋಗ್ಯ ಇಲಾಖೆಯ ತ್ವರಿತ ಕ್ರಮದಿಂದಾಗಿ ಈ ವೈರಸ್ ಕಡಿಮೆಯಾಗಿದೆ.


ಈ ಸನ್ನಿವೇಶದಲ್ಲಿ ಜನರು ಸುರಕ್ಷಿತವಾಗಿರಲು, ನೈರ್ಮಲ್ಯಗಳನ್ನು ಅಭ್ಯಾಸ ಮಾಡುತ್ತಿದ್ದು, ಮಾಸ್ಕ್ ಧರಿಸುವುದು ಮುಂತಾದ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.


ಚಿತ್ರಕೃಪೆ: ಎಡೆಕ್ಸ್ ಲೈವ್




ಮಕ್ಕಳಲ್ಲಿ ಆರೋಗ್ಯಕರ ರೂಢಿಗಳನ್ನು ಪ್ರೇರೆಪಿಸಲು ದೆಹಲಿಯ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು(ಡಿಎಸ್‌ಜಿಎಂಸಿ) ನಡೆಸುತ್ತಿರುವ ಹತ್ತೊಂಬತ್ತು ಸಹ- ಶಿಕ್ಷಣ ಶಾಲೆಗಳಲ್ಲಿ ಶೌಚಗೃಹವನ್ನು ಬಳಸಿದ ನಂತರ ಕೈ ತೊಳೆಯುವಂತೆ ವಿದ್ಯಾರ್ಥಿಗಳಿಗೆ ನೆನಪಿಸಲು ರೋಬೋಟ್‌‌ಅನ್ನು ಅಳವಡಿಸಿಲಾಗಿದೆ.


ಡಿಎಸ್‌ಜಿಎಂಸಿ ಮುಖ್ಯಸ್ಥರಾದ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡುತ್ತಾ,


"ಡಿಎಸ್‌ಜಿಎಂಸಿ ಪ್ರತಿ ಶಾಲೆಯ ಅಗತ್ಯತೆಗಳು ಮತ್ತು ಭೌತಿಕ ವಿನ್ಯಾಸವನ್ನು ಸಮೀಕ್ಷೆ ಮಾಡುತ್ತದೆ ಹಾಗೂ ಪ್ರತಿ ಶಾಲೆಗೆ ಗರಿಷ್ಠ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉತ್ತಮ ಆಯ್ಕೆಗಳನ್ನು ಆಯ್ದುಕೊಂಡು ಅದನ್ನು ಸ್ಥಾಪಿಸಲಾಗುತ್ತದೆ. ಅಲ್ಲದೆ ಸಂಪೂರ್ಣ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು," ಎಂದಿದ್ದಾರೆ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌.


ಪೆಪೆ ಎಂದು ಹೆಸರಿಸಲಾಗಿರುವ ಈ ರೋಬೋಟ್‌ನ್ನು ಕೈ ತೊಳೆಯುವ ಸ್ಥಳದಲ್ಲಿ ಗೋಡೆಯ ಮೇಲೆ ಅಳವಡಿಸಲಾಗಿದ್ದು, ಅದು ವಿದ್ಯಾರ್ಥಿಗಳಿಗೆ ಕೈ ತೊಳೆಯಲು ನೆನಪಿಸುತ್ತದೆ. ಈ ರೋಬೋಟ್ ಬೆಲೆಯು 7,000 ರೂ ಇದ್ದು, ಇದು 20,000 ವಿದ್ಯಾರ್ಥಿಗಳಿಗೆ ತಲುಪುತ್ತದೆ.


ಈ ರೋಬೋಟ್‌‌ನ್ನು ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಸಂಶೋಧಕರು ಭಾರತದ ಅಮೃತ ವಿಶ್ವ ವಿದ್ಯಾಪೀಠಂ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.


ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿದ ಮಂಜಿಂದರ್,


"ಕಾರ್ಯಕ್ರಮದ ಯಶಸ್ಸಿನ ಮೇಲ್ವಿಚಾರಣೆ ಮಾಡಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶಾಲಾ ಶಿಕ್ಷಕರು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಂಡ ನೈರ್ಮಲ್ಯ ಪದ್ಧತಿಗಳ ಫೋಟೋಗಳನ್ನು ತೆಗೆದು ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ.”


ಮುಂದುವರೆದು ಮಾತನಡುತ್ತಾ,


"ಈ ಕಾರ್ಯಕ್ರಮದಡಿಯಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಲಾ‌‌ ಮಕ್ಕಳನ್ನು ವಿಶೇಷವಾಗಿ ಗುರಿಯಾಗಿಸಲಾಗಿದೆ. ಯಾಕೆಂದರೆ ಅವರಿಗೆ ನೈರ್ಮಲ್ಯದ ಕುರಿತಾಗಿನ ಅರಿವು ಹೆಚ್ಚು ಅಗತ್ಯವಾಗಿರುತ್ತದೆ".


ಅಲ್ಲದೆ, ಶಿಕ್ಷಕರು ಶಾಲಾ ಆವರಣದ ಕೈ ತೊಳೆಯುವ ಘಟಕ, ಶೌಚಾಲಯ ಮತ್ತು ಸ್ವಚ್ಛತೆಯನ್ನು ಹೊಂದಿದ ಕೊಠಡಿಗಳ ಫೋಟೋ ತೆಗೆಯುತ್ತಾರೆ. ವಿದ್ಯಾರ್ಥಿಗಳಲ್ಲಿ ಕೈ ತೊಳೆಯುವ ರೂಢಿ ಹಾಗೂ ನೈರ್ಮಲ್ಯದ ಅರಿವನ್ನು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ.